ಅಂದಿನ ಸಾಹಿತ್ಯವು ಕೂಡ ಕಬ್ಬಿಣದ ಕಡಲೆಯಾಗಿತ್ತು. ಸಾಮಾನ್ಯರಿಗೆ ಅದು ಎಟುಕದ ವಸ್ತುವಾಗಿತ್ತು. ಅಂದು ಮುದ್ರಾಣಾಲಯಗಳಿರಲಿಲ್ಲವಾದ್ದರಿಂದ ಜ್ಞಾನವನ್ನು ಸಂಪಾದಿಸಲು ಬಹಳ ಕಷ್ಟಪಡಬೇಕಾಗುತ್ತಿತ್ತು. ಈಗ ಕಾಲ ಬದಲಾಗಿದೆ, ಅದು ಎಲ್ಲರಿಗು ಸಿಗುವಂತಾಗಿದೆ. ಭಾರತದಲ್ಲಿ ಗ್ರಂಥಾಲಯಕ್ಕೆ ಹೊಸ ಮೆರುಗನ್ನು ಕೊಟ್ಟು,ವೈಜ್ಞಾನಿಕವಾಗಿ ಓರಣಗೊಳಿಸಿದ ಕೀರ್ತಿ ಭಾರತೀಯ ಗ್ರಂಥಾಲಯದ ಪಿತಾಮಹ ಶ್ರೀಯುತ ಡಾ. ಎಸ್. ಆರ್. ರಂಗನಾಥನ್ ರವರಿಗೆ ಸಲ್ಲುತ್ತದೆ.
“ನೀವು ನಿಜವಾಗಿ ತಿಳಿದಿರಬೇಕಾದದ್ದು ಗ್ರಂಥಾಲಯಕ್ಕೆ ಹೋಗಬೇಕಾದ ದಾರಿ ಮಾತ್ರಾ” ಎಂದು ಹೇಳಿದವರು ಆಲ್ಬರ್ಟ್ ಐನ್ಸ್ಟೈನ್. ಹೌದು, ಯಾರು ನಮ್ಮಿಂದ ಕಸಿದು ಕೊಳ್ಳಲಾಗದ ಆಸ್ತಿಯೆಂದರೆ ಅದು ವಿದ್ಯೆ. ವಿದ್ಯೆಯನ್ನು ಹೆಚ್ಚಿಸಿಕೊಳ್ಳಲು ಹೆಚ್ಚು ಹೆಚ್ಚು ಓದಬೇಕು. ಎಲ್ಲವನ್ನು ಹುಡುಕಿಕೊಂಡು ಹೋಗುವುದು ಮತ್ತು ಕೊಂಡು ಓದುವುದು ನಮ್ಮಂಥ ದೇಶದ ಬಡ ಮತ್ತು ಮಧ್ಯಮ ವರ್ಗಕ್ಕೆ ಕಷ್ಟವಲ್ಲವೇ. ಯಾವುದು ಕಷ್ಟವಾದರು, ಆರೋಗ್ಯ ಮತ್ತು ವಿದ್ಯೆ ಎಲ್ಲರಿಗು ಸಿಗುವಂತಾಗಬೇಕು. ಅದರಲ್ಲಿ ಗ್ರಂಥಾಲಯದ ಪಾತ್ರ ಬಹುಮುಖ್ಯ.
“ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮ, ಒಂದು ಉತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮ” ಎಂದು ಹೇಳಿದವರು ಶ್ರೀಯುತ ಡಾ. ಅಬ್ದುಲ್ ಕಲಾಂ ರವರು ,ಡಾ. ಎಸ್. ಆರ್. ರಂಗನಾಥನ್ ಅವರು ತಮಿಳುನಾಡಿನ ತಿರುವಾರೂರು ಪ್ರಾಂತ್ಯಕ್ಕೆ ಸೇರಿದ ಶಿಯಾಳಿ ಗ್ರಾಮದವರು. ಕ್ರಿ.ಶ. 1892, ಆಗಸ್ಟ್ 9 ರಂದು ಜನಿಸಿದರು (ಆಗಸ್ಟ್ 12, 1892 ಎಂದು ಎಲ್ಲೆಡೆ ಪ್ರಖ್ಯಾತಗೊಂಡಿದೆಯಾದರೂ ಸ್ವಯಂ ರಂಗನಾಥನ್ ಅವರು ತಮ್ಮ ಜನ್ಮದಿನವನ್ನು ಆಗಸ್ಟ್ 9 ಎಂದು ತಿಳಿಸಿದ್ದಾರೆ). ತಂದೆ ಎನ್. ರಾಮಾಮೃತ ರಂಗನಾಥನ್ ಮತ್ತು ತಾಯಿ ಸೀತಾಲಕ್ಷ್ಮಿ.
ಕಡು ಬಡತನ ಕುಟುಂಬದಲ್ಲಿ ಜನಿಸಿದರು ಓದಿ ಬಿ. ಎ ಮತ್ತು ಎಂ.ಎ ಪದವಿಗಳನ್ನು ಗಳಿಸಿ ಮಹತ್ವದ ಗಣಿತಜ್ಞರಾಗಿ ರೂಪುಗೊಂಡರು. ಮದ್ರಾಸು, ಮಂಗಳೂರು ಮತ್ತು ಕೊಯಂಬತ್ತೂರು ಪ್ರದೇಶಗಳಲ್ಲಿ ಗಣಿತದ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದ ರಂಗನಾಥನ್ ಅವರು, ಗ್ರಂಥಾಲಯ ವಿಜ್ಞಾನದ ಕ್ಷೇತ್ರದಲ್ಲಿನ ಸೇವೆಯ ಕರೆ ಬಂದಾಗ ಆ ಕೆಲಸಕ್ಕೆ ಇರುವ ಮಹತ್ವವನ್ನು ಪರಿಗಣಿಸಿ ಬಹಳ ಶ್ರದ್ಧೆ, ಪ್ರೀತಿ ಮತ್ತು ಆಸಕ್ತಿಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡರು. ದೆಹಲಿ ವಿಶ್ವವಿದ್ಯಾಲಯ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯಗಳಲ್ಲಿ ಗ್ರಂಥಪಾಲಕರಾಗಿ ಮತ್ತು ಗ್ರಂಥಾಲಯ ವಿಜ್ಞಾನದ ಬೋಧಕರಾಗಿ ತಮ್ಮ ಸೇವೆಯನ್ನು ಸಲ್ಲಿಸಿದರು.
ಗ್ರಂಥಾಲಯ ವಿಜ್ಞಾನವನ್ನು ಭಾರತದಾದ್ಯಂತ ಪಸರಿಸುವಲ್ಲಿ ಡಾ. ಎಸ್.ಆರ್.ರಂಗನಾಥನ್ ಅವರ ಸೇವೆ ಅಮೂಲ್ಯವಾದದ್ದು. ಹೀಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಅವರನ್ನು ‘ಗ್ರಂಥಾಲಯ ಪಿತಾಮಹ’ ಎಂದು ಗೌರವದಿಂದ ಸ್ಮರಿಸಲಾಗುತ್ತಿದೆ. ಸ್ನಾತಕೋತ್ತರ ಮಟ್ಟದ ಗ್ರಂಥಾಲಯ ವಿಜ್ಞಾನವನ್ನು ಕಲಿಸುವ ವ್ಯವಸ್ಥೆ ಮೂಡಿಸುವಲ್ಲಿ ಸಹಾ ಅವರ ಪಾತ್ರ ಪ್ರಮುಖವಾದದ್ದು. ಅಲ್ಲದೆ, ಗ್ರಂಥಾಲಯ, ಗ್ರಂಥಾಲಯ ವಿಜ್ಞಾನ, ದಾಖಲೆ ಶಾಸ್ತ್ರ, ಮಾಹಿತಿ ವಿಜ್ಞಾನ ಮತ್ತು ಗಣಿತಶಾಸ್ತ್ರಗಳ ಕುರಿತು 60ಕ್ಕೂ ಹೆಚ್ಚು ಮಹತ್ವದ ಗ್ರಂಥಗಳನ್ನು ಹಾಗೂ ಸುಮಾರು 2500ಕ್ಕೂ ಮೀರಿದ ಲೇಖನಗಳನ್ನು ಪ್ರಕಟಿಸಿದ್ದಾರೆ.
ರಾಮಾನುಜನ್-ದ ಮ್ಯಾನ್ ಆ್ಯಂಡ್ ಮ್ಯಾತಮೆಟೀಷಿಯನ್, ಕ್ಲಾಸಿಫೈಡ್ ಕೆಟ್ಲಾಗ್, ಡಿಕ್ಷನರಿ ಕೆಟ್ಲಾಗ್, ಲೈಬ್ರರಿ ಅಡ್ಮಿನಿಸ್ಟ್ರೇಷನ್, ಇಂಡಿಯನ್ ಲೈಬ್ರರಿ ಮ್ಯಾನಿಫೆಸ್ಟೋ, ಲೈಬ್ರರಿ ಮ್ಯಾನುವಲ್ ಫಾರ್ ಲೈಬ್ರರಿ ಅಥಾರಿಟೀಸ್, ಲೈಬ್ರರಿಯನ್ಸ್ ಆ್ಯಂಡ್ ಲೈಬ್ರರಿ ವರ್ಕರ್ಸ್, ಕ್ಲಾಸಿಫಿಕೇಷನ್ -ಕಮ್ಯುನಿಕೇಶನ್, ಕಂಪ್ಯಾರಿಟಿವ್ ಸ್ಟಡಿ ಆಫ್ ಫೈವ್ ಕ್ಯಾಟಲಾಗ್ಸ್ ಮತ್ತು ಅವರ ಗ್ರಂಥಾಲಯದ ಪಂಚ ಸೂತ್ರಗಳಾದ,
ಗ್ರಂಥಗಳು ಉಪಯೋಗಕ್ಕಾಗಿ
ಪ್ರತಿ ಓದುಗರಿಗೆ ಅವರ ಗ್ರಂಥ
ಪ್ರತಿ ಗ್ರಂಥಕ್ಕೆ ಅದರ ಓದುಗ
ಓದುಗರ ಸಮಯ ಉಳಿಸಿ
ಗ್ರಂಥಾಲಯ ಒಂದು ಬೆಳೆಯುವ ಶಿಶು
ಮುಂತಾದವು ಅವರಿಗಿದ್ದ ಆಳವಾದ ವಿದ್ವತ್ತನ್ನು ಮತ್ತು ಅನುಭವನ್ನು ಎತ್ತಿ ತೋರಿಸುತ್ತಿವೆ.
ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಬೆಳೆಯುವುದಕ್ಕೆ ಡಾ. ಎಸ್. ಆರ್. ರಂಗನಾಥನ್ ಪ್ರಮುಖ ಕಾರಣಕರ್ತರು. ಕರ್ನಾಟಕದಲ್ಲಿ ಸಾರ್ವಜನಿಕ ಗ್ರಂಥಾಲಯ ಕಾನೂನು 1965ರಲ್ಲಿ ಸರಕಾರದಿಂದ ಸ್ವೀಕೃತವಾಗಿ 1966ರಲ್ಲಿ ಕಾರ್ಯರೂಪಕ್ಕೆ ಬರುವಲ್ಲಿ ಅವರೇ ಮೂಲ ಪುರುಷರು. ಅವರ ಅದ್ವಿತೀಯ ಸೇವೆಯನ್ನು ಪರಿಗಣಿಸಿ ಸರ್ಕಾರವು 2007ರಿಂದ ಅವರ ಹುಟ್ಟು ಹಬ್ಬದ ದಿನವಾದ ಅಗಸ್ಟ್ 12ನ್ನು ʼರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆʼ ಯಾಗಿ ಆಚರಿಸಬೇಕೆಂದು ಆದೇಶ ಹೊರಡಿಸಿದೆ. ಅವರ ಕುರಿತ ಅಂಚೆ ಚೀಟಿಯನ್ನು ಸಹಾ ಬಿಡುಗಡೆ ಮಾಡಿ ಗೌರವ ಸೂಚಿಸಲಾಗಿದೆ. ಅನೇಕ ಮಹತ್ವದ ಸಾಧನೆಗಳನ್ನು ಕೈಗೊಂಡ ಎಸ್. ಆರ್. ರಂಗನಾಥನ್ ಅವರ ಕೊಡುಗೆಗಳಲ್ಲಿ 1962 ವರ್ಷದಲ್ಲಿ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ವಿಭಾಗವಾಗಿ ಬೆಂಗಳೂರಿನಲ್ಲಿ ಮೂಡಿದ ಡಾಕ್ಯುಮೆಂಟೇಶನ್ ರಿಸರ್ಚ್ ಅಂಡ್ ಟ್ರೈನಿಂಗ್ ಸೆಂಟರ್ ಕೂಡಾ ಮುಖ್ಯವಾದದ್ದು.
ಡಾ. ರಂಗನಾಥನ್ ಅವರು 1944 – 1953 ಅವಧಿಯಲ್ಲಿ “ಇಂಡಿಯನ್ ಲೈಬ್ರರಿ ಅಸೋಸಿಯೇಷನ್” ಅಧ್ಯಕ್ಷರಾಗಿ, 1957 ರಲ್ಲಿ ಪ್ರತಿಷ್ಠಿತ “ಇಂಟರ್ನ್ಯಾಶನಲ್ ಫೆಡರೇಷನ್ ಆಫ್ ಇನ್ಫರ್ಮೇಷನ್ ಅಂಡ್ ಡಾಕ್ಯುಮೆಂಟೇಶನ್” ಒಕ್ಕೂಟದ ಗೌರವ ಪ್ರತಿನಿಧಿಗಳಾಗಿ ಹಾಗೂ ಗ್ರೇಟ್ ಬ್ರಿಟನ್ನಿನ “ಲೈಬ್ರೆರಿ ಅಸೋಸಿಯೇಷ”ನ್ನಿನ ಉಪಾಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು.
1962 ರಲ್ಲಿ “ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್” ವಿಭಾಗವಾಗಿ ಬೆಂಗಳೂರಿನಲ್ಲಿ ಮೂಡಿದ “ಡಾಕ್ಯುಮೆಂಟೇಶನ್ ರಿಸರ್ಚ್ ಅಂಡ್ ಟ್ರೈನಿಂಗ್ ಸೆಂಟರ್” ನ ನಿರ್ದೇಶಕರಾಗಿ 5 ವರ್ಷ ಸೇವೆ ಸಲ್ಲಿಸಿದ್ದರ ಕೊಡುಗೆಗಾಗಿ ಭಾರತ ಸರ್ಕಾರವು ‘ನ್ಯಾಷನಲ್ ರಿಸರ್ಚ್ ಪ್ರೊಫೆಸರ್’ ಎಂಬ ವಿಶಿಷ್ಟ ಬಿರುದನ್ನು ಕೊಟ್ಟು ಗೌರವ ಸಲ್ಲಿಸಿತು. ರಂಗನಾಥನ್ ಅವರಿಗೆ ದೆಹಲಿ ವಿಶ್ವವಿದ್ಯಾಲಯ ಮತ್ತು ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯಗಳು ಡಿ. ಲಿಟ್ ಪದವಿಯನ್ನು, ಬ್ರಿಟಿಷ್ ಸರಕಾರವು ರಾವ್ ಸಾಹೇಬ್ ಬಿರುದನ್ನೂ, ಭಾರತ ಸರಕಾರವು ʼಪದ್ಮಶ್ರೀʼ ಪ್ರಶಸ್ತಿಯನ್ನೂ ನೀಡಿ ಗೌರವಿಸಿದವು. 1970ರಲ್ಲಿ ಅಮೆರಿಕದ ʼಮಾರ್ಗರೇಟ್ ಮಾನ್ʼ ಪಾರಿತೋಷಕವನ್ನು ಪಡೆದ ಪ್ರಥಮ ಭಾರತೀಯರಿವರು.
ಗ್ರಂಥಾಲಯ ವಿಜ್ಞಾನವನ್ನು ಭಾರತದಾದ್ಯಂತ ಪಸರಿಸುವಲ್ಲಿ ಡಾ. ಎಸ್.ಆರ್.ರಂಗನಾಥನ್ ರವರ ಸೇವಯನ್ನು ಪರಿಗಣಿಸಿ, ರಾಷ್ಟ್ರೀಯ ಮಟ್ಟದಲ್ಲಿ ಅವರನ್ನು ‘ಗ್ರಂಥಾಲಯ ಪಿತಾಮಹ’ ಎಂದು ಗೌರವದಿಂದ ಸ್ಮರಿಸಲಾಗುತ್ತಿದೆ.
ಹೀಗೆ ವೈವಿಧ್ಯಮಯ ವಿಶಿಷ್ಟ ಕೊಡುಗೆಗಳಿಂದ ಪ್ರಖ್ಯಾತರಾಗಿ ಬೆಂಗಳೂರಿನ ನಿವಾಸಿಗರಾಗಿದ್ದ ಡಾ. ಎಸ್.ಆರ್. ರಂಗನಾಥನ್ ಅವರು ಸೆಪ್ಟೆಂಬರ್ 27, 1972 ವರ್ಷದಲ್ಲಿ ಈ ಲೋಕವನ್ನಗಲಿದರು. ‘ಎ ಲೈಬ್ರರಿಯನ್ ಲುಕ್ಸ್ ಬ್ಯಾಕ್’ ಎಂಬುದು ಅವರ ಆತ್ಮಚರಿತ್ರೆ.
ಹಂ. ಶ್ರೀ. ಸೂರ್ಯ ಪ್ರಕಾಶ್
ಬೆಂಗಳೂರು
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು