ಕಳೆದ ಕೆಲವು ವರ್ಷಗಳಿಂದ ಕ್ಯಾಶ್ ಲೆಸ್ ಆಗಿ ಜಗತ್ತೇ ಪರಿವರ್ತನೆಯಾಗುತ್ತಿದೆ, ಭೀಮ್, ಪೋನ್ ಪೇ ,ಗೂಗಲ್ ಪೇ, ಮೊಬೈಲ್ ನಂಬರ್ ಆಧಾರಿಸಿ ಪೇಮೆಂಟ್ ಮಾಡುವ , ಮುಂತಾದ ಸೌಲಭ್ಯಗಳನ್ನು ನೀಡುವ ಮೂಲಕ ಜನರು ಸಂಪೂರ್ಣವಾಗಿ ಬ್ಯಾಂಕ್ ವ್ಯವಹಾರ ಅನ್ ಲೈನ್ ನಲ್ಲಿ ಆಗುವಂತೆ ಸರ್ಕಾರ, ಬ್ಯಾಂಕ್ ಗಳು ಉತ್ತೇಜಿಸುತ್ತವೆ,ಆದರೆ, ಇದರೊಂದಿಗೆ ಆನ್ ಲೈನ್ ವಂಚನೆಯೂ ಹೆಚ್ಚುಯಾಗಿವೆ.
ವಂಚನೆಗೆ ಹಲವು ಮುಖಗಳು ಇವೆ ಅನ್ನುತ್ತಾರೆ ,ಅದರೆ ಈ ಅನ್ ಲೈನ್ ವಂಚನೆಗೆ ಮುಖವೇ ಇಲ್ಲ, ವಂಚನೆ ಮಾಡುವರು ಜಗತ್ತಿನ ಯಾವುದೇ ನಗರ,ಹಳ್ಳಿಗಳಲ್ಲಿ ಕುಳಿತು ವಂಚಿಸಿ ಯಾಮಾರಿಸಬಹುದು,ಆನ್ ಲೈನ್ ವಂಚಕರು ನಮ್ಮ ಖಾತೆಗಳಿಗೆ ಕನ್ನ ಹಾಕಲು ಯಾವೆಲ್ಲ ಮಾರ್ಗಗಳನ್ನು ಅನುಸರಿಸುತ್ತಾರೆ ಎಂಬುದನ್ನು ನೋಡಿದರೆ ಭಯಾನಕ ಎಂದೇ ಹೇಳಬಹುದು ಏಕೆಂದರೆ ಸ್ವಲ್ಪ ಯಮಾರಿದರೇ ಮುಗಿತು ನಿಮ್ಮ ಹಣ ಕಥೆ.ಕೃತಕಬುದ್ಧಿಮತ್ತೆ (ಎಐ) ಆಧಾರಿತ ಹೊಸ ಹೊಸ ತಂತ್ರಜ್ಞಾನ ಬಳಕೆಗೆ ಬರುತ್ತಿರುವ ಈ ಹೊತ್ತಿನಲ್ಲಿ ಜನರು ಆನ್‌ಲೈನ್ ವಂಚನೆಗೆ ತುತ್ತಾಗುತ್ತಿರುವುದು ಜಾಸ್ತಿಯಾಗಿದೆ. ಡೀಪ್‌ಫೇಕ್ ತಂತ್ರಜ್ಞಾನವನ್ನು ಬಳಸಿಕೊಂಡು ಸಂಬಂಧಿಕರ ಧ್ವನಿಯನ್ನು ಅನುಕರಿಸುವುದು, ದೊಡ್ಡ ದೊಡ್ಡ ಉದ್ಯಮಿಗಳು, ಕ್ರೀಡಾಪಟುಗಳು, ಪ್ರಭಾವಿ ವ್ಯಕ್ತಿಗಳೇ ಬಂಡವಾಳ ಹೂಡಿಕೆಗೆ ಸಲಹೆ ನೀಡುತ್ತಿರುವ ವಿಡಿಯೊಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು, ದೊಡ್ಡ ಕಂಪನಿಗಳ ವೆಬ್‌ಸೈಟ್‌ಗಳನ್ನೇ ಹೋಲುವ ವೆಬ್ ವಿಳಾಸ (ಯುಆರ್‌ಎಲ್), ಇ–ಮೇಲ್ ಐಡಿಗಳನ್ನು ಸೃಷ್ಟಿಸಿ ಮೇಲ್, ವಾಟ್ಸ್‌ಆ್ಯಪ್, ಎಸ್‌ಎಂಎಸ್ ಮೂಲಕ ಲಿಂಕ್ ಕಳುಹಿಸುವಂತಹ ಕೆಲಸವನ್ನು ವಂಚಕರು ಮಾಡುತ್ತಿದ್ದಾರೆ. ತಂತ್ರಜ್ಞಾನ ಕಂಪನಿಗಳು ಅಥವಾ ದೂರಸಂಪರ್ಕ ಕಂಪನಿಗಳು ಎಷ್ಟೇ ಪ್ರಯತ್ನ ಪಟ್ಟರೂ ಇಂತಹ ನಕಲಿ/ಸ್ಪ್ಯಾಮ್ ಇ-ಮೇಲ್, ಎಸ್‌ಎಂಎಸ್‌ಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.
ಇದರಿಂದ ಅಮಾಯಕರು ಅನುಭವಿಸುವ ಪಾಡು ಹೇಳತೀರದು, ವಿವಿಧ ಸ್ವರೂಪದಲ್ಲಿ ಅಮಾಯಕರನ್ನು ತಮ್ಮ ಬಲೆಗೆ ಕೆಡವಿ ಅದೆಷ್ಟೋ ಜನರು ಕೋಟ್ಯಾಂತರ ರೂಪಾಯಿ ಹಣ ದೋಚಿದ್ದಾರೋ….,
ಕಳೆದ 10 ವರ್ಷಗಳಲ್ಲಿ ಆನ್ಲೈನ್ ಮೂಲಕ 5.3 ಲಕ್ಷ ಕೋಟಿ ರೂ. ವಂಚನೆಯಾಗಿದೆ ಎಂದು ಭಾರತೀಯ ಬ್ಯಾಂಕ್ಗಳು ವರದಿ ಮಾಡಿವೆ. ‘ಮನಿ ಕಂಟ್ರೋಲ್’ ಸುದ್ದಿಸಂಸ್ಥೆ ಸಲ್ಲಿಸಿದ್ದ ಆರ್ಟಿಐಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಉತ್ತರಿಸಿದ್ದು, ವಂಚನೆ ಬಗ್ಗೆ ಬ್ಯಾಂಕ್ಗಳ ವರದಿಯ ಕುರಿತು ಮಾಹಿತಿ ನೀಡಿದೆ.
2013-14ರ ಆರ್ಥಿಕ ವರ್ಷದಿಂದ 2022-23ರ ಆರ್ಥಿಕ ವರ್ಷದವರೆಗೆ ಅಂದರೆ ಒಟ್ಟು ಒಂದು ದಶಕದಲ್ಲಿ
ಒಟ್ಟು 4,62,733 ಲಕ್ಷ ಕೋಟಿ ರೂ. ವಂಚನೆಯಾಗಿರುವುದಾಗಿ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ಗಳು ವರದಿ ಮಾಡಿವೆ ಎಂದು ಆರ್ಬಿಐ ಒದಗಿಸಿರುವ ಡೇಟಾ ಹೇಳುತ್ತದೆ, ಹಾಗೆ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವನ್ನು ಉಲ್ಲೇಖಿಸಿ ಇಟಿ ವರದಿಯಲ್ಲಿ ಈ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಭಾರತೀಯರು ಸೈಬರ್ ವಂಚನೆಯಿಂದ1,750 ಕೋಟಿ ರೂಪಾಯಿಗಳ ನಷ್ಟವನ್ನು ಅನುಭವಿಸಿದ್ದಾರೆ ಎಂದು ಹೇಳಲಾಗಿದೆ. ಜನವರಿಯಿಂದ ಏಪ್ರಿಲ್ 2024 ರ ಅಂಕಿಅಂಶಗಳ ಪ್ರಕಾರ, ಸೈಬರ್ ವಂಚನೆಯ ವಿವಿಧ ಪ್ರಕರಣಗಳಿಂದಾಗಿ ಭಾರತೀಯ ಜನರು 1,750 ಕೋಟಿ ರೂ.ಗೂ ಹೆಚ್ಚು ನಷ್ಟವನ್ನು ಅನುಭವಿಸಿದ್ದಾರೆ ಮತ್ತು ಈ ಅವಧಿಯಲ್ಲಿ ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ನಲ್ಲಿ 7 ಲಕ್ಷ 40 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಭಾರತದಲ್ಲಿ ನಡೆಯುತ್ತಿರುವ ಹೆಚ್ಚಿನ ಸೈಬರ್ ಅಪರಾಧಗಳು ಹಣಕಾಸು ಕ್ಷೇತ್ರಕ್ಕೆ ಸಂಬಂಧಿಸಿವೆ. ಅದ್ರಲ್ಲೂ ಟ್ರೇಡಿಂಗ್ ಹಗರಣಗಳಲ್ಲಿ ಜನರು ಗರಿಷ್ಠ 1,420 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಈ ವರ್ಷದ ಮೊದಲ 4 ತಿಂಗಳಲ್ಲಿ 20,043 ಟ್ರೇಡಿಂಗ್ ಹಗರಣಗಳ ಪ್ರಕರಣಗಳು ದಾಖಲಾಗಿವೆ. ಈ ಅವಧಿಯಲ್ಲಿ 4,599 ಡಿಜಿಟಲ್ ಬಂಧನ ಪ್ರಕರಣಗಳಲ್ಲಿ ಜನರು 120 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಹೂಡಿಕೆ ಹಗರಣಗಳಿಂದ ಜನರು 222 ಕೋಟಿ ರೂ. ಮತ್ತು ಡೇಟಿಂಗ್ ಆ್ಯಪ್ಗಳಿಂದ 13.23 ಕೋಟಿ ರೂ. ಕಳೆದುಕೊಂಡಿದ್ದಾರೆ .
ಕರ್ನಾಟಕದಲ್ಲಿ ವಂಚನೆ ಪ್ರಕರಣ-
ಇನ್ನೂ ನಮ್ಮ ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಸೈಬರ್ ವಂಚನೆಗೆ ಸಂಬಂಧಿಸಿದಂತೆ 56,261 ಪ್ರಕರಣಗಳು ದಾಖಲಾಗಿವೆ. ಅದರಲ್ಲೂಬೆಂಗಳೂರು ನಗರದಲ್ಲಿ ವರ್ಷದಿಂದ ವರ್ಷಕ್ಕೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರಸಕ್ತ ವರ್ಷ ಎಂಟು ತಿಂಗಳಲ್ಲಿ ₹1,242.7 ಕೋಟಿ ವಂಚಕರ ಪಾಲಾಗಿದೆ. 2021, 2022 ಮತ್ತು 2023ರವರೆಗಿನ ಮೂರು ವರ್ಷಗಳಲ್ಲಿ ಸಂತ್ರಸ್ತರು ಕಳೆದುಕೊಂಡ ಒಟ್ಟು ಮೊತ್ತಕ್ಕಿಂತ ₹214.6 ಕೋಟಿ ಹೆಚ್ಚು ಹಣ ಎಂಟೇ ತಿಂಗಳಲ್ಲಿ ವಂಚನೆಯಾಗಿದೆ.
ಅಂಕಿ ಅಂಶಗಳ ಪ್ರಕಾರ, ನಗರ ಪೊಲೀಸರು ಪ್ರಸಕ್ತ ವರ್ಷ ಆಗಸ್ಟ್ 31ರವರೆಗೆ 12,356 ಸೈಬರ್ ಅಪರಾಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಪ್ರತಿ ತಿಂಗಳು ಸರಾಸರಿ 1,546 ಪ್ರಕರಣಗಳು ದಾಖಲಾಗುತ್ತಿವೆ. 552 ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಎಷ್ಟೋ ನಾಗರಿಕರು ಪ್ರಕರಣ ದಾಖಲಿಸದೇ ಇರುವುದು ಕಂಡುಬರುತ್ತದೆ. ಜೊತೆಗೆ ಆನ್ಲೈನ್ ವಂಚನೆಯನ್ನು ನಿಯಂತ್ರಣ ಮಾಡುವುದು ಹಾಗೂ ಆರೋಪಿಗಳನ್ನು ಪತ್ತೆ ಹಚ್ಚುವುದು ಪೊಲೀಸರಿಗೂ ತಲೆ ನೋವಾಗಿದೆ ಮಾರ್ಪಟ್ಟಿದೆ.ಪ್ರತಿ ದಿನ ಹಲವಾರು ದೂರುಗಳು ಬರುತ್ತಿವೆ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ ಪ್ರಕಾರ, ಮೇ ತಿಂಗಳಲ್ಲಿ ಪ್ರತಿದಿನ ಸರಾಸರಿ 7 ಸಾವಿರ ಸೈಬರ್ ಅಪರಾಧ ದೂರುಗಳನ್ನು ಸ್ವೀಕರಿಸಲಾಗುತ್ತಿದೆ. ಅದರಲ್ಲಿ 85 ಪ್ರತಿಶತ ದೂರುಗಳು ಆನ್ಲೈನ್ ಹಣಕಾಸು ವಂಚನೆಯಾಗಿದೆ. ದೇಶದಲ್ಲಿ ನಡೆಯುತ್ತಿರುವ ಬಹುತೇಕ ಸೈಬರ್ ಅಪರಾಧಗಳು ಹಣಕ್ಕೆ ಸಂಬಂಧಿಸಿದ್ದು ಎಂಬುದು ಇದರಿಂದ ತಿಳಿಯುತ್ತದೆ. ಇದು ಹಿಂದಿನ ವರ್ಷಗಳಿಗಿಂತ ಹೆಚ್ಚು.
ಅನ್ ಲೈನ್ ವಂಚನೆಗೆ ಹಲವು ಮುಖ-
ಕೆವೈಸಿ ಹಾಗೂ ಪ್ಯಾನ್ ಕಾರ್ಡ್ ಮಾಹಿತಿಗಳನ್ನು ಅಪ್ಡೇಟ್ ಮಾಡುವಂತೆ ವಂಚಕರು ಕಳುಹಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ ಇವರು ಹಣ ಕಳೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಅಥವಾ ಡಿಜಿಟಲ್ ಪಾವತಿ ಪ್ರಮಾಣ ಹೆಚ್ಚಿದಂತೆ ಆನ್ ಲೈನ್ ವಂಚನೆ ಪ್ರಕರಣಗಳು ಕೂಡ ಏರಿಕೆಯಾಗಿವೆ. ಆನ್ ಲೈನ್ ವಂಚಕರು ವಂಚನೆಗೆ ಹೊಸ ಹೊಸ ವಿಧಾನಗಳನ್ನು ಬಳಸುವ ಮೂಲಕ ಅಮಾಯಕರ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ. ಅದೆಷ್ಟೇ ವಿದ್ಯಾವಂತರಾಗಿದ್ದರೂ ಒಂದು ಕ್ಷಣ ಮೈ ಮರೆತರೂ ಇಂಥ ವಂಚಕರ ಬಲೆಯಲ್ಲಿ ಸಿಲುಕುವುದು ಗ್ಯಾರಂಟಿ. ಇಂಥ ಫಿಶಿಂಗ್ ಕ್ರೈಮ್ ಗಳಿಗೆ ವಂಚಕರು ನಾನಾ ಮಾರ್ಗಗಳನ್ನು ಅನುಸರಿಸುತ್ತಾರೆ. ಬ್ಯಾಂಕ್ ಹೆಸರಿನಲ್ಲಿ ಕರೆ ಮಾಡುವುದು, ಬ್ಯಾಂಕ್ ವೆಬ್ ಸೈಟ್ ಗಳನ್ನೇ ಹೋಲುವ ನಕಲಿ ಲಿಂಕ್ ಗಳನ್ನು ಕಳುಹಿಸಿ ಆನ್ ಲೈನ್ ಬ್ಯಾಂಕಿಂಗ್ ಐಡಿ, ಪಾಸ್ ವರ್ಡ್ ಮಾಹಿತಿಗಳನ್ನು ಕಲೆ ಹಾಕುವ ಮೂಲಕ ವಂಚಿಸಲಾಗುತ್ತದೆ.
ವ್ಯಾಪಾರಿಗಳಿಗೂ ವಂಚಿಸುತ್ತಾರೆ –
ಇಂದು ಬೀದಿಬದಿ ತರಕಾರಿ, ಹಣ್ಣುಗಳ ವ್ಯಾಪಾರಿಗಳಿಂದ ಹಿಡಿದು ಸೂಪರ್ ಮಾರ್ಕೆಟ್ ತನಕ ಎಲ್ಲ ಕಡೆಯೂ ಯುಪಿಐ ಪಾವತಿ ನಡೆಯುತ್ತದೆ. ಗ್ರಾಹಕರು ಯುಪಿಐ ಮೂಲಕ ಪಾವತಿ ಮಾಡಿದ ತಕ್ಷಣ ವ್ಯಾಪಾರಿಯ ಮೊಬೈಲ್ ಗೆ ಆ ಕುರಿತ ಸಂದೇಶ ಬರುತ್ತದೆ. ಆದರೆ, ಕೆಲವು ವ್ಯಾಪಾರಿಗಳು ಗ್ರಾಹಕರು ಪಾವತಿ ಮಾಡಿದ ತಕ್ಷಣ ಹಣ ತಮ್ಮ ಖಾತೆಗೆ ಬಂದಿದೆಯೋ ಇಲ್ಲವೋ ಎಂದು ಚೆಕ್ ಮಾಡೋದಿಲ್ಲ. ಇಂಥ ವ್ಯಾಪಾರಿಗಳನ್ನು ಕೂಡ ವಂಚಕರು ಟಾರ್ಗೆಟ್ ಮಾಡಿದ ಪ್ರಕರಣಗಳು ಕೂಡ ವರದಿಯಾಗಿವೆ. ಯುಪಿಐ ಪಾವತಿಗೆ ಕ್ಯುಆರ್ ಕೋಡ್ ಬಳಸಲಾಗುತ್ತದೆ. ಈ ಕ್ಯುಆರ್ ಕೋಡ್ ಬೋರ್ಡ್ ಗಳನ್ನೇ ಬದಲಾಯಿಸಲಾಗುತ್ತದೆ. ಆಗ ಹಣ ವ್ಯಾಪಾರಿ ಖಾತೆಗೆ ಹೋಗದೆ ವಂಚಕರ ಖಾತೆ ಸೇರುತ್ತೆ.
ಡೇಟಾ ಬ್ರೋಕರ್ ಗಳು
- ಡೇಟಾ ಆನ್ ಸೇಲ್
ಇತ್ತೀಚೆಗೆ, ಡೇಟಾ ಬ್ರೋಕರ್ ಗಳೆಂಬ ಹೆಸರಿನಲ್ಲಿ ಹೊಸ ತಂಡಗಳು ರಚನೆಯಾಗಿವೆ. ಇವರು, ಆನ್ ಲೈನ್ ಮೂಲಕ ಕೆಲವಾರು ಅಂತರ್ಜಾಲ ಆಫರ್ ಗಳನ್ನು ಗ್ರಾಹಕರಿಗೆ ನೀಡುತ್ತವೆ. ಇವರು ನೆಟ್ ಸೌಲಭ್ಯಗಳನ್ನು ನೀಡುವಂತೆ ನಟಿಸಿ ಗ್ರಾಹಕರ ಅಮೂಲ್ಯ ಮಾಹಿತಿಗಳನ್ನು ಕೆಲವರಿಗೆ ಮಾರಾಟ ಮಾಡಿಕೊಳ್ಳುತ್ತಾರೆ.
ಕಾಂಪ್ಲೆಕ್ಸ್ ಡೇಟಾ ವೆಬ್ ಮಾಹಿತಿ ಕದಿಯುವ ಚೋರರು ಕೆಲವಾರು ವೆಬ್ ಸೈಟ್ ಗಳನ್ನು ಸೈನ್ ಅಪ್ ಮಾಡುವಾಗ ನಾವು ನಮ್ಮ ಕೆಲವು ಮಾಹಿತಿಗಳನ್ನು ನೀಡುತ್ತೇವೆಲ್ಲವೇ? ಇಂಥ ಮಾಹಿತಿಗಳನ್ನು ಕದಿಯಲಿಕ್ಕೆಂದೇ ಕೆಲವಾರು ಹ್ಯಾಕರ್ ಗಳು ಹುಟ್ಟಿಕೊಂಡಿದ್ದಾರೆ. ಇಂಥವರು, ನಿಮ್ಮ ಯೂಸರ್ ನೇಮ್, ಪಾಸ್ ವರ್ಡ್ ಇತ್ಯಾದಿ ಮಾಹಿತಿಗಳನ್ನು ಕಾಣದ ಕೈಗಳಿಗೆ ನೀಡಬಲ್ಲರು.
ನಕಲಿ ಆಧಾರ್ ಸಂಖ್ಯೆ ಸೃಷ್ಟಿ
ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನೇ ಆನ್ ಲೈನ್ ಮೂಲಕ ಕದ್ದು, ನಿಮ್ಮ ಸಂಖ್ಯೆಯ ಮೂಲ ಅಡಕದಲ್ಲಿರುವ ನಿಮ್ಮ ಹಸ್ತಾಕ್ಷರ, ಫೋಟೋ, ಬೆರಳಿನ ಗುರುತು ಎಲ್ಲವನ್ನೂ ಬೇರೆಡೆ ನಕಲು ಮಾಡಿ, ಆನಂತರ ನಿಮ್ಮೆಲ್ಲಾ ಬಯೋಮೆಟ್ರಿಕ್ ಮಾಹಿತಿಗಳನ್ನು ಬದಲಾಯಿಸುತ್ತಾರೆ. ಆದರೆ, ಆಧಾರ್ ಕಾರ್ಡ್ ಅನ್ನು ಸಾಮಾನ್ಯವಾಗಿ ನೀಡುವ ವಿಶೇಷ ಗುರುತಿನ ಚೀಟಿ ಪ್ರಾಧಿಕಾರದಲ್ಲಿ (ಯುಐಎಐ) ನಿಮ್ಮ ಮೂಲ ಮಾಹಿತಿ ಹಾಗೇ ಇರುತ್ತದೆ.
ಆದರೆ, ಇಲ್ಲಿ ತಮಗೆ ಬೇಕಾದಂತೆ ಮಾಹಿತಿಯನ್ನು ತಿದ್ದುಪಡಿ ಮಾಡುವ ಚೋರರು, ನಿಮ್ಮ ಆಧಾರ್ ಸಂಖ್ಯೆಯ ಮೂಲಕವೇ ಕೆಲವಾರು ವ್ಯವಹಾರಗಳನ್ನು ಮಾಡುತ್ತಾರೆ. ಆದರೆ, ಅಂಥ ವ್ಯವಹಾರಗಳು ತನಿಖೆಗೆ ಒಳಗಾದಾಗ ತನಿಖಾಧಿಕಾರಿಗಳು ನಿಮ್ಮ ಬಾಗಿಲನ್ನೇ ತಟ್ಟುವಂತೆ ತಂತ್ರಜ್ಞಾನ ಸಿದ್ಧಪಡಿಸಿರುತ್ತಾರೆ.
ಬ್ಯಾಂಕ್ ಅಕೌಂಟ್ ಗಳ ಆಧಾರ್ ಲಿಂಕ್ ಮಾಡೋರ ಮೇಲೆ ಕಣ್ಣು-
ಈಗ, ಗ್ಯಾಸ್ ಸಿಲಿಂಡರ್ ಸೌಲಭ್ಯದಿಂದ ಹಿಡಿದು ಶಿಕ್ಷಣದವರೆಗೆ ಸಿಗುವ ಸರ್ಕಾರದ ಬಹುತೇಕ ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಇದರ ಜತೆಯಲ್ಲೇ, ಖಾಸಗಿ ಕಂಪನಿಗಳೂ ಆಧಾರ್ ಕಾರ್ಡ್ ತಮ್ಮ ಸೇವೆಗಳಿಗೆ ಆಧಾರ್ ಕಾರ್ಡ್ ಕೇಳುತ್ತಿವೆ. ಇಲ್ಲಿಯೂ ತಮ್ಮ ಕೈಚಳಕ ತೋರುತ್ತಿರುವ ಚೋರರು, ನಾವು ಯಾವುದೇ ಖಾಸಗಿ ಕಂಪನಿಗಳಿಗೆ ನೀಡುವ ಆಧಾರ್ ಕಾರ್ಡ್ ಸಂಖ್ಯೆಯನ್ನು ಎತ್ತಲು ಹೊಂಚು ಹಾಕುತ್ತವೆ ಎನ್ನಲಾಗಿದೆ. ಅಲ್ಲದೆ, ಬ್ಯಾಂಕ್ ಅಕೌಂಟ್ ಗಳಿಗೆ ಆಧಾರ್ ಲಿಂಗ್ ಮಾಡಿಸುವ ನಕಲಿ ಸೇವಾ ಕಂಪನಿಗಳ ಮೂಲಕವೂ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆಯಲು ಅವು ಮುಂದಾಗಿವೆ ಎಂದು ಹೇಳಲಾಗಿದೆ .
ಸುಶಿಕ್ಷಿತರೂ ಬಲಿ
ಇನ್ನು ಆನ್ಲೈನ್ ವಂಚನೆಗೆ ಸುಶಿಕ್ಷಿತರೂ ಬಲಿಯಾಗುತ್ತಿದ್ದಾರೆ. ಅಲ್ಲದೆ ಹಿರಿಯ ನಾಗರೀಕರು, ಮಹಿಳೆಯರನ್ನೂ ವಂಚಕರು ಬಲಿ ಬೀಳುತ್ತಿದ್ದಾರೆ. ವಂಚಕರು ಮಾಡಿದ ಕರೆಯ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡಲು ಸಾಧ್ಯವಾಗದೆ ತಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಕಳೆದುಕೊಂಡವರಿದ್ದಾರೆ. ಅಲ್ಲದೆ ಕೆಲವು ಆಪ್ಗಳನ್ನು ಡೌನ್ಲೋಡ್ ಮಾಡಿಕೊಳ್ಳುವುದರಿಂದಲೂ ಆನ್ಲೈನ್ ವಂಚನೆಗೆ ಬಲಿಯಾಗುತ್ತಿದ್ದಾರೆ. ಕೆಲವರು ಪೊಲೀಸರಿಗೆ ದೂರು ನೀಡಿದರೆ, ಮತ್ತೆ ಕೆಲವರು ಇದನ್ನು ಗೌಪ್ಯವಾಗಿ ಇಡುತ್ತಿದ್ದಾರೆ. ಹಾಗಾದರೆ ಇಂತಹ ವಂಚಕರಿಂದ ನಮ್ಮ ನಮ್ಮ ಹಣ ,ವೈಯಕ್ತಿಕ ಮಾಹಿತಿಯನ್ನು ಕಾಪಾಡಿಕೊಳ್ಳುವ ಅತೀಅವಶ್ಯಕವಾಗಿದೆ , ಅದಕ್ಕಾಗಿ ಮುನ್ನಾಚರಿಕ ಕ್ರಮವನ್ನು ಕೈಗೊಳ್ಳಬೇಕು.
ಎಚ್ಚರಿಕ ಕ್ರಮಗಳು
ಡೆಬಿಟ್/ ಕ್ರೆಡಿಟ್ ಕಾರ್ಡ್ ಬಳಸುವಾಗ ಎಚ್ಚರಿಕೆ –
ಯಾರೋ ನಿಮ್ಮ ಹುಟ್ಟುಹಬ್ಬ ಅಥವಾ ವಿವಾಹ ವಾರ್ಷಿಕೋತ್ಸವಕ್ಕೆ ಸರ್ಪ್ರೈಸ್ ಆಗಿ ಉಡುಗೊರೆ ಕಳುಹಿಸಿರಬಹುದು. ಆನ್ ಲೈನ್ ಬುಕ್ಕಿಂಗ್ ಮೂಲಕ ಈ ಉಡುಗೊರೆ ನಿಮ್ಮ ಮನೆ ಬಾಗಿಲಿಗೆ ಬಂದಿರುತ್ತದೆ. ಇಂಥ ಸಮಯದಲ್ಲಿ ಡೆಲಿವರಿ ಬಾಯ /ಗರ್ಲ್ ನಿಮ್ಮ ಬಳಿ ಸರ್ವೀಸ್ ಚಾರ್ಜ್ ನೀಡುವಂತೆ ಕೇಳಬಹುದು. 50ರೂ. ಅಥವಾ ಅದಕ್ಕಿಂತಲೂ ಕಡಿಮೆ ಮೊತ್ತದ ಸರ್ವೀಸ್ ಚಾರ್ಜ್ ಪಾವತಿಸಲು ನೀವು ಖಂಡಿತಾ ಹಿಂದೆಮುಂದೆ ನೋಡೋದಿಲ್ಲ. ಆದರೆ, ಅವರು ನಗದು ತೆಗೆದುಕೊಳ್ಳದೆ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿ ಮಾಡಲು ಹೇಳಿದ್ರೆ ನೀವು ಸ್ವಲ್ಪ ಯೋಚಿಸೋದು ಅಗತ್ಯ. ಏಕೆಂದ್ರೆ ಕೆಲವರು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಕ್ಲೋನಿಂಗ್ ನಡೆಸಿ ನಿಮಗೆ ವಂಚನೆ ಮಾಡುವ ಸಾಧ್ಯತೆಯಿರುತ್ತದೆ. ಹೀಗಾಗಿ ಅನುಮಾನ ಹುಟ್ಟಿಸುವ ಅಥವಾ ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಸ್ವೈಪ್ ಮಾಡುವ ಮುನ್ನ ಯೋಚಿಸಿ.
ಅನಾಮಿಕ ಕರೆಗಳ ಬಗ್ಗೆ ಎಚ್ಚರ-
ಅಪರಿಚಿತ ವ್ಯಕ್ತಿಗಳು ಬ್ಯಾಂಕ್ ಹೆಸರಿನಲ್ಲಿ ನಿಮಗೆ ಕರೆ ಮಾಡಿ ಕೆವೈಸಿ ಮಾಹಿತಿಗಳನ್ನು ನೀಡುವಂತೆ ಕೇಳಬಹುದು. ಈ ಮಾಹಿತಿ ನೀಡದಿದ್ರೆ ನಿಮ್ಮ ಬ್ಯಾಂಕ್ ಖಾತೆ ಕ್ಲೋಸ್ ಮಾಡೋದಾಗಿಯೂ ತಿಳಿಸಬಹುದು. ಆದರೆ, ಇಂಥ ಕರೆಗಳಿಗೆ ಯಾವುದೇ ಕಾರಣಕ್ಕೂ ಉತ್ತರಿಸಲು ಹೋಗಬೇಡಿ. ವಂಚಕರು ಹೆಚ್ಚಾಗಿ ಪಿಂಚಣಿ ಪಡೆಯುತ್ತಿರುವ ಹಿರಿಯ ನಾಗರಿಕರನ್ನೇ ಗುರಿಯಾಗಿಸಿಕೊಂಡು ಕರೆ ಮಾಡಿ ಅವರ ಖಾತೆಗಳಿಗೆ ಕನ್ನ ಹಾಕುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಿವೆ. ಆದಕಾರಣ ಈ ಬಗ್ಗೆ ಎಚ್ಚರ ವಹಿಸಿ. ನೆನಪಿಡಿ, ಯಾವುದೇ ಬ್ಯಾಂಕ್ ಸಿಬ್ಬಂದಿ ನಿಮಗೆ ಕರೆ ಮಾಡಿ ಬ್ಯಾಂಕ್ ಖಾತೆಗಳ ಮಾಹಿತಿ ಅಥವಾ ಒಟಿಪಿ ನೀಡುವಂತೆ ಕೇಳುವುದಿಲ್ಲ. ಆದಕಾರಣಕ್ಕೆ ಯಾವುದೇ ಕಾರಣಕ್ಕೂ ಪ್ರಮುಖ ಮಾಹಿತಿಗಳು ಹಾಗೂ ಒಟಿಪಿ ಹಂಚಿಕೊಳ್ಳಬೇಡಿ.
ಲಿಂಕ್ ಗಳ ಮೇಲೆ ಕ್ಲಿಕ್ ಮಾಡ್ಬೇಡಿ
ಇ-ಮೇಲ್ ಅಥವಾ ಎಸ್ ಎಂಎಸ್ ನಲ್ಲಿರುವ ಲಿಂಕ್ ಗಳ ಮೇಲೆ ಕ್ಲಿಕ್ ಮಾಡ್ಬೇಡಿ. ಈ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಬ್ಯಾಂಕ್ ವೆಬ್ ಸೈಟ್ ಹೋಲುವ ನಕಲಿ ವೆಬ್ ಸೈಟ್ ತೆರೆದುಕೊಳ್ಳುತ್ತದೆ. ಅಲ್ಲಿ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮಾಹಿತಿಗಳನ್ನು ಭರ್ತಿ ಮಾಡುವಂತೆ ಕೇಳಲಾಗುತ್ತದೆ. ನೀವು ಅದನ್ನು ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ಎಂದು ಭಾವಿಸಿ ಖಾತೆಗೆ ಸಂಬಂಧಿಸಿದ ಮಾಹಿತಿ ಹಂಚಿಕೊಂಡರೆ, ವಂಚಕರು ಅದನ್ನೇ ಬಳಸಿಕೊಂಡು ನಿಮ್ಮ ಖಾತೆಗೆ ಕನ್ನ ಹಾಕುತ್ತಾರೆ.
ದೇಶಾದ್ಯಂತ ಸೈಬರ್ ಅಪರಾಧಗಳಲ್ಲಿ ಭಾಗಿಯಾಗಿದ್ದ ಸುಮಾರು 6.69 ಲಕ್ಷ ಸಿಮ್‌ಕಾರ್ಡ್ ಗಳನ್ನು ಮತ್ತು ಕೇಂದ್ರ ಸರಕಾರ ತಿಳಿಸಿದೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖೀತ ರೂಪದಲ್ಲಿ ಉತ್ತರಿಸಿದ ಗೃಹ ಖಾತೆ ಸಹಾಯಕ ಸಚಿವರು – “ಭಾರತೀಯ ಮೊಬೈಲ್ ಸಂಖ್ಯೆಗಳನ್ನು ಬಳಸಿ ಅಂತಾರಾಷ್ಟ್ರೀಯ ಸೈಬರ್ ಚೋರರು ಜನರಿಗೆ ನಕಲಿ ಕರೆ ಮಾಡುತ್ತಿದ್ದಾರೆ.ಆದರೆ ಅಂತಹ ಸಂಖ್ಯೆಗಳನ್ನು ನಿರ್ಬಂಧಿಸಲು ಸರಕಾರ ಹಾಗೂ ಟೆಲಿಕಾಂ ಕಂಪೆನಿಗಳು ಸೂಕ್ತ ವ್ಯವಸ್ಥೆ ನಿರ್ಮಿಸಿವೆ. ಮತ್ತು ನ.15, 2024ರ ವರೆಗೆ ಪೊಲೀಸರ ವರದಿಯನುಸಾರ ಒಟ್ಟು 6.69 ಲಕ್ಷ ಸಿಮ್,1.32 ಲಕ್ಷ ಐಎಮ್‌ಐಎಗಳನ್ನು ನಿರ್ಬಂಧಿಸಿರುವುದಾಗಿ ನಿರ್ಬಂಧಿಸಲಾಗಿದೆ’ ಎಂದು ಹೇಳಿದ್ದಾರೆ.ಅಂದರೆ ಯಾವ ಮಟ್ಟದಲ್ಲಿ ವಂಚಕರು ಕಾರ್ಯಪ್ರವರ್ತರಾಗಿದ್ದಾರೆ ತಿಳಿಯಬಹುದಾಗಿದೆ.
ಸೈಬರ್ ವಂಚನೆ ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಸಂತ್ರಸ್ತರ ಅನುಕೂಲಕ್ಕಾಗಿ ಪ್ರತಿ ಜಿಲ್ಲೆಗಳಲ್ಲಿ ಮತ್ತು ನಗರ ವ್ಯಾಪ್ತಿಗಳಲ್ಲಿ ಒಂದೊಂದು ಸೈಬರ್ ಠಾಣೆಗಳನ್ನು ತೆರೆಯಲಾಗಿದೆ. ಅಲ್ಲದೆ 24 ಸಿಇಎನ್ ಪೊಲೀಸ್ ಠಾಣೆಗಳು ಕಾರ್ಯ ನಿರ್ವಹಿಸುತ್ತಿವೆ.
ಇನ್ನು ಸೈಬರ್ ಕ್ರೈ ಪೊಲೀಸ್ ಠಾಣೆಗಳಲ್ಲಿನ ಸಿಬ್ಬಂದಿಗೆ ಸೈಬರ್ ಅಪರಾಧಗಳ ತನಿಖಾ ಕ್ರಮಗಳ ಬಗ್ಗೆ ತರಬೇತಿಯನ್ನು ನೀಡಲಾಗುತ್ತಿದೆ. ಅಲ್ಲದೆ ಕೇಂದ್ರ ಸರ್ಕಾರ ಕೂಡಾ ಸಾರ್ವಜನಿಕ ಅನುಕೂಲಕ್ಕಾಗಿ ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೊರ್ಟಲ್ ಆರಂಭಿಸಿದೆ. ಭಾರತದಲ್ಲಿ ಸೈಬರ್ ಅಪರಾಧಗಳ ಕುರಿತು ದೂರು ನೀಡುವುದಕ್ಕೆ ವ್ಯವಸ್ಥೆ ಇದೆ. ಭಾರತೀಯ ಸೈಬರ್ ಅಪರಾಧ ದೂರು ಪೋರ್ಟಲ್ನಲ್ಲಿ (cybercrime.gov.in) ದಿನದ 24 ಗಂಟೆಯೂ ದೂರು ದಾಖಲಿಸಲು ಅವಕಾಶವಿದೆ. ಹೂಡಿಕೆ ವಂಚನೆಯಂಥ ಪ್ರಕರಣಗಳಲ್ಲಿ ತಕ್ಷಣದ ಪ್ರತಿಕ್ರಿಯೆಗಾಗಿ ರಾಷ್ಟ್ರೀಯ ಸೈಬರ್ ಅಪರಾಧಗಳ ಸಹಾಯವಾಣಿ ‘1930’ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ವಂಚನೆಗೆ ಒಳಗಾಗಿದ್ದು ತಿಳಿದ ತಕ್ಷಣವೇ ಈ ಸಹಾಯವಾಣಿಗೆ ಕರೆ ಮಾಡಿದರೆ, ಹಣ ವರ್ಗಾವಣೆ ಆಗುವುದನ್ನು ಅಧಿಕಾರಿಗಳು ತಡೆಯುತ್ತಾರೆ.
ಸ್ಥಳೀಯ ಪೊಲೀಸ್ ಠಾಣೆ ಅಥವಾ ಸೈಬರ್ ಅಪರಾಧ ಪೊಲೀಸ್ ಠಾಣೆಗಳಲ್ಲಿಯೂ ಸಾರ್ವಜನಿಕರು ದೂರು ದಾಖಲಿಸಬಹುದು. ದೂರು ದಾಖಲಿಸುವ ವೇಳೆ ಎಲ್ಲ ರೀತಿ ಸಾಕ್ಷ್ಯಗಳು ಮತ್ತು ದಾಖಲೆಗಳು ಇರಬೇಕಾಗುತ್ತದೆ. ಹೂಡಿಕೆ ವಂಚನೆಯಂಥ ಪ್ರಕರಣಗಳಲ್ಲಿ ವಂಚನೆಗೆ ಒಳಗಾಗಿದ್ದು ತಿಳಿದ ತಕ್ಷಣವೇ ದೂರು ದಾಖಲಿಸಿದರೆ, ವಂಚಕರನ್ನು ಪತ್ತೆ ಮಾಡುವುದು, ಕಳೆದುಕೊಂಡ ಹಣವನ್ನು ಮರಳಿ ಪಡೆಯುವುದು ಸುಲಭವಾಗುತ್ತದೆ.
ಆನ್ಲೈನ್ ವಂಚನೆಯ ಕುರಿತಾಗಿ ಹಲವು ವರ್ಷಗಳಿಂದ ಅರಿವು ಮೂಡಿಸುವ ಪ್ರಯತ್ನ ನಡೆಸುತ್ತಿದೆ. ಹಾಗಿದ್ದರೂ ದೊಡ್ಡಮಟ್ಟದ ಯಶಸ್ವು ಇದರಿಂದ ಕಂಡಿಲ್ಲ. ಮೋಸ ಹೋಗುವವರು ಇರುವ ವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂಬುದು ಸತ್ಯ.
ಡಾ.ಗುರುಪ್ರಸಾದ ರಾವ್ ಹವಲ್ದಾರ್
ಲೇಖಕರು
ಮರಿಯಮ್ಮನಹಳ್ಳಿ
More Stories
ಮುರುಡೇಶ್ವರ ಬೀಚ್ ದುರಂತ: ನಾಲ್ವರು ಬಾಲಕಿಯರು ನೀರುಪಾಲು, ಪ್ರಾಂಶುಪಾಲು ಅಮಾನತು, 6 ಮಂದಿ ವಜಾ
ಎಸ್.ಎಂ.ಕೃಷ್ಣ ಅಂತ್ಯಕ್ರಿಯೆ: ಹುಟ್ಟೂರ ಸೋಮನಹಳ್ಳಿಯಲ್ಲಿ ಗಣ್ಯರಿಂದ ಅಂತಿಮ ನಮನ
ಪದವೀಧರರಿಗೆ ಸುವರ್ಣಾವಕಾಶ: ಸುಪ್ರೀಂಕೋರ್ಟ್ನಲ್ಲಿ 107 ಹುದ್ದೆಗಳ ನೇಮಕಾತಿ