ಸಾಮಾನ್ಯವಾಗಿ ಈ ಮದುವೆ, ಗೃಹಪ್ರವೇಶ, ಅಥವಾ ಇನ್ನಿತರೆ ಶುಭಸಮಾರಂಭಗಳಿಗೆ ನಿಮ್ಮನ್ನು ಕರೆದ ಎಲ್ಲಾ ಕಡೆ ಹೋಗಲು ಆಗೋಲ್ಲ ಎನ್ನುವುದು ಕರೆದವರಿಗೂ ಗೊತ್ತು, ಹೋಗಬೇಕಾದವರಿಗೂ ಗೊತ್ತು. ಆದರೂ ಸಾಮಾನ್ಯವಾಗಿ ಪರಸ್ಪರ ಸ್ನೇಹ, ಸಂಬಂಧ, ಆತ್ಮೀಯತೆ, ಹಾಗೂ ಪರಿಚಯಗಳ ಆಧಾರದಲ್ಲಿ ಸಮಾರಂಭಗಳಿಗೆ ಹೋಗುವುದು ನಿರ್ಧಾರವಾಗುತ್ತೆ.
ಕೆಲ ವರ್ಷಗಳ ಹಿಂದೆ ಮದುವೆ ಮುಂತಾದ ಶುಭ ಕಾರ್ಯಗಳಿಗಾಗಿ ಪರಿಚಯದವರನ್ನು, ಬಂಧುಬಳಗದವರನ್ನು ಆಹ್ವಾನಿಸುವುದೇ ಇಡೀ ಕಾರ್ಯಕ್ರಮದ ದೊಡ್ಡ ಜವಾಬ್ದಾರಿಯಾಗಿತ್ತು. ಏಕೆಂದರೆ ಪ್ರತಿಯೊಬ್ಬರ ಮನೆಗೂ ಖುದ್ದಾಗಿ ಹೋಗಿ ಪತ್ರಿಕೆ ಕೊಟ್ಟು ಅವರ ಆತಿಥ್ಯ ಸ್ವೀಕರಿಸಿ ನಾಲ್ಕು ಮಾತನಾಡಿ ಆಹ್ವಾನಿಸುವ ಪದ್ದತಿ ಇದ್ದಿದ್ದರಿಂದ ಕೊನೇಪಕ್ಷ ಮದುವೆಗೆ ಒಂದು ತಿಂಗಳು ಮುಂಚಿತವಾಗಿಯೇ ಆಹ್ವಾನ ಪತ್ರಿಕೆ ನೀಡಿ ಕರೆಯುವ ಸೌಜನ್ಯವಿತ್ತು. ಹೀಗಾಗಿ ಆಹ್ವಾನಿಸಲ್ಪಟ್ಟವರಲ್ಲಿ ಬಹುತೇಕ ಮಂದಿ ಸಮಾರಂಭಕ್ಕೆ ಹಾಜರಿರುತ್ತಿದ್ದರು. ಏಕೆಂದರೆ ಆಹ್ವಾನದ ಹಿಂದೆ ಆತ್ಮೀಯತೆ ಸೌಜನ್ಯ ಹಾಗೂ ಬರಲೇಬೇಕೆಂಬ ಪ್ರೀತಿಪೂರ್ವಕ ಒತ್ತಾಯವಿರುತ್ತಿತ್ತು. ಹೀಗಾಗಿ ಯಾರೂ ಬಿಜ಼ಿ ಕಾರಣ ಹೇಳಿ ತಪ್ಪಿಸುತ್ತಿರಲಿಲ್ಲ.
ಆದರೆ ಇಂದು ಅಂತಹಾ ಸೀನ್ ಗಳಿಲ್ಲ. ಬದಲಾದ ಕಾಲಘಟ್ಟದಲ್ಲಿ ಎಲ್ಲೋ ಕೆಲವು ಹತ್ತಿರದ ಬಂಧುಗಳ ಮನೆಗೆ ಹೋಗಿ ಆಹ್ವಾನಿಸುವುದನ್ನು ಬಿಟ್ಟರೆ ಮಿಕ್ಕಂತೆ ಬಹುತೇಕರನ್ನೂ ವಾಟ್ಸಪ್ ಗಳಲ್ಲಿ ಸೋಷಿಯಲ್ ಮೀಡಿಯಾಗಳ ಮೂಲಕ ಆಹ್ವಾನಿಸುವುದೇ ಹೆಚ್ಚು. ಒಂದೆರಡು ವರ್ಷಗಳ ಹಿಂದೆ ವಾಟ್ಸಪ್ ಗೆ ಇನ್ವೈಟೇಷನ್ ಹಾಕಿದ ನಂತರ ಫೋನ್ ಮಾಡಿಯಾದರೂ ತಿಳಿಸಿ ಆಹಾನಿಸುತ್ತಿದ್ದರು. ಆದರೆ ಈಗೀಗ ಮದುವೆಯ ಆಹ್ವಾನ ಪತ್ರಿಕೆಯನ್ನು ವಾಟ್ಸಪ್ ಗೆ ಕಳಿಸಿ ಜವಾಬ್ದಾರಿ ಮುಗೀತು ಅಂತ ಹೇಳಿ ಕೈ ತೊಳೆದುಕೊಳ್ಳುವವರೇ ಹೆಚ್ಚು . ಅಂತಹ ಆಹ್ವಾನದಲ್ಲಿ ಆತ್ಮೀಯತೆಯ ಭಾವ ಅಥವಾ ನೀವು ಸಮಾರಂಭಕ್ಕೆ ಬರಲೇಬೇಕೆಂಬ ಕಾಳಜಿ ಇದೆಯೆಂದೆನಿಸುವುದಿಲ್ಲ.
ಓಕೆ….ಲೀವ್ ಇಟ್. ಕಾಲಾಯ ತಸ್ಮೈ ನಮಃ !
ಈಗ ನಾ ಹೇಳಬೇಕೆಂದಿರುವ ವಿಷಯವೇ ಬೇರೆ ! ಅದು ಮದುವೆ ಅಟೆಂಡ್ ಮಾಡುವ ಕೆಲವರ ಮನಸ್ಥಿತಿಗೆ ಸಂಬಂಧಿಸಿದ್ದು .
ಮೊನ್ನೆ ಸಂಜೆ ನನ್ನ ಸಹೋದ್ಯೋಗಿಯಾಗಿದ್ದವರ ಮಗಳ ಮದುವೆಯ ಆರತಕ್ಷತೆಗೆ ಹೋಗಿದ್ದೆ. ಅಲ್ಲಿ ವಧು ವರರಿಗೆ ಶುಭ ಹಾರೈಸಿ , ಆಹ್ವಾನಿಸಿದವರನ್ನು ಆತ್ಮೀಯವಾಗಿ ಮಾತನಾಡಿಸಿ ಆನಂತರ ಸಹಜವಾಗಿ ಕಾಲುಗಳು ಊಟದ ಹಾಲ್ ನತ್ತ ಹೆಜ್ಜೆ ಹಾಕ ತೊಡಗಿದ್ದವು. ಅದೇ ಸಮಯಕ್ಕೆ ನನಗೆ ಚೆನ್ನಾಗಿ ಪರಿಚಯವಿರುವ ವ್ಯಕ್ತಿಯೊಬ್ಬರು ಎದುರಿಗೆ ಸಿಕ್ಕರು. ಅವರನ್ನು ವಂದಿಸಿ ಒಂದೆರಡು ನಿಮಿಷ ಮಾತನಾಡಿಸುತ್ತಲೇ ” ನೀವು ಗಂಡು- ಹೆಣ್ಣಿಗೆ ವಿಶ್ ಮಾಡಿದ್ದು ಆಗಿದ್ದರೆ ಊಟಕ್ಕೆ ಜೊತೆಗೆ ಹೋಗೋಣ ಬನ್ನಿ ” ಎಂದು ಕರೆದೆ.
ಅದಕ್ಕವರು “ಇಲ್ಲಾ ಇಲ್ಲಾ…ಅದಕ್ಕೆಲ್ಲಾ ಟೈಮ್ ಇಲ್ಲ ಪ್ರಕಾಶ್, ಗಂಡಿನ ಕಡೆಯವರು ನಮಗೆ ತುಂಬಾನೇ ಪರಿಚಯವಾದ್ದರಿಂದ ಜಸ್ಟ್ ಅಟೆಂಡೆನ್ಸ್ ಹಾಕಿ ಅವರಿಗೆ ಮುಖ ತೋರಿಸಿ ಹೋಗಲು ಬಂದೆ. ಇಲ್ಲದಿದ್ರೆ ಏನಾದರೂ ಅಂದುಕೊಳ್ಳಬಹುದು. ಸೋ….ಮುಖ ತೋರಿಸಿದ್ದು ಆಯ್ತು ನಾನಿನ್ನು ಹೊರಡುವೆ, ವಿಶ್ ಮಾಡುತ್ತಾ ಕೂತರೆ ಸಿಕ್ಕಾಪಟ್ಟೆ ಲೇಟ್ ಆಗುತ್ತೆ . ” ಎನ್ನುತ್ತಲೇ ಅಲ್ಲಿಂದ ಜಾಗ ಖಾಲಿ ಮಾಡಿದ್ದರು.
ಓಕೆ…ಅವರವರ ಅರ್ಜೆನ್ಸಿ ಏನಿರುತ್ತೋ ಯಾರಿಗ್ಗೊತ್ತು ? ಆದರೂ ಕೇವಲ ಈ ಅಟೆಂಡೆನ್ಸ್ ಗಾಗಿ ಅಟೆಂಡ್ ಆಗೋ ಮನಸ್ಥಿತಿಯಿದೆಯಲ್ಲಾ…ಇದು ಎಲ್ಲೆಡೆ ಬಹಳಷ್ಟು ಚಾಲ್ತಿಯಲ್ಲಿದ್ದು ಈ ಟಾಪಿಕ್ ಯಾಕೋ ಸ್ವಲ್ಪ ಕಾಡಿದ್ದರಿಂದ ಈ ಬಗ್ಗೆ ನಾಲ್ಕು ಸಾಲುಗಳು !
ನಮ್ಮಲ್ಲಿ ಬಹಳಷ್ಟು ಜನ ಮದುವೆ ಮುಂತಾದ ಸಮಾರಂಭಗಳಿಗೆ ಆಹ್ವಾನಿಸಲ್ಪಟ್ಟಾಗ, ಕೇವಲ ಕರೆದವರು ಏನಂದುಕೊಳ್ಳುತ್ತಾರೋ ಎಂಬ ಭಾವನೆಯೊಂದಿಗೆ ಹೋಗಿ ಆಹ್ವಾನಿಸಿದವರನ್ನು ಕಂಡು ಸುಮ್ಮನೇ ಒಮ್ಮೆ ಮುಖ ತೋರಿಸಿ ಬಂದರೆ ಅಲ್ಲಿಗೆ ತಮ್ಮ ಕೆಲಸ ಮುಗೀತು ಎಂದೇ ಭಾವಿಸಿ ಸಮಾರಂಭಗಳಿಗೆ ಅಟೆಂಡ್ ಆಗುತ್ತಾರೆ. ಅಂದರೆ ಅಲ್ಲಿ ಇವರಿಗೆ ಅಟೆಂಡೆನ್ಸ್ ಮುಖ್ಯವೇ ಹೊರತು ಸಮಾರಂಭದ ಉದ್ದೇಶ ಅಲ್ಲ. ಈ ಅಂಶಗಳು ಆಹ್ವಾನಿಸಿದವರು ಮತ್ತು ಆಹ್ವಾನಿಸಲ್ಪಟ್ಟವರ ನಡುವಿನ ಆತ್ಮೀಯತೆ, ಗುರುತು, ಪರಿಚಯ , ಸ್ನೇಹ ಸಂಬಂಧ ಹಾಗೂ ಆಹ್ವಾನ ಕೊಟ್ಟ ರೀತಿ ಈ ಎಲ್ಲವನ್ನು ಅವಲಂಬಿಸಿದೆಯಾದರೂ, ಸಮಾರಂಭಕ್ಕೆ ಅಂತ ಹೋಗಿ ಕೇವಲ ಮುಖ ತೋರಿಸಿ ಬರುವ ಅಭ್ಯಾಸ ಅಷ್ಟು ಅರ್ಥಪೂರ್ಣವಾಗಿರಲಾರದು ! ಅಗತ್ಯ ಕೆಲಸಗಳಿದ್ದಾಗ ಹಾಗೆ ಮಾಡುವುದು ಸಹಜವಾದರೂ, ಅದನ್ನೇ ಅಭ್ಯಾಸ ಮಾಡಿಕೊಂಡಿರುವುದು ಸೌಜನ್ಯವಾಗಲಾರದು. !
ಆದರೆ ಒಂದಷ್ಟು ಜನ ವಿವಿಐಪಿಗಳು ಅಥವಾ ಅಧಿಕಾರದಲ್ಲಿದ್ದು ತಾವು ಸಿಕ್ಕಾಪಟ್ಟೆ ಬಿಜ಼ಿ ಶೆಡ್ಯೂಲ್ ನಲ್ಲಿದ್ದೇವೆಂದು ಭಾವಿಸಿ ತೋರ್ಪಡಿಸಿಕೊಳ್ಳುವ ಡೌಲು ಗಿರಾಕಿಗಳಿಗೆ ಇಂತಹ ಸಮಾರಂಭಗಳಿಗೆ ಕೇವಲ ಮುಖ ತೋರಿಸಿ ಹೋಗುವುದಷ್ಟೇ ಕೆಲಸ. ನಾನಿಲ್ಲಿ ಅಂತಹಾ ಸ್ವಾರ್ಥಪರವಾದ, ತೋರಿಕೆ ಪರವಾದ ಮುಖವಾಡಗಳ ಬಗೆಗೆ ಮಾತನಾಡುತ್ತಿಲ್ಲ, ಅದರ ಅಗತ್ಯವೂ ಇಲ್ಲ.!
ಇನ್ನೂ ಕೆಲವರು ತಮ್ಮ ಆಫ಼ೀಸು ಕೆಲಸಗಳಲ್ಲಿ ಯಾವ ತರಹದ ಬಿಜ಼ಿ ಇರಬಲ್ಲರೆಂದು ನನಗೆ ಚೆನ್ನಾಗಿ ಗೊತ್ತು. ಈ ತರಹದ ಬಿಜ಼ಿ ಪೋಸು ಕೊಡುವ ಗೋಸುಂಬೆ ಗಿರಾಕಿಗಳನ್ನು ಸಾಕಷ್ಟು ಕಂಡಿದ್ದೇನೆ.
ಅದಿರಲಿ, ಅದಲ್ಲದೆಯೂ ಕೇವಲ ಆಹ್ವಾನಿಸಿದವರಿಗೆ ಜಸ್ಟ್ ಮುಖ ತೋರಿಸಿ ಅಟೆಂಡೆನ್ಸ್ ಗಾಗಿ ಅಟೆಂಡ್ ಆಗುವ ಕೆಲವು ಮನಸ್ಥಿತಿಗಳ ವರ್ತನೆಯೇ ಒಮ್ಮೊಮ್ಮೆ ಯಾವ ತರ್ಕಕ್ಕೂ ಸಿಗದು !
ನಿಮಗೆ ತುಂಬಾ ಪರಿಚಯವಿರುವವರು, ಆತ್ಮೀಯರು ಅಥವಾ ಬಂಧುಗಳಲ್ಲಿ ಬಹುತೇಕರು ತಮ್ಮ ಮಗ ಅಥವಾ ಮಗಳ ಮದುವೆಯನ್ನು ಸಂಭ್ರಮದಿಂದ ಮಾಡಬೇಕೆಂಬ ಆಸೆ ಹೊತ್ತು ಏನೆಲ್ಲಾ ಕಷ್ಟಪಟ್ಟು ಕನಸು ಹೊತ್ತು ಅದಕ್ಕಾಗಿ ಅನೇಕ ಗುರುತು-ಪರಿಚಯದವರನ್ನು ಮನದುಂಬಿ ಆಹ್ವಾನಿಸಿರುತ್ತಾರೆ. ಮದುವೆಗೆ ಕರೆದವರು ಬಂದು ತಮ್ಮ ಮಕ್ಕಳಿಗೆ ಶುಭ ಹಾರೈಸಿ, ಆಶೀರ್ವದಿಸಿ ಮದುವೆ ಊಟ ಮಾಡಿಕೊಂಡು ಹೋದಲ್ಲಿ ಅವರು ಲಕ್ಷಾಂತರ ಹಣ ಖರ್ಚು ಮಾಡಿದ್ದಕ್ಕೆ ಅಥವಾ ಸಾಲ ಮಾಡಿಯಾದರೂ ಅದ್ದೂರಿಯಾಗಿ ಮದುವೆ ಮಾಡಿದ್ದಕ್ಕೂ ಅವರಲ್ಲಿ ಸಾರ್ಥಕ ಭಾವ , ತೃಪ್ತಿ ಬಂದೀತು !
ಆದರೆ, ಹಾಗೆ ಮನಃಪೂರ್ವಕವಾಗಿ ಆಹ್ವಾನಿಸಿದವರ ಮದುವೆಗೋ ಇತರೆ ಸಮಾರಂಭಕ್ಕೋ ಕೇವಲ ಕಾಟಾಚಾರಕ್ಕಾಗಿ ಹೋಗಿ ಕರೆದವರ ಕಣ್ಣಿಗೆ ಹೀಗೆ ಬಿದ್ದು ಹಾಗೆ ನುಣುಚಿಕೊಂಡು ಬರುವುದರಲ್ಲಿ ಅದಾವ ಪುರುಷಾರ್ಥವಿದೆಯೋ ಹಾಗೆ ಹೋದವರಿಗೆ ಮಾತ್ರವೇ ಗೊತ್ತು. ಹೀಗೆ ಅಟೆಂಡೆನ್ಸ್ ಗಾಗಿ ಹೋಗುವ ಬಹುತೇಕರಿಗೆ ಮದುವೆ ಗಂಡು ಹೆಣ್ಣುಗಳ ಹೆಸರುಗಳೂ ಗೊತ್ತಿರೋಲ್ಲ ಅಥವಾ ಆ ಮದುವೆ, ಕರೆದವರ ಮಗನದ್ದೋ ಮಗಳದೋ ಎಂಬುದೂ ಸಹಾ ಕನ್‌ಫ಼್ಯೂಷನ್ ! ಅಷ್ಟು ಬಿಜ಼ಿ ಈ ಜನ !
ನೆನಪಿಡಿ, ನಿಮ್ಮ ಬಳಿ ಸಮಯವಿದ್ದೂ ಆತ್ಮೀಯ ಆಹ್ವಾನವಿದ್ದೂ ಕಾಟಾಚಾರಕ್ಕಾಗಿ ಅಥವಾ ಕೇವಲ ಅಲ್ಲಿ ಮುಖ ತೋರಿಸಲಿಕ್ಕಾಗಿ ಹೋಗೋದಕ್ಕಿಂತ ಹೋಗದಿರುವುದೇ ಒಂಥರಾ ಒಳ್ಳೆಯದು !
ಏಕೆಂದರೆ ಮದುವೆಯಂತಹ ಒಂದುಶುಭ ಕಾರ್ಯಕ್ಕೆ ಮುಖ್ಯವಾಗಿ ಮದುಮಕ್ಕಳಿಗೆ ಬೇಕಾಗಿರುವುದು ಆಹ್ವಾನಿತರ, ಗುರು ಹಿರಿಯರ ಹಾಗೂ ಬಂಧುಗಳ ಆಶೀರ್ವಾದಭರಿತ ಅಕ್ಷತೆಯೇ ಹೊರತು ನಿಮ್ಮ ಒಣಪ್ರತಿಷ್ಠೆಯ ಅಟೆಂಡೆನ್ಸ್ ಅಲ್ಲ………
ಅಟೆಂಡ್ ಆಗುವುದರ ಹಿಂದೆ ನಿಮ್ಮ ಅಟೆಂಷನ್ ಇರಲಿ….ಆದರೆ ಆಟಿಟ್ಯೂಡ್ ಬೇಡ….ಯೋಚಿಸಿ.
ಮರೆಯುವ ಮುನ್ನ * ಈ ಟೈಮಿಲ್ಲಾ ಅನ್ನೋದು, ತಾನು ಸಿಕ್ಕಾಪಟ್ಟೆ ಬಿಜ಼ಿ ಅನ್ನೋದೆಲ್ಲಾ ಅವರವರ ಸ್ವಯಂ ನಿರ್ಮಿತ ಬುನಾದಿಯಿಲ್ಲದ ಹುಸಿ ಕೋಟೆಗಳು ಅಥವಾ ತಮ್ಮ ಅಸಹಾಯಕತೆಗೆ ಒಬ್ಬರಿಗೆ ಕೊಡಬಹುದಾದ ಕುಂಟುನೆಪಗಳು. ಮನಸ್ಸು ಮಾಡಿದರೆ ಒಂದು ಒಳ್ಳೆಯ ಕೆಲಸಕ್ಕೆ ಹೇಗೆ ಬೇಕಾದರೂ ಸಮಯವನ್ನು ಹೊಂದಿಸಿಕೊಳ್ಳಬಹುದು. ಅದಕ್ಕೆ ಮುಖ್ಯವಾಗಿ ಮನಸಿರಬೇಕಷ್ಟೇ! ಈ ಬಿಜ಼ಿ ಎಂಬ ಒಣ ಗಿಲೀಟಿನ ಗಿಮಿಕ್ಕುಗಳೆಲ್ಲವೂ ನಮ್ಮ ಆದ್ಯತೆ ಹಾಗೂ ಆಸಕ್ತಿಯ ಮೇಲೆ ಆಧಾರವಾಗಿರುತ್ತದೆ.
ನಮಗೆ ಒಂದು ಶುಭ ಸಮಾರಂಭಕ್ಕೆ ಹೋಗುವ ಮನಸಿದ್ದರೆ ಯಾವ ಆಹ್ವಾನವೂ ಇಲ್ಲದಿದ್ದರೂ ಹೋಗುತ್ತೇವೆ. ಆದರೆ ಹೋಗದಿರಲು ಅಥವಾ ಅಟೆಂಡೆನ್ಸ್ ಗಾಗಿ ಮಾತ್ರವೇ ಹೋಗಲು ನಿರ್ಧರಿಸಿದ್ದಾಗ ಹುಡುಕಲು ಹತ್ತಾರು ಕೊಂಕುಗಳು ಸಿಕ್ಕಾವು !
ಆಹ್ವಾನದಲ್ಲಿ ಪ್ರೀತಿ, ವಿಶ್ವಾಸ , ಆತ್ಮೀಯತೆ ತುಂಬಿದ್ದಾಗ, ನಿಮಗೆ ಸಾಧ್ಯವಾಗಿದ್ದಾಗ ಅದಕ್ಕಾಗಿ ಸಮಯವನ್ನು ಮೀಸಲಿಡಿ. ಏಕೆಂದರೆ ಕೆಲವೊಂದು ಮಾನವೀಯ ಮೌಲ್ಯಗಳನ್ನು ನಿಷ್ಕಾರಣವಾಗಿ ನಿರ್ಲ್ಯಕ್ಷಿಸಿದಲ್ಲಿ ಮೊಂದೊಮ್ಮೆ ಅವೇ ತಿರುಗುಬಾಣವಾಗಿ ಕಾಡೀತು……..!!ಇದನ್ನು ಓದಿ –ಆರೋಗ್ಯದ ಗಣಿ ಸುಗಂಧಿ (ಸೊಗದೇ ಬೇರು)
ಲಾಸ್ಟ್ ಪಂಚ್
” ಜೀವನದಲ್ಲಿ ಮತ್ತೊಬ್ಬರನ್ನು ಟೀಕಿಸಲಿಕ್ಕೆ, ಆಡಿಕೊಳ್ಳಲಿಕ್ಕೆ ಸಮಯವಿಲ್ಲದಷ್ಟು ಹಸಿಹಸಿ ಬಿಜ಼ಿಯಾಗಿ. ಆದರೆ ಒಬ್ಬರ ಪ್ರಾಮಾಣಿಕ ಪ್ರೀತಿಗೆ ಬೆಲೆ ಕೊಡಲಾಗದಷ್ಟು ಹುಸಿರೂಪದ ಬಿಜ಼ಿಯಾಗಬೇಡಿ. “
ಪ್ರೀತಿಯಿಂದ…..

ಹಿರಿಯೂರು ಪ್ರಕಾಶ್.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು