ಮಾರುಕಟ್ಟೆಯಲ್ಲಿ ಈರುಳ್ಳಿ ದರ ಈಗ
ಕೆ ಜಿ 100 ರು. ಬೆಳೆ ಬೆಳೆದ ರೈತರಿಗೆ ಒಳ್ಳೆ ದರ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ಹೆಚ್ಚಿನ ದರಕ್ಕೆ ಈರುಳ್ಳಿ ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರಿಗೆ ಈರುಳ್ಳಿ ಕಣ್ಣೀರು ತರಿಸಿದೆ. ದಲ್ಲಾಳಿಗಳು ಕಡಿಮೆ ದರಕ್ಕೆ ಈರುಳ್ಳಿ ಖರೀದಿ ಮಾಡಲು ಮುಂದಾಗುತ್ತಿರುವದರಿಂದ ಹೆಚ್ಚಿನ ದರ ಅನ್ನದಾತರಿಗೆ ಸಿಗುತ್ತಿಲ್ಲ.
ಪೂರೈಕೆ ಕೊರತೆ ಹಾಗೂ ಮಧ್ಯವರ್ತಿಗಳ ಹಾವಳಿಯಿಂದ ದಿನ ನಿತ್ಯ ಅಡುಗೆಯಲ್ಲಿ ಬಳಸುವ ಈರುಳ್ಳಿ ಬೆಲೆ ಕೆ.ಜಿ.ಗೆ 100 ರು. ಗಡಿ ದಾಟಿದೆ. ಬೆಲೆ ದುಪ್ಪಟ್ಟಾಗಿದ್ದರೂ ರೈತರಿಗೆ ಮಾತ್ರ ಲಾಭ ಸಿಗುತ್ತಿಲ್ಲ!
ಕಳೆದ ಒಂದು ವಾರದಿಂದ ಸತತವಾಗಿ ಏರಿಕೆ ಕಾಣುತ್ತಿರುವ ಈರುಳ್ಳಿ ಬೆಲೆ ಕೆ.ಜಿ.ಗೆ 120 ರೂ. ವರೆಗೆ ಬೆಲೆ ದಾಖಲಿಸಿಕೊಂಡಿದೆ. ಯಶವಂತಪುರ ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 70 ರಿಂದ 75 ರೂ. ನಿಗದಿಯಾಗಿದೆ. ಪ್ರದೇಶವಾರು ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟ ಆಧರಿಸಿ ಪ್ರತಿ ಕೆ.ಜಿ. 40 ರೂ.ನಿಂದ 120 ರೂ.ವರೆಗೆ ಮಾರಾಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಚಿಲ್ಲರೆ ವ್ಯಾಪಾರಿಗಳು ಸಾಗಣೆ ವೆಚ್ಚ, ಕೂಲಿ ಎಲ್ಲ ಸೇರಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆದರೆ, ಬೆಲೆ ಏರಿಕೆಯ ಖುಷಿಯಲ್ಲಿದ್ದ ರೈತರಿಗೆ ನಿರಾಸೆಯಾಗಿದ್ದರೆ, ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ. ಈ ಮಧ್ಯೆ ಸಂಪೂರ್ಣ ಲಾಭ ಮಧ್ಯವರ್ತಿಗಳ ಪಾಲಾಗುತ್ತಿದೆ.
ಎಪಿಎಂಸಿಯಲ್ಲಿ ದಲ್ಲಾಳಿಗಳು ಮಾರುಕಟ್ಟೆಗೆ ಬರುವ ರೈತರ ಈರುಳ್ಳಿ ಖರೀದಿಸುವಾಗ ಕೇವಲ ಎರಡೇ ಎರಡು ಕ್ವಿಂಟಾಲ್ ಗೆ 5000 ರೂ. ಮೇಲ್ಪಟ್ಟು ಖರೀದಿಸುತ್ತಿದ್ದಾರೆ. ಅದನ್ನೇ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣ ಹಾಗೂ ಎಪಿಎಂಸಿ ದರಪಟ್ಟಿಯಲ್ಲಿ ನಮೂದಿಸುತ್ತಾರೆ. ಇನ್ನುಳಿದಂತೆ ಬಹುತೇಕ ಈರುಳ್ಳಿಯನ್ನು 500 ರಿಂದ 2000 ರವರೆಗೆ ಖರೀದಿಸಲಾಗುತ್ತಿದೆ.
‘ಜನರು ಕೊಳ್ಳುವ ಬೆಲೆ ನಮಗೆ ಎಪಿಎಂಸಿಯಲ್ಲಿ ಸಿಗುವುದಿಲ್ಲ. ಹೊರಗಡೆ ಕೆ.ಜಿ.ಗೆ 100 ರು. ಇದ್ದರೆ ನಮಗೆ 50-60 ರು. ಸಿಕ್ಕಿದರೆ ಹೆಚ್ಚು. ಶೇ.80 ರಷ್ಟು ಲಾಭ ದಲ್ಲಾಳಿಗಳ ಪಾಲಾಗುತ್ತಿದೆ. ಸರ್ಕಾರ ಮಧ್ಯಪ್ರವೇಶಿಸಿ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು’ ಎಂದು ರೈತರು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಮಳೆಯ ಆರ್ಭಟಕ್ಕೆ ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ಬೆಳೆ ನಾಶವಾಗಿದೆ. ಸದ್ಯ ರಾಜ್ಯದ ವಿವಿಧೆಡೆ ಹಾಗೂ ಹೊರ ರಾಜ್ಯಗಳ ಗೋದಾಮಿನಲ್ಲಿ ದಾಸ್ತಾನಿರುವ ಈರುಳ್ಳಿ ಮಾತ್ರ ರೈತರು ಮಾರುಕಟ್ಟೆಗೆ ತರುತ್ತಿದ್ದಾರೆ. ವಿವಿಧ ಜಿಲ್ಲೆಗಳಿಂದ ಮಾರುಕಟ್ಟೆಗೆ ಬರುತ್ತಿರುವ ಬೆಳೆಯೂ ಉತ್ತಮ ಸ್ಥಿತಿಯಲ್ಲಿಲ್ಲ. ಹೊಸ ಬೆಳೆ ಬರುವವರೆಗೆ ಬೆಲೆ ಏರಿಕೆ ಸಾಮಾನ್ಯ. ಅತಿ ಹೆಚ್ಚು ಮಳೆಯಾದರೆ ಇನ್ನಷ್ಟು ಬೆಲೆ ಏರಿಕೆಯಾಗಬಹುದು ಎನ್ನುತ್ತಾರೆ ವ್ಯಾಪಾರಿಗಳು.
More Stories
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು