ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.
ಹೊಸ ವರ್ಷ ಎಂದರೇನು??!!
ಡಿಸೆಂಬರ್ ನ ಕೊನೆಯ ದಿನವೇ,,,? ಜನವರಿಯ ಮೊದಲ ದಿನವೇ? ಹಳೆಯ ಕ್ಯಾಲೆಂಡರ್ ತನ್ನ ಅಸ್ಮಿತೆಯನ್ನು ಕಳೆದುಕೊಂಡು ರದ್ದಿ ಪುಸ್ತಕಗಳಲ್ಲಿ ಜಾಗೆ ಕಂಡುಕೊಂಡಿದ್ದೇ?? ಹೊಸ ಕ್ಯಾಲೆಂಡರ್ ನಡು ಮನೆಯ ಗೋಡೆಯನ್ನು ಅಲಂಕರಿಸಿದ್ದೇ?? ಅಥವಾ ಋತು ಬದಲಾವಣೆಯಾಗಿ ನಿಸರ್ಗ ಸಹಜವಾಗಿ ಮಾಮರದಲ್ಲಿ ಎಲೆ ಚಿಗುರಿ, ಕೋಗಿಲೆಗಳು ಕೂಗಿ, ವಸಂತನ ಆಗಮನವನ್ನು ಸಾರುವ ದಿನವೇ? ನಿಜವಾದ ಅರ್ಥದಲ್ಲಿ ಭಾರತೀಯರಾದ ನಮಗೆ ಋತುಮಾನಗಳ ಚರ್ಯೆಯ ಮೇಲೆ ಬದಲಾಗುವ ಮಾಸಗಳಲ್ಲಿ ವಸಂತ ಮಾಸ ಪ್ರಾರಂಭವಾಗುವ ಯುಗಾದಿಯ ದಿನವೇ ನಮ್ಮ ನಿಜವಾದ ಹೊಸ ವರುಷ. ಆದರೆ ಜಾಗತೀಕರಣದ ಈ ಪ್ರವಾಹದಲ್ಲಿ ನಾವು ಕೂಡ ತೇಲುತ್ತಿದ್ದೇವೆ ಆದ್ದರಿಂದ ಇಡೀ ವಿಶ್ವದಲ್ಲಿ ಆಚರಿಸುವ ಡಿಸೆಂಬರ್ 31ರ ರಾತ್ರಿ 12 ಗಂಟೆಗೆ ಹಳೆ ವರ್ಷವನ್ನು ಹಿಂದಟ್ಟಿ ಹೊಸ ವರ್ಷವನ್ನು ಸ್ವಾಗತಿಸುತ್ತೇವೆ.
ನಿನ್ನೆ ಎಂಬುದು ಕಳೆದು ಹೋಗಿದೆ. ನಾಳೆಯನ್ನು ಕಂಡವರಾರು?? ಇಂದಿನ ದಿನ ನಮ್ಮ ಕಣ್ಣ ಮುಂದೆ ಇದೆ. ಆದ್ದರಿಂದ ನಮ್ಮ ಈ ದಿನವನ್ನು ಸುಂದರವಾಗಿಸುವ, ಸುಭದ್ರವಾಗಿಸುವ ಕೆಲಸ ನಮ್ಮಿಂದಾಗಬೇಕಾಗಿದೆ. ಹೊಸ ವರ್ಷದ ಈ ದಿನದಂದು ಹೊಸತಿನ ಹುಡುಕಾಟಕ್ಕೆ ಸಜ್ಜಾಗಲೇಬೇಕಾಗಿದೆ.
ಡಿಸೆಂಬರ್ 31ರ ಮಧ್ಯರಾತ್ರಿ 12 ಗಂಟೆಯವರೆಗೆ ಐಷಾರಾಮಿ ರೆಸ್ಟೋರೆಂಟ್ ಗಳಲ್ಲಿ,ಹೋಟೆಲ್ಗಳಲ್ಲಿ ಭೂರಿ ಭೋಜನ ಮಾಡಿ ತಿಂದು ಕುಡಿದು ಕುಣಿದು, ಕುಪ್ಪಳಿಸಿ ಮಧ್ಯರಾತ್ರಿ 12 ಗಂಟೆಗೆ ಹ್ಯಾಪಿ ನ್ಯೂ ಇಯರ್ ಎಂದು ಜೋರಾಗಿ ಕೂಗುತ್ತಾ ಕಿವಿಗಡಚಿಕ್ಕುವಂತಹ ಸಂಗೀತದ ನಾದಕ್ಕೆ ತುಂಡು ಬಟ್ಟೆಗಳನ್ನು ಧರಿಸಿ, ಸರ್ವಾಂಗಗಳನ್ನು ಕುಣಿಸುತ್ತಾ ಮಧ್ಯದ ಅಮಲಿನಲ್ಲಿ ಮರುದಿನ ಮುಂಜಾನೆ ಯಾವುದೋ ಹೊತ್ತಿಗೆ ಏಳುವುದು ಖಂಡಿತವಾಗಿಯೂ ಹೊಸ ವರ್ಷದ ಆಚರಣೆ ಅಲ್ಲ. ಸದ್ಯದ ಯುವ ಜನಾಂಗಕ್ಕೆ ಇದೇ ಮಾದರಿಯಾಗಿ ಕಾಣುತ್ತಿರುವುದು ವಿಪರ್ಯಾಸವೇ ಸರಿ.
ಇತ್ತೀಚೆಗೆ ಪ್ರತಿ ಚಿಕ್ಕಪುಟ್ಟ ಊರುಗಳಲ್ಲಿಯೂ ಕೂಡ ಈ ಅಲೆ ಏಳುತ್ತಿದ್ದು ಸ್ವಲ್ಪ ದೊಡ್ಡ ಊರುಗಳಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ಗಳವರುದೊಡ್ಡ ದೊಡ್ಡ ಕಂಪನಿಗಳ ಆಯೋಜಕರು ಹೊಸ ವರ್ಷದ ಆಚರಣೆಯನ್ನು ಕೌಟುಂಬಿಕ ಜನರಿಗೆ ಕೆಲ ಆಟಗಳನ್ನು ಆಡಿಸುವ ಮೂಲಕ ಆಚರಿಸುತ್ತಿದ್ದಾರೆ. ಇದು ಇದ್ದುದರಲ್ಲಿಯೇ ಸ್ವಲ್ಪ ಸಮಾಧಾನ ತರುವ ಬದಲಾವಣೆ.
ಹಾಗಾದರೆ ಹಳೆಯದೆಲ್ಲವೂ ಸರಿಯಲ್ಲವೇ ಹಳೆಯದೆಲ್ಲವನ್ನು ಮರೆಯಬೇಕೇ ಎಂಬುದು ನಿಮ್ಮ ಪ್ರಶ್ನೆ ಆಗಿರಬಹುದು. ಊಹು0 ಖಂಡಿತವಾಗಿಯೂ ಹಳೆಯದೆಲ್ಲವೂ ತಪ್ಪಲ್ಲ. ಆದರೆ ಹಳೆಯ ತಪ್ಪು ಒಪ್ಪುಗಳ ಪರಾಮರ್ಶೆಯ ಮೇಲೆ ನಮ್ಮ ಬದುಕನ್ನು ಪುನರ್ರೂಪಿಸಿಕೊಳ್ಳಬಹುದು. ಪ್ರತಿ ಹೊಸ ದಿನವೂ ನಮಗೆ ಹೊಸತೊಂದು ಅವಕಾಶವನ್ನು ತಂದುಕೊಡುತ್ತದೆ ಆ ರೀತಿ ಬರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಜಾಣ್ಮೆಯನ್ನು ನಾವು ಹೊಂದಿರಬೇಕು. ಕೆಲವು ಜನರಿರುತ್ತಾರೆ, ತಮಗೆ ಸಿಕ್ಕ ಕೆಲವೇ ಕೆಲವು ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಯಶಸ್ಸಿನ ಏಣಿಯ ತುತ್ತ ತುದಿಯನ್ನು ತಲುಪುತ್ತಾರೆ.
ಇನ್ನು ಕೆಲವರು ಸಿಕ್ಕ ಪ್ರಥಮ ಅವಕಾಶದಲ್ಲಿಯೂ ಹುಳುಕುಗಳನ್ನು ಮಾತ್ರ ಹುಡುಕುತ್ತಾ ಮತ್ತೊಂದು ಮಗದೊಂದು ಅವಕಾಶಗಳಿಗಾಗಿ ಕಾಯುತ್ತಾ ಎಲ್ಲಾ ಅವಕಾಶಗಳು ಮುಗಿಯುವ ಹೊತ್ತಿನಲ್ಲಿ ತಮ್ಮ ಅದೃಷ್ಟವನ್ನು ಹಳಿಯುತ್ತಾರೆ.
ಇವರ ದೃಷ್ಟಿಯಲ್ಲಿ ತಾನು ಮಾತ್ರ ಸರಿ ಜಗತ್ತಿನ ಉಳಿದೆಲ್ಲರೂ ಉಳಿದೆಲ್ಲವೂ ತಪ್ಪು ಎಂಬ ಭಾವ. ಕೈಯಲ್ಲಿ ಸುತ್ತಿಗೆಯನ್ನು ಹಿಡಿದಾತನಿಗೆ ಕಾಣುವುದು ಎಲ್ಲೆಲ್ಲಿಯೂ ಮೊಳೆಗಳೇ ಎಂಬಂತೆ ನಿರಾಶಾವಾದಿಗಳಿಗೆ, ಸೋಂಬೇರಿಗಳಿಗೆ ಸಿಕ್ಕ ಅವಕಾಶಗಳಲ್ಲಿಯೂ ಕಾಣುವುದು ಹುಳುಕುಗಳೇ.
ಹೊಸ ವರ್ಷದಲ್ಲಿ ಮೂಲಭೂತ ಅವಶ್ಯಕತೆಗಳ ಪೂರೈಕೆಯ ಹೋರಾಟದಲ್ಲಿ ನಾವು ನಮ್ಮ ಜೀವನಕ್ಕೆ ಅವಶ್ಯಕವಾದ ಕೆಲ ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು ತನ್ಮೂಲಕ ನಮ್ಮ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ತಂದುಕೊಳ್ಳುವುದು ಒಳ್ಳೆಯದು. ನಮ್ಮ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯ ಕಾಯ್ದುಕೊಳ್ಳುವುದು ನಮ್ಮ ಹೊಸ ವರ್ಷದ ಮುಖ್ಯ ಆಶಯವಾಗಬೇಕು.
ದೈಹಿಕ ಆರೋಗ್ಯದಲ್ಲಿ ನಮ್ಮ ದೇಹಕ್ಕೆ ಅತ್ಯವಶ್ಯಕವಾಗಿ ಬೇಕಾಗುವ ಆಹಾರ, ಆರೋಗ್ಯ, ವ್ಯಾಯಾಮ, ಶಿಸ್ತುಬದ್ಧ ಜೀವನಶೈಲಿ, ಹವ್ಯಾಸಗಳು ಪ್ರಮುಖ ಪಾತ್ರ ವಹಿಸುತ್ತವೆ.
ಜಾಗತಿಕ ಸ್ಥಿತ್ಯಂತರದ ಕಾಲಮಾನದಲ್ಲಿ ನಾವು ಕೇವಲ ಹತ್ತಿಪ್ಪತ್ತು ವರ್ಷಗಳ ಹಿಂದೆ ನಮ್ಮ ಹಿರಿಯರು ತಯಾರು ಮಾಡುತ್ತಿದ್ದ ಮನೆಯ ಸ್ವಾದಿಷ್ಟ ಮತ್ತು ರುಚಿಕರವಾದ ಊಟವನ್ನು ಮರೆತು ಕೇವಲ ವನಸ್ಪತಿ, ಡಾಲ್ಡಾ, ಮೈದಾ, ಸಕ್ಕರೆ ಮುಂತಾದ ಬಿಳಿ ವಿಷಗಳಿಂದ ತಯಾರಾಗುತ್ತಿರುವ ಆಹಾರ ಪದಾರ್ಥಗಳಿಗೆ ಮುಗಿ ಬೀಳುತ್ತಿದ್ದೇವೆ. ಕಾಫಿ, ಚಹಾ, ಕೂಲ್ ಡ್ರಿಂಕಗಳ ವಿಪರೀತ ಸೇವನೆ ನಮ್ಮ ದೈಹಿಕ ಆರೋಗ್ಯವನ್ನು ಕುಗ್ಗಿಸುತ್ತಿದೆ. ಮೇಲ್ಕಂಡ ಎಲ್ಲ ಪದಾರ್ಥಗಳಲ್ಲಿನ ಸಕ್ಕರೆಯ ಅಂಶ ನಮ್ಮ ದೇಹದಲ್ಲಿ ಅನವಶ್ಯಕ ಬೊಜ್ಜನ್ನು ಉಂಟುಮಾಡುತ್ತಾ, ಅವುಗಳ ಪರಿಣಾಮವಾದ ರಕ್ತನಾಳಗಳನ್ನು ಸಂಕೋಚಿಸುತ್ತಾ ತತ್ಪರಿಣಾಮವಾದ ಹೃದಯದ ತೊಂದರೆ, ಸರಿಯಾದ ರೀತಿಯಲ್ಲಿ ರಕ್ತ ಪರಿಚಲನೆ ಆಗದಿರುವುದು, ಮಲಬದ್ಧತೆ, ಕರುಳಿನ ತೊಂದರೆಗಳು, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಥೈರಾಯಿಡ್ ತೊಂದರೆಗಳಿಂದ ಬಳಲುತ್ತಿದ್ದಾರೆ. ಆದ್ದರಿಂದ ಈ ಹೊಸ ವರ್ಷದಲ್ಲಿ ನಾವು ಮನೆಯಲ್ಲಿ ತಯಾರಿಸಿದ ಆಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾ ಸಾತ್ವಿಕ ಆಹಾರ, ಹಣ್ಣು ಹಂಪಲುಗಳ ಸೇವನೆ ಮಾಡುತ್ತಾ ನಮ್ಮ ದೈಹಿಕ ಆರೋಗ್ಯವನ್ನು ಕಾಯ್ದುಕೊಳ್ಳೋಣ. ತಿಂಗಳಲ್ಲೊಂದೆರಡು ಬಾರಿ ಬೇಕಾದರೆ ಬಾಯಿ ಚಪಲಕ್ಕೆ ಒಂದಷ್ಟು ಹೊರಗಿನ ತಿಂಡಿ ತಿಂದರೆ ಆಯ್ತು. ಆದರೆ ಪ್ರತಿದಿನದ ಚಪಲವನ್ನು ಹಿಡಿತಕ್ಕೆ ತರುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗೋಣ. ತನ್ಮೂಲಕ ತೂಕ ಇಳಿಕೆಯ ಪ್ರಕ್ರಿಯೆಗೆ ನಾಂದಿ ಹಾಡೋಣ. ಉತ್ತಮ ಆರೋಗ್ಯವನ್ನು ಪಡೆಯೋಣ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಿ ನೋಡಿದರೂ ಬೇರೆಯವರನ್ನು ಹಿಂದೆ ತಳ್ಳಿ ತಾನು ಮಾತ್ರ ಯಶ ಪಡೆಯಬೇಕು ಎಂಬ ಹುಚ್ಚು ಎಲ್ಲರಲ್ಲೂ ಇದೆ. ತನಗೆ ಮಾತ್ರ ಎಂಬಲ್ಲಿ ಸ್ವಾರ್ಥವಿರುತ್ತದೆ. ಸ್ವಾರ್ಥ ಅಸಹನೆಗೆ ದಾರಿ ಮಾಡಿಕೊಡುತ್ತದೆ. ಅಸಹನೆಯು ಮನಸ್ಸಿನ ವಿವೇಚನೆಯನ್ನು ಕಳೆದು ಹಾಕುತ್ತದೆ. ಅದರ ಪರಿಣಾಮವೇ ಇಂದಿನ ಮಕ್ಕಳ ಮನಸ್ಥಿತಿ. ಪಾಲಕರೂ ಇದರಿಂದ ಹೊರತಲ್ಲ. ನಮ್ಮ ಮಕ್ಕಳು ಯಾರೊಬ್ಬರಿಗೂ ಸ್ಪರ್ಧೆ ಒಡ್ಡಬೇಕಾಗಿಲ್ಲ. ಅವರು ಅವರದೇ ಹಿಂದಿನ ರೆಕಾರ್ಡ್ಗಳನ್ನು ಉತ್ತಮಗೊಳಿಸುತ್ತಾ ಹೆಚ್ಚಿನ ರೀತಿಯಲ್ಲಿ ಸಾಧನೆ ಮಾಡುತ್ತಾ ತಮಗೆ ತಾವೇ ಪ್ರತಿಸ್ಪರ್ಧಿಯಾಗಿ ಬೆಳೆಯುವಂತೆ ಮಾಡಬೇಕು. ಮಾನಸಿಕ ಆರೋಗ್ಯದ ಸಮತೋಲನ ಕಾಯ್ದುಕೊಳ್ಳಬೇಕು. ಅಸಹನೆ, ದ್ವೇಷ, ಅಸೂಯೆ, ನಿರಾಶೆಗಳು ಮನುಷ್ಯನನ್ನು ಹಿಮ್ಮುಖವಾಗಿ ಚಲಿಸುವಂತೆ ಮಾಡಿದರೆ ಸಹಬಾಳ್ವೆ, ಸಂಘಟನೆ, ಸಹಕಾರಗಳು ಮನುಷ್ಯನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ, ಆದ್ದರಿಂದ ಸದಾ ಧನಾತ್ಮಕ ವಿಚಾರಗಳನ್ನು ಮಾತನಾಡುತ್ತಾ ಧನಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳುತ್ತಾ ಉತ್ತಮ ಧ್ಯೇಯದತ್ತ ಮುನ್ನಡೆಯೋಣ.
ವ್ಯಾಯಾಮ, ಯೋಗ, ಜಿಮ್, ಜುಂಬ, ವಾಕಿಂಗ್, ರನ್ನಿಂಗ್ ಮುಂತಾದ ವಿವಿಧ ರೀತಿಯ ದೈಹಿಕ ಚಟುವಟಿಕೆಗಳಲ್ಲಿ ಒಂದನ್ನಾದರೂ ನಮ್ಮದಾಗಿಸಿಕೊಳ್ಳುತ್ತಾ ಪ್ರತಿದಿನ ಕನಿಷ್ಠ ಅರ್ಧ ಗಂಟೆ ಈ ದೈಹಿಕ ಚಟುವಟಿಕೆಗಳನ್ನು ಮಾಡುತ್ತಾ ಬಂದರೆ ದೇಹದ ಅನವಶ್ಯಕ ಕೊಬ್ಬು ಕರಗಿ ಸದೃಢ ದೇಹಸಿರಿ ನಮ್ಮದಾಗುತ್ತದೆ. ದೇಹದ ಸ್ನಾಯುಗಳು ಸದೃಢವಾಗುತ್ತವೆ, ಮೂಳೆಗಳು ಬಲಗೊಳ್ಳುತ್ತವೆ. ಕನಿಷ್ಠ 10 ನಿಮಿಷ ಧ್ಯಾನ ಮಾಡುವುದರಿಂದ ಮನಸ್ಸು ಪ್ರಶಾಂತವಾಗಿ ಪ್ರಫುಲ್ಲಿತವಾಗಿ ಮತ್ತು ಸದಾ ಧನಾತ್ಮಕತೆಯನ್ನು ಬಿಂಬಿಸುವಂತಹ ಮನಸ್ಥಿತಿ ನಮ್ಮದಾಗುತ್ತದೆ. ಪ್ರತಿದಿನದ ನಿಯಮಿತ ದಿನಚರಿಯ ಪಾಲನೆಯು ನಮ್ಮ ಜೀವನದ ಅವಿಭಾಜ್ಯ ಅಂಗವಾಗುತ್ತಾ ಹೋಗುತ್ತದೆ. ವ್ಯಾಯಾಮದಂತಹ ಪ್ರಕ್ರಿಯೆಗಳು ನಮ್ಮ ಮನಸ್ಸಿನ ವ್ಯಾಪಾರಗಳನ್ನ ನಿಯಂತ್ರಿಸಿ ನಮ್ಮನ್ನು ಮಾನಸಿಕವಾಗಿ ಬಲಿಷ್ಠರನ್ನಾಗಿ ರೂಪಿಸುತ್ತದೆ.
ಉತ್ತಮ ಕೌಟುಂಬಿಕ ಬಾಂಧವ್ಯ ಪ್ರೀತಿ, ವಿಶ್ವಾಸ, ನಂಬಿಕೆ ಮುಂತಾದ ಧನಾತ್ಮಕ ಶಕ್ತಿಯನ್ನು ಮನುಷ್ಯನಿಗೆ ನೀಡುತ್ತವೆ. ಪ್ರತಿದಿನ ಕನಿಷ್ಠ ಒಂದು ಹೊತ್ತಿನ ಆಹಾರವನ್ನು ಕುಟುಂಬದವರೊಂದಿಗೆ ಸೇವಿಸಿ. ಮನೆಯ ಎಲ್ಲಾ ಸದಸ್ಯರ ಜೊತೆ ಹಾರ್ದಿಕ ಬಾಂಧವ್ಯವನ್ನು ಹೊಂದಿರಿ. ಮನೆಯ ಎಲ್ಲಾ ಸದಸ್ಯರು ಒಟ್ಟಾಗಿ ಕೂಡಿ ಆಡಿ ನಲಿಯುವುದು ಮನೆಯ ವಾತಾವರಣವನ್ನು ಸುಮಧುರವಾಗಿ
ಇರಿಸುತ್ತದಲ್ಲದೆ ಬಾಂಧವ್ಯವನ್ನು ವೃದ್ಧಿಸುತ್ತದೆ.
ಹೆಚ್ಚು ಹೆಚ್ಚು ದುಡ್ಡು ಗಳಿಸುವುದು ಯಶಸ್ಸು ಎಂದು ತಿಳಿದುಕೊಂಡವರಿಗೆ, ಹಾಗೆ ತಿಳಿದುಕೊಂಡು ಮತ್ತೊಬ್ಬರನ್ನುಹೀಗಳೇಯುವವರಿಗೆ ಒಂದು ಮಾತು ನಾವು ದಿನಕ್ಕೆ ಎರಡು ಲಕ್ಷ ದುಡಿದರೂ ಒಂದು ಹೊತ್ತಿಗೆ ತಿನ್ನುವುದು ಎರಡೇ ರೊಟ್ಟಿ… ಅದಕ್ಕಿಂತ ಹೆಚ್ಚು ತಿನ್ನಲು ಹೋದರೆ ಅರಗಿಸಿಕೊಳ್ಳಲು ಮತ್ತೆ ಅದರ ಎರಡು ಪಟ್ಟು ಹೆಚ್ಚು ಕೆಲಸ ನಿರ್ವಹಿಸಬೇಕು. ಹೆಚ್ಚಿನ ದುಡಿಮೆಯ ಆಸೆಯಲ್ಲಿ ಕುಟುಂಬದ ಪ್ರೀತಿಯನ್ನು, ಆರೋಗ್ಯವನ್ನು ಕಡೆಗಣಿಸಿ ದುಡಿದು ಮುಂದೆ ದುಡಿದ ಹಣವನ್ನೆಲ್ಲ ಕೆಟ್ಟು ಹೋದ ಆರೋಗ್ಯವನ್ನು ಸರಿಪಡಿಸಲು ಬಳಸುವುದು ಜಾಣರ ನಡೆಯಲ್ಲ. ಆದ್ದರಿಂದ ಆರ್ಥಿಕ ಸದೃಢತೆಯ ಜೊತೆ ಜೊತೆಗೆ ದೈಹಿಕ ಮಾನಸಿಕ ದೃಢತೆಯು ಮನುಷ್ಯನಿಗೆ ಅತ್ಯಂತ ಅವಶ್ಯಕ.
ಹವ್ಯಾಸಗಳು ಮನುಷ್ಯನನ್ನು ಸದಾ ಚಟುವಟಿಕೆಯಿಂದಿರಿಸುತ್ತವೆ. ಹವ್ಯಾಸದ ಮೂಲಮಂತ್ರವೇ ಕ್ರಿಯಾಶೀಲತೆ. ಕ್ರಿಯಾಶೀಲ ವ್ಯಕ್ತಿಯ ಮನದಲ್ಲಿ ನಕಾರಾತ್ಮಕ ವಿಚಾರಗಳು ಎಂದು ಸುಳಿಯುವುದಿಲ್ಲ. ಉತ್ತಮ ಹವ್ಯಾಸಗಳು ಜೀವನ ಶ್ರದ್ಧೆಯನ್ನು, ಸಮಯವನ್ನು, ಪ್ರೀತಿಯನ್ನು ಬೇಡುತ್ತವೆ. ಒಳ್ಳೆಯ ಹವ್ಯಾಸಗಳು ಮಾನಸಿಕವಾಗಿ ನಮ್ಮನ್ನು ತೃಪ್ತರನ್ನಾಗಿಸುತ್ತವೆ ಆದ್ದರಿಂದ ಹೊಸ ವರ್ಷದಲ್ಲಿ ಹೊಸ ಹವ್ಯಾಸವನ್ನು ಬೆಳೆಸಿ ಕೊಳ್ಳಬೇಕು.ಬನ್ನಿ… ನಾವೆಲ್ಲರೂ ಹೊಸ ವರ್ಷವನ್ನು ಹೊಸ ರೀತಿಯಲ್ಲಿ ನಮ್ಮದಾಗಿಸಿಕೊಳ್ಳುತ್ತಾ ಹೊಸ ವಿಚಾರಗಳ, ನವ ಆಶಯಗಳ ತೇರನ್ನು ಎಳೆಯೋಣ.
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
More Stories
₹450 ಕೋಟಿ ವಂಚನೆ ಹಗರಣ: ಟೀಂ ಇಂಡಿಯಾ ಆಟಗಾರ ಶುಭಮನ್ ಗಿಲ್ಗೆ CID ಸಮನ್ಸ್
ಮನು ಭಾಕರ್, ಡಿ ಗುಕೇಶ್ ಸೇರಿದಂತೆ ನಾಲ್ವರಿಗೆ 2024ರ ಖೇಲ್ ರತ್ನ ಪ್ರಶಸ್ತಿ
2025ರ ಕರ್ನಾಟಕ SSLC ಮಾದರಿ ಪ್ರಶ್ನೆಪತ್ರಿಕೆ ಪ್ರಕಟ