November 15, 2024

Newsnap Kannada

The World at your finger tips!

deepa1

ಶತಕ ಬಾರಿಸಿದ ವಾಹನಗಳ ಎಣ್ಣೆ,ದ್ವಿಶತಕ ಬಾರಿಸಿದ ಅಡುಗೆ ಎಣ್ಣೆ,

Spread the love

ಕೆಲವೇ ದಿನಗಳಲ್ಲಿ ಅನ್ ಲಾಕ್,
ವಾಸ್ತವ ಬದುಕಿನ ಗೇಟ್ ಓಪನ್…

ಕುಸಿದ ಭಾರತದ ಮಧ್ಯಮ ವರ್ಗದ ಜನರ ಬದುಕು,

ವೈರಸ್ ಜೊತೆಗೆ ಬಯಲಾದ ಅಜ್ಞಾನದ ಅನೇಕ ಮುಖವಾಡಗಳು, ಆಡಳಿತಾತ್ಮಕ ವಿಫಲತೆಗಳು,

ಕಣ್ಣ ಮುಂದೆಯೇ ಕಳಚಿದ ಅನೇಕ ಜೀವಗಳು,

ಸಂಬಂಧಗಳಿಗೇ ಕುತ್ತಾದ ಕೋವಿಡ್,

ಬದುಕಿನ ಮರು ಸ್ಥಾಪನೆಯ ಚಿಂತೆಯಲ್ಲಿ ಕೋಟ್ಯಾನುಕೋಟಿ ಜನರು,……

ಯಕಃಶ್ಚಿತ್ ಒಂದು ಕಣ್ಣಿಗೆ ಕಾಣದ ವೈರಸ್ ನಮ್ಮೆಲ್ಲರ ಇಡೀ ಬದುಕನ್ನೇ ಅಲ್ಲೋಲ ಕಲ್ಲೋಲ ಮಾಡಿದೆ.

ಸಾಮಾನ್ಯರ ಆರ್ಥಿಕ ಸಂಕಷ್ಟಗಳು ಭುಗಿಲೇಳುತ್ತಿವೆ.

ತಿಂಗಳಾನುಗಟ್ಟಲೆ ಭಯದಿಂದ ಮನೆಯೊಳಗೆ ಬಂಧಿಯಾಗಿ ಭಯದಿಂದಲೇ ಮತ್ತೆ ದೇಹ ಹೊರಚಾಚುವ ಮನಸ್ಥಿತಿಯಲ್ಲಿ ಇರುವಾಗ ಭವಿಷ್ಯದ ಕನಸುಗಳನ್ನು ಕಟ್ಟುವುದು ಹೇಗೆ.

ಒಂದಷ್ಟು ಆತ್ಮಾವಲೋಕನ ಮಾಡಿಕೊಳ್ಳೋಣ……..

ಸರಳತೆಯ ಬದುಕಿಗೆ ಮರಳಲು ಪ್ರಯತ್ನಿಸೋಣ,
ಪ್ರಾಮಾಣಿಕವಾಗಿ ಬದುಕಲು ಕಲಿಯೋಣ,
ದೇಹವನ್ನು ಅತ್ಯಂತ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳೋಣ,
ಜ್ಞಾನ ಅರಿವುಗಳು ಬಲದಿಂದ ಮನಸ್ಸನ್ನು ಸದೃಢಗೊಳಿಸಿಕೊಳ್ಳೋಣ,
ಸಮಗ್ರ ಚಿಂತನೆ ರೂಪಿಸಿಕೊಳ್ಳೋಣ,
ಜಾತಿ ಮತ ಪಂಥ ಪಕ್ಷ ನಾಯಕರಿಗಿಂತ ಜನರು ಮತ್ತು ದೇಶದ ಹಿತಾಸಕ್ತಿಗೆ ಮಹತ್ವ ಕೊಡೋಣ,
ನಮಗೆ ಕಾಣುವ ಸತ್ಯಗಳನ್ನು ಪ್ರೀತಿ ಮತ್ತು ಸಭ್ಯತೆಯನ್ನು ಬೆರೆಸಿ ನೇರವಾಗಿ ಹೇಳೋಣ,
ಯಾವುದೋ ವ್ಯಕ್ತಿ ಅಥವಾ ವಾದಗಳಿಗೆ ಶರಣಾಗದೆ ಸ್ವತಂತ್ರ ಚಿಂತನೆ ಬೆಳೆಸಿಕೊಳ್ಳೋಣ,

ಏಕೆಂದರೆ ಆಳುವ ಸರ್ಕಾರಗಳು ನಮ್ಮನ್ನು ಇನ್ನಷ್ಟು ವಂಚಿಸುವ ಸಾಧ್ಯತೆ ನಿಶ್ಚಲವಾಗಿ ಕಾಣುತ್ತಿದೆ.

ನೀರು ವಿದ್ಯುತ್ ಸಾರಿಗೆ ಶಿಕ್ಷಣ ಆರೋಗ್ಯ ಮುಂತಾದ ಜೀವನಾವಶ್ಯಕ ವಸ್ತುಗಳ ಪ್ರತ್ಯಕ್ಷ ಮತ್ತು ಪರೋಕ್ಷ ಬೆಲೆ ಏರಿಸಲು ಸಿದ್ಧತೆ ನಡೆದಿದೆ,

ಜನರ ಮನಸ್ಸುಗಳನ್ನು ಭಾವನಾತ್ಮಕವಾಗಿ ಸೆಳೆಯಲು ಬೇರೆ ವಿಷಯಗಳನ್ನು ಮಾಧ್ಯಮಗಳಲ್ಲಿ ಬಿಂಬಿಸುವ ಸಾಧ್ಯತೆಯೂ ಇದೆ,

ಮನೆ ಅಂಗಡಿಗಳ ಬಾಡಿಗೆ, ಶಾಲಾ ಫೀಜು, ಆಹಾರ ವಸ್ತುಗಳ ಖರೀದಿ, ಒಂದಷ್ಟು ಸಾಲಗಳು, ಎಲ್ಲವೂ ಇನ್ನು ಮುಂದೆ ಮಧ್ಯಮ ವರ್ಗದವರನ್ನು ಕಾಡಲು ಪ್ರಾರಂಭವಾಗುತ್ತದೆ.

ಜನರ ಆಕ್ರೋಶವನ್ನು ಕಷ್ಟಗಳನ್ನು ತಣಿಸಲು ಸರ್ಕಾರಗಳು ಪ್ರಾಮಾಣಿಕವಾಗಿ ಪ್ರಯತ್ನಿಸದೆ ಅಡ್ಡ ದಾರಿ ಹಿಡಿಯುವ ಸಾಧ್ಯತೆಗಳೇ ಹೆಚ್ಚು.

ಅದರಿಂದ ಹೊರಬರುವ ಮಾರ್ಗವನ್ನು ನಾವು ವೈಯಕ್ತಿಕ ಮಟ್ಟದಲ್ಲಿ ಮಾಡಿಕೊಳ್ಳಲೇ ಬೇಕಾಗಿದೆ.

ಜನರನ್ನು ವಿವಿಧ ವಿಷಯಗಳ ಆಧಾರದಲ್ಲಿ ವಿಭಜಿಸುವ ರಾಜಕೀಯ ಶಕ್ತಿಗಳು ಮೇಲುಗೈ ಪಡೆಯದಂತೆ ಎಚ್ಚರಿಕೆ ವಹಿಸಬೇಕಾಗಿದೆ.

ದಯವಿಟ್ಟು ಗಮನಿಸಿ,
ಒಂದು ವೇಳೆ ಕೊರೋನಾ ಮೂರನೇ ಅಲೆ ಇನ್ನಷ್ಟು ತೀವ್ರವಾದರೆ ಇಡೀ ವ್ಯವಸ್ಥೆ ಕುಸಿದು ಬೀಳಬಹುದು.

ಈಗಲೇ ಮಾನಸಿಕ ಮತ್ತು ದೈಹಿಕ ಸಿದ್ದತೆ ಮಾಡಿಕೊಂಡು ಸರಳತೆಯ ಕಡೆಗೆ ಮುಖ ಮಾಡಿದರೆ ಅದರ ದುಷ್ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಬಹುದು.

ಯಾವುದೇ ಪಕ್ಷ ಇರಲಿ, ಯಾವುದೇ ಜಾತಿ ಆಗಿರಲಿ, ಜನರನ್ನು ಪ್ರೀತಿಸಿ ಅವರ ಸಂಕಷ್ಟಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸದಿದ್ದರೆ ಅದನ್ನು ತಿರಸ್ಕರಿಸಲೇಬೇಕು.

ಸ್ವಾರ್ಥದ, ಸಂಕುಚಿತತೆಯ ಮನೋಭಾವಕ್ಕೆ ಸಿಲುಕಿ ಅರೆ ತಿಳಿವಳಿಕೆಯಿಂದ, ದೂರದೃಷ್ಟಿಯ ಕೊರತೆಯಿಂದ ಅಲ್ಪ ಜ್ಞಾನಕ್ಕೆ ಮರುಳಾಗಿ ಕೆಟ್ಟ ತೀರ್ಮಾನ ಕೈಗೊಂಡರೆ ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ನಿಶ್ಚಿತ.

ದಯವಿಟ್ಟು ಮತ್ತೆ ಮತ್ತೆ ಸಮಗ್ರವಾಗಿ ಯೋಚಿಸಿ. ಜನ ಮತ್ತು ದೇಶದ ಹಿತದೃಷ್ಟಿಯಿಂದ ಸರಿಯಾದ ಅಭಿಪ್ರಾಯ ರೂಪಿಸಿಕೊಳ್ಳಿ.

ಕೊರೋನಾ ನಂತರದ ಬದುಕು ಸ್ವಾತಂತ್ರ್ಯ ಸಮಾನತೆ ಮಾನವೀಯತೆಯ ಬದುಕಾಗಲಿ.

ಹಣ ಅಧಿಕಾರ ಪ್ರಚಾರದ ಕೃತಕ ಜೀವನವಾಗದಿರಲಿ.

ವಿವೇಚನೆಯ ತೀರ್ಮಾನ ನಮ್ಮದಾದರೆ ಬದುಕು ಒಂದಷ್ಟು ಸಹನೀಯವಾಗಬಹುದು. ನಮ್ಮ ಮಕ್ಕಳ ಭವಿಷ್ಯ ಉತ್ತಮವಾಗಬಹುದು.

ಮತ್ತೊಮ್ಮೆ ಯೋಚಿಸಿ…..

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!