December 23, 2024

Newsnap Kannada

The World at your finger tips!

patrika

ಪತ್ರಿಕಾ ದಿನಾಚರಣೆ

Spread the love

ಜುಲೈ 1 ರಂದು ನಮ್ಮ ರಾಜ್ಯದಲ್ಲಿ `ಪತ್ರಿಕಾ ದಿನ’ ಆಚರಿಸಲಾಗುತ್ತದೆ. ಕನ್ನಡ ಪತ್ರಿಕೋದ್ಯಮ, ಪತ್ರಿಕೆಗಳು ಮೊದಲಾದವುಗಳ ಕುರಿತು ಚರ್ಚೆ, ಅವಲೋಕನ ನಡೆಯುತ್ತವೆ. ಪತ್ರಿಕೋದ್ಯಮದ ಪರಿಚಯ ಜನಸಾಮಾನ್ಯರಿಗೆ ಆಗಬೇಕು ಎಂಬ ಉದ್ದೇಶದಿಂದ ಈ ದಿನವನ್ನು ಪತ್ರಿಕಾ ದಿನವೆಂದು ಆಚರಿಸಲಾಗುತ್ತದೆ.

ಜರ್ಮನ್ ನ ಮತಪ್ರಚಾರಕ ಹೆರ್ಮನ್ ಪ್ರೆಢರಿಕ್ ಮೊಗ್ಲಿಂಗ್ ಕನ್ನಡ ಪತ್ರಿಕೋದ್ಯಮದ ಮೂಲಪುರುಷ . ಜರ್ಮನಿಯ ಜಾನ್ ಗುಟೆನ್ ಬರ್ಗ್ 1440ರಲ್ಲಿ ಎರಕಹೊಯ್ದ ಅಚ್ಚುಮೊಳೆ ತಯಾರಿಸಿ, ಪವಿತ್ರ ಗ್ರಂಥ `ದಿ ಬೈಬಲ್’ ಅನ್ನು ದಪ್ಪನೆಯ ಹಾಳೆಯ ಮೇಲೆ ಮುದ್ರಿಸಿದಾಗ, ಅದೊಂದು ಕ್ರಾಂತಿಕಾರಕ ಆವಿಷ್ಕಾರವಾಗಿತ್ತು. ಮುದ್ರಣ ಜ್ಞಾನದ ದಾಹ ತಣಿಸುವ ಪ್ರಮುಖ ಸೆಲೆಯಾಯಿತು. ನಾಗರಿಕತೆಯ ಬೆಳವಣಿಗೆಯಲ್ಲಿ ಅತ್ಯಂತ ನಿರ್ಣಾಯಕ ಪಾತ್ರವಹಿಸಿದ ಹಲವೇ ಸಾಧನೆಗಳಲ್ಲಿ ಮುದ್ರಣಯಂತ್ರ ಸಹ ಒಂದು.

ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ,ಹೆರ್ಮನ್ ಪ್ರೆಢರಿಕ್ ಮೊಗ್ಲಿಂಗ್ ಹುಬ್ಬಳ್ಳಿ ಹಾಗೂ ಗದಗದಲ್ಲಿಯೂ ಕೆಲವು ಕಾಲ ಕಾರ್ಯನಿರ್ವಹಿಸಿದ್ದ. ಆಗ ಆ ಭಾಗವು ಧಾರವಾಡ ಜಿಲ್ಲೆಗೆ ಸೇರಿತ್ತು. ಮೊಗ್ಲಿಂಗ್ ಧಾರವಾಡ ಜಿಲ್ಲೆಯಿಂದ ಮಂಗಳೂರಿಗೆ ಬಂದು 1838ರಿಂದ 1852ರವರೆಗೆ ಸೇವೆಸಲ್ಲಿಸಿದ. ಈ ಅವಧಿಯಲ್ಲಿ ಆತ ಕೈಗೊಂಡ ಪ್ರಮುಖ ನಿರ್ಧಾರವೆಂದರೆ ಪತ್ರಿಕೆಯೊಂದನ್ನು ಪ್ರಕಟಿಸಿ, ಜನರಿಗೆ ಮಾಹಿತಿ ಒದಗಿಸುವುದು.

mangalore samachar

1843ರ ಜುಲೈ 1ರಂದು “ಮಂಗಳೂರು ಸಮಾಚಾರ” ಎಂಬ ಪತ್ರಿಕೆಯನ್ನು ಹೊರತಂದ. ಇದು ಕನ್ನಡಿಗರನ್ನು ಒಂದುಗೂಡಿಸುವಲ್ಲಿ ಸಹಕಾರಿಯಾಯಿತು. ಜುಲೈ 1ರಂದು ಕರ್ನಾಟಕದಲ್ಲಿ ಪತ್ರಿಕಾ ದಿನಾಚರಣೆಯಾಗಿ ಈ ಹಿನ್ನೆಲೆಯಲ್ಲಿ ಆಚರಿಸಲಾಗುತ್ತದೆ. ಮಂಗಳೂರಿನಲ್ಲಿ ಕನ್ನಡ ಪತ್ರಿಕೋದ್ಯಮದ ಪ್ರಾರಂಭ ಬಾಸೆಲ್ ಮಿಶನ್ ಸಂಸ್ಥೆಯಿಂದ ನಡೆಯಿತು. ‘ಮಂಗಳೂರು ಸಮಾಚಾರ’ ವೆಂಬ ಹೆಸರಿನಲ್ಲಿ ಪ್ರಾರಂಭಗೊಂಡ ಕನ್ನಡ ವಾರ ಪತ್ರಿಕೆಯಿಂದ ಕನ್ನಡ ಪತ್ರಿಕೋದ್ಯಮ ಚರಿತ್ರೆ ಕರ್ನಾಟಕದಲ್ಲಿ ಆರಂಭವಾಗುತ್ತದೆ.

ಈ ಸೌಲಭ್ಯವನ್ನು ಒದಗಿಸಿಕೊಟ್ಟವರು ಪಾಶ್ಚಾತ್ಯರು. ಕ್ರೈಸ್ತ ಮತ ಪ್ರಚಾರಕ್ಕಾಗಿ ಬಂದ ಇವರು ಮೊದಲು ಇಲ್ಲಿ ಕಲ್ಲಚ್ಚಿನ ಮುದ್ರಣವನ್ನು ಬೆಳಕಿಗೆ ತಂದರು. ತದನಂತರ ಅಚ್ಚುಮೊಳೆಗಳ ಮುದ್ರಣವೂ ಆರಂಭವಾಯಿತು.

ಸಮೂಹ ಮಾಧ್ಯಮಗಳು ಪ್ರಜಾಸತ್ತೆಯ 4 ನೇ ಆಧಾರಸ್ತಂಭ ಎನ್ನುತ್ತಾರೆ,ಶಾಸಕಾಂಗ,ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾ ಮಾಧ್ಯಮ 4ನೇ ಆಧಾರಸ್ತಂಭವಾಗಿದೆ.

ಇಂದು ಪತ್ರಿಕೋದ್ಯಮವೆಂಬುದು ಕಾಲದ ಸ್ಥಿತ್ಯಂತರದಲ್ಲಿ ಹಲವು ಬದಲಾವಣೆಗಳನ್ನು ಕಂಡಿದೆ. ಪತ್ರಿಕೋದ್ಯಮದ ರೀತಿ, ಸ್ವರೂಪ ಬದಲಾಗಿದೆ. ಮುದ್ರಣ ಮಾಧ್ಯಮದ ಜಾಗವನ್ನು ಬಹುಪಾಲು ಆನ್ ಲೈನ್ ಪತ್ರಿಕೆಗಳು, ಸಾಮಾಜಿಕ ತಾಣಗಳು ಕೂಡ ಸುದ್ದಿಗಳನ್ನು ಸೆಕೆಂಡು, ಸೆಕೆಂಡಿಗೂ ಹೊತ್ತು ತರುತ್ತವೆ. ಎಲೆಕ್ಟ್ರಾನಿಕ್ ಮಾಧ್ಯಮಗಳು ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು ತಾಂತ್ರಿಕವಾಗಿ ಹೆಚ್ಚು ಸಮೃದ್ಧವಾಗುತ್ತಿವೆ.

ಆಟೋ ಚಾಲಕನಾಗಿದ್ದ ಏಕನಾಥ್ ಸಿಂಧೆ ಈಗ ಮಹಾರಾಷ್ಟ್ರದ ಅಧಿಪತಿ: ರೋಚಕ ರಾಜಕೀಯ ಆಟ

ಇಂದು ಸುದ್ದಿ ತಿಳಿಯಬೇಕೆಂದರೆ ಬಹುಪಾಲು ಮಂದಿ ಪತ್ರಿಕೆಯನ್ನು ಹಿಡಿದುಕೊಂಡು ಕೂರುವುದಿಲ್ಲ. ಕೈಯಲ್ಲಿ ಸ್ಮಾರ್ಟ್ ಫೋನ್, ಟ್ಯಾಬ್ ಇದ್ದರೆ ಸಾಕು, ಇಂಟರ್ನೆಟ್ ಸಂಪರ್ಕವಿದ್ದರೆ ಜಗತ್ತಿನ ಯಾವ ಭಾಗದ ವಿಷಯವನ್ನು ಕೂಡ ಅಂಗೈಯಲ್ಲಿ ಹಿಡಿದುಕೊಂಡು ನೋಡಬಹುದು ಎಂಬಂತಾಗಿದೆ. ತಂತ್ರಜ್ಞಾನದ ಬೆಳವಣಿಗೆ ಸುದ್ದಿ ಮಾಧ್ಯಮದ ಮೇಲೆ ಕೂಡ ಇಷ್ಟರ ಮಟ್ಟಿನ ಪರಿಣಾಮ ಬೀರಿದೆ.

Copyright © All rights reserved Newsnap | Newsever by AF themes.
error: Content is protected !!