“ದೇವೀಂ ಪ್ರಸನ್ನಾಂ ಪ್ರಣತಾರ್ತಿಹಂತ್ರೀಂ
ಯೋಗೀಂದ್ರ ಪೂಜ್ಯಾಂ ಯುಗಧರ್ಮ ಪಾತ್ರೀಮ್ |
ತಾಂ ಶಾರದಾಂ ಭಕ್ತಿ ವಿಜ್ಞಾನದಾತ್ರೀಂ
ದಯಾ ಸ್ವರೂಪಾಂ ಪ್ರಣಮಾಮಿ ನಿತ್ಯಂ” ||-ಸ್ವಾಮಿ ಅಭೇದಾನಂದ
“ಪ್ರಸನ್ನಳೂ, ಶರಣಾಗತರಾದವರ ದುಃಖವನ್ನು ನಾಶಮಾಡುವವಳೂ, ಯೋಗೀಂದ್ರರಿಂದ ಪೂಜಿಸಲ್ಪಡುವವಳೂ, ಯುಗಧರ್ಮವನ್ನು ರಕ್ಷಿಸುವವಳೂ, ಭಕ್ತಿ ವಿಜ್ಞಾನಗಳನ್ನು ನೀಡುವವಳೂ, ದಯಾಸ್ವರೂಪಳೂ ಆಗಿರುವ ಶ್ರೀ ಶಾರದಾದೇವಿಯನ್ನು ನಿತ್ಯವೂ ನಮಿಸುತ್ತೇನೆ”.
ಶ್ರೀ ಮಾತೆ ಶಾರದಾದೇವಿಯವರು ಡಿಸೆಂಬರ್ 22, 1853 ರಲ್ಲಿ ಬಂಗಾಳದ ಕಾಮಾರ್ ಪುಕೂರಿನ ಜಯರಾಂಬಾಟಿ ಎಂಬಲ್ಲಿ ಶ್ಯಾಮಸುಂದರೀದೇವಿ ಹಾಗೂ ರಾಮಚಂದ್ರ ಮುಖ್ಯೋಪಾಧ್ಯಾಯ ದತ್ತರ ಮಗಳಾಗಿ ಜನಿಸಿದರು. ಸಾಮಾನ್ಯವಾಗಿ ಅವತಾರ ಪುರುಷರ ಜನನ ಕಾಲದಲ್ಲಿ ಅಸಾಮಾನ್ಯ ಘಟನೆಗಳು ನಡೆಯುವುದು ಅಪರೂಪವೇನಲ್ಲ, ಹಾಗೆಯೇ ಶ್ರೀಮಾತೆ ಶಾರದಾದೇವಿಯವರು ಜನಿಸುವ ಕಾಲದಲ್ಲೂ ಕೂಡ ಅಂತಹ ಅಲೌಕಿಕ ಘಟನೆಯೊಂದು ನಡೆಯಿತು. ಶ್ರೀಮಾತೆಯವರು ಸರಳ ಸಾತ್ವಿಕ ಸ್ವಭಾವದವರಾದ ಶ್ಯಾಮಸುಂದರೀದೇವಿ ಹಾಗೂ ರಾಮಚಂದ್ರ ದತ್ತನ ಕನಸಿನಲ್ಲಿ ಕಾಣಿಸಿಕೊಂಡು ಇಬ್ಬರಿಗೂ ತಮ್ಮ ದಿವ್ಯ ದರುಶನವನ್ನು ಮಾಡಿಸಿ ನಾನು ನಿಮ್ಮ ಮನೆಗೆ ಬರುವೆನೆಂಬ ಸೂಚನೆಯನ್ನು ಕೊಟ್ಟರು, ಅಂದಿನಿಂದ ದಂಪತಿಗಳಿಬ್ಬರೂ ತಮಗಾದ ಅಲೌಕಿಕ ಅನುಭವದಿಂದ ಪವಿತ್ರ ಜೀವನವನ್ನು ನಡೆಸುತ್ತ ದೇವಶಿಶುವಿನ ಶುಭಾಗಮನಕ್ಕಾಗಿ ನಿರೀಕ್ಷಿಸತೊಡಗಿದರು, ಆ ದೇವ ಶಿಶುವೇ ಮುಂದೆ ಜಗನ್ಮಾತೆಯಾಗಿ ಅವತಾರ ತಳೆದ ಶ್ರೀ ಮಾತೆ ಶಾರದಾದೇವಿಯವರು.
ಸಾಮಾನ್ಯವಾಗಿ ನಾವು ಎಲ್ಲ ಸಂತರ, ಮಹಾತ್ಮರ ಅವತಾರ ಪುರುಷರ ಜೀವನದಲ್ಲಿ ಜೀವನ ಮತ್ತು ಭೋದನೆಯನ್ನು ಕಾಣುತ್ತೇವೆ, ಉದಾಹರಣೆಗೆ ಶ್ರೀ ರಾಮಕೃಷ್ಣ ಪರಮಹಂಸರ ಜೀವನ ಮತ್ತು ಭೋದನೆ, ಸ್ವಾಮಿ ವಿವೇಕಾನಂದರ ಜೀವನ ಮತ್ತು ಭೋದನೆ, ಶ್ರೀ ರಾಮ ಮತ್ತು ಶ್ರೀ ಕೃಷ್ಣರ ಜೀವನ ಮತ್ತು ಭೋದನೆ ಹೀಗೆ, ಆದರೆ ಶ್ರೀ ಮಾತೆ ಶಾರದಾದೇವಿಯವರಲ್ಲಿ ಸ್ವಲ್ಪ ವಿಭಿನ್ನ, ಏಕೆಂದರೆ ಅವರ ಜೀವನವೇ ಒಂದು ಭೋದನೆಯಾಗಿದ್ದಿತು.
ಒಮ್ಮೆ ಒಬ್ಬಳು ಭಕ್ತೆ ಬಂದು ಅಮ್ಮ ಏನಾದರು ಉಪದೇಶ ಮಾಡಿ ಎಂದು ಕೇಳಲು ಆಗ ಶ್ರೀಮಾತೆಯವರು ಏನನ್ನು ಹೇಳದೆ ತಮ್ಮ ಪಾಡಿಗೆ ತಾವು ಮಾಡುವ ಕೆಲಸದ ಮೂಲಕ ಅವಳಿಗೆ ಉಪದೇಶಿಸಲು ನೋಡುತ್ತಿದ್ದಾರೆ, ಆದರೆ ಇವೆಲ್ಲವೂ ಆ ಭಕ್ತೆಗೆ ಅರ್ಥವಾಗದೆ ಅಮ್ಮ ನೀವು ಏನು ಹೇಳಲೇಯಿಲ್ಲ ಎಂದು ಮತ್ತೊಮ್ಮೆ ಶ್ರೀ ಮಾತೆಯವರನ್ನು ಕೇಳಿದಾಗ ಶ್ರೀಮಾತೆಯವರು ಬೆಳಗ್ಗೆಯಿಂದ ನಾನು ಎಷ್ಟೊಂದು ಹೇಳಿದೆನಲ್ಲ ನಿನಗೆ, ಆದರೆ ಅದನ್ನು ನೀನು ಅರ್ಥಮಾಡಿಕೊಂಡಿಲ್ಲ ಎಂದು. ಅಂದರೆ ಶ್ರೀ ಮಾತೆಯವರು ಕೇವಲ ಮಾತಿನ ಮುಖಾಂತರವಲ್ಲ ತಮ್ಮ ಕೃತಿಯ ಮೂಲಕ ತಮ್ಮ ಸಂದೇಶವನ್ನು ಕೊಟ್ಟವರು. ಪ್ರತಿನಿತ್ಯದ ಅವರ ಜೀವನವೇ ಒಂದು ಸಂದೇಶವಾಗಿತ್ತು, ಆದರೆ ನೋಡುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿದ್ದರೆ ಅವರ ಜೀವನವೇ ಒಂದು ಅದ್ಭುತವಾದ ಸಂದೇಶ. ಶ್ರೀಮಾತೆಯವರು ಮಾತನಾಡಿದ್ದು ಕಡಿಮೆಯೇ ಅದು ತೀರಾ ಅಗತ್ಯ ಎನಿಸಿದಾಗ ಪಿಸುನುಡಿಯಲ್ಲಿ ಹೇಳುತ್ತಿದ್ದರು, ಆದರೆ ತಮ್ಮ ಕೃತಿಯಲ್ಲಿಯೆ ಸಂದೇಶವನ್ನು ತೋರಿಸಿಕೊಟ್ಟವರು, ಇಂತಹ ಒಂದು ವಿಶೇಷ ಗುಣ ವಿಶ್ವವನ್ನು ವ್ಯಾಪಿಸಿಕೊಂಡು ಎಲ್ಲರನ್ನು ತಬ್ಬಿ ಹಿಡಿದಿದೆ ಎಂದರೆ ತಪ್ಪಾಗಲಾರದು.
ಸ್ವಾಮಿ ವಿವೇಕಾನಂದರು ಶಿಕಾಗೋದಲ್ಲಿ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿದಾಗ ಯಾವ ಧರ್ಮಕ್ಕೆ Exclusion (ಹೊರಗಿಡುವಿಕೆ) ಎನ್ನುವ ಶಬ್ದವೇ ಗೊತ್ತಿಲ್ಲವೋ ಅದು ಸನಾತನ ಧರ್ಮ ಎಂದು ಹೇಳಿದರು, ಹಾಗೆ ಶ್ರೀ ಮಾತೆ ಶಾರದಾದೇವಿಯವರ ವಿಷಯಕ್ಕೆ ಕೂಡ ಇದೇ ಶಬ್ದವನ್ನು ಉಪಯೋಗಿಸಬಹುದು. ಇವರು ನನ್ನ ಪರಿಧಿಯೊಳಗೆ ಬರುವುದಿಲ್ಲ, ಇವರನ್ನು ನಾನು ಸ್ವೀಕಾರ ಮಾಡುವುದಿಲ್ಲ, ಇವರ ಜೊತೆ ನನಗೆ ಅಷ್ಟು ಸರಿ ಹೋಗುವುದಿಲ್ಲ, ಇವರು ನನ್ನ ಸೀಮೆ ಒಳಗೆ ಬರುವುದಿಲ್ಲ, ಇವರನ್ನು ನಾನು ಸ್ವಲ್ಪ ದೂರ ಇಡಬೇಕಾಗುವುದು ಎನ್ನುವ ಯಾವುದೇ ಒಂದು ತಡೆಗೋಡೆಯಿರಲಿಲ್ಲ ಶ್ರೀಮಾತೆಯವರಲ್ಲಿ.
ಸ್ವಾಮಿ ವರದ ಬ್ರಹ್ಮಚಾರಿಗಳು ಒಮ್ಮೆ ಹೇಳುತ್ತಾರೆ ಶ್ರೀ ಮಾತೆಯವರು Most Desirelessness (ಅತ್ಯಂತ ಅಪೇಕ್ಷೆಯಿಲ್ಲದಿರುವಿಕೆ) ಅವರು ಏನೋ ಒಂದನ್ನು ಬಯಸುತ್ತಿದ್ದಾರೆ ಎನ್ನುವ ಆಸೆಯೇ ಇರಲಿಲ್ಲ ಎಂದು. ಶ್ರೀ ಮಾತೆಯವರ ನೇರ ಶಿಷ್ಯರಾದ ಸ್ವಾಮಿ ವಿಶುದ್ದಾನಂದರು ಒಮ್ಮೆ ಹೇಳುತ್ತಾರೆ.. ನಾವು ಶ್ರೀ ಮಾತೆ ಶಾರದಾದೇವಿಯವರನ್ನು ಒಂದು ಹೆಸರಿನಿಂದ ಕರೆಯುತ್ತಿದ್ದೆವು, ಅದೇನೆಂದರೆ Barriar Breaking Mother ಎಂದು. ಅಂದರೆ ಎಲ್ಲೆಲ್ಲಿ ಭೇದಗಳು ಕಾಣಿಸುತ್ತವೆಯೋ ಮೇಲು-ಕೀಳು, ಬಡವ-ಶ್ರೀಮಂತ, ಕಪ್ಪು-ಬಿಳುಪು, ದೇಶ-ದೇಶಗಳ ನಡುವೆ, ಹಳೆಯದು-ಹೊಸದು, ಸಂಪ್ರದಾಯ & ಆಧುನೀಕತೆ ಇಂತಹ ಎಲ್ಲ ತಡೆಗೋಡೆಗಳನ್ನು ಒಡೆಸಿಹಾಕುವಂತ ಕಾರ್ಯ ಮಾಡುತ್ತಿದ್ದವರು ಶ್ರೀ ಮಾತೆ ಶಾರದಾದೇವಿಯವರು.
ಶ್ರೀ ಮಾತೆಯವರು ಸಂದೇಶವನ್ನು ಕೊಡಲಿಲ್ಲ ಮಾಡಿ ತೋರಿಸುತ್ತಿದ್ದರು, ಯಾವುದಕ್ಕೂ ಕಟ್ಟು ಬೀಳಲಿಲ್ಲ, ಜಾತಿಯನ್ನು ಮೀರಿದರು, ಪಂಥವನ್ನು ಮೀರಿದರು, ಸಂಪ್ರದಾಯವನ್ನು ಮೀರಿದರು ಹಾಗೂ ಆಗಿನ ಕಾಲಕ್ಕೆ (Social Customs) ಸಾಮಾಜಿಕ ಆಚರಣೆಗಳನ್ನು ಮೀರಿ ಬೆಳೆದರು ಎಂದು ಹೇಳುವುದಕ್ಕಾಗುವುದಿಲ್ಲ, ಏಕೆಂದರೆ ಮೊದಲು ಸಂಕುಚಿತತೆ ಇತ್ತು ನಂತರ ಹಂತ ಹಂತವಾಗಿ ಬೆಳೆದರು ಎನ್ನುವ ಹಾಗಾಗುತ್ತದೆ ಹಾಗೂ ಇಲ್ಲಿ ಹುಟ್ಟಿದಾಗಿನಿಂದ ಶಾರದಾ ದೇವಿಯವರ ಜೀವನದಲ್ಲಿ ಅವತ್ತಿನ ಕಾಲಕ್ಕೆ ಏನೇನು ತಡೆಗೋಡೆಗಳು ಇದ್ದವು ಅದನ್ನೆಲ್ಲವನ್ನೂ ಒಡೆದು ಬಾಳಿದವರು ನಮ್ಮ ಶ್ರೀ ಮಾತೆಯವರು. ಸಹಜತೆ ಎನ್ನುವುದು ಶ್ರೀಮಾತೆ ಶಾರದಾದೇವಿಯವರಿಗೆ ಹುಟ್ಟಿನಿಂದಲೇ ಬಂದಿರುವಂತದ್ದು.
ಸಾಮಾನ್ಯವಾಗಿ ಈ ಜಗತ್ತಿನಲ್ಲಿ ಮನುಷ್ಯ ಏನು ಬೇಕು ಎಂದು ಬಯಸುತ್ತಾನೆ. ಶಾಂತಿ, ನೆಮ್ಮದಿ, ಪ್ರೀತಿ, ಭರವಸೆ ಇವೆಲ್ಲವನ್ನೂ ಸಹಜವಾಗಿ ಬಯಸುತ್ತಾನೆ. ಶ್ರೀಮಾತೆಯವರು ಒಂದು ಕಡೆ ಹೇಳಿದ್ದಾರೆ “ಯಾವ ಜೀವಿಗೆ ನನ್ನ ಕರುಣೆ ಸಿಕ್ಕಿಲ್ಲವೆಂದು ಅಂದುಕೊಂಡಿರುವುದೋ ಅಥವಾ ನನ್ನ ದಯೆ, ಅನುಕಂಪ ಆ ಜೀವಿಯ ಮೇಲೆ ಹರಿದಿಲ್ಲವೆಂದು ಅರ್ಥ ಮಾಡಿಕೊಂಡಿದೆಯೋ ಅದಕ್ಕಿಂತ ದೌರ್ಭಾಗ್ಯ ಮತ್ತೊಂದಿಲ್ಲವೆಂದು”. ಎಲ್ಲರ ಮೇಲೆ ಧಾರೆ ಧಾರೆಯಾಗಿ ಪ್ರವಾಹದೋಪಾದಿಯಲ್ಲಿ ತಮ್ಮ ಕೃಪೆಯನ್ನು ಹರಿಸುತ್ತಿದ್ದರು ಶ್ರೀಮಾತೆಯವರು, ಪ್ರತಿಯೊಬ್ಬರಿಗೂ ಭರವಸೆಯನ್ನು ನೀಡುತ್ತಿದ್ದರು. ಅದೆಷ್ಟು ಕೆಟ್ಟದಾಗಿ ಜೀವನ ಮಾಡಿದ್ದರೂ ಸರಿ, ಸಾಧನೆಯಲ್ಲಿ ಬೇಕಾದಷ್ಟು ಸಲ ಮುಗ್ಗರಿಸಿದ್ದರೂ, ಜೀವನದಲ್ಲಿ ಇನ್ನೇನು ಮಾಡಲಿಕ್ಕೆ ಸಾಧ್ಯವಿಲ್ಲವೆಂದು ಅಸಹಾಯಕತೆಯಲ್ಲಿ ಕುಗ್ಗಿ ಹೋಗಿರಲಿ ಅಲ್ಲಿ ಶ್ರೀ ಮಾತೆಯವರ ಜೀವನದಿಂದ ಒಂದು ಭರವಸೆ ಸಿಗುವುದು, ಒಂದು ಬೆಳಕು ಸಿಗುವುದು, ಏಕೆಂದರೆ ಅಲ್ಲಿ ಪ್ರೀತಿ ಇದೆ ಶ್ರೀ ಮಾತೆಯವರದು ಎಲ್ಲರನ್ನೂ ತಬ್ಬಿ ಕೊಳ್ಳುವಂತ ಮಾತ್ರ ಪ್ರೇಮ.
ತಾಯಿ ಯಾರಿಗೆ ಬೇಡ ಹೇಳಿ ಒಂದು ಸಸ್ಯಕ್ಕೆ ಕೂಡ ತಾಯಿಬೇರು ಅಂತಿದೆ, ತಾಯಿ ಇಲ್ಲದೆ ಈ ಜಗತ್ತು ಇಲ್ಲವೇ ಇಲ್ಲ, ನಾನು ತುಂಬಾ ಕೆಟ್ಟವನು, ತುಂಬಾ ಪಾಪ ಮಾಡಿದ್ದೇನೆ ಆದರೆ ತಾಯಿ ಹತ್ತಿರ ಹೇಗೆ ಹೋಗುವುದು ಎಂದು ಯಾವ ಮಗುವೂ ಹೇಳುವುದಿಲ್ಲ, ಆದರೆ ಭಗವಂತನ ಹತ್ತಿರ ಹೋಗುವುದಕ್ಕೆ ಕಷ್ಟವಾಗುತ್ತದೆ. ತಾಯಿಯ ಹತ್ತಿರ ಆ ಬಂಧನವಿರುವುದಿಲ್ಲ, ಅದಕ್ಕೋಸ್ಕರವೇ ಶ್ರೀರಾಮಕೃಷ್ಣರು ಭಗವಂತನ ಮಾತೃತ್ವವನ್ನು ಪ್ರಕಟಪಡಿಸುವುದಕ್ಕೆ, ಎಲ್ಲವನ್ನೂ ಸ್ವೀಕಾರ ಮಾಡಿ ಅರಗಿಸಿಕೊಳ್ಳುವುದಕ್ಕೆ ಮಾತೆಯವರನ್ನು ಇಲ್ಲಿ ಬಿಟ್ಟು ಹೋದರು.
ಶ್ರೀ ಮಾತೆಯವರು ಅಮ್ಮ ಎಂಬ ಕರೆಗೆ ಓಗೊಡುವರಷ್ಟೇ, ಅವರಿಗೆ ಎಲ್ಲರೂ ಅವರ ಮಕ್ಕಳೇ.. ಕೆಲವೊಂದನ್ನು ಓದಿದರೆ ಅರ್ಥವಾಗದು ತಾಯಿಯವರ ಪ್ರೀತಿಯ ಸವಿಯನ್ನು ಸವಿದವರಿಗಷ್ಟೇ ಗೊತ್ತು ಹಾಗೂ ಮಾತೃ ಪ್ರೀತಿಯನ್ನು ಭಾವಿಸಿದಾಗಲೇ ನಮ್ಮ ಅಂತರಂಗಕ್ಕೂ ಅವಳ ಇರುವು ಅರಿವಾಗುವುದು. ಶಾರದಾದೇವಿಯವರ ಮಹಾತ್ಮೆ ಮತ್ತು ಅವರ ಆಧ್ಯಾತ್ಮಿಕ ಉನ್ನತಿಯು ಹಾಗೂ ಅವರಲ್ಲಿ ವಿಕಸನಗೊಂಡ ವಿಶ್ವವನ್ನೇ ತಬ್ಬುವಂತ ಮಾತೃ ವಾತ್ಸಲ್ಯಭಾವ ಶ್ರೀರಾಮಕೃಷ್ಣರು ನೀಡಿದ ಶಿಕ್ಷಣದಿಂದಷ್ಟೇ ಅಲ್ಲದೆ ಅವರು ಅದನ್ನು ಇಚ್ಛಾಪೂರ್ವಕವಾಗಿ ಮೈಗೂಡಿಸಿಕೊಂಡು ತಮ್ಮ ಅಂತಃಸ್ಸತ್ವದಿಂದ ಮಹಿಮಾವಂತೆಯಾಗಿ ವಿಕಸನ ಹೊಂದಿದರು ಎಂದು ಹೇಳಬಹುದು. ಶಾರದಾದೇವಿಯವರು ಶ್ರೀರಾಮಕೃಷ್ಣರ ಶಿಷ್ಯರ ಪಾಲಿಗೆ ಕೇವಲ ಗುರುಪತ್ನಿಯಾಗಿರಲಿಲ್ಲ, ಪ್ರೇಮಮಯಿ ಮಾತೆಯಾಗಿದ್ದರು.
ಆಧ್ಯಾತ್ಮಿಕ ಜೀವನದಲ್ಲಿ ಆಹಾರದ ವಿಷಯವು ಬಹಳ ಪ್ರಮುಖವಾದದ್ದು, ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬುದು ಶ್ರೀರಾಮಕೃಷ್ಣರ ಅಭಿಮತ, ತಮ್ಮ ಶಿಷ್ಯರಾದ ರಾಖಾಲನಿಗೆ ಆರು ಚಪಾತಿ, ಲಾಟುವಿಗೆ 5 ಬಲರಾಮ ಮತ್ತು ಗೋಪಾಲನಿಗೆ ತಲಾ ನಾಲ್ಕು ಚಪಾತಿಯನ್ನು ಮಾತ್ರ ತಿನ್ನಲು ಹೇಳಿದ್ದರು, ಆದರೆ ಶಾರದಾದೇವಿಯವರು ಅದನ್ನು ಗಣನೆಗೆ ತೆಗೆದುಕೊಳ್ಳದೆ ಊಟದ ವಿಷಯದಲ್ಲಿ ಹೀಗೆಲ್ಲ ಲೆಕ್ಕಾಚಾರ ಹಾಕಬಾರದೆಂದು ತುಸು ಹೆಚ್ಚೇ ಊಟ ಬಡಿಸುತ್ತಿದ್ದರು, ಇದನ್ನು ತಿಳಿದ ಶ್ರೀರಾಮಕೃಷ್ಣರು ಶ್ರೀಮಾತೆಯವರಲ್ಲಿ ಹೇಳುತ್ತಾರೆ ನೀನೀ ರೀತಿ ಪ್ರೀತಿ ತೋರಿದರೆ ಆ ಹುಡುಗರ ಭವಿಷ್ಯವೇ ಹಾಳಾಗುತ್ತದೆಯೆಂದು, ಅದಕ್ಕೆ ಶಾರದಾದೇವಿಯರು ಧೃಡತೆಯಿಂದಲೇ ಶಾಂತವಾಗಿ ಹೇಳುತ್ತಿದ್ದಾರೆ ಆ ಮಕ್ಕಳು ಎರಡು ಚಪಾತಿ ಹೆಚ್ಚು ತಿಂದಿದ್ದಕ್ಕೆಲ್ಲ ನೀವು ಅಷ್ಟೊಂದು ತಲೆಕೆಡಿಸಿಕೊಳ್ಳುವುದೇಕೆ? ಅವರ ಭವಿಷ್ಯವನ್ನು ನಾನು ನೋಡಿಕೊಳ್ಳುತ್ತೇನೆ, ಊಟದ ವಿಷಯದಲ್ಲಿ ಮಾತ್ರ ನೀವು ಅವರನ್ನು ಗದರಿಸಬಾರದೆಂದು.ಇದನ್ನು ಓದಿ –ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ಇಂತಹ ಎಷ್ಟೋ ಉದಾಹರಣೆಗಳನ್ನು ಶ್ರೀಮಾತೆಯವರ ಜೀವನವನ್ನು ಅಧ್ಯಯನ ಮಾಡುವುದರಿಂದ ತಿಳಿಯಬಹುದು ಮತ್ತು ಅವರ ಮಾತೃತ್ವದ ಪ್ರೇಮವನ್ನು ನಾವಿಲ್ಲಿ ಕಾಣಬಹುದು, ಇಂತಹ ಮಹಾಮಾನ್ವಿತರಾದ ಜಗನ್ಮಾತೆ ಶ್ರೀ ಮಾತೆ ಶಾರದಾದೇವಿಯವರ 172ನೇ ಜಯಂತಿಯ ದಿನವಾದ ಇಂದು ನನ್ನ ಈ ಬರಹವನ್ನು ಮಾತೆಯ ಪಾದ ಪದ್ಮಗಳಿಗರ್ಪಿಸುತ್ತಿದ್ದೇನೆ. ಶ್ರೀ ಮಾತೆಯವರ ಮಾತೃ ಪ್ರೇಮದ ಸವಿ ಎಲ್ಲರಿಗೂ ಲಭಿಸುವಂತಾಗಲಿ.
️ಶೋಭಾವತಿ ಆರ್
ಕುಣಿಗಲ್, ತುಮಕೂರು ಜಿಲ್ಲೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು