November 19, 2024

Newsnap Kannada

The World at your finger tips!

pre wedding

ಹಂಪಿಯ ಸಂರಕ್ಷಿತ ಸ್ಮಾರಕದಲ್ಲೂ ಪ್ರಿವೆಡ್ಡಿಂಗ್ ಶೂಟ್

Spread the love

ಪ್ರಸಿದ್ಧ ಹಂಪಿಯ ಸಂರಕ್ಷಿತ ಸ್ಮಾರಕದೊಳಗೆ ನಿಯಮ ಮೀರಿ ವಿವಾಹಪೂರ್ವ (ಪ್ರಿ ವೆಡ್ಡಿಂಗ್‌) ಫೋಟೊ ಶೂಟ್‌ ನಡೆಸಿರುವುದು ಇನ್‌ಸ್ಟಾಗ್ರಾಂನಲ್ಲಿ ವೀಡಿಯೋ ಹಂಚಿಕೊಂಡ ನಂತರ ಗೊತ್ತಾಗಿದೆ.

ಆಂಧ್ರ ಪ್ರದೇಶದ ಜಾಹ್ನವಿ ಮತ್ತು ಸಿದ್ಧಾಂತ ಅವರ ವಿವಾಹಪೂರ್ವ ಫೋಟೊ ಶೂಟ್‌ಗೆ ಸಂಬಂಧಿಸಿದ ವಿಡಿಯೊ ಅನ್ನು ವಿಜಯಿ ಸ್ಯಾಮಂಡ್ಕೊ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ಹರಿದಾಡುತ್ತಿದೆ. 2 ನಿಮಿಷ 49 ಸೆಕೆಂಡಿನ ಈ ವಿಡಿಯೊವನ್ನು 20 ಸಾವಿರಕ್ಕೂ ಅಧಿಕ ಜನ ನೋಡಿ ಮೆಚ್ಚಿದ್ದಾರೆ. ಅಕ್ಟೋಬರ್‌ 10ರಿಂದ 15ರ ನಡುವೆ ಈ ಚಿತ್ರೀಕರಣ ನಡೆಸಲಾಗಿದೆ ಎಂದು ಗೊತ್ತಾಗಿದೆ.

ಜನರ ಆಕ್ರೋಶ – ಇಲಾಖೆ ಮೌನ:

ವಿಜಯ ವಿಠಲ ದೇವಸ್ಥಾನದ ಸಪ್ತಸ್ವರ ಮಂಟಪ, ಕಮಲ ಮಹಲ್‌ ಹಾಗೂ ಮಹಾನವಮಿ ದಿಬ್ಬ ಬಳಿಯಿರುವ ಪುಷ್ಕರಣಿಯಂಥ ಸಂರಕ್ಷಿತ ಸ್ಮಾರಕಗಳಲ್ಲಿ ಚಿತ್ರ ತೆಗೆಯಲಾಗಿದೆ. ಮಕ್ಕಳು ಸೇರಿದಂತೆ ಯಾರಿಗೂ ಸ್ಮಾರಕದ ಒಳಗಡೆ ಪ್ರವೇಶವಿಲ್ಲ. ಸಪ್ತಸ್ವರ ಹೊರಹೊಮ್ಮಿಸುವ ಕಂಬಗಳನ್ನು ಯಾರೂ ಮುಟ್ಟುವಂತಿಲ್ಲ. ಆದರೆ, ಕಂಬಗಳನ್ನು ಹಿಡಿದುಕೊಂಡು ಚಿತ್ರೀಕರಣ ನಡೆಸಲು ಅವಕಾಶ ಕಲ್ಪಿಸಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಹಂಪಿಯ ಪ್ರತಿಯೊಂದು ಸ್ಮಾರಕಗಳ ಬಳಿ ಐದಾರು ಜನ ಭದ್ರತಾ ಸಿಬ್ಬಂದಿ ಯಾವಾಗಲೂ ಇರುತ್ತಾರೆ. ಸ್ಮಾರಕಗಳಲ್ಲಿ ಮನಬಂದಂತೆ ಓಡಾಡಿ ಚಿತ್ರೀಕರಿಸಿರುವುದಾದರೂ ಹೇಗೆ? ಪ್ರಭಾವಿ ವ್ಯಕ್ತಿಗಳಾಗಿರಬಹುದು, ಇಲ್ಲವೇ ಇಲ್ಲಿಯ ಸಿಬ್ಬಂದಿ ಹಣ ತೆಗೆದುಕೊಂಡು ಅವಕಾಶ ಕಲ್ಪಿಸಿರಬಹುದು’ ಎಂದು ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣ ಸೇನೆ ಅಧ್ಯಕ್ಷ ವಿಶ್ವನಾಥ ಮಾಳಗಿ ಆರೋಪಿಸಿದ್ದಾರೆ.

ಫೋಟೊ ಶೂಟ್ ಮಾಡಿದರೆ 1 ಲಕ್ಷ ಶುಲ್ಕ:

‘ಈ ವಿಡಿಯೊ ನೋಡಿದರೆ ಡ್ರೋನ್‌ ಕೂಡ ಉಪಯೋಗಿಸಿದಂತೆ ಕಾಣಿಸುತ್ತಿದೆ. ಹಂಪಿಯಲ್ಲಿ ಯಾವುದಾದರೂ ಸ್ಮಾರಕದ ಬಳಿ ಫೋಟೊ ಶೂಟ್‌ ಮಾಡಬೇಕಾದರೆ ದಿನಕ್ಕೆ ₹1 ಲಕ್ಷ ಶುಲ್ಕ ಇದೆ. ಆದರೆ, ಟ್ರೈಪಾಡ್‌ ಬಳಸಬಾರದು. ಸ್ಮಾರಕದೊಳಗೆ ಹೋಗಬಾರದು ಎನ್ನುವ ನಿಯಮವಿದೆ. ಆದರೆ, ಅದನ್ನೆಲ್ಲ ಗಾಳಿಗೆ ತೂರಿದ್ದಾರೆ. ಈ ಕುರಿತು ಪೊಲೀಸ್‌ ಠಾಣೆಗೆ ದೂರು ಕೊಡಲು ಸಿದ್ಧತೆ ನಡೆಸಿರುವೆ’ ಎಂದು ಅವರು ತಿಳಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!