ದೇಸಿ ಕೊರೊನಾ ಲಸಿಕೆ ಬಗ್ಗೆ ಟೀಕೆ ಬೇಡ: ಸಚಿವ ಡಾ.ಕೆ.ಸುಧಾಕರ್

Team Newsnap
2 Min Read
sudhakar picture
  • ವಿಜ್ಞಾನಿಗಳ ಪರಿಶ್ರಮಕ್ಕೆ ಅಗೌರವ ತೋರುವ ಹೇಳಿಕೆ ಬೇಡ ಭಾರತ್ ಬಯೋಟೆಕ್ ಕಂಪನಿ ಕೊರೊನಾ ಲಸಿಕೆ ಅಭಿವೃದ್ಧಿಪಡಿಸಿದೆ ಆದರೆ ಈ ಕುರಿತು ವಿನಾಕಾರಣ ಟೀಕೆ ಮಾಡುವ ಮೂಲಕ ವಿಜ್ಞಾನಿಗಳಿಗೆ ಅಗೌರವ ತೋರಬಾರದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.

ಈ ಕುರಿತು ಸಚಿವರು ಸರಣಿ ಟ್ವೀಟ್ ಮಾಡಿದ್ದಾರೆ. ಕೋವಿಡ್ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಭಾರತದ ಕಂಪನಿ ಕೊವ್ಯಾಕ್ಸಿನ್ ಅಭಿವೃದ್ಧಿಪಡಿಸಿದೆ. ಭಾರತ್ ಬಯೋಟೆಕ್ ಬಹಳ ಹೆಸರುವಾಸಿ ಹಾಗೂ ನಂಬಿಕೆಗೆ ಅರ್ಹವಾದ ಕಂಪನಿಯಾಗಿದ್ದು, ಎಚ್ 1 ಎನ್ 1, ರೋಟಾವೈರಸ್, ರೇಬಿಸ್, ಚಿಕೂನ್ ಗುನ್ಯಾ, ಝೀಕಾ ಸೇರಿದಂತೆ 16 ರೋಗಗಳಿಗೆ ಲಸಿಕೆ ಆವಿಷ್ಕರಿಸಿದೆ. ಕಂಪನಿಯ ಸಂಸ್ಥಾಪಕ ಡಾ.ಕೃಷ್ಣ ಎಲ್ಲಾ ಅವರು ಸಾಧಾರಣ ಕುಟುಂಬದಿಂದ ಬಂದವರಾಗಿದ್ದು, ಯುನಿಸೆಫ್ ಸಹಯೋಗದಲ್ಲಿ 150 ಕ್ಕೂ ಹೆಚ್ಚು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ 400 ಕೋಟಿ ಡೋಸ್ ಲಸಿಕೆಗಳನ್ನು ವಿತರಣೆ ಮಾಡಿದ್ದಾರೆ. ಕೋವ್ಯಾಕ್ಸಿನ್ ನ 3 ನೇ ಹಂತದ ಕ್ಲಿನಿಕಲ್ ಟ್ರಯಲ್ ನಲ್ಲಿ 24,000 ಮಂದಿ ಭಾಗವಹಿಸಿದ್ದು, ಈ ಬಗ್ಗೆ ಶೀಘ್ರವೇ ದತ್ತಾಂಶ ಲಭ್ಯವಾಗಲಿದೆ ಎಂದು ಸಚಿವರು ಹೇಳಿದ್ದಾರೆ.

ಕೊರೊನಾ ಲಸಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು. ನಂತರ ಮಾತ್ರ ಅದನ್ನು ಅಧಿಕೃತ ಎನ್ನಲಾಗುತ್ತದೆ. ಈ ಲಸಿಕೆಯ ಅಡ್ಡ ಪರಿಣಾಮ 15% ಗಿಂತಲೂ ಕಡಿಮೆ ಇದೆ. ಇದು ಬಹಳ ಸುರಕ್ಷಿತ ಲಸಿಕೆ. ಒಬ್ಬ ಆರೋಗ್ಯ ಸಚಿವನಾಗಲ್ಲದೆ, ಸ್ವತಃ ಒಬ್ಬ ವೈದ್ಯಕೀಯ ವೃತ್ತಿಪರನಾಗಿ ನಮ್ಮ ಮನವಿ ಏನೆಂದರೆ, ಯಾರೂ ಕೂಡ ಲಸಿಕೆಯ ಬಗ್ಗೆ ವಿನಾಕಾರಣ ಟೀಕಿಸಬಾರದು. ಈ ಮೂಲಕ ವಿಜ್ಞಾನಿಗಳ ಪರಿಶ್ರಮಕ್ಕೆ ಧಕ್ಕೆ ತರಬಾರದು ಎಂದು ಸಚಿವರು ಕೋರಿದ್ದಾರೆ.

11 ಮಂದಿಗೆ ಮಾತ್ರ:

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಯು.ಕೆ.ಯಿಂದ ಬಂದಿರುವ 75 ಮಂದಿ ಹಾಗೂ ಸಂಪರ್ಕಿತರ ಪೈಕಿ 37 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಪೈಕಿ 11 ಮಂದಿಗೆ ಮಾತ್ರ ರೂಪಾಂತರಗೊಂಡ ಕೊರೊನಾ ಬಂದಿದೆ. 17 ಮಂದಿ ಪ್ರಾಥಮಿಕ ಸಂಪರ್ಕಿತರಾಗಿದ್ದಾರೆ. ರೂಪಾಂತರಗೊಂಡ ಸೋಂಕು ಬಂದವರ ಸಂಖ್ಯೆ ಏರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಗೃಹ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಯು.ಕೆ.ಯಿಂದ ಬಂದ ಉಳಿದವರ ಸಂಪರ್ಕ ಪತ್ತೆ ಮಾಡಲು ಸೂಚಿಸಲಾಗಿದೆ. ಅದೇ ರೀತಿ ಬಿಬಿಎಂಪಿ ಆಯುಕ್ತರೊಂದಿಗೂ ಚರ್ಚಿಸಲಾಗಿದೆ. ಆದಷ್ಟು ಶೀಘ್ರದಲ್ಲಿ ಉಳಿದವರ ಸಂಪರ್ಕ ಪತ್ತೆಯಾಗಲಿದೆ ಎಂದರು.

ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು, ಶಿಕ್ಷಕರಿಗೆ ಕೊರೊನಾ ಬಂದಿರುವ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ನಿಖರವಾಗಿ ಮಾಹಿತಿ ಪಡೆಯಲಾಗುವುದು. ಆದರೆ ಗಾಬರಿಯಾಗುವಂತಹ ವರದಿಯೇನೂ ಬಂದಿಲ್ಲ. ಇದನ್ನು ದೊಡ್ಡದು ಮಾಡಿ ಗಾಬರಿಪಡಿಸುವುದು ಬೇಡ ಎಂದು ಮನವಿ ಮಾಡಿದರು.

Share This Article
Leave a comment