November 24, 2024

Newsnap Kannada

The World at your finger tips!

parliament foundation

ದೆಹಲಿಯಲ್ಲಿ ನಿರ್ಮಿಸುವ ನೂತನ ಸಂಸತ್ ಭವನಕ್ಕೆ ಪ್ರಧಾನಿ ಶಿಲಾನ್ಯಾಸ

Spread the love
  • ಸಂಸತ್ ಶಿಲಾನ್ಯಾಸಕ್ಕೆ ಶೃಂಗೇರಿ ಮಠದ ಪೌರೋಹಿತ್ಯ !
  • ಸಚಿವ ಪ್ರಹ್ಲಾದ್ ಜೋಶಿಗೆ ಕಾರ್ಯಕ್ರಮದ ಜವಾಬ್ದಾರಿ

ನೂತನ ಸಂಸತ್ ಭವನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಭೂಮಿಪೂಜೆ, ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದರು.

ಧಾರ್ಮಿಕ ವಿಧಿವಿಧಾನಗಳ ಸಂಪೂರ್ಣ ಜವಾಬ್ದಾರಿಗಳನ್ನು ಕರ್ನಾಟಕದ ಶೃಂಗೇರಿ ಮಠಕ್ಕೆ ವಹಿಸಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯ.

ಪ್ರಧಾನಿ ನರೇಂದ್ರ ಮೋದಿ ‘ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆಯಬೇಕು. ಹೀಗಾಗಿ ಒಳ್ಳೆಯ ಪುರೋಹಿತರನ್ನು ಕರೆದು ಕೊಂಡು ಬನ್ನಿ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಲಾದ್ ಜೋಶಿ ಅವರಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಶೃಂಗೇರಿ ಜಗದ್ಗುರುಗಳಾದ ಭಾರತೀ ತೀರ್ಥಮಹಾ ಸ್ವಾಮಿ ಅವರನ್ನು ಸಂಪರ್ಕಿಸಿದ ಜೋಶಿಯವರು, ಪ್ರಧಾನಿಯವರ ಆಶಯದ ಬಗ್ಗೆ ವಿವರಿಸಿದ್ದಾರೆ.

‘ನಮ್ಮ ಮಠದ ಉತ್ತಮ ಪುರೋಹಿತ ರನ್ನು ನಿಮ್ಮಲ್ಲಿಗೆ ಕಳುಹಿಸಿಕೊಡುತ್ತೇವೆ’
ಎಂದು ಒಪ್ಪಿಕೊಂಡ ಶೃಂಗೇರಿ ಸ್ವಾಮೀಜಿ, ನಾಲ್ವರನ್ನು ನೇಮಿಸಿ ದೆಹಲಿಗೆ ಕಳುಹಿಸಿದ್ದಾರೆ.

ಮಂಗಳವಾರ ದೆಹಲಿಗೆ ಬಂದಿರುವ ಪುರೋಹಿತರು, ಬುಧವಾರದಂದು ಸಂಸತ್ತಿಗೆ ತೆರಳಿ ಧಾರ್ಮಿಕ ಕಾರ್ಯಕ್ರಮಗಳ ಪೂರ್ವ ತಯಾರಿಗಳನ್ನು ಮಾಡಿದ್ದಾರೆ.

ಪುರೋಹಿತರಾದ ಟಿ.ವಿ. ಶಿವಕುಮಾರ ಶರ್ಮ, ಕೆ.ಎಸ್. ಲಕ್ಷ್ಮೀ ನಾರಾಯಣ ಸೋಮಯಾಜಿ, ಕೆ.ಎಸ್. ಗಣೇಶ ಸೋಮಯಾಜಿ, ಸಿ. ನಾಗರಾಜ ಅಡಿಗ ಶೃಂಗೇರಿಯಿಂದ ದೆಹಲಿಗೆ ಬಂದಿದ್ದರೆ, ರಾಘವೇಂದ್ರ ಭಟ್ಟ ಮತ್ತು ಋಷ್ಯಶೃಂಗ ಎಂಬವರು ದೆಹಲಿಯ ಶೃಂಗೇರಿ ಮಠದ ಶಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ

ಈ 6 ಮಂದಿ ಶಿಲಾನ್ಯಾಸಕ್ಕೆ ಸಂಬಂಧಿಸಿದ ಧಾರ್ಮಿಕ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಲಿದ್ದಾರೆ.ಜನರು ಮತ್ತು ಜನಪ್ರತಿನಿಧಿಗಳಿಗೆ ಸಂಸತ್ತು ದೇವಾಲಯವಿದ್ದಂತೆ. ಹೆಮ್ಮೆಯ ಪ್ರಧಾನಿ ಮೋದಿಯವರ ಸಮ್ಮುಖದಲ್ಲಿ, ಸಂಸತ್ ಶಿಲಾನ್ಯಾಸದ ಧಾರ್ಮಿಕ ವಿಧಿವಿಧಾನ ನಡೆಸಿರುವುದು ನಮ್ಮ ಜೀವನದ ಅಪೂರ್ವ ಕ್ಷಣವಾಗಿತ್ತು. ಅವಿಸ್ಮರಣೀಯ ಘಟನೆ ಎಂದು ರಾಘವೇಂದ್ರ ಭಟ್ಟ ಸಂತಸ
ಹಂಚಿಕೊಂಡಿದ್ದಾರೆ.

ಶಿಲಾನ್ಯಾಸದ ಭಾಗವಾಗಿ ಮೊದಲಿಗೆ ಗುರು ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ ವಾಚನ, ಆದಿಶೇಷ ಪೂಜೆ, ಅನಂತ ಪೂಜೆ, ವರಾಹ ಪೂಜೆ ಮತ್ತು ಭುವನೇಶ್ವರಿ ಪೂಜೆ ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದಲೇ ಧಾರ್ಮಿಕ ಕಾರ್ಯಕ್ರಮ ಆರಂಭವಾಯಿತು.

ಮಧ್ಯಾಹ್ನ 12.40ರಿಂದ 1.15ರ ತನಕ ಪ್ರಧಾನಿ ಮೋದಿ ಅವರಿಂದ ಪೂಜಾ ವಿಧಿವಿಧಾನ ಜರುಗಿತು ಎಂದು ಪುರೋಹಿತ ಶಿವಕುಮಾರ ಶರ್ಮ ತಿಳಿಸಿದ್ದಾರೆ.

ಶೃಂಗೇರಿಯ ಶಂಕು, ನವರತ್ನ ಪೀಠ*

ಶಿಲಾನ್ಯಾಸ ವೇಳೆ ಶಂಕು ಸ್ಥಾಪನೆ ಮಾಡುವ ಸಲುವಾಗಿಯೇ ಶಂಕು ಮತ್ತು ನವರತ್ನ ಪೀಠವನ್ನು ತರಲಾಗಿತ್ತು. ಶೃಂಗೇರಿ ಸ್ವಾಮೀಜಿಯವರು ಆಶೀರ್ವದಿಸಿ ಇವೆರಡನ್ನು ಕಳುಹಿಸಿಕೊಟ್ಟಿದ್ದಾರೆ.

ಶಂಕು ಎಂದರೆ ಮರದಿಂದ ಮಾಡಿರುವ ವಿಶೇಷ ಆಕೃತಿ. ಇದಕ್ಕೆ 8ದಿಕ್ಕುಗಳಲ್ಲಿ 8 ಪಟ್ಟಿಗಳನ್ನು ಮಾಡಲಾಗಿರುತ್ತದೆ. ಶಂಕುವಿಗೆ ಪೂಜೆಯನ್ನು ಮಾಡಿ,
ಶಂಕುಸ್ಥಾಪನೆ ಸಂದರ್ಭದಲ್ಲಿ ಅದನ್ನು ಸ್ಥಾಪಿಸಲಾಗುತ್ತದೆ. ಆಗ ನವರತ್ನಗಳನ್ನು ಇಡುವುದಕ್ಕೆ ನವರತ್ನ ಪೀಠವನ್ನೂ ತರಲಾಗಿದೆ.

ಪೀಠದಲ್ಲಿ ಸೂರ್ಯನಿಗೆ ಪ್ರಿಯವಾದ ಮಾಣಿಕ್ಯ, ಚಂದ್ರನಿಗೆ ಪ್ರಿಯವಾದ ಮುತ್ತಿನ ಹರಳು, ಮಂಗಳನಿಗೆ ಹವಳ, ಬುಧನಿಗೆ ಹಸಿರುಕಲ್ಲು, ಗುರುವಿಗೆ ಪುಷ್ಯರಾಗ ರತ್ನ, ಶುಕ್ರನಿಗೆ ವಜ್ರ, ಶನಿಗೆ ನೀಲಮಣಿ, ರಾಹುವಿಗೆ ಗೋಮೇಧಕ, ಕೇತುವಿಗೆ ವೈಡೂರ್ಯವನ್ನಿಟ್ಟು ಪೂಜೆ ಮಾಡಲಾಗುತ್ತದೆ.

ನಂತರ ಈ ಪೀಠವನ್ನು ಕೂಡ ಸ್ಥಳದಲ್ಲಿ ಸ್ಥಾಪಿಸಲಾಗುತ್ತದೆ.
ಇವೆರಡನ್ನೂ ಶೃಂಗೇರಿಯಲ್ಲೇ ಸಿದ್ಧಪಡಿಸಲಾಗಿದೆ. ಹಾಗೆಯೇ, ಶಿಲಾನ್ಯಾಸಕ್ಕಾಗಿ ಬೆಳ್ಳಿಯ
ಇಟ್ಟಿಗೆಯೊಂದನ್ನು ತಯಾರಿಸಲಾಗಿತ್ತು. ಅದನ್ನು ಪ್ರಧಾನಿ ಮೋದಿ ಮಧ್ಯಾಹ್ನದ
ಮುಹೂರ್ತದ (ಮಧ್ಯಾಹ್ನ 12.30ರಿಂದ 1.15) ವೇಳೆ ಶಂಕುಸ್ಥಾಪನೆ ಸ್ಥಳದಲ್ಲಿ ಇರಿಸಿದರು.

Copyright © All rights reserved Newsnap | Newsever by AF themes.
error: Content is protected !!