ಯಾವುದೇ ಕುಟುಂಬದವರಲ್ಲೇ ಒಬ್ಬರ ಸಾವಾದಾಗ ಅಬ್ಬಬ್ಬಾ ಎಂದರೆ ಅಗಲಿದ ಕೆಲ ದಿನಗಳ ನಂತರ ಅವರನ್ನು ಸ್ಮರಿಸಿ ಆನಂತರ ಶಾಸ್ತ್ರಕ್ಕೆ ವರ್ಷಕ್ಕೊಮ್ಮೆ ಪುಣ್ಯತಿಥಿಯಂದು ಫೋಟೋಗೆ ಹಾರ ಹಾಕಿ ಅವರ ಹೆಸರು ಹೇಳಿಕೊಂಡು ಸವಿಯಾದ ಅಡಿಗೆ ಮಾಡಿಕೊಂಡು ಉಂಡು ಸಂಜೆಯೊಳಗಾಗಿ ಮರೆತುಬಿಡುತ್ತೇವೆ. ಪುನಃ ಅವರ ಜ್ಞಾಪಕ ಅಂತ ಬರೋದು ಮುಂದಿನ ತಿಥಿಯಂದೇ !
ಇನ್ನು ಪರಿಚಿತರು, ಸ್ನೇಹಿತರು, ಬಂಧುಗಳ ಸಾವಿನ ಸುದ್ದಿ ತಿಳಿದರೂ ಅಂತಿಮ ದರ್ಶನಕ್ಕೆ ಹೋಗಲು ನಮ್ಮ ನಮ್ಮ ಅನುಕೂಲ, ರಜೆ, ಮಕ್ಕಳ ಶಾಲೆ ಎಲ್ಲವನ್ನೂ ಲೆಕ್ಕಾಚಾರ ಹಾಕುತ್ತೇವೆಂದ ಮೇಲೆ ಅವರನ್ನು ಶಾಶ್ವತವಾಗಿ ನೆನೆಯುವುದೆಲ್ಲಿಂದ ಬಂತು ? ವಾಟ್ಸಪ್, ಫ಼ೇಸ್ ಬುಕ್ , ಇನ್ಸ್ಟಾ ಗ್ರಾಮ್ ಗಳಲ್ಲಿ ಒಂದು ಕಣ್ಣೀರಿನ ಎಮೋಜಿ ಹಾಕಿ RIP ಎಂದು ಸಿಂಪಲ್ಲಾಗಿ ಟೈಪಿಸಿದರೆ ಸಾಕು , ಸಾಂತ್ವನ ಹೇಳುವ ಜವಾಬ್ದಾರಿ ಖತಂ !
ಈ ಮಧ್ಯೆ ಈ ಭೂಮಿ ಮೇಲೆ ಲಕ್ಷಾಂತರ ಜನ ತಮ್ಮದೇ ಆದ ವೈಚಿತ್ರ್ಯಗಳಿಂದ ಅಥವಾ ಸ್ವಭಾವತಃ ಕಾರಣಗಳಿಂದ ಬದುಕಿದ್ದೂ ಸತ್ತಂತೆಯೇ ಇದ್ದಾರೆ. ಹೇಗೆಂದರೆ ಒಂಥರಾ ನಾಯಿಮೊಲೆ ಹಾಲಂತೆ, ಬಂದ ಪುಟ್ಟ ಇದ್ದ ಪುಟ್ಟ, ಹೋದ ಪುಟ್ಟ ಎಂಬಂತೆ ಸಮಾಜದ ದೃಷ್ಟಿಯಿಂದ ಇದ್ದೂ ಇಲ್ಲದಂತೆ ಉಸಿರಾಡಿ ಸದ್ದಿಲ್ಲದೇ ಉಸಿರು ನಿಲ್ಲಿಸಿ ಹೋಗಿರುತ್ತಾರೆ. ಹಲವರು ಹಣ ಆಸ್ತಿ ಅಧಿಕಾರ ಸಂಪತ್ತು ಒಡವೆ ವಾಹನ…..ಎಂದೆಲ್ಲಾ ಅದರಲ್ಲೇ ಉಸಿರಾಡಿ ಅದರೊಂದಿಗೇ ಉಸಿರು ನಿಲ್ಲಿಸುತ್ತಾರೆ
ಮನುಷ್ಯ ಬದುಕಿದ್ದಾಗ ಅವನು ಸಂಪಾದಿಸಿರ ಬಹುದಾದ ಯಾವುದೇ ಬೆಲೆಯ ಆಸ್ತಿ ಪಾಸ್ತಿಗಳೂ, ಆತ ಸತ್ತಾಗ ಅವನೊಟ್ಟಿಗೆ ಹೋಗೋಲ್ಲ. ಅವನು ಮಾಡಿರಬಹುದಾದ ಒಳ್ಳೆಯ ಕೆಲಸಗಳ ನನಪೇ ಶಾಶ್ವತವಾಗಿರಬಲ್ಲದು ಎಂಬುದು ನಿಜವಾದರೂ ಆ ಒಳ್ಳೆಯ ಕೆಲಸಗಳನ್ನೂ ಸಹಾ ಯಾವರೀತಿ ಮಾಡಿದರು ಎಂಬುದೂ ಮುಖ್ಯವಾಗುತ್ತದೆ.
ಮನುಷ್ಯನ ಜೀವನದ ಈ ಎಲ್ಲಾ ಸಾಮಾನ್ಯ ಅಂಶಗಳ ನಡುವೆಯೇ ನಮ್ಮೊಂದಿಗೆ ಕೆಲವರಿರುತ್ತಾರೆ, ಅವರು ಬದುಕಿರುವಾಗ ಏನನ್ನು ಸಂಪಾದಿಸಿದ್ದರೋ ಅದನ್ನವರು ಕಣ್ಮರೆಯಾದ ನಂತರವೂ ಉಳಿಸಿಕೊಂಡಿರುತ್ತಾರೆ. ವಿಸ್ಮಯವೆಂದರೆ ಆ ಸಂಪಾದನೆಯ ಮೌಲ್ಯವೆಂಬುದು ಆ ವ್ಯಕ್ತಿ ಸತ್ತ ನಂತರವೂ ದಿನೇ ದಿನೇ ಹೆಚ್ಚಾಗುತ್ತಲೇ ಹೋಗುತ್ತದೆ.
ಅಸಲಿಗೆ ಆ ಮೌಲಿಕ ಸಂಪಾದನೆ ಎಂದರೆ ಯಾವುದು ಗೊತ್ತಾ ? ಅದು ಕೋಟ್ಯಾಂತರ ಜನರ ಹೃದಯಗಳಲ್ಲಿ ಭಾವನಾತ್ಮಕವಾಗಿ ಶಾಶ್ವತವಾಗಿ ಬರೆದು ಹೋದ ನಿಷ್ಕಲ್ಮಶ ಪ್ರೀತಿ, ಆಪ್ತತೆ, ಆಪ್ಯಾಯತೆ ಹಾಗೂ ಪರಿಶುದ್ಧ ಅಭಿಮಾನದ ಬರಹ. ಆ ಬರಹವೆಂದರೆ ಸಾಧಾರಣ ಬರಹವಲ್ಲ. ಅವರ ಹೆಸರಿನೊಂದಿಗೇ ನಮ್ಮ ಉಸಿರೂ ಲಾಸ್ಯವಾಡಬಲ್ಲಂತಹ, ಅದರ ಭಾವದೊಂದಿಗೇ ದೇಹದೊಳಗಿನ ರಕ್ತ ಮಾಂಸ ಖಂಡಗಳು ಪ್ರಫುಲ್ಲತೆಯಿಂದ ತಾವೇ ತಾವಾಗಿ ಸ್ಪಂದಿಸುವಂತೆ ಮಾಡಬಲ್ಲಂತಹ ಪ್ರಾಮಾಣಿಕ ಪ್ರೀತಿಯ ಭಾವುಕತೆಯ ಬರಹ.
ಅದು ಅಸಂಖ್ಯಾತ ಹೃದಯಗಳಲ್ಲಿ ತಮ್ಮ ಪ್ರೀತಿ ಅಭಿಮಾನದ ಮಮತೆಯ ಮೊಹರನ್ನು ಶಾಶ್ವತವಾಗಿ ಒತ್ತಬಲ್ಲದು , ಅಗಲಿ ಮುವ್ವತ್ತಾರು ತಿಂಗಳಾದರೂ ನಿತ್ಯವೂ ನಮ್ಮೊಡನೇ ಇರಬಲ್ಲದು, ನಮ್ಮೊಂದಿಗೆ ಭಾವನಾತ್ಮಕವಾಗಿ ಸಂವಹಿಸಬಲ್ಲದು.
ಅಷ್ಟೇ ಅಲ್ಲ, ಅದು ಯಾವುದೋ ಒಂದು ಮಗುವಿನಂತಹ ನಗುವಿನ ರೂಪದಲ್ಲಿ, ಒಂದು ಸಹಜ ಸರಳತೆಯ ಭಾವದಲ್ಲಿ , ಒಂದು ಕೃತಕವಿಲ್ಲದ ವಿನಮ್ರತೆಯ ನಡವಳಿಕೆಯಲ್ಲಿ, ಜನಸಮೂಹವನ್ನು ಎದೆಚಿಪ್ಪಿನೊಳಗಿಟ್ಟು ಆರಾಧಿಸುವ ಮನೋಭೂಮಿಕೆಯಲ್ಲಿ, ಪ್ರಚಾರವಿಲ್ಲದೇ ಸದ್ದಿಲ್ಲದೇ ಕಷ್ಟದಲ್ಲಿರುವವರಿಗೆ ದೇಹೀ ಎಂದವರಿಗೆ ಸಹಾಯ ಹಸ್ತ ಚಾಚುವ ಹೃದಯ ಶ್ರೀಮಂತಿಕೆಯಲ್ಲಿ, ಎಲ್ಲರೊಳಗೊಂದಾಗಿ, ಎಲ್ಲರಿಗೂ ಬೇಕಾಗಿ, ಎಲ್ಲರ ಮೆಚ್ಚುಗೆಗೆ ಪಾತ್ರನಾಗಿ ಇರಬಲ್ಲದು.
ಆ ರೀತಿಯ ನಿಷ್ಕಲ್ಮಶವಾದ ನಗು, ಪರಿಶುದ್ಧ ಹೃದಯ, ಹಾಲಿನಂತಹ ಮನಸು , ನಿಷ್ಕಳಂಕವಾದ ವ್ಯಕ್ತಿತ್ವ ಹೇಗಿರಬೇಕು ಎಂಬುದಕ್ಕೆ ಜೀವಂತ ನಿದರ್ಶನವಾಗಿ ನಮ್ಮೊಂದಿಗೆ ಇದ್ದವರು, ನಮ್ಮೊಡನೆ ಇರುವವರು ಹಾಗೂ ಸದಾ ಸಮಾಜಮುಖಿಯಾಗಿ ಇರಲಿರುವವರು ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್…. ಅಂದರೆ ನಮ್ಮೆಲ್ಲರ ನೆಚ್ಚಿನ ಅಪ್ಪು .
ಅಪ್ಪು ಅಗಲಿ ಮೂರು ವರ್ಷಗಳಾದರೂ ಅವರನ್ನು ಕಳೆದುಕೊಂಡಿದ್ದೇವೆಂಬ ಭಾವನೆ ಯಾವೊಬ್ಬ ನಿಜ ಕನ್ನಡಿಗರಿಗಾಗಲೀ ,ಅಪ್ಪುವನ್ನು ಪ್ರೀತಿಸುವ ಯಾರಿಗೇ ಆಗಲೀ ಬಂದಿಲ್ಲ . ಸಾಧಾರಣವಾಗಿ ಕಲಾವಿದರಿಗೆ ಸಾವಿಲ್ಲ ಎಂಬ ಅಕ್ಷರಶಃ ಸತ್ಯವಾದ ಮಾತಿದೆ . ಏಕೆಂದರೆ ಒಬ್ಬ ಕಲಾವಿದ ತಾನು ದೇಹ ತ್ಯಜಿಸಿದ ನಂತರವೂ ತನ್ನ ಕಲಾ ಸಾಧನೆಯ ಮೂಲಕ ಜನಸಮೂಹದ ನಡುವೆ ಆಚಂದ್ರಾರ್ಕವಾಗಿ ಜೀವಿಸಿರಬಲ್ಲ. ಆ ಮಾತಿಗೆ ಬಂದರೆ ಅಪ್ಪು ಬಾಲ್ಯದಿಂದಲೂ ಕೇವಲ ಒಬ್ಬ ಅಪ್ಪಟ ಕಲಾವಿದ ಮಾತ್ರ ಆಗಿರಲಿಲ್ಲ, ಅಪ್ಪು ಒಬ್ಬ ಸ್ಟಾರ್ ಆಗಿದ್ದವರು, ಸಮಾಜಕ್ಕೆ ಸರಿದಾರಿಯಾಗಬಲ್ಲ ಸೇತುವೆಯಾಗಿದ್ದವರು, ಯೂತ್ ಐಕಾನ್ ಆಗಿ ಕರ್ನಾಟಕದ ಸಂಸ್ಕಾರ ಸಜ್ಜನಿಕೆಗಳ ಸಾಂಸ್ಕೃತಿಕ ರಾಯಭಾರಿಯಾಗಿದ್ದವರು, ತನ್ನನ್ನು ಕೈಹಿಡಿದ ವೃತ್ತಿಗೆ ಏನಾದರೂ ಒಳ್ಳೆಯದನ್ನು ಹೊಸತನ್ನು ವಿಶಿಷ್ಠವಾದದ್ದನ್ನು ಕೊಡಬೇಕೆಂಬ ಕನಸುಳ್ಳವನಾಗಿದ್ದವರು.
ಇವೆಲ್ಲಕ್ಕಿಂತ ಮಿಗಿಲಾಗಿ ಅನೇಕರ ಸಂಕಷ್ಟಗಳಿಗೆ, ಪ್ರಚಾರ ಬಯಸದೇ ಅಂತಃಕರಣಶುದ್ಧವಾಗಿ ಮಿಡಿಯಬಲ್ಲ ಮಾನವೀಯತೆಯುಳ್ಳ ಮನುಷ್ಯನಾಗಿದ್ದವರು. ಬಹುಶಃ ಇವೆಲ್ಲವೂ ಅಪ್ಪುವನ್ನು ಅಜರಾಮರವಾಗಿರಿಸುತ್ತಲೇ ಬಂದಿವೆ.
ಜನ ಏಕೆ ಅಪ್ಪುವನ್ನು ದೇಶ, ಭಾಷೆ ,ಗಡಿ ಜಾತಿ ಮತ ಧರ್ಮ ಎಲ್ಲಾ ಬೇಲಿಗಳನ್ನು ದಾಟಿ ಅನ್ ಕಂಡೀಷನಲ್ ಆಗಿ ಪ್ರೀತಿಸುತಿದ್ದಾರೆಂಬುದಕ್ಕೆ , ಹಾಗೆ ಪ್ರೀತಿಸುವವರಿಗೇ ಕಾರಣ ಗೊತ್ತಿಲ್ಲ. ಅದಕ್ಕೇ ಹೇಳಿದ್ದು ಅದೊಂದು ಭಾವನಾತ್ಮಕ ಬೆಸುಗೆಯಿದ್ದಂತೆ . ಕೆಲವರ ಮೇಲೇಕೆ ಆ ಮಟ್ಟಿನ ಪ್ರೀತಿ ಹುಟ್ಟುತ್ತದೆಯೆಂದು ಗೊತ್ತಿರೋಲ್ಲ, ಕೆಲವರನ್ನು ನಾವೇಕೆ ಅಷ್ಟೆಲ್ಲಾ ಇಷ್ಟಪಡುತ್ತೇವೆಂದೂ ಗೊತ್ತಿರೋಲ್ಲ, ಹಾಗೆಯೇ ಕೆಲವು ವ್ಯಕ್ತಿಗಳನ್ನು ನಮ್ಮಲ್ಲಿ ಒಬ್ಬರೆಂದು ಅಂದುಕೊಳ್ಳುವ ಪರಿ ಏಕೆಂಬುದೂ ಅರಿಯದು.!
ಹಾಗೆ ಸುಮ್ಮನೆ ನೆನಪಿಸಿಕೊಳ್ಳಿ, ಯಾವೊಬ್ಬ ಸೆಲೆಬ್ರಿಟಿಯ ಸಾವಿಗೂ ಆ ಮಟ್ಟದಲ್ಲಿ ಕಣ್ಣೀರು ಹಾಕಿದ ಕಥನ ಕರ್ನಾಟಕದ ಇತಿಹಾಸದಲ್ಲೇ ಇಲ್ಲ. ಯಾವೊಬ್ಬ ನಟನನ್ನೂ ಯಾವುದೇ ಸಾಂಸ್ಕೃತಿಕ ಸಾಮಾಜಿಕ ಅಡೆತಡೆಗಳಿಲ್ಲದೇ ಈ ಮಟ್ಟಕ್ಕೆ ಪ್ರೀತಿಸಿದ್ದ ಉದಾಹರಣೆಯೂ ಇಲ್ಲ. ಸತ್ತು ಮೂರುವರ್ಷಗಳ ನಂತರವೂ ಯಾವ ಸೆಲೆಬ್ರಿಟಿಯ ಸಮಾಧಿಯ ದರ್ಶನಕ್ಕೂ ನಿತ್ಯ ಜನಸಾಗರದ ದೃಶ್ಯಗಳಿರಲಿಲ್ಲ. ಈ ಸೌಭಾಗ್ಯ ಸಿಕ್ಕಿದ್ದು ಅಪ್ಪು ಗೆ…ಇದು ಅವರ ಸಾಧನೆ, ಅರ್ಹತೆ, ಹಾಗೂ ಮೌಲ್ಯಯುತ ಸಂಪಾದನೆಯೇ ಹೊರತು ಬೇರೆಲ್ಲವೂ ಕೇವಲ ಲೌಕಿಕ. ಅಪ್ಪುವನ್ನು ಪ್ರೀತಿಸುವ ಕನ್ನಡಿಗರು ಆ ಮೂಲಕ ಸಜ್ಜನಿಕೆ, ಸರಳತೆ, ಸಂಸ್ಕಾರ, ಸಹೃದಯತೆಗಳನ್ನು ಎಷ್ಟರಮಟ್ಟಿಗೆ ಪ್ರೀತಿಸಿ ಅಭಿಮಾನಿಸುತ್ತಾರೆಂಬುದನ್ನು ಜಗತ್ತಿಗೇ ತೋರಿಸಿಕೊಟ್ಟಿದ್ದಾರೆ.
ಅಪ್ಪು ಬಗೆಗೆ ಹೇಳುತ್ತಾ ಹೋದಂತೆಲ್ಲಾ ಮುಗಿಯದಷ್ಟು ಮಾತುಗಳಿವೆ, ಬರಡಾಗದ ಭಾವನೆಗಳಿವೆ, ಸವಿಯಾದ ಸಂವೇದನೆಗಳಿವೆ. ಅಪ್ಪು ಬಗೆಗೆ ಹೇಳುತ್ತಾ ಹೋಗುವುದು ಒಂದು ರೀತಿಯಲ್ಲಿ ಸಾಮಾಜಿಕ ಮೌಲ್ಯಗಳಿಗೆ, ಸಾಂಸ್ಕೃತಿಕ ಹಾಗೂ ಸದ್ಭಾವನೆಗಳ ಸನಾತನ ಪರಂಪರೆಗಳಿಗೆ ಕನ್ನಡಿ ಹಿಡಿಯುವಂತಹ ಕೆಲಸವಿದ್ದಂತೆ.
ಎಲ್ಲಿಯವರೆಗೆ ಮಾನವೀಯ ಮೌಲ್ಯಗಳನ್ನು ಪ್ರೀತಿಸುವ ಜನರಿರುತ್ತಾರೆಯೋ ಅಲ್ಲಿಯವರೆಗೆ ಅಪ್ಪು ಮೇಲಿನ ಪ್ರೀತಿ ನಿರಂತರವಾಗಿ ಪ್ರವಹಿಸುತ್ತಲೇ ಇರುತ್ತದೆ.
ಧನ್ಯ ಪುನೀತ, ಧನ್ಯ ಕರ್ನಾಟಕ, ಧನ್ಯ ಕನ್ನಡಿಗ.
” ಅಪ್ಪು ” ಗೆ ಮೂರನೇ ಪುಣ್ಯ ಸ್ಮರಣೆಯ ನಮನಗಳು
ಮರೆಯುವ ಮುನ್ನ
ಪುನೀತ್ ರಾಜ್‍ಕುಮಾರ್ ರನ್ನು ಪವರ್ ಸ್ಟಾರ್ , ಕರ್ನಾಟಕ ರತ್ನ, ಡ್ಯಾನ್ಸಿಂಗ್ ಸ್ಟಾರ್ ಸೂಪರ್ ಸ್ಟಾರ್ ಇತ್ಯಾದಿ ಜೀವಂತಿಕೆಯಿರದ ಭಾವವಿರದ ಟೈಟಲ್ ಗಳಿಂದ ಕರೆಯುವುದಕ್ಕಿಂತ. ಹಿಡಿ ಪ್ರೀತಿಯಿಂದ ಅಡಿಯಿಂದ ಮುಡಿಯವರೆಗೂ ” ಅಪ್ಪು” ಎಂದರೇನೇ ಎಲ್ಲರ ಹೃದಯಕ್ಕೆ ಹತ್ತಿರವಾಗೋದು. ಏಕೆಂದರೆ ಅಪ್ಪು ಎಂದು ಕರೆದಾಗಲಷ್ಟೇ ಯಾರೋ ನಮ್ಮ ಮನೆ ಮಗನನ್ನೋ , ಮನೆಯ ಬಂಧುವನ್ನೋ ಕರೆದಂತೆ ಭಾಸವಾಗುವ ಒಂದು ನವಿರಾದ ಆಪ್ತತೆ ತಾನೇ ತಾನಾಗಿ ಉಂಟಾಗುತ್ತದೆ. ಹೀಗಾಗಿ ತನಗೆ ಅರಸಿಬಂದ ಈ ಲೌಕಿಕ ತಾತ್ಕಾಲಿಕ ಬಿರುದು ಬಾವಲಿಗಳ ಹಿಂದೆ ಅಪ್ಪು ಎಂದೂ ಹಿಂದೆ ಬೀಳಲಿಲ್ಲ. ತೆರೆಯ ಮೇಲೆ ಪವರ್ ಸ್ಟಾರ್ ಆಗಿ ಮಿಂಚಿದರೂ ನಿಜ ಬದುಕಿನಲ್ಲಿ, ಮನಸಾರೆ ಅವರು ಅಪ್ಪುವಾಗಿಯೇ ಉಳಿದಿದ್ದರು.
ಆ ಮನುಷ್ಯನ ಮೊಗದಲ್ಲಿ ಎಂದೂ ಆತಂಕ ಉದ್ವೇಗ ಒತ್ತಡ ಅಥವಾ ನಕಾರಾತ್ಮಕತೆಯ ಲವಲೇಶವೂ ಇರಲಿಲ್ಲ, ನಗುವಿನಲ್ಲಿ ಕೃತಕತೆ ಇರಲಿಲ್ಲ, ನಡವಳಿಕೆಯಲ್ಲಿ ಅಹಂ ಸೋಕಿಸಿಕೊಳ್ಳಲಿಲ್ಲ. ತಾನೊಬ್ಬ ಸ್ಟಾರ್ ಎಂಬ ಪಿತ್ಥ ಎಂದಿಗೂ ನೆತ್ತಿಗೇರಿಸಿಕೊಂಡಿರಲಿಲ್ಲಸಹ ಕಲಾವಿದರನ್ನು ಅವರ ಹಿರಿತನ ಕಿರಿತನದ ಆಧಾರದಿಂದ ಭೇಧಭಾವ ಮಾಡುತ್ತಿರಲಿಲ್ಲ. ಈ ಎಲ್ಲವೂ ಅಪ್ಪು ಬಿಟ್ಟು ಹೋದ ಮೌಲ್ಯಗಳೇ !ಇದನ್ನು ಓದಿ – ಅಪ್ಪು ಅಗಲಿಕೆಗೆ ಮೂರು ವರ್ಷ: ರಾಜ್ಯಾದ್ಯಂತ ಪುಣ್ಯಸ್ಮರಣೆ – ಕುಟುಂಬಸ್ಥರಿಂದ ಸಮಾಧಿಗೆ ಪೂಜೆ
ಚಿಕ್ಕವಯಸ್ಸಿನಲ್ಲೇ ಅವರು ರೂಢಿಸಿಕೊಂಡು ಪಾಲಿಸಿಕೊಂಡು ಬಂದಿದ್ದ ಸಾಂಸ್ಕ್ರತಿಕ, ಸಾಮಾಜಿಕ ಮೌಲ್ಯಗಳನ್ನು ಕಾಪಾಡಿಕೊಂಡು ಬರುವುದೇ ಅಪ್ಪುವನ್ನು ಇಷ್ಟಪಡುವವರು ತೋರಬಹುದಾದ ಪರಿಶುದ್ಧ ಪ್ರೀತಿ, ನಿಜವಾದ ಅಭಿಮಾನ.
” ಅಪ್ಪು” ಗೆ ಯಿಂದ …….
ಹಿರಿಯೂರು ಪ್ರಕಾಶ್.
More Stories
ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
ಸಿ.ಟಿ. ರವಿ ಪ್ರಕರಣ CID ಗೆ ಹಸ್ತಾಂತರ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ