ಭಾರತವನ್ನು ಹೊರತುಪಡಿಸಿ, ಪ್ರಾಚೀನ ಸಂಸ್ಕೃತಿಗಳು ಮತ್ತು ನಾಗರಿಕತೆಗಳಲ್ಲಿ ಇನ್ನೂ ಕೆಲವು ದೇಶಗಳಲ್ಲಿ ಕಾಗೆಗಳಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಕೆಲವು ಹಬ್ಬಗಳ ಸಮಯದಲ್ಲಿ ಅವುಗಳಿಗೆ ಆಹಾರವನ್ನು ನೀಡಿ, ಪೂಜ್ಯನೀಯ ದೃಷ್ಟಿಯಿಂದ ನೋಡುವುದುಂಟು. ಅಂತಹ ಒಂದು ಸಮಯವೆಂದರೆ, ಪಿತೃಪಕ್ಷ ಕಾಲ.
ಭಾರತದಲ್ಲಿ ಅನೇಕ ಸಂಪ್ರದಾಯಗಳು ,ಆಚರಣೆಗಳು ತಮ್ಮದೇ ಆದ ಪವಿತ್ರ ಅರ್ಥಗಳನ್ನು ಹೊಂದಿವೆ,
ಹಿಂದೂ ಸಂಸ್ಕೃತಿಯಲ್ಲಿ ಪ್ರಕೃತಿಯಲ್ಲಿರುವ ಪ್ರತಿಯೊಂದಕ್ಕೂ ಹೆಚ್ಚಿನ ಮಹತ್ವವಿದೆ, ಪಕ್ಷಿಗಳು, ಪ್ರಾಣಿಗಳು,ನೀರು, ಗಾಳಿ ಎಲ್ಲವನ್ನೂ ದೇವರ ಸಮಾನವಾಗಿ ಕಾಣಲಾಗುತ್ತದೆ. ವೇದಗಳು ಮತ್ತು ಶಾಸ್ತ್ರಗಳು ಹೇಳುವಂತೆ ಪಕ್ಷಿಗಳು ಮತ್ತು ಪ್ರಾಣಿಗಳಿಗೆ ಆಹಾರ ನೀಡುವುದರಿಂದ ಜಾತಕದಲ್ಲಿ ಗ್ರಹಗಳ ದುಷ್ಪರಿಣಾಮಗಳನ್ನು ತಪ್ಪಿಸಬಹುದು,ಹಾಗೂ ಉತ್ತಮ ಕರ್ಮವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಪುರಾಣ ಕಥೆಗಳು ಹೇಳುವಂತೆ ಒಂದೊಂದು ದೇವರಿಗೆ ಒಂದೊಂದು ವಾಹನವಿದೆ. ಉದಾಹರಣೆಗೆ ಗಣೇಶನಿಗೆ ಇಲಿ ವಾಹನ, ಈಶ್ವರನಿಗೆ ನಂದಿ ವಾಹನ, ಸರಸ್ವತಿಗೆ ಹಂಸ ವಾಹನ, ಶನಿಗೆ ಕಾಗೆ ವಾಹನ ಹೀಗೆ ಒಂದೊಂದು ದೇವರು ಒಂದು ವಾಹನವನ್ನು ಏರಿ ಲೋಕ ಸಂಚಾರ ಮಾಡುತ್ತಿದ್ದರು ಎಂಬುದನ್ನು ನಾವು ಪೌರಾಣಿಕ ಕಥೆಗಳಲ್ಲಿ ಕೇಳಿದ್ದೇವೆ.
ಗರುಡ ಪುರಾಣದಲ್ಲಿ ಕಾಗೆ ಬಗ್ಗೆಯಿರುವ ಕಥೆ:
ಗರುಡ ಪುರಾಣದಲ್ಲಿ ಕಾಗೆಯನ್ನು ಯಮರಾಜನ ಸಂದೇಶವಾಹಕ ಎಂದು ಹೇಳಲಾಗಿದೆ. ಯಮನು ಒಮ್ಮೆ ಪ್ರಸಿದ್ಧ ರಾಜ ಮಾರುತಿಯ ಯಜ್ಞದ ಸಮಯದಲ್ಲಿ ಕಾಗೆಗೆ ವರವನ್ನು ನೀಡಿರುವುದರಿಂದ ಇಂದು ನಾವು ಕಾಗೆಗಳಿಗೆ ಪಿತೃ ಪಕ್ಷದಲ್ಲಿ ಪ್ರಮುಖವಾಗಿ ಆಹಾರವನ್ನು ನೀಡಲಾಗುತ್ತಿದೆ. ಯಮನು ಯಜ್ಞದ ಸಮಯದಲ್ಲಿ ಕಾಗೆಗಳನ್ನು ಕುರಿತು ನಿಮ್ಮನ್ನು ಪಿತೃ ಪಕ್ಷದ ಸಮಯದಲ್ಲಿ ಪೂಜಿಸುವಂತಾಗಲಿ. ಪಿತೃಗಳಿಗೆ ಸಲ್ಲಿಸಿದ ಆಹಾರಗಳು ನಿಮ್ಮ ಮೂಲಕ ಪಿತೃಗಳಿಗೆ ಸೇರುವಂತಾಗಲಿ ಎಂದು ವರವನ್ನು ನೀಡುತ್ತಾನೆ. ಆದ್ದರಿಂದ ಪಿತೃಪಕ್ಷದಂದು ಕಾಗೆಗಳಿಗೆ ಆಹಾರ ನೀಡಲಾಗುತ್ತದೆ.
ಶ್ರದ್ಧಾ ದಿನಗಳಲ್ಲಿ, ನಮ್ಮ ಪೂರ್ವಜರು ಕಾಗೆಗಳ ರೂಪದಲ್ಲಿ ಭೂಮಿಗೆ ಬರುತ್ತಾರೆ ಎಂದು ನಂಬಲಾಗಿದೆ. ಈ ಕಾರಣಕ್ಕಾಗಿ, ಕಾಗೆಗಳಿಗೆ ಆಹಾರವನ್ನು ನೀಡುವುದು ನಮ್ಮ ಅಗಲಿದ ಪೂರ್ವಜರಿಗೆ ಆಹಾರ ನೀಡಿದಂತೆ ಎನ್ನಲಾಗುತ್ತದೆ. ಕಾಗೆಗಳು ಪಿತೃ ಲೋಕಕ್ಕೆ ಸಂದೇಶವಾಹಕರಾಗಿಯೂ ಕಾರ್ಯನಿರ್ವಹಿಸುತ್ತವೆ ಎಂಬ ನಂಬಿಕೆಯಿದೆ.
ಧರ್ಮಗ್ರಂಥಗಳ ಪ್ರಕಾರ, ಪಿತೃ ಪಕ್ಷದಂದು ಶ್ರಾದ್ಧ ಮಾಡುವುದು ಅತ್ಯಂತ ಅವಶ್ಯಕವಾಗಿದೆ. ನಾವು ಪಿತೃ ಪಕ್ಷದ ಸಮಯದಲ್ಲಿ ಸರಿಯಾದ ಸಂಸ್ಕಾರಗಳೊಂದಿಗೆ ಶ್ರಾದ್ಧ ಸಂಸ್ಕಾರಗಳನ್ನು ನಡೆಸದಿದ್ದರೆ, ನಮ್ಮ ಪೂರ್ವಜರಿಗೆ ಶಾಂತಿ ಸಿಗುವುದಿಲ್ಲ ಮತ್ತು ಅವರ ಆತ್ಮಗಳು ಈ ಪ್ರಪಂಚದಲ್ಲಿ ಸುತ್ತಾಡುತ್ತವೆ ಎಂದು ನಂಬಲಾಗಿದೆ. ಶ್ರಾದ್ಧ ಅವಧಿಯಲ್ಲಿ ಕಾಗೆಗಳನ್ನು ಪೂರ್ವಜರ ಸಂಕೇತವೆಂದು ಪರಿಗಣಿಸಲಾಗುತ್ತದೆ, ಅದಕ್ಕಾಗಿಯೇ ಕಾಗೆಗಳಿಗೆ ಆಹಾರವನ್ನು ನೀಡಲಾಗುತ್ತದೆ.
ಪಿತೃಪಕ್ಷದ ಅವಧಿಯಲ್ಲಿ ಪೂರ್ವಜರಿಗೆ ಪಿಂಡದಾನ, ತರ್ಪಣ ಮತ್ತು ಶ್ರಾದ್ಧ ಆಚರಣೆಗಳನ್ನು ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಇದರಿಂದಾಗಿ ಅವರು ತೃಪ್ತರಾಗುತ್ತಾರೆ. ಪೂರ್ವಜರು ಸುಖವಾಗಿದ್ದರೆ ವಂಶಸ್ಥರಿಗೂ ಸೌಖ್ಯ ಸಿಗುತ್ತದೆ ಎಂದು ಹೇಳಲಾಗುತ್ತದೆ.
More Stories
ಚನ್ನಪಟ್ಟಣ ಉಪಚುನಾವಣೆ: ನಿಖಿಲ್ ಕುಮಾರಸ್ವಾಮಿ ಪರ ಪತ್ನಿ ರೇವತಿ ಪ್ರಚಾರದಲ್ಲಿ ಸಕ್ರಿಯ
ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು : ಬೆಂಕಿ ಹೊತ್ತಿಕೊಂಡು ಚಾಲಕ ಸಜೀವದಹನ
ಬ್ಯಾಂಕ್ ಆಫ್ ಬರೋಡಾ: 592 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ