November 22, 2024

Newsnap Kannada

The World at your finger tips!

rabindranath tagore

ರವೀಂದ್ರನಾಥ ಠಾಗೂರ್

Spread the love
  • On Remembrance Day of Rabindranath Tagore

ರವೀಂದ್ರನಾಥ ಠಾಗೂರ್ ಭಾರತಮಾತೆಯ ಪರಮಪೂಜ್ಯ ಪುತ್ರರಲ್ಲಿ ಪ್ರಮುಖರು. ಇಂದು ಈ ಮಹಾನುಭಾವರ ಸಂಸ್ಮರಣೆ ದಿನ.

ಗುರುದೇವ ರವೀಂದ್ರನಾಥ ಠಾಗೂರರು 1861ರ ಮೇ 7ರಂದು ಜನಿಸಿದರು. ಅವರು ಮಹರ್ಷಿ ದೇವೇಂದ್ರನಾಥ ಠಾಗೂರ್ ಮತ್ತು ಶಾರದಾದೇವಿಯವರ ಹದಿಮೂರು ಮಕ್ಕಳಲ್ಲಿ ಕಡೆಯವಾರಾಗಿ ಜನಿಸಿದರು. ಈ ಬಂಗಾಳಿ ಬ್ರಾಹ್ಮಣೀಯ ಕುಟುಂಬವು ಬ್ರಹ್ಮಸಮಾಜದ ಆದರ್ಶ ನೀತಿಗಳಿಗೆ ಆತ್ಮೀಯವಾಗಿತ್ತು. ರವೀಂದ್ರರ ತಂದೆ ದೇವೆಂದ್ರನಾಥರು ತಮ್ಮ ವ್ಯವಹಾರ ಮತ್ತು ಆಧ್ಯಾತ್ಮಿಕ ಪರ್ಯಟನೆಗಳಲ್ಲಿ ನಿರತರಾಗಿದ್ದರೆ, ಅವರ ತಾಯಿಯವರು ವಿಶಾಲ ಕುಟುಂಬದ ಕಾರ್ಯನಿರ್ವಹಣೆಯ ಜವಾಬ್ಧಾರಿಗಳಲ್ಲಿ ತೊಡಗಿಕೊಂಡಿರುತ್ತಿದ್ದರು. ಈ ದೆಸೆಯಿಂದಾಗಿ ರವೀಂದ್ರರು ಹೆಚ್ಚು ಬೆಳೆದದ್ದು ಮನೆಯಲ್ಲಿನ ಆಳುಗಳ ನಡುವೆ. ಅವರ ಮನೆಯಲ್ಲಿದ್ದ ಈ ಕೆಲಸಗಾರರು ಭಾರತದ ಪೌರಾಣಿಕ ಹಿನ್ನಲೆಯ ಜನಪದೀಯ ಘಟನೆಗಳನ್ನು ವರ್ಣಿಸುತ್ತಿದ್ದುದು, ಬೆಳೆಯುತ್ತಿದ್ದ ರವೀಂದ್ರರ ಮನದ ಮೇಲೆ ಅಗಾಧವಾದ ಪರಿಣಾಮ ಬೀರಿತು.

ಶಾಲೆಯಲ್ಲಿನ ಯಾಂತ್ರಿಕ ರೀತಿಯ ಪಾಠ ಪ್ರವಚನಗಳು ರವೀಂದ್ರರನ್ನು ಆಕರ್ಷಿಸಲಿಲ್ಲ. ಪ್ರಕೃತಿ, ಅಧ್ಯಾತ್ಮದ ಕೂಗುಗಳು ಅವರ ಕವಿ ಹೃದಯವನ್ನು ಚಿಕ್ಕಂದಿನಲ್ಲೇ ಮೀಟಲು ಪ್ರಾರಂಭಿಸಿದವು. ಅವರು ತಮ್ಮ ಎಂಟನೆಯ ವಯಸ್ಸಿನಲ್ಲೇ ಕಾವ್ಯ ರಚನೆಗೆ ತೊಡಗಿದ್ದರು. ಹನ್ನೊಂದನೆಯ ವಯಸ್ಸಿನಲ್ಲಿ ನಡೆದ ಉಪನಯನದ ಬ್ರಹ್ಮೋಪದೇಶ ಅವರ ಸೂಕ್ಷ್ಮ ಸಂವೇದನಾ ಮನಸ್ಸಿನ ಮೇಲೆ ಆಧ್ಯಾತ್ಮದ ಅನುಭಾವವನ್ನು ಪ್ರೋಕ್ಷಿಸತೊಡಗಿದ್ದವು. ಅವರ ತಂದೆಯವರು ಒಮ್ಮೆ ತಮ್ಮ ಕಾಲಾಳುಗಳೊಂದಿಗೆ ಸಂಚರಿಸುತ್ತಿದ್ದಾಗ ಅವರ ಮನದ ಮೇಲೆ ಒಂದು ಸ್ಥಳ ಅಪಾರವಾದ ಪ್ರಭಾವ ಬೀರಿತು. ಆ ಸ್ಥಳವನ್ನು ಕೊಂಡುಕೊಂಡ ಅವರು ಅದಕ್ಕೆ ಶಾಂತಿನಿಕೇತನ ಎಂದು ಹೆಸರಿಟ್ಟರು. ಹನ್ನೆರಡರ ಬಾಲಕ ರವೀಂದ್ರರನ್ನು ತಮ್ಮೊಡನೆ ಹಲವು ಕಾಲದ ಪರ್ಯಟನೆಗೆ ಕರೆದೊಯ್ದ ದೇವೇಂದ್ರನಾಥರು ಶಾಂತಿನಿಕೇತನ, ಅಮೃತಸರ ಮತ್ತು ಹಿಮಾಲಯದ ತಪ್ಪಲಿನ ಡಾಲ್ ಹೌಸಿ ಮುಂತಾದ ಪ್ರಮುಖ ಸ್ಥಳಗಳಲ್ಲಿ ಆತನ ಹೃದಯವು ಮುಕ್ತವಾಗಿ ತೆರೆದುಕೊಳ್ಳಲು ಪ್ರೇರಣೆ ಮತ್ತು ಪೋಷಣೆಗಳನ್ನು ಒದಗಿಸಿದರು.

ತಮ್ಮ ತಂದೆಯವರೊಡನೆ ಕೈಗೊಂಡ ಪರ್ಯಟನೆಯ ಸಂದರ್ಭದಲ್ಲಿ ರವೀಂದ್ರರು ಬಹಳಷ್ಟು ಇತಿಹಾಸಜ್ಞರು, ಶಾಸ್ತ್ರಜ್ಞರು, ಆಧುನಿಕ ವಿಜ್ಞಾನಿಗಳು ಮತ್ತು ಸಂಸ್ಕೃತ ಸಾಹಿತ್ಯದ ಕುರಿತಾದ ಆಳ ಅಧ್ಯಯನ ನಡೆಸಿದರು. ಕಾಳಿದಾಸನ ಕಾವ್ಯವೆಲ್ಲವನ್ನೂ ಸುದೀರ್ಘವಾಗಿ ಅಧ್ಯಯನ ಮಾಡಿದರು. ಹದಿನಾರರ ಹರೆಯದ ರವೀಂದ್ರರು ವಿದ್ಯಾಪತಿಯ ಕಳೆದು ಹೋದ ಪ್ರಸಿದ್ಧ ಕೃತಿಗಳನ್ನು ನೆನಪಿಸುವ ‘ಮೈಥಿಲಿ’ ಎಂಬ ನೀಳ್ಗವನವನ್ನು ಪ್ರಕಟಿಸಿದರು. ಅದೇ ಸಮಯದಲ್ಲಿ ಅವರ ‘ಭಿಕಾರಿಣಿ’ ಎಂಬ ಕಥೆ ಕೂಡಾ ರಚಿಸಲ್ಪಟ್ಟಿತು. ಮುಂದೆ ಅವರು ತಮ್ಮ ಪ್ರಸಿದ್ಧ ಕೃತಿಯಾದ ‘ಸಂಧ್ಯಾ ಸಂಗೀತ್’ ಅನ್ನು 1882ರ ವರ್ಷದಲ್ಲಿ ರಚಿಸಿದರು. ‘ನಿರಾಹರೇರ್ ಸ್ವಪ್ನಭಾಂಗ’ ಎಂಬ ಅವರ ಪ್ರಸಿದ್ಧ ಕವನ ‘ಸಂಧ್ಯಾ ಸಂಗೀತ’ದಲ್ಲಿದೆ.

ಬ್ಯಾರಿಸ್ಟರ್ ಓದಲು ಇಂಗ್ಲೆಂಡಿಗೆ ಹೋದ ರವೀಂದ್ರರಿಗೆ ಅಲ್ಲಿಯ ಶಿಕ್ಷಣ ಪದ್ಧತಿ ರುಚಿಸಲಿಲ್ಲ. ಅವರನ್ನು ಅಲ್ಲಿ ಸೆಳೆದದ್ದೆಂದರೆ ಶೇಕ್ಸ್ ಪಿಯರ್ ಅಂಥಹ ಕವಿ – ನಾಟಕಕಾರರ ಕೃತಿಗಳು. ಯಾವುದೇ ಪದವಿ ಪಡೆಯದೆ ತಾಯ್ನಾಡಿಗೆ ಹಿಂದಿರುಗಿದ ರವೀಂದ್ರರಿಗೆ ಇಂಗ್ಲೆಂಡಿನಲ್ಲಿ ದೊರೆತ ಸಾಹಿತ್ಯ ಮತ್ತು ಸಾಂಸ್ಕೃತಿಕ ಅನುಭಾವಗಳು ಅವರ ನಾಟಕ, ಕಾವ್ಯ ಮತ್ತು ಸಂಗೀತದ ಚಿಂತನೆಗಳಿಗೆ ವೈಶಾಲ್ಯತೆಯನ್ನು ದೊರಕಿಸುವಲ್ಲಿ ಸಹಕಾರಿಯಾಯಿತು.

ಮುಂದೆ ರವೀಂದ್ರರನ್ನು ಸೈಂಟ್ ಗ್ಸೇವಿಯರ್ಸ್ ಶಾಲೆಯಲ್ಲಿನ ವ್ಯವಸ್ಥಿತ ಅಧ್ಯಯನಕ್ಕೆ ಕಳುಹಲು ನಡೆಸಿದ ಪ್ರಯತ್ನ ಒಂದಷ್ಟು ಯಶಸ್ವಿಯಾಯಿತಾದರೂ ಅಂತರಂಗದ ವಿಹಾರಿಯಾದ ಅವರನ್ನು ವ್ಯವಸ್ಥಿತ ಶಿಕ್ಷಣಕ್ಕೆ ಬಂಧಿಸಲಾಗಲಿಲ್ಲ. ಅಲ್ಲಿನ ದಿನಗಳನ್ನು ಸ್ಮರಿಸುವಾಗ ಅವರು ಒಂದೆಡೆ ಹೇಳುತ್ತಾರೆ. “ಒಮ್ಮೆ ನನಗೆ ಶಾಲೆಯಲ್ಲಿ ಬರೆಯಲು ಕೈಯೇ ಓಡಲಿಲ್ಲ. ಅಧ್ಯಾಪಕರು ಆತ್ಮೀಯತೆಯಿಂದ ಬಳಿಬಂದು “ಮಗು ರವೀಂದ್ರ, ನೀನು ಆರೋಗ್ಯವಷ್ಟೇ?” ಎಂದರು. “ಅದು ಅತೀ ಸಾಮಾನ್ಯ ಪ್ರಶ್ನೆಯೇನೋ ಹೌದು. ಆದರೆ ಅದರ ಹಿಂದಿದ್ದ ಆಳವಾದ ಅನುಭೂತಿ ನನ್ನ ಮನದಲ್ಲಿ ಇಂದೂ ಚಿರಸ್ಥಾಯಿಯಾಗಿದೆ”.

ದೇವೇಂದ್ರರು ತಮ್ಮ ಮಗ ರವೀಂದ್ರರನ್ನು ಜಮೀನ್ದಾರಿಕೆ ನಡೆಸು ಎಂದು ಒಂದು ಸ್ಥಳಕ್ಕೆ ಕಳುಹಿದರು. ಅಲ್ಲಿ ರವೀಂದ್ರರು ಮಾಡಿದ್ದಾದರೂ ಏನು? ಅಲ್ಲಿಯ ದೋಣಿ ನಡೆಸುವವರು, ವ್ಯವಸಾಯ ಮಾಡುವ ಜನರು ಮುಂತಾದವರು ಹಾಡುತ್ತಿದ್ದ ಹಾಡುಗಳನ್ನು ಕೇಳುತ್ತಾ, ಅಲ್ಲಿಯ ಪ್ರಾಕೃತಿಕ ರಮಣೀಯತೆಗೆ ಮನಸೋತರು. ಅಲ್ಲಿನ ಜನರೊಂದಿಗೆ ಮತ್ತು ಜನಪದದೊಂದಿಗೆ ಹೃದಯಾಳದಿಂದ ಬೆರೆತುಹೋದರು. “ನೀವು ಕಷ್ಟಪಟ್ಟು ದುಡಿದಿದ್ದೀರಿ. ಮಳೆ ನಿಮಗೆ ಸಹಾಯಕವಾಗಿರಲಿಲ್ಲ. ಆದ್ದರಿಂದ ಈ ಬಾರಿ ನೀವು ನಮಗೇನೂ ಕೊಡುವುದು ಬೇಡ” ಎಂದು ಹೇಳಿ ಮನೆಗೆ ವಾಪಸ್ಸಾದರು. ಇದು ಅವರು ಜಮೀನ್ದಾರಿಕೆ ನಡೆಸಿದ ಪರಿ!

ಶಾಂತಿನಿಕೇತನದಲ್ಲಿ ಮಕ್ಕಳಿಗೆ ಕಲಿಸಲಿಕ್ಕಾಗಿ ರವೀಂದ್ರರು ಹೊಸ ರೀತಿಯ ಶಿಕ್ಷಣ ವ್ಯವಸ್ಥೆಗಳನ್ನು ರೂಪಿಸಿದರು. ಅವರ ಪತ್ನಿ ಮೃಣಾಲಿನಿ ದೇವಿಯವರು ಈ ಕಾಯಕಕ್ಕಾಗಿ ತಮ್ಮ ತನು ಮನ ದನಗಳನ್ನೆಲ್ಲಾ ಅರ್ಪಿಸಿದರು. ರವೀಂದ್ರರಿಗೆ ನೊಬೆಲ್ ಪಾರಿತೋಷಕ ಬಂದಾಗ ಅವರಿಗೆ ಹಣದ ವಿಚಾರದಲ್ಲಿ ಸಂತೋಷ ಮೂಡಿದ್ದಾದರೂ ಏಕೆ ಅಂದರೆ, ಅದು ಶಾಂತಿನಿಕೇತನಕ್ಕೆ ಉಪಯೋಗವಾಗುತ್ತದೆ ಎಂಬ ಕೃತಾರ್ಥತೆಯ ಭಾವದಲ್ಲಿ.

ರವೀಂದ್ರರ ಕಾವ್ಯವು ಭಕ್ತಿಭಾವಗಳನ್ನು ಬೆಳಗಿದಂತಹವು. ಅವರ ರಚಿತ ಗೀತೆಗಳು, ಭಾರತ ಮತ್ತು ಬಾಂಗ್ಲಾದೇಶಗಳ ರಾಷ್ಟ್ರಗೀತೆಗಳೂ ಹೌದು. ಅವರ ಬರಹಗಳು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬ್ರಿಟಿಷರ ವಿರುದ್ಧದ ಚಳುವಳಿಗೆ, ಜನಸಮುದಾಯದಲ್ಲಿ ಆಂತರಿಕ ಪ್ರೇರಣೆಯನ್ನು ಸೃಷ್ಟಿಸಿ ಮಹಾತ್ಮ ಗಾಂಧಿಯವರಿಗೆ ಬೆಂಗಾವಲಾಗಿ ನಿಂತಿತು. ಅಸ್ಪೃಶ್ಯತೆ, ಜಾತಿ ಭೇದಗಳನ್ನು ತೀವ್ರವಾಗಿ ವಿರೋಧಿಸಿದ ರವೀಂದ್ರರು, ದಲಿತರನ್ನು ತಮ್ಮ ಬರಹಗಳ ನಾಯಕ ನಾಯಕರನ್ನಾಗಿಸಿದ್ದಷ್ಟೇ ಅಲ್ಲದೆ, ಗುರುವಾಯೂರಿನ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ನೀಡಬೇಕೆಂಬ ಬಗ್ಗೆ ಸಾರ್ವಜನಿಕವಾಗಿ ಮುಂಚೂಣಿಯಲ್ಲಿ ನಿಂತು ಅಭಿಪ್ರಾಯ ಕ್ರೋಡೀಕರಣಕರಣಗೊಳಿಸಿ ಆ ಹೋರಾಟದ ಯಶಸ್ಸಿಗೆ ಪ್ರಮುಖ ಪ್ರೇರಕರಾದರು. ಗಾಂಧೀಜಿಯವರ ಅಸ್ಪೃಶ್ಯತಾ ವಿರೋಧ ಮತ್ತು ಹರಿಜನ ಪರವಾದಗಳನ್ನು ಅವರು ಮುಕ್ತವಾಗಿ ಕೊಂಡಾಡಿದರು.

ಒಮ್ಮೆ ರವೀಂದ್ರರು ಪರ್ಯಟನೆಯಲ್ಲಿದ್ದ ಸಂದರ್ಭದಲ್ಲಿ, ಇರಾಖಿನ ಗ್ರಾಮವೊಂದರಲ್ಲಿ ಹಳ್ಳಿಯವನೊಬ್ಬ ಹೇಳುತ್ತಿದ್ದ: “ನಮ್ಮ ಪ್ರವಾದಿ ಮಹಮ್ಮದರು ಹೇಳುತ್ತಾರೆ, ಯಾರು ತನ್ನ ನಡೆಯಿಂದಾಗಲಿ ನುಡಿಯಿಂದಾಗಲಿ ಯಾವುದೇ ಮಾನವನ ಹೃದಯಕ್ಕೆ ನೋವು ತರದಂತೆ ಎಚ್ಚರಿಕೆವಹಿಸುತ್ತಾನೋ ಆತನೇ ನಿಜವಾದ ಮುಸಲ್ಮಾನನೆನಿಸುತ್ತಾನೆ”. ಇದನ್ನು ತಕ್ಷಣವೇ ತಮ್ಮ ಪುಸ್ತಕದಲ್ಲಿ ರವೀಂದ್ರರು ಬರೆದುಕೊಂಡರಂತೆ. “ಮಾನವೀಯತೆಯ ಮೂಲ ಆಶಯಗಳೆಲ್ಲಾ ಈ ಪರಿಶುದ್ಧ ಹೃದಯದಲ್ಲಿ ನನಗೆ ಗೋಚರಿಸಿತು” ಎನ್ನುವ ರವೀಂದ್ರರ ಹೃದಯದಲ್ಲಿ ಸರ್ವಧರ್ಮ ಸಮನ್ವಯತೆಯ, ವಿಶ್ವಭ್ರಾತೃತ್ವದ ಹರಹು ನಿರಂತರವಾಗಿ ಹರಿಯುತ್ತಿದ್ದುದನ್ನು ಕಾಣಬಹುದಾಗಿದೆ.

ರವೀಂದ್ರರು ಬಂಗಾಳದಲ್ಲಿನ ಬಡತನದ ಬಗ್ಗೆ ದಯಾದ್ರ ಹೃದಯದಿಂದ ಮಿಡಿತಗೊಳಿಸಿದ ನೀಳ್ಗವನ ಸತ್ಯಜಿತ್ ರೇ ಅವರ ‘ಅಪೂರ್ ಸಂಸಾರ್’ ಚಿತ್ರಕ್ಕೆ ಪೂರ್ವಭಾವಿಯಾಯಿತು. ಮುಂದೆ ಹದಿನೈದು ಸಂಪುಟಗಳಲ್ಲಿ ತೆರೆದುಕೊಂಡ ಅವರ ಸಾಹಿತ್ಯ ವೈವಿಧ್ಯಗಳ ಹರಹು ವಿಸ್ತಾರವಾದದ್ದು. ಪುನಶ್ಚ, ಷೇಸಪ್ತಕ್, ಪತ್ರಪುತ್, ಚಿತ್ರಾಂಗದ, ಶ್ಯಾಮ, ಚಂಡಳೀಕ ಮುಂತಾದವು ಕಾವ್ಯಗಳಾಗಿ, ಸಂಗೀತ ರೂಪಕಗಳಾಗಿ ಮೂಡಿಬಂದವು. ದುಯಿ ಬಾನ್, ಮಾಲಾಂಚ, ಚಾರ ಅಧ್ಯಾಯ್ ಕಾದಂಬರಿಗಳಾದವು.

ವಿಜ್ಞಾನದ ತಳಹದಿಯ ಮೇಲೆ ತಮ್ಮ ಕೊನೆಯ ವರ್ಷಗಳಲ್ಲಿ ಬರೆಯ ತೊಡಗಿದ ರವೀಂದ್ರರು 1937ರ ವರ್ಷದಲ್ಲಿ ‘ವಿಶ್ವಪರಿಚಯ’ ಎಂಬ ಪ್ರಬಂಧ ಸಂಗ್ರಹವನ್ನು ಪ್ರಕಟಿಸಿದರು. ಜೀವಶಾಸ್ತ್ರ, ಭೌತಶಾಸ್ತ್ರ, ಖಗೋಳ ವಿಜ್ಞಾನ ಅವರ ಕಾವ್ಯದ ಮೇಲೆ ಅಗಾಧ ಪರಿಣಾಮ ಬೀರಿದ್ದನ್ನು ಇಲ್ಲಿ ಕಾಣಬಹುದಾಗಿದೆ. ವೈಜ್ಞಾನಿಕ ತಳಹದಿಯ ಕತೆಗಳನ್ನು ಅವರ ಸೆ, ತಿನ್ ಸಂಗಿ, ಗಳಪಾಸಲ್ಪ ಮುಂತಾದ ಕಥಾ ಸಂಗ್ರಹಗಳಲ್ಲಿ ವಿಫುಲವಾಗಿ ಕಾಣಬಹುದಾಗಿದೆ.

ಸಾಹಿತ್ಯ, ಸಂಗೀತ, ನಾಟಕ, ಚಿತ್ರಕಲೆ, ವಿಜ್ಞಾನ, ಶಿಕ್ಷಣ, ಆಧ್ಯಾತ್ಮ, ಮಾನವೀಯತೆ ಈ ಸಕಲತೆಗಳಲ್ಲಿ ರವೀಂದ್ರನಾಥ ಠಾಗೂರರನ್ನು ಸರಿಗಟ್ಟುವ ಮಂದಿ ವಿಶ್ವದಲ್ಲಿ ಅತ್ಯಪರೂಪವೆಂಬುದು ಸರ್ವವೇದ್ಯ. ಅವರ ಬೃಹತ್ ಗ್ರಂಥ ಭಂಡಾರ; ವಿಶ್ವಭಾರತಿ, ಶಾಂತಿ ನಿಕೇತನಗಳೆಂಬ ಮಹಾನ್ ಕೈಂಕರ್ಯಗಳು ನಮ್ಮೀ ಸಮಾಜಕ್ಕೆ ಅಜರಾಮರವಾದ ಕೊಡುಗೆಗಳಾಗಿವೆ. ರವೀಂದ್ರನಾಥ ಠಾಗೂರರು ನಿಧನರಾದದ್ದು 1941ರ ಆಗಸ್ಟ್ 7ರಂದು.ವಿನೇಶ್ ಫೋಗಟ್ ಅನರ್ಹ- ಕೈತಪ್ಪಿದ ಪ್ಯಾರಿಸ್ ಒಲಿಂಪಿಕ್ ಪದಕ

ಸಮಸ್ತ ವಿಶ್ವಸಂಸ್ಕೃತಿಯ ಕುರುಹಾದ ವಿಶ್ವಭಾರತಿಯನ್ನು ತಮ್ಮಲ್ಲಿ ತೆರೆದುಕೊಂಡ ರವೀಂದ್ರನಾಥ ಠಾಗೂರರಿಗೆ ಈಟ್ಸ್ ಅಂತಹ ಮಹಾಕವಿಗಳು, ಹೆಲ್ಲೆನ್ ಕೆಲ್ಲರ್ ಅಂತಹ ಸಾಧ್ವಿಗಳು, ಐನ್ ಸ್ಟೀನ್ ಅಂತಹ ಮಹಾನ್ ವಿಜ್ಞಾನಿಗಳೂ, ಮಹಾತ್ಮ ಗಾಂಧಿಯಂತಹ ಸಕಲ ಸದ್ಗುಣಿಗಳೂ ಒಡನಾಡಿಗಳಾಗಿದ್ದರಲ್ಲಿ ಅಚ್ಚರಿ ಏನಿಲ್ಲ.

tiru shridhar

ತಿರು ಶ್ರೀಧರ

Copyright © All rights reserved Newsnap | Newsever by AF themes.
error: Content is protected !!