December 29, 2024

Newsnap Kannada

The World at your finger tips!

sudhakar1

ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ- ರಾಜ್ಯದಲ್ಲಿ ಲಸಿಕೆಗೆ ಕೊರತೆ ಇಲ್ಲ‌: ಸಚಿವ ಕೆ.ಸುಧಾಕರ್

Spread the love

ರಾಜ್ಯದಲ್ಲಿ ಕೋವಿಡ್ ಲಸಿಕೆಗೆ ಯಾವುದೇ ಕೊರತೆಯಾಗುವುದಿಲ್ಲ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರೊಂದಿಗೆ ಚರ್ಚಿಸಿದ್ದು, ಅವರು ಕೂಡ ಕೊರತೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹನ್ನೆರಡೂವರೆ ಲಕ್ಷ ಡೋಸ್ ಕೋವಿಡ್ ಲಸಿಕೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ದೊರೆಯಲಿದೆ. ಮುಂದಿನ ನ ವಾರದೊಳಗೆ ಬರಲಿದೆ. ಆದರೆ ಅದಕ್ಕೆ ಮುನ್ನ ಹೆಚ್ಚುವರಿಯಾಗಿ 4 ಲಕ್ಷ ಡೋಸ್ ಗಳನ್ನು ವಿಮಾನದಲ್ಲಿ ಕಳುಹಿಸಲಾಗುತ್ತಿದೆ. ಲಸಿಕೆಗೆ ಯಾವುದೇ ಕೊರತೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವರು ತಿಳಿಸಿದ್ದಾರೆ ಎಂದರು.

ಕೋವಿಡ್ ಎರಡನೇ ಅಲೆ ಇದೆ. ಅನೇಕ ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ನಾಗರಿಕರು ಕೂಡ ಕೋವಿಡ್ ಸುರಕ್ಷತಾ ಕ್ರಮ ಅನುಸರಿಸಬೇಕು ಎಂಬುದನ್ನು ಅರಿಯಬೇಕು. ಅನಗತ್ಯವಾಗಿ ಗುಂಪುಗೂಡುವುದು, ಮಾಸ್ಕ್ ಧರಿಸದಿರುವುದು ಮೊದಲಾದ ಕ್ರಮಗಳಿಗೆ ಈಗಾಗಲೇ ಕಡಿವಾಣ ಹಾಕಲಾಗಿದೆ. ಸಭೆ, ಸಮಾರಂಭಗಳನ್ನು 2 ತಿಂಗಳ ಮಟ್ಟಿಗೆ ಮುಂದೂಡಬೇಕು ಎಂದು ಕೋರಿದರು.

ಏಪ್ರಿಲ್ 1 ರ ನಂತರ 45 ವರ್ಷ ಮೇಲ್ಫಟ್ಟವರಿಗೆ ಲಸಿಕೆ:

ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಬಹುದು. ಇದರಿಂದಾಗಿ ಹೆಚ್ಚಿನ ಜನರಿಗೆ ಲಸಿಕೆ ನೀಡಬಹುದು. ಎಲ್ಲರೂ ಕೂಡಲೇ ಕೋವಿಡ್ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಬೇಕು ಎಂದು ಸಚಿವರು ಟ್ವೀಟ್ ನಲ್ಲಿ ಕೋರಿದ್ದಾರೆ.

ಕಾನೂನು ಕ್ರಮ ಜಾರಿಯಾಗಲಿದೆ

ಅಮಾಯಕ ದಲಿತ ಯುವಕ ಸ್ವಂತ ದುಡಿಮೆಯಿಂದ ಆತ್ಮಗೌರವದಿಂದ ಸ್ವಾಭಿಮಾನದ ಬದುಕನ್ನು ಬದುಕುತ್ತಿದ್ದರು. ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಯಾಗಿದ್ದ ಅವರನ್ನು ಹಿಂದಿನ ಯಾವುದೋ ವೈಷಮ್ಯದಿಂದ ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಅಂತಹ ಪಾಪಿಗಳ ವಿರುದ್ಧ ಕಾನೂನು ಕ್ರಮ ಜಾರಿಯಾಗಲಿದೆ. ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿದ್ದು, ಇದರ ಹಿಂದೆ ಇರುವವವರ ವಿರುದ್ಧ ಕಾನೂನು ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲು ಹೇಳಲಾಗಿದೆ. ಇದಕ್ಕೆ ಕುಮ್ಮಕ್ಕು ನೀಡಿದವರನ್ನು ಕೂಡ ಬಿಡುವ ಪ್ರಶ್ನೆಯೇ ಇಲ್ಲ. 56 ವರ್ಷಗಳ ನಂತರ ನನ್ನ ಕ್ಷೇತ್ರದಲ್ಲಿ ಅಪರಾಧ ನಡೆದಿದೆ. ತಪ್ಪಿತಸ್ಥರಿಗೆ ಉಗ್ರವಾದ ಶಿಕ್ಷೆಯಾಗಲಿದೆ. ಈ ಘಟನೆಯಿಂದ ಬಹಳ ದುಃಖವಾಗಿದೆ ಎಂದರು.

Copyright © All rights reserved Newsnap | Newsever by AF themes.
error: Content is protected !!