November 13, 2024

Newsnap Kannada

The World at your finger tips!

sarakari

ಸರ್ಕಾರಿ ಶಾಲೆ ಮುಂದೆ ದಾಖಲಾತಿಗೆ ಸರದಿ‌ಯಲ್ಲಿ ಜನರು‌ ನಿಲ್ಲಬೇಕು: ಸುರೇಶ್ ಕುಮಾರ್

Spread the love

ಸರ್ಕಾರಿ ಶಾಲೆಗಳಲ್ಲೂ ಮಕ್ಕಳ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಬೇಕಿರುವ ಸೌಲಭ್ಯವನ್ನು ಕಲ್ಪಿಸಿ ಸರ್ಕಾರಿ ಶಾಲೆಯ ಮುಂದೆ ದಾಖಲಾತಿಗೆ ಜನರು ಸರದಿ‌ ಸಾಲಿನಲ್ಲಿ‌ ನಿಲ್ಲುವಂತೆ‌ ಬೆಳೆಯಬೇಕು ಎಂದು‌ ಪ್ರಾಥಮಿಕ , ಪ್ರೌಢ ಶಿಕ್ಷಣ ಹಾಗೂ ಸಕಾಲ‌ ಸಚಿವ‌ ಎಸ್. ಸುರೇಶ್ ಕುಮಾರ್ ಅವರು ತಿಳಿಸಿದರು.

ಕಣ್ವ ಡಯೋಗನಾಸ್ಟಿಕ್ ನ ಡಾ: ವೆಂಕಟಪ್ಪ ಅವರು ಹೊಂಗನೂರು ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿರುತ್ತಾರೆ ಹಾಗೂ ಶಾಲೆಗೆ ಬೇಕಿರುವ ಮೂಲಭೂತ ವ್ಯವಸ್ಥೆ ಕಲ್ಪಿಸಲು ಮುಂದೆಬಂದಿರುತ್ತಾರೆ. ಈ ಹಿನ್ನಲೆಯಲ್ಲಿ ಸಚಿವರು ಇಂದು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು ಶಾಲೆಗೆ ಭೇಟಿ ನೀಡಿ ಚರ್ಚಿಸಿದರು.

ಹೊಂಗನೂರು ಶಾಲೆ 4.5 ಎಕರೆ ಸ್ಥಳಾವಕಾಶ ಹೊಂದಿದ್ದು, ಇಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಪಠ್ಯ ಚಟುವಟಿಕೆ ನಡೆಸಲು ಮಕ್ಕಳಿಗೆ ಅನುಕೂಲವಾಗುವಂತೆ ಸೌಲಭ್ಯಗಳನ್ನು ಕಲ್ಪಿಸಬಹುದು.ಇದಕ್ಕೆ ಒಳ್ಳೆಯ ರೀತಿಯಲ್ಲಿ ಯೋಜನೆ ರೂಪಿಸಿ. ಡಾ: ವೆಂಕಟಪ್ಪ ಅವರು ಶಾಲೆ ಅಭಿವೃದ್ಧಿ ಪಡಿಸಲು ಮುಂದೆ ಬಂದಿದ್ದು, ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಮನರೇಗಾ ಯೋಜನೆಯಡಿ ಶಾಲೆಯಲ್ಲಿ ಆಟದ ಮೈದಾನ, ಕಾಂಪೌಂಡ್, ಕೈತೋಟ,‌ಮಳೆ ನೀರು ಕೊಯ್ಲು ಮುಂತಾದ ಕಾಮಗಾರಿಗಳನ್ನು ಕೈಗೊಳ್ಳಬಹುದು ಈ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಜುಲೈ 15 ರಿಂದ ಮುಂದಿನ ಶೈಕ್ಷಣಿಕ ಸಾಲು ಪ್ರಾರಂಭವಾಗಲಿದೆ‌‌‌‌. ಮುಂದಿನ ಶೈಕ್ಷಣಿಕ ಸಾಲನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಯೋಜನೆ ರೂಪಿಸಿ ಎಂದರು.

ಹೊಂಗನೂರು ಭಾಗದಿಂದ ಬಹಳಷ್ಟು ವಿದ್ಯಾರ್ಥಿಗಳು ಪಿ.ಯು.ಸಿ ವಿದ್ಯಾಭ್ಯಾಸ ಕ್ಕಾಗಿ ಚನ್ನಪಟ್ಟಣಕ್ಕೆ ತೆರಳುತ್ತಾರೆ. ಹೊಂಗನೂರಿನಲ್ಲಿ ಎಲ್.ಕೆ.ಜಿ ಯಿಂದ ಪಿಯುಸಿ ವರೆಗೂ ವಿದ್ಯಾಭ್ಯಾಸ ನೀಡಲು ಕೆ.ಪಿ.ಎಸ್ ಶಾಲೆಯಾಗಿ ಪರಿವರ್ತಿಸಲು ಅಥವಾ ಸೂಕ್ತ ಯೋಜನೆ ರೂಪಿಸಲು ಚಿಂತಿಸಲಾಗುವುದು ಎಂದರು.

ಶಾಲೆಯಲ್ಲಿ ದಾಖಲಾತಿಯ ಬಗ್ಗೆ ಮಾಹಿತಿ ಪಡೆದ ಸಚಿವರು ಕಳೆದ ಸಾಲಿಗಿಂತ ಈ ಬಾರಿ ಹೆಚ್ಚು ಮಕ್ಕಳು ದಾಖಲಾಗಿದ್ದು,ಸರ್ಕಾರಿ ಶಾಲೆಯ ಮಕ್ಕಳಲ್ಲಿ ಪ್ರತಿಭೆ ತುಂಬಿರುತ್ತದೆ‌. ಅದನ್ನು ಹೊರತರುವ ಕೆಲಸ ಶಿಕ್ಷಕರು ಮಾಡಬೇಕು. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ವಿಕಸನ ಕಾರ್ಯಕ್ರಮದಡಿ ಉಚಿತವಾಗಿ ಬೆಂಗಳೂರಿನಲ್ಲಿ ತರಬೇತಿ ನೀಡಲಾಗುವುದು. ಈ ಕಾರ್ಯಕ್ರಮವನ್ನು ಫೇಸ್ ಬುಕ್ ಹಾಗೂ ಯು ಟ್ಯೂಬ್ ನಲ್ಲೂ ಸಹ ವಿದ್ಯಾರ್ಥಿಗಳು ನೋಡಬಹುದಾಗಿದೆ ಎಂದರು‌‌.

ಇದೇ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸೋಮಶೇಖರ್ ಯ್ಯ ಹಾಗೂ ಶಾಲೆಯ ಪ್ರಾಂಶುಪಾಲರು ಶಿಕ್ಷಕರು ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!