ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಪರಿಹರಿಸಲು ಇಂಧನ ಕಂಪನಿಗಳು ಖಾಸಗಿ ವಿದ್ಯುತ್ ಉತ್ಪಾದಕರಿಂದ ಮುಂದಿನ ಮೂರು ದಿನಗಳಲ್ಲಿ 1,100 ಮೆಗಾವ್ಯಾಟ್ ವಿದ್ಯುತ್ ಖರೀದಿಸಲಿವೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿದ ಸಚಿವರು, ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸರ್ಕಾರವೂ ಗ್ರಿಡ್‍ನಿಂದ ವಿದ್ಯುತ್ ಖರೀದಿಸುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ವಿದ್ಯುತ್ ಉತ್ಪಾದನೆ ಶೇ 40ರಷ್ಟು ಹೆಚ್ಚಿದೆ. ಆದರೆ ಬೇಡಿಕೆ ಹೆಚ್ಚಳದಿಂದ 1,500 ಮೆಗಾವ್ಯಾಟ್ ವಿದ್ಯುತ್ ಕೊರತೆ ಇದೆ ಎಂದು ಹೇಳಿದರು.
ರೈತರಿಗೆ ದಿನಕ್ಕೆ ಐದು ಗಂಟೆ ತ್ರೀಫೇಸ್ ವಿದ್ಯುತ್ ನೀಡಲಾಗುವುದು. ರಾತ್ರಿ ಹಾಗೂ ಹಗಲು ವೇಳೆಯಲ್ಲಿ ರೊಟೇಷನ್ ಪದ್ಧತಿ ಅನುಸರಿಸಿ ವಿದ್ಯುತ್ ನೀಡಲಾಗುವುದು. ನೀರಾವರಿ ಪಂಪ್ ಸೆಟ್‍ಗಳು ಅತಿ ಹೆಚ್ಚು ವಿದ್ಯುತ್ ಗ್ರಾಹಕಗಳಾಗಿವೆ. ಐಪಿ ಸೆಟ್‍ಗಳಿಗೆ ಸೋಲಾರ್ ಪ್ಯಾನೆಲ್‍ಗಳನ್ನು ಒದಗಿಸಲು ಸಚಿವ ಸಂಪುಟದಲ್ಲಿ ನಿರ್ಧಾರ ಮಾಡಲಾಗಿದೆ.
ರಾಜ್ಯದಲ್ಲಿ 3.5 ಲಕ್ಷ ರೈತರಿದ್ದಾರೆ. 3,000 ಮೆಗಾವ್ಯಾಟ್ ವಿದ್ಯುತ್‍ನೊಂದಿಗೆ 400 ಉಪ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಗ್ರಿಡ್‍ನಿಂದ 500 ಮೀಟರ್ ದೂರದಲ್ಲಿ ಉಪ ಕೇಂದ್ರವಿದ್ದರೆ ಅಲ್ಲಿ ಸೋಲಾರ್ ಉಪ ಕೇಂದ್ರ ಸ್ಥಾಪಿಸಬೇಕು ಎಂದು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸರ್ಕಾರ ಸೌರವಿದ್ಯುತ್ ಉತ್ಪಾದನೆಗೆ ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಳ್ಳುತ್ತದೆ. 1 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಐದು ಎಕರೆ ಜಾಗ ಅಗತ್ಯ. ಅಕ್ಟೋಬರ್ 20ರೊಳಗೆ ಇದಕ್ಕಾಗಿ ಟೆಂಡರ್ ಕರೆಯಲಾಗುವುದು. ಪಾವಗಡದ ಸೌರ ವಿದ್ಯುತ್ ಪಾರ್ಕ್ ಅನ್ನು 10,000 ಎಕರೆಗೆ ವಿಸ್ತರಿಸುವ ಕೆಲಸ ನಡೆಯುತ್ತಿದೆ. ಗದಗ ಮತ್ತು ಕಲಬುರ್ಗಿಯಲ್ಲೂ ಸೌರ ವಿದ್ಯುತ್ ಪಾರ್ಕ್‍ಗಳನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.
ಕೇಂದ್ರದ ಗ್ರಿಡ್‍ನಲ್ಲಿ ಕರ್ನಾಟಕದ ಪಾಲನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಆದರೆ, ಇದು ಡಿಸೆಂಬರ್ 1ರಿಂದ ಕಾರ್ಯರೂಪಕ್ಕೆ ಬರುತ್ತದೆ. ಕಳೆದ ವರ್ಷ ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ 8,000- 8,500 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇತ್ತು.
ಈ ವರ್ಷ 15,000- 16,000 ಮೆಗಾವ್ಯಾಟ್‍ಗೆ ಏರಿಕೆಯಾಗಿದೆ. ಥರ್ಮಲ್ ಮತ್ತು ಹೈಡ್ರೊದಿಂದ ರಾಜ್ಯದಲ್ಲಿ 1,100- 1,300 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಈ ವರ್ಷದ ಏಪ್ರಿಲ್ 1ರಿಂದ ಅಕ್ಟೋಬರ್ 15ರವರೆಗೆ ವಿದ್ಯುತ್ ವಿನಿಮಯದ ಮೂಲಕ ಇತರ ಮೂಲಗಳಿಂದ 1,627 ಮಿಲಿಯನ್ ಯೂನಿಟ್ಸ್ ವಿದ್ಯುತ್ ಖರೀದಿಸಲು ರಾಜ್ಯವು 1,102 ಕೋಟಿ ರೂ. ಖರ್ಚು ಮಾಡಿದೆ.ಒರಿಜಿನಲ್ ಎಂದು ಬೋರ್ಡ್ ಹಾಕಿಕೊಳ್ಳಲಿ- ಎಚ್‍ಡಿಕೆ
ಅದೇ ಅವಧಿಯಲ್ಲಿ ಹೆಚ್ಚುವರಿ ಉತ್ಪಾದನೆ ಇದ್ದಾಗ 636 ಮಿಲಿಯನ್ ಯೂನಿಟ್ಸ್ ಅನ್ನು ಮಾರಾಟ ಮಾಡಿದ ನಂತರ ರಾಜ್ಯಕ್ಕೆ 265 ಕೋಟಿ ರೂ. ಬಂದಿದೆ ಎಂದು ಸಚಿವ ಜಾರ್ಜ್ ತಿಳಿಸಿದರು.
More Stories
ಓದಿನ ಮಹತ್ವ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು