November 24, 2024

Newsnap Kannada

The World at your finger tips!

deepa1

ಸಂಸ್ಕೃತ ಭಾಷೆಯನ್ನು ಕೊಲ್ಲುವುದು ಬೇಡ

Spread the love

ಸಂಸ್ಕೃತ ಭಾಷೆಯನ್ನು ಕೊಲ್ಲುವುದು ಬೇಡ –
ಸಂಸ್ಕೃತ ಭಾಷೆ ಮಾಡಿದ ಅನ್ಯಾಯವನ್ನು ಮರೆಯುವುದು ಬೇಡ…..

ಸಮಗ್ರ ಚಿಂತನೆಯ ಮೂಲಕ ಪರಿವರ್ತನೆಯ ಪರ್ಯಾಯ ಮಾರ್ಗ ಹುಡುಕೋಣ……

ಸಂಸ್ಕೃತ ಒಂದು ಪ್ರಾಚೀನ ಭಾಷೆ. ಈ ಕ್ಷಣದಲ್ಲಿ ಅದನ್ನು ಚಲಾವಣೆಯಲ್ಲಿ ಇಲ್ಲದ ಮೃತ ಭಾಷೆ ಎಂದೂ ಕೆಲವರು ಹೇಳುತ್ತಾರೆ. ಏನೇ ಆಗಲಿ ಒಂದು ಭಾಷೆ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಅದನ್ನು ಉಳಿಸುವ ಸಾಧ್ಯತೆ ಇದ್ದರೆ ಖಂಡಿತ ಪರಿಶೀಲಿಸೋಣ ಮತ್ತು ಪ್ರಯತ್ನಿಸೋಣ…..

ಆದರೆ ಸಂಸ್ಕೃತ ಭಾಷೆಯ ಉತ್ತುಂಗದಲ್ಲಿ ಆ ಭಾಷೆಯು ( ಆಗಿನ ಸಮಕಾಲೀನ ಜನರು ) ಮಾಡಿದ ಅಮಾನವೀಯ ಅನ್ಯಾಯವು ಸದಾ ಕಾಡುತ್ತಿರುತ್ತದೆ.

ಶಿಕ್ಷಣವನ್ನು ಕೇವಲ ಕೆಲವೇ ಜನರ ಸ್ವತ್ತಾಗಿಸಿ ಅದನ್ನು ಸಂಸ್ಕೃತ ಭಾಷೆಯ ಕಟ್ಟಲೆಯಲ್ಲಿ ಬಂಧಿಸಿ ಅನೇಕ ಸಮುದಾಯಗಳನ್ನು ಅತ್ಯಂತ ಅಮಾನುಷವಾಗಿ ಶೋಷಿಸಿದ ಇತಿಹಾಸ ಸಂಸ್ಕೃತ ಭಾಷೆಗಿದೆ. ಅಂದರೆ ನೇರವಾಗಿ ಸಂಸ್ಕೃತ ಭಾಷೆಯಲ್ಲ ಬದಲಾಗಿ ಆಗ ಅದನ್ನು ಕಲಿತು ಉಪಯೋಗಿಸುತ್ತಿದ್ದ ಜನರಿಗೆ ಇದು ಅನ್ವಯಿಸುತ್ತದೆ. ಸಂಸ್ಕೃತ ಪಂಡಿತರು ಅಥವಾ ಸಂಸ್ಕೃತ ಭಾಷೆಯ ಅಧ್ಯಯನಕಾರರು ಕನ್ನಡ ಭಾಷೆಯನ್ನು ಎರಡನೇ ದರ್ಜೆ ಅಥವಾ ಅನಕ್ಷರಸ್ಥ ಬಡವರ ಭಾಷೆ ಎಂಬುದಾಗಿ ಕೀಳಾಗಿ ಕಂಡ ಉದಾಹರಣೆಗಳು ಅವರ ವರ್ತನೆಯಲ್ಲಿ ಕಾಣಬಹುದಿತ್ತು. ಅಂದರೆ ಸಂಸ್ಕೃತ ಬಲ್ಲವನು ಮಾತ್ರ ಜ್ಞಾನಿ ಎಂಬ ಅಭಿಪ್ರಾಯ ಅಥವಾ ಭ್ರಮೆ.

ಸಾಮಾನ್ಯ ಜನರಿಗೆ ಕಬ್ಬಿಣದ ಕಡಲೆಯಾಗಿಸಿ ಅವರ ಅನಕ್ಷರಸ್ಥ ಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ದಬ್ಬಾಳಿಕೆ ಮಾಡಿದ ಸಾಮಾಜಿಕ ಶೈಕ್ಷಣಿಕ ವ್ಯವಸ್ಥೆಗೆ ಸಂಸ್ಕೃತ ಭಾಷೆ ಅಥವಾ ಅದನ್ನು ಬಳಸುವವರು ಸಾಕ್ಷಿಯಾಗಿದ್ದಾರೆ.

ಆದರೆ ಒಂದು ಭಾಷೆಯಾಗಿ ಸಂಸ್ಕೃತ ಒಂದು ಮಹತ್ವದ ಮಾಹಿತಿಯ ಕಣಜ. ಭಾಷೆಯ ದೃಷ್ಟಿಯಿಂದ ಸಾಹಿತ್ಯದ ಆಧಾರದಲ್ಲಿ ಸಂಸ್ಕೃತ ಶ್ರೇಷ್ಠತೆಯ ಸಾಲಿನಲ್ಲಿ ನಿಲ್ಲುವ ಎಲ್ಲಾ ಅರ್ಹತೆ ಹೊಂದಿದೆ. ಐತಿಹಾಸಿಕ ಮಹತ್ವ ಪಡೆದಿದೆ.

ಈ ಹಿನ್ನೆಲೆಯಲ್ಲಿ ಈಗಿನ ಸಂಸ್ಕೃತ ಭಾಷೆಯ ಬಗೆಗಿನ ವಿವಾದವನ್ನು ನೋಡಬೇಕಿದೆ……..

ಭಾಷೆ ಎಂಬುದು ಒಂದು ಸಂವಹನ ಮಾಧ್ಯಮ. ಅದರಲ್ಲಿ ಯಾವುದೇ ಹೆಚ್ಚುಗಾರಿಕೆ ಯಾವುದೇ ಭಾಷೆಗೆ ಇಲ್ಲ. ಆದರೆ ವ್ಯಾವಹಾರಿಕ ದೃಷ್ಟಿಯಿಂದ ಜನಪ್ರಿಯತೆ ಮತ್ತು ಸಂಖ್ಯೆಗಳ ಆಧಾರದಲ್ಲಿ ಕೆಲವು ಭಾಷೆಗಳು ಹೆಚ್ಚು ಪ್ರಾಮುಖ್ಯತೆ ಪಡೆದಿದೆ ಮತ್ತು ಭಾಷೆಗಳು ಮನುಷ್ಯ ಜೀವನದ ಅವಿಭಾಜ್ಯ ಅಂಗಗಳೇ ಆಗಿವೆ.

ಭಾರತ ದೇಶದಲ್ಲಿ ‌ಭಾಷೆಗಳ‌ ಆಧಾರದ ಮೇಲೆಯೇ ಪ್ರದೇಶಗಳನ್ನು ವಿಂಗಡಿಸಲಾಗಿದೆ ಮತ್ತು ಭಾಷೆಗಳು ಇಲ್ಲಿನ ಜನರ ನಡುವೆ ಭಾವನಾತ್ಮಕ ಸಂಬಂಧವನ್ನು ಹೊಂದಿವೆ. ಆದರೆ ಸಂಸ್ಕೃತ ಯಾವುದೇ ರಾಜ್ಯದ ಮಾತೃಭಾಷೆಯಾಗಿ ಉಳಿದಿಲ್ಲ.

ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ರಾಮನಗರ ಜಿಲ್ಲೆಯಲ್ಲಿ ಮಾಗಡಿ ತಾಲ್ಲೂಕಿನ ಬಳಿ ಸುಮಾರು ‌100 ಎಕರೆ ಜಮೀನಿನಲ್ಲಿ 359 ಕೋಟಿ ವೆಚ್ಚದಲ್ಲಿ ಬೃಹತ್ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಗೆ ಅನುಮತಿ ನೀಡಿದೆ.

ಸಾಂಪ್ರದಾಯಕ ಮನೋಭಾವದ ಬಲಪಂಥೀಯ ಚಿಂತನೆಯ ವ್ಯಕ್ತಿಗಳು ಇದನ್ನು ಅತ್ಯಂತ ಸಂತೋಷದಿಂದ ಸ್ವಾಗತಿಸಿದರೆ,
ಪ್ರಗತಿಪರರು ಕನ್ನಡ ಹೋರಾಟಗಾರರು ಇದನ್ನು ಬಲವಾಗಿ ವಿರೋಧಿಸುತ್ತಿದ್ದಾರೆ.

ಸ್ವಾಗತಿಸುವವರು ಉರ್ದು ಇಂಗ್ಲೀಷ್ ಮುಂತಾದ ಭಾಷೆಗಳಿಗೆ ಬಹುದೊಡ್ಡ ಪ್ರೋತ್ಸಾಹ ಸಿಗುತ್ತಿರುವಾಗ ಭಾರತೀಯ ಮೂಲದ ಅನೇಕ ಭಾಷೆಗಳ ಹುಟ್ಟಿಗೆ ಕಾರಣವಾದ ಸಂಸ್ಕೃತ ಭಾಷೆಗೆ ವಿರೋಧ ಅಕ್ಷಮ್ಯ ಜೊತೆಗೆ ವಿಷಯ ಏನೇ ಇರಲಿ ಒಂದು ಭಾಷೆಯನ್ನು ಕೊಲ್ಲುವುದು ಅಥವಾ ದ್ವೇಷಿಸಿವುದು ಯಾವ ನ್ಯಾಯ ಎನ್ನುವ ವಾದ ಮಂಡಿಸುತ್ತಾರೆ.

ವಿರೋಧಿಸುವವರು ಮುಖ್ಯವಾಗಿ ಸಂಸ್ಕೃತ ಭಾಷೆಯ ಅಭಿವೃದ್ಧಿ ಕನ್ನಡಕ್ಕೆ ಅಪಾಯ ಮತ್ತು ಸಂಸ್ಕೃತ ಭಾಷೆಯ ಮುಖಾಂತರ ಮತ್ತೆ ವೇದ ಕಾಲದ ಶೋಷಣೆಯ ಸಾಮಾಜಿಕ ವ್ಯವಸ್ಥೆ ಪುನರ್ ಸ್ಥಾಪನೆಗೊಳ್ಳಬಹುದು ಎಂಬ ಆತಂಕ ಮತ್ತಿತರ ಅಂಶಗಳ ಬಗ್ಗೆ ಗಮನ ಸೆಳೆಯುತ್ತಾರೆ.

ವಾಸ್ತವವಾಗಿ ಮತ್ತು ಮುಕ್ತವಾಗಿ ಕೆಲವು ವಿಷಯಗಳನ್ನು ಪರಿಶೀಲಿಸೋಣ……..

ಮೊದಲನೆಯದಾಗಿ ಕೋವಿಡ್ ಸಂಕಷ್ಟದ ಸಮಯದಲ್ಲಿ ಹಣದ ಅವಶ್ಯಕತೆ ತುಂಬಾ ಇರುವಾಗ ಮನುಷ್ಯನ ಆರೋಗ್ಯಕ್ಕೆ ಅತಿಹೆಚ್ಚು ಕಾಳಜಿ ವಹಿಸಬೇಕಾದ ಸಮಯದಲ್ಲಿ ಸರ್ಕಾರದ ಈ ಬೃಹತ್ ಯೋಜನೆ ಖಂಡಿತ ಅನವಶ್ಯಕ. ಸಂಸ್ಕೃತ ಭಾಷೆಯ ಉಳಿವಿಗಾಗಿ ಮತ್ತು ಬೆಳವಣಿಗೆಗಾಗಿ ಈಗಿರುವ ಸೌಕರ್ಯಗಳನ್ನೇ ಮತ್ತಷ್ಟು ವಿಸ್ತಾರಗೊಳಿಸಿ ಒಂದಷ್ಟು ಸಾಮಾನ್ಯ ಕ್ರಮ ಕೈಗೊಳ್ಳಬಹುದಿತ್ತು.

ಎರಡನೆಯದಾಗಿ ತುಳು ಕೊಡುವ ಬ್ಯಾರಿ ಕೊಂಕಣಿ ಅರೆ ಭಾಷೆ ಮುಂತಾದ ಸ್ಥಳೀಯ ಭಾಷೆಗಳನ್ನು ಪರಿಗಣಿಸಿದಾಗ ಸಂಸ್ಕೃತಕ್ಕೆ ಇಷ್ಟೊಂದು ಮಹತ್ವದ ಅವಶ್ಯಕತೆ ಇರಲಿಲ್ಲ. ಏಕೆಂದರೆ ಅದನ್ನು ಮಾತನಾಡುವವರ ಸಂಖ್ಯೆ ತುಂಬಾ ಕಡಿಮೆ ಮತ್ತು ದೇಶದ ಇತರ ಭಾಗಗಳಲ್ಲಿ ಸಹ ಅದನ್ನು ಬೆಳೆಸುವ ಕೆಲಸ ನಡೆಯುತ್ತಿದೆ.

ಮೂರನೆಯದಾಗಿ, ಕರ್ನಾಟಕದಲ್ಲಿ ಕನ್ನಡವೇ ತಾಯಿಭಾಷೆ. ಅಲ್ಲದೇ ಇಲ್ಲಿನ ಮತ್ತೆ ಕೆಲವು ಉಪ ಭಾಷೆಗಳು ಈಗಲೂ ಜನರ ನಡುವೆ ಇರುವುದರಿಂದ ಅದಕ್ಕೆ ಇಲ್ಲದ ಮಹತ್ವ ಸಂಸ್ಕೃತಕ್ಕೆ ಕೊಡುವುದು ಉಚಿತವಲ್ಲ.

ಹಿಂದಿ ಹೇರಿಕೆ, ಇಂಗ್ಲೀಷ್ ಜನಪ್ರಿಯತೆಯ ನಡುವೆ ಕನ್ನಡ ಭಾಷೆ ನಲುಗುತ್ತಿರುವಾಗ ಕನ್ನಡ ಭಾಷೆಯ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ಕೊಡಬೇಕಾದ ಜವಾಬ್ದಾರಿ ಸರ್ಕಾರದ್ದು.
ಹೆಚ್ಚಿನ ಹಣವನ್ನು ಈ ನಿಟ್ಟಿನಲ್ಲಿ ಉಪಯೋಗಿಸಬೇಕಿದೆ.
ಕನ್ನಡ ಸಾಹಿತ್ಯ ಪರಿಷತ್ತು, ಹಂಪಿ ಕನ್ನಡ ವಿಶ್ವವಿದ್ಯಾಲಯ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಅಧ್ಯಯನ ಕೇಂದ್ರ ಮುಂತಾದ ಸಂಸ್ಥೆಗಳಿಗೆ ಹಣದ ಕೊರತೆಯಾಗದಂತೆ ನೋಡಿಕೊಳ್ಳಬೇಕಿದೆ.

ನಾಲ್ಕನೆಯದಾಗಿ, ಒಂದು ವೇಳೆ ಸಂಸ್ಕೃತ ಸಹಜವಾಗಿಯೇ ಜನರಲ್ಲಿ ಹೆಚ್ಚು ಜನಪ್ರಿಯವಾಗತೊಡಗಿದರೆ ಆಗ ಸರ್ಕಾರ ಈ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಬಹುದು.
ಈಗ ಆ ವಾತಾವರಣ ಇಲ್ಲ.

ಐದನೆಯದಾಗಿ, ಕೇವಲ ಸಂಸ್ಕೃತ ಭಾಷೆ ಮಾತ್ರವಲ್ಲ ಅದರ ಉಚ್ರಾಯ ಸ್ಥಿತಿಯಲ್ಲಿ ಇದ್ದಂತ ಶೋಷಣಾ ಸಂಸ್ಕೃತಿ ಈ ಮೂಲಕ ಮತ್ತೆ ತಲೆ ಎತ್ತಬಹುದು ಎಂಬ ಆತಂಕವೂ ಇದನ್ನು ವಿರೋಧಿಸುವವರಿಗೆ ಇದೆ‌. ಸರ್ಕಾರ ಸಾಮಾನ್ಯ ಜನರ ಭಾವನೆಗಳನ್ನು ಗಮನಿಸಬೇಕು.

ಆರನೆಯದಾಗಿ, ಈಗಾಗಲೇ ಸಂಸ್ಕೃತ ಭಾಷೆಯ ಅಭಿವೃದ್ಧಿಗೆ ಇರುವ ವ್ಯವಸ್ಥೆಯನ್ನು ಜೊತೆಗೆ ಇತರ ಸ್ಥಳೀಯ ಭಾಷೆಗಳ ಅಭಿವೃದ್ಧಿಯ ಜೊತೆಗೆ ಸಮೀಕರಿಸಿ ಸಹಜ ಪ್ರಯತ್ನಗಳು ಸಾಗಲಿ. ಯಾವುದೇ ಭಾಷೆಯನ್ನು ನಾಶವಾಗಲು ಬಿಡಬಾರದು. ಆದರೆ ತಾಯಿ ಭಾಷೆ ಕನ್ನಡವೇ ಆತಂಕದಲ್ಲಿರುವಾಗ ಇನ್ನೊಂದು ಭಾಷೆಗೆ ಇಷ್ಟೊಂದು ಮಹತ್ವ ಕೊಡುವುದು ‌ಖಂಡಿತ ಅನ್ಯಾಯ…..

ಇದು ಸರಳ ಸಹಜ ಅಭಿಪ್ರಾಯ. ಇನ್ನಷ್ಟು ಅಂಶಗಳು ಇದನ್ನು ಆಳವಾಗಿ ಅಧ್ಯಯನ ಮಾಡಿರುವ ಭಾಷಾ ತಜ್ಞರು ಮಂಡಿಸಲು ಸ್ವಾಗತಿಸುತ್ತಾ…..

ವಿವೇಕಾನಂದ ಹೆಚ್ ಕೆ

Copyright © All rights reserved Newsnap | Newsever by AF themes.
error: Content is protected !!