January 3, 2025

Newsnap Kannada

The World at your finger tips!

navarathri , goddess , festival

ದೇವಿ ಆರಾಧಕರ ವಿಶೇಷ ಪರ್ವ ನವರಾತ್ರಿ

Spread the love

ನವರಾತ್ರಿ ದೇವಿ ಆರಾಧಕರಿಗೆ ವಿಶೇಷ. ಕುಮಾರಿ ಪೂಜನ, ಬ್ರಾಹ್ಮಣ ಸುವಾಸಿನಿಯರ ಭೋಜನ ಅರಿಶಿನ ಕುಂಕುಮ ಕೊಡುವುದು. ಇವೆಲ್ಲ ವಿಶೇಷ. ಶರನ್ನವರಾತ್ರಿಯಲ್ಲಿ ದೇವಿಯ ಪೂಜೆ ವಿಶೇಷ. ದೇವಿಯ ದೇವಸ್ಥಾನಗಳಲ್ಲಿ ಪೀಠಗಳಲ್ಲಿ ವಿಶೇಷ ಅಲಂಕಾರ ಹೋಮ ಹವನದ ಅನುಷ್ಠಾನ ಸೌಂದರ್ಯ ಲಹರಿ, ದುರ್ಗಾ ಸಪ್ತಶತಿ ಮೊದಲಾದ ಪಾರಾಯಣ ಮುಂತಾದ ವಿಶೇಷ ಕಾರ್ಯಕ್ರಮಗಳನ್ನು ಮಾಡಿರುತ್ತಾರೆ. ಮನೆಯಲ್ಲಿ ದೇವಿಯ ಪೂಜೆಗಾಗಿ ಘಟ ಸ್ಥಾಪನೆ ಮಾಡುತ್ತಾರೆ.


ದೇವಿಯ ಅನೇಕ ರೂಪಗಳನ್ನು ನಿತ್ಯದಲ್ಲಿ ಒಂದೊಂದಾಗಿ ಪೂಜಿಸುವ ನವರಾತ್ರಿಯಲ್ಲಿ ಶಕ್ತಿದೇವತೆಯಾದ ಪಾರ್ವತಿದೇವಿಯ/ ದುರ್ಗೆಯ ಅನೇಕ ರೂಪಗಳನ್ನು ಪೂಜಿಸುತ್ತೇವೆ.

ಮೊದಲನೇ ದಿನ ಪಾಡ್ಯದಂದು ಶೈಲಪುತ್ರಿಯನ್ನು ಪೂಜಿಸುತ್ತೇವೆ. ಶೈಲಪುತ್ರಿ ಎಂದರೆ ಹಿಮವಂತ ರಾಜನ ಮಗಳು ಎಂದು ಪಾರ್ವತಿ ದೇವಿಯ ಅಂಶವಾಗಿದ್ದಾಳೆ. ದಕ್ಷ ಪ್ರಜಾಪತಿಯ ಹೋಮದಲ್ಲಿ ಸತಿಯು ಭಸ್ಮಳಾಗಿ ನಂತರದಲ್ಲಿ ಮೊದಲಿಗೆ ಶೈಲಪುತ್ರಿಯಾಗಿ ಜನಿಸಿ ಶಿವನ ಕುರಿತು ತಪಸ್ಸು ಮಾಡಿ ಪಡೆದವಳಾಗಿರುತ್ತಾಳೆ. ಉಪನಿಷತ್ತುಗಳ ಪ್ರಕಾರ ಶೈಲಪುತ್ರಿಯು ಮೂಲಾಧಾರ ಚಕ್ರವನ್ನು ಪ್ರತಿನಿಧಿಸುತ್ತಾಳೆ. ಶ್ವೇತ ವಸ್ತ್ರವನ್ನು ಧರಿಸಿರುತ್ತಾಳೆ ಅವಳಿಗೆ ಶ್ವೇತ ವರ್ಣ ಪ್ರಿಯ ವರ್ಣ. ಆದ್ದರಿಂದಲೇ ಇಂದು ಬಿಳಿ ಬಣ್ಣವನ್ನು ಧರಿಸುವ ದಿನವೆಂದು ಆಚರಿಸುತ್ತಿದ್ದಾರೆ. ನಂದಿ ಅವಳ ವಾಹನ ಮತ್ತು ಅವಳು ತಲೆಯಲ್ಲಿ ಅರ್ಧ ಚಂದ್ರಾಕೃತಿಯನ್ನು ಧರಿಸಿರುತ್ತಾಳೆ. ಒಂದು ಕೈಯಲ್ಲಿ ತ್ರಿಶೂಲ ಇನ್ನೊಂದು ಕೈಯಲ್ಲಿ ಕಮಲವನ್ನು ಹಿಡಿದಿರುತ್ತಾಳೆ. ಮಲ್ಲಿಗೆ ಹೂವು ಶೈಲಪುತ್ರಿಗೆ ಬಹು ಪ್ರಿಯವಾದ ಹೂವಾಗಿದೆ. ಶೈಲ ಪುತ್ರಿಯ ಮಂತ್ರ “ಓಂ ದೇವಿ ಶೈಲಪುತ್ರೈ ನಮಃ” ಎಂದಾಗಿದೆ. ತುಪ್ಪವನ್ನು ಅರ್ಪಿಸಿ ಅವಳ ಪ್ರೀತಿಗೆ ಪಾತ್ರರಾಗಿ ಉತ್ತಮ ಅರೋಗ್ಯವನ್ನು ಬೇಡುತ್ತಾರೆ.

ಎರಡನೇ ದಿನ ಎರಡನೇ ದ್ವಿತೀಯ ತಿಥಿಯಂದು ಭಕ್ತಿ ಮತ್ತು ವೈರಾಗ್ಯದ ಪ್ರತೀಕವೆನಿಸುವ ಬ್ರಹ್ಮಚಾರಿಣಿಯನ್ನು ಪೂಜಿಸುತ್ತೇವೆ. ಬ್ರಹ್ಮಚಾರಿಣಿ ದೇವಿಯು ತನ್ನ ಗುರುಗಳು ಮತ್ತು ಶಿಷ್ಯರೊಂದಿಗೆ ಆಶ್ರಮದಲ್ಲಿ ವಾಸಿಸುತ್ತಾಳೆ. ನವದುರ್ಗೆಯರಲ್ಲಿ ಎರಡನೇ ರೂಪದ ದೇವಿಯೇ ಬ್ರಹ್ಮಚಾರಿಣಿ. ಬ್ರಹ್ಮ ಎಂದರೆ ದೊಡ್ಡದಾದ್ದು ಬ್ರಹ್ಮ ಎಂದರೆ ತಪಸ್ಸು, ಬ್ರಹ್ಮಚಾರಿಣಿ ಎಂದರೆ ತಪಸ್ಸನ್ನು ಆಚರಿಸುವವಳು, ಯಾರಿಗೆಲ್ಲ ವೈರಾಗ್ಯದ ಅಪೇಕ್ಷೆ ಇದೆಯೋ ಅವರು ಬ್ರಹ್ಮಚಾರಿಣಿಯನ್ನು ಆರಾಧಿಸಬೇಕು. ಭಕ್ತಿಯನ್ನು ಬೇಡುವವರು ಬಯಸುವವರೂ ಕೂಡ ದೇವಿಯನ್ನು ಆರಾಧಿಸುತ್ತಾರೆ. ಹೋಮ ಕುಂಡದಲ್ಲಿ ಹಾರಿದ ಸತಿದೇವಿ ಹಿಮಾಲಯನ ಪುತ್ರಿಯಾಗಿ ಜನಿಸಿದ ನಂತರ ಶಿವನನ್ನೇ ಪತಿಯಾಗಿ ಪಡೆಯಲು ತಪಸ್ಸನ್ನು ಆಚರಿಸಿದಳು 1000 ವರ್ಷಗಳ ಕಾಲ ಕೇವಲ ಫಲ ಮೂಲಗಳನ್ನು ತಿಂದು ಇದ್ದರೆ, ನೂರು ವರ್ಷಗಳ ಕಾಲ ಕೇವಲ ಒಂದೇ ಎಲೆಯನ್ನು ತಿಂದು ತಪಸ್ಸನ್ನು ಆಚರಿಸಿದಳು ನಂತರ ಸಾವಿರ ವರ್ಷಗಳ ಕಾಲ ನೀರು ಆಹಾರ ಇಲ್ಲದೇ ತಪಸ್ಸನ್ನು ಕಾರಣ ಅಪರ್ಣೆಯಾದಳು. ಇವಳ ಕಷ್ಟಗಳನ್ನು ನೋಡಿ ದುಃಖ ಪಟ್ಟು ಹೀಗೆ ನಿರಾಹಾರಳಾಗಬೇಡೆಂದು ಹೇಳಿದ ಕಾರಣ ಉಮಾ ಆದಳು. ಕೊನೆಗೆ ಅವಳ ತಪಸ್ಸು ಫಲಿಸಿತು. ಶಿವನನ್ನೇ ಪತಿಯನ್ನಾಗಿ ಪಡೆಯುವ ವರವು ದೊರೆಯಿತು.

ಅವಳ ತಪಸ್ಸು ಮತ್ತು ಭಕ್ತಿಯ ಕಾರಣ ಅವಳು ಬ್ರಹ್ಮಚಾರಿಣಿಯಾದಳು ಮತ್ತು ಭಕ್ತಿ ವೈರಾಗ್ಯದ ದೇವಿಯಾದಳು. ಬ್ರಹ್ಮಚಾರಿಣಿಯನ್ನು ಪೂಜಿಸುವುದರಿಂದ ನಮಗೆ ಸಂಪತ್ತು, ಸಮೃದ್ಧಿ ಮತ್ತು ಸುಖಸಂತೋಷಗಳು ಲಭಿಸುತ್ತವೆ. ಬ್ರಹ್ಮಚಾರಿಣಿ ದೇವಿಯು ಪ್ರೀತಿ, ನಿಷ್ಠೆ, ಬುದ್ಧಿವಂತಿಕೆ ಮತ್ತು ಜ್ಞಾನದ ಸಂಕೇತವಾಗಿದ್ದಾಳೆ. ಬ್ರಹ್ಮಚಾರಿಣಿ ದೇವಿಗೆ ಕೆಂಪು ವರ್ಣ ಪ್ರೀತಿಯ ಬಣ್ಣ. ಇವಳ ಬಲಗೈಯಲ್ಲಿ ರುದ್ರಾಕ್ಷಿ ಮಾಲೆ(ಜಪಮಾಲೆ) ಮತ್ತು ಎಡಗೈಯಲ್ಲಿ ಕಮಂಡಲು ಇರುತ್ತದೆ. ಬ್ರಹ್ಮಚಾರಿಣಿ . ದೇವಿಗೆ ಮಲ್ಲಿಗೆ ಹೂವು ಪ್ರಿಯವಾದ ಪುಷ್ಪವಾಗಿದೆ ದೇವಿ ಶ್ವೇತ ವರ್ಣದ ವಸ್ತ್ರಗಳನ್ನು ಧರಿಸಿರುತ್ತಾಳೆ.

ಚಂದ್ರಘಂಟಾದೇವಿ


ಶಿವಪುರಾಣದ ಪ್ರಕಾರ ರುದ್ರನು ಚಂದ್ರಶೇಖರ, ಈ ಚಂದ್ರಶೇಖರನ ಶಕ್ತಿ ಸ್ವರೂಪಿಣಿಯೇ ಚಂದ್ರಘಂಟಾ ದೇವಿ. ಮೂರನೇ ದಿನ ತದಿಗೆಯಂದು ಚಂದ್ರಘಂಟಾದೇವಿಯನ್ನು ಪೂಜಿಸುತ್ತೇವೆ. ಶಾಂತಿದಾಯಕ ಸ್ವರೂಪದ ದೇವಿ ನಮಗೆ ಶ್ರೇಯಸ್ಸನ್ನು ಕೊಡುವವಳಾಗಿದ್ದಾಳೆ. ನಕಾರಾತ್ಮಕ ದುಷ್ಟ ಶಕ್ತಿಗಳನ್ನು ಹೊಡೆದೊಡಿಸುವ ಚಂದ್ರಘಂಟಾ ದೇವಿಯು ಭಕ್ತರಿಗೆ ಆರೋಗ್ಯ, ಸಮೃದ್ಧಿ ಮತ್ತು ಸಂತಸಗಳನ್ನು ಹಂಚುತ್ತಾಳೆ. ಅವಳ ಮಸ್ತಕದಲ್ಲಿ ಗಂಟೆ ಆಕಾರ ಚಂದ್ರನಿರುವ ಕಾರಣ ಅವಳಿಗೆ ಚಂದ್ರ ಘಂಟಾದೇವಿ ಎನ್ನಲಾಗುತ್ತದೆ. ಹೊಂಬಣ್ಣದೇಹ ದೇಹವನ್ನು ಹೊಂದಿರುವ ದೇವಿಗೆ 10ಕೈ ಗಳಿದ್ದು ದುಷ್ಟ ಸಂಹಾರಿಣಿ ಎಂದೇ ಪ್ರಸಿದ್ಧಳು. ಅವಳು ಒಂದು ಕೈಲಿ ತ್ರಿಶೂಲ, ಗದೆ, ಬಾಣ, ಧನಸ್ಸು, ಖಡ್ಗ, ಕಮಲ, ಗಂಟೆ ಮತ್ತು ಒಂದರಲ್ಲಿ ಕಮಂಡಲು ಮತ್ತೊಂದರಲ್ಲಿ ಭಕ್ತರಿಗೆ ಅಭಯ ಹಸ್ತವನ್ನು ನೀಡಿದ್ದಾಳೆ. ಅವಳ ತಲೆಯಲ್ಲಿ ಅರ್ಧ ಚಂದ್ರನಿದ್ದಾನೆ. ಅವಳ ಮುದ್ರೆ ಯುದ್ಧಾಸನ್ನಳಾದಂತೆ ಇರುತತದೆ ವ್ಯಾಘ್ರವು ಅವಳ ವಾಹನವಾಗಿದ್ದು ಕಡು ನೀಲಿ ಬಣ್ಣ ಅವಳ ಪ್ರಿಯ ಬಣ್ಣವಾಗಿದೆ. ಅವಳು ಕೆಂಪು ವಸ್ತ್ರ ಧರಿಸಿರುತ್ತಾಳೆ. ದೇವಿಗೆ ಖೀರನ್ನು ನಿವೇದಿಸಿದರೆ ‍ಅಥವಾ ಹಾಲಿನ ಯಾವುದೇ ಸಿಹಿಯನ್ನು ನಿವೇದಿಸಿದರೆ ಅವಳಿಗೆ ಬಹಳ ಪ್ರೀತಿ, ಅವಳು ಭಕ್ತರ ನೋವನ್ನು ಹರಣ ಮಾಡುತ್ತಾಳೆ. ದೇವಿಗೆ ಮಲ್ಲಿಗೆಯ ಹೂವು ಇಷ್ಟವಾದ ಪುಷ್ಪವಾಗಿದೆ.

ತದಿಗೆಯ ಮತ್ತೊಂದು ಆಚರಣೆ ಎಂದರೆ, ತದಿಗೆಯಂದು ಬ್ರಹದ್ಗೌರೀ ವ್ರತವನ್ನು ಮಾಡುತ್ತಾರೆ. ಬ್ರಹತೀ ವೃಕ್ಷದಲ್ಲಿ ಗೌರಿಯನ್ನು ಆಹ್ವಾನಿಸಿ ಪೂಜಿಸುತ್ತಾರೆ. ಬ್ರಹದ್ಗೌರಿಯು ಚತುರ್ಭುಜಳಾಗಿದ್ದು ಪಾಶಾಂಕುಶ ಧರಳಾಗಿ, ಕೈಯಲ್ಲಿ ಕಮಂಡಲು ಜೊತೆಗೆ ಚಿಕ್ಕ ಪಾತ್ರೆ ಹಿಡಿದಿರುವಳು. ಬ್ರಹದ್ಗೌರಿ ವ್ರತವನ್ನು ಮಾಡುವುದರಿಂದ ಸೌಭಾಗ್ಯ, ಧನಧಾನ್ಯ, ಐಶ್ವರ್ಯ, ಪುತ್ರಪೌತ್ರಾದಿಗಳನ್ನು ಪಡೆದು ಸುಖವಾಗಿ ಬಾಳುತ್ತಾರೆ ಎಂದು ಪ್ರತೀತಿ. ನೆಲ್ಲಿಕಾಯಿ, ಬುಡ ಶಾಖೇಗಳಿಂದ ಕೂಡಿದ ಬೃಹತೀ ಗಿಡವನ್ನು ಬೇರು ಸಹಿತ ತಂದು ಮರಳಿನಲ್ಲಿ ಹೂತು ಹಾಕಿ ಐದು ಜನ ಸ್ತ್ರೀಯರು ಕೂಡಿ ಪೂಜೆ ಮಾಡಿ, ಐದು ಎಳೆಗಳುಳ್ಳ ದೋರವನ್ನು ಧರಿಸಬೇಕು. ಈ ವ್ರತವನ್ನು ಪಾರ್ವತೀ ದೇವಿಯೇ ತಿಳಿಸಿದ್ದಳು. ವ್ಯಾಸರು ಕುಂತಿದೇವಿಗೆ ಹೇಳಿದ್ದರು.


ಕೂಷ್ಮಾಂಡಾ

ಸುರಾ ಸಂಪೂರ್ಣ ಕಲಶಂ ರುಧಿರಾಪ್ಲುತಮೇವ ಚ|
ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ||

ನಾಲ್ಕನೆಯ ದಿನ ಪೂಜೆಗೊಳ್ಳುವ ದೇವಿ ಕೂಷ್ಮಾಂಡಾ ರೂಪವಾಗಿದೆ. ತನ್ನ ನಗುವಿನಿಂದ ಅಂಡ ಎಂದರೆ ಬ್ರಹ್ಮಾಂಡವನ್ನು ಸೃಷ್ಟಿಸುವ ರೂಪವೇ ಕೂಷ್ಮಾಂಡಾ ದೇವಿಯದ್ದಾಗಿದೇ. ನಾಲ್ಕನೇ ದಿಂದ ಚತುರ್ಥಿಯಂದು ಕೂಷ್ಮಾಂಡಾ ದೇವಿಯ ಪೂಜೆ ಮಾಡುತ್ತೇವೆ. ಕೂಷ್ಮಾಂಡಾದೇವಿಯು ಪ್ರಕೃತಿಯ ಸೃಷ್ಟಿಯನ್ನು ತನ್ನ ದೈವಿಕ ಮತ್ತು ಪ್ರಭಾವಿ ನಗುವಿನೊಂದಿಗೆ ಮಾಡುತ್ತಾಳೆ. ಕೂಷ್ಮಾಂಡಾ ದೇವಿಯು ಸೂರ್ಯಮಂಡಲ ಲೋಕದಲ್ಲಿ ವಾಸಿಸುತ್ತಾಳೆ. ಅವಳ ಪ್ರಕಾಶ ಪ್ರಪಂಚಕ್ಕೆಲ್ಲಾ ಪ್ರಪಂಚದ ಪ್ರಾಣಿಗಳಿಗೆಲ್ಲ ಬೆಳಕನ್ನು ನೀಡುವಂತಹದ್ದಾಗಿದೆ. ಅಷ್ಟ ಭುಜಗಳುಳ್ಳ ದೇವಿಯಾಗಿದ್ದಾಳೆ. ಅವಳ ಕೈಗಳಲ್ಲಿ ಕಮಂಡಲು, ಧನುಷ್‌, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ ಮತ್ತು ಗದೆಗಳಿವೆ. ದೇವಿಯು ಸಿಂಹ ವಾಹಣೆಯಾಗಿದ್ದು ಹಳದಿ ಬಣ್ಣ ಅವಳ ಪ್ರಿಯ ಬಣ್ಣ. ಬಲಿಗಳಲ್ಲಿ ಅವಳಿಗೆ ಕುಂಬಳಕಾಯಿಯೇ ಪ್ರಿಯವಾಗಿದೆ. ಸಂಸ್ಕೃತದಲ್ಲಿ ಕುಂಬಳಕಾಯಿಗೆ ಕೂಷ್ಮಾಂಡ ಎಂದು ಕರೆಯುತ್ತಾರೆ ಹೀಗಾಗಿ ಕೂಷ್ಮಾಂಡದ ಆಕಾರದಲ್ಲಿರುವ ಬ್ರಹಾಂಡದ ಸೃಷ್ಟಿ ಕರ್ತಗಳಾದ ದೇವಿಗೆ ಕೂಷ್ಮಾಂಡಾ ಎನ್ನುತ್ತಾರೆ. ಕೂಷ್ಮಾಂಡಾ ದೇವಿಯ ಉಪಾಸನೆ ಮಾಡುವುದುರಿಂಧ ಭಕ್ತನ ಮನಸ್ಸು ಅನಾಹತ ಚಕ್ರದಲ್ಲಿ ನೆಲೆ ನಿಲ್ಲುತ್ತದೆ. ದೇವಿಯ ಉಪಾಸನೆಯಿಂದ ರೋಗ ಮುಕ್ತನಾಗಿ ಆರೋಗ್ಯವಂತನಾಗಿ ಎಲ್ಲ ಅನಿಷ್ಟಗಳ ನಿವೃತ್ತಿ ಮಾಡಿಕೊಂಡು ಸುಖ ಸಮೃದ್ಧಿಯ ಜೀವನವನ್ನು ಮಾಡುತ್ತಾನೆ. ಕೆಂಪು ಬಣ್ಣದ ಪುಷ್ಪಗಳು ಅವಳಿಗೆ ಅತ್ಯಂತ ಪ್ರಿಯವಾಗಿರುತ್ತವೆ. ಭಕ್ತರು ಮಾಲ್ಪುಆ ಸಿಹಿ ತಿನಸು ದೇವಿಗೆ ಪ್ರೀತಿಯಂದು ವಿಶೇಷವಾಗಿ ನಿವೇದಿಸುತ್ತಾರೆ.

ಸ್ಕಂದ ಮಾತಾ

ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಮ್‌ |
ಶುಭದಾಸ್ತು ಸದಾ ದೇವೀ ಸ್ಕಂದ ಮಾತಾ ಯಶಸ್ವಿನಿ

ದೇವಿಯ ಐದನೇ ದಿನ ರೂಪವನ್ನು ಸ್ಕಂದ ಮಾತಾ ಎನ್ನಲಾಗುತತದೆ. ಕುಮಾರ, ಕಾರ್ತೀಕೇಯ, ಸ್ಕಂದ, ಸುಬ್ರಹ್ಮಣ್ಯ ಎಂಬ ಹೆಸರಿನಿಂದ ಪ್ರಸಿದ್ಧನಾಗಿರುವ ಮಯೂರವಾಹನನ ಮಾತೆಯೇ ಈ ಸ್ಕಂದಮಾತಾ. ದೇವಾಸುರ ಸಂಗ್ರಾಮದಲ್ಲಿ ದೇವತೆಗಳ ನಾಯಕನಾಗಿ ತಾರಕಾಸುರ ವಧೆಯನ್ನು ಮಾಡಿದ ಕುಮಾರ ಸ್ಕಂದನ ಮಾತೆಯ ಪೂಜೆಯಿಂದ ಭಕ್ರನ ಮನಸ್ಸು “ವಿಶುದ್ಧ” ಚಕ್ರದಲ್ಲಿ ನಿಲ್ಲತ್ತದೆ. ವಿಶುದ್ಧ ಚಕ್ರದಲ್ಲಿ ನಿಲ್ಲುವುದು ಎಂದರೆ ಹೊರಗಿನ ಆಗುಹೋಗುಗಳಿಂದ ದೂರ ಇದ್ದು ಮನಸ್ಸು ಸಂಪೂರ್ಣವಾಗಿ ದೇವಿಯಲ್ಲಿ ಯೇ ನೆಲೆಸುವುದು ಆಗಿದೆ. ಭಕ್ತನ ಹಿಂದೆ ದೇವಿಯ ಪ್ರಭಾ ಮಂಡಲವು ಸದಾ ಹರಡಿಕೊಂಡಿದ್ದು ದೇವಿಯ ಮಗುವನ್ನು ಸಂರಕ್ಷಿಸುವಂತೆ ಭಕ್ತನನ್ನು ಸದಾ ಕಾಪಾಡುತ್ತಾಳೆ. ಐದನೇ ದಿನ ಪಂಚಮಿಯಂದು ಸ್ಕಂದ ಮಾತಾಳನ್ನು ಪೂಜಿಸಬೇಕು. ದೇವಿಯು ಚತುರ್ಭುಜೆಯಾಗಿದ್ದು ಎರಡು ಕೈಗಳಲ್ಲಿ ಕಮಲಗಳನ್ನು ಇನ್ನೆರಡರಲ್ಲಿ ಕಮಂಡಲು ಮತ್ತು ಘಂಟೆ ಹಿಡಿದಿರುವಳು. ಅವಳ ತೊಡೆಯಮೇಲೆ ಮಗನಾದ ಸ್ಕಂದನು ಕುಳಿತಿರುವನು. ದೇವಿಯು ಸಂಪೂರ್ಣ ಗೌರ ವರ್ಣದವಳಾಗಿದ್ದು ಕಮಲದ ಆಸನದಲ್ಲಿ ಕುಳಿತಿರುವಳು ಆದ್ದರಿಂದ ಅವಳನ್ನು ಪದ್ಮಾಸನಾದೇವಿ ಎಂದೂ ಕರೆಯುತ್ತಾರೆ. ಸಿಂಹವು ದೇವಿಯ ವಾಹನವಾಗಿದೆ. ಅವಳಿಗೆ ಹಸಿರು ಬಣ್ಣ ಪ್ರಿಯವಾದ ಬಣ್ಣವಾದರೆ ಬಾಳೆಹಣ್ಣು ಪ್ರೀತಿಯ ಫಲವಾಗಿದೆ. ಇವಳನ್ನು ಕೆಂಪು ಬಣ್ಣದ ಪುಷ್ಪಗಳಿಂದ ಪೂಜಿಸಿದರೆ ಅವಳಿಗೆ ಬಹಳ ಪ್ರೀತಿ ಇವಳು ಹಳದಿ ಬಣ್ಣದ ವಸ್ತ್ರವನ್ನು ಧರಿಸಿರುತ್ತಾಳೆ.

ಕಾತ್ಯಾಯನಿ ದೇವಿ


ಚಂದ್ರ ಹಾಸೋಜ್ವ್ವಲಕರಾ ಶಾರ್ದೂಲವರ ವಾಹನಾ|
ಕಾತ್ಯಾಯನೀ ಶುಭಂ ದದ್ಯಾದ್ದೇವಿ ದಾನವಘಾತಿನಿ||

ಆರನೇ ದಿನ ಷಷ್ಠಿ ತಿಥಿಯಂದು ಪೂಜಿಸುವ ರೂಪ ಕಾತ್ಯಾಯನಿ ದೇವಿಯದು. ಇವಳನ್ನು ಶಕ್ತಿ ಸ್ವರೂಪಿಣಿ ಎನ್ನಲಾಗುತ್ತದೆ. ಭಕ್ತನು ಕಾತ್ಯಾಯನೀ ದೇವಿಯ ಉಪಾಸನೆ ಮಾಡುವ ಸಮಯದಲ್ಲಿ ಆಜ್ಞಾ ಚಕ್ರದಲ್ಲಿರುತ್ತಾನೆ ಈ ಚಕ್ರವು ಸಾಧನೆಯ ಹಾದಿಯಲ್ಲಿ ಬಹಳ ಮಹತ್ವದ್ದು ಈ ಯೋಗ ಸಾಧನೆಯಲ್ಲಿ ಭಕ್ತನು ಭಗವತಿಗೆ ತನ್ನ ಸರ್ವಸ್ವವನ್ನೂ ಅರ್ಪಿಸುತ್ತಾನೆ. ಭಕ್ತಿಯ ಪರಮಾವಧಿ ಎಂದರೇ ಸಂಪೂರ್ಣ ಶರಣಾಗತಿಯಾಗಿರುತ್ತದೆ. ಆದ್ದರಿಂದ ದೇವಿಯಲ್ಲಿ ತಮ್ಮ ಆತ್ಮ ಸಮರ್ಪಣೆ ಮಡಿದ ಭಕ್ತರಿಗೆ ಸಕಲ ಇಷ್ಟಾರ್ಥ ಧರ್ಮ ಅರ್ಥ ಕಾಮ ಮೋಕ್ಷಗಳನ್ನು ನೀಡುತ್ತಾಳೆ. ಇವಳು ಕೂಡ ಚತುರ್ಭುಜೆಯಾಗಿದ್ದು, ಬಲ ಗೈ ಮೇಲಿನ ಕೈ ಅಭಯ ಮುದ್ರೆಯಲ್ಲಿದೆ, ಕೆಳಗಿನ ಕೈ ವರಮುದ್ರೆಯಲ್ಲಿದೆ ಎಡಗೈ ಮೇಲಿನ ಕೈಲಿ ಖಡ್ಗವಿದೆ, ಕೆಳಗಿನ ಕೈಲಿ ಕಮಲ ಹಾಗೂ ತ್ರಿಶೂಲಗಳನ್ನು ಧರಿಸಿರುತ್ತಾಳೆ. ಸಿಂಹ ವಾಹನೆಯಾಗಿರುವ ದೇವಿಗೆ ಜೇನು ತುಪ್ಪವೆಂದರೆ ಬಹು ಪ್ರೀತಿ. ಕೇಸರಿ ಬಣ್ಣದ ವಸ್ತ್ರವನ್ನು ಧರಿಸಿರುತ್ತಾಳೆ. ಆದರೆ ಬೂದು ಬಣ್ಣ ಅವಳ ಪ್ರೀತಿಯ ಬಣ್ಣವಾಗಿದೆ.ದೇವಿಗೆ ಕೆಂಪು ಬಣ್ಣದ ಪುಷ್ಟಗಳು ಪ್ರಿಯವಾದವು. ದೇವಿಯನ್ನು ಪೂಜಿಸುವ ಮಂತ್ರ “ಓಂ ಕಾತ್ಯಾಯನಿನೈ ನಮಃ”

ಕಾಲರಾತ್ರಿ ದೇವಿ.

ಏಕವೇಣೀ ಸಪಾಕರ್ಣಪೂರಾ ನಗ್ನಾ ಖರಾಸ್ಥಿತಾ|
ಲಂಬೋಷ್ಠೀ ಕರ್ಣಿಕಾಕರ್ಣೀ ತೈಲಾಭ್ಯಕ್ತ ಶರೀರಿಣೀ||
ವಾಮಪಾದೋಲ್ಲಸಲ್ಲೋಹಲತಾಕಂಟಕಭೂಷಣಾ|
ವರ್ಧನಮೂರ್ಧಧ್ವಜಾ ಕೃಷ್ಣಾ ಕಾಲರಾತ್ರೀ ಭಯಂಕರಿ

ಏಳನೇ ದಿನ ಸಪ್ತಮಿಯಂದು ಪೂಜೆಗೊಳ್ಳುವ ದೇವಿ ಕಾಲರಾತ್ರಿ ಅಥವಾ ಕಾಳಿ ದುಷ್ಟರಾದ ಶುಂಭ ನಿಶುಂಭರ ಸಂಹಾರಕ್ಕೆ ಈ ಅವತಾರವನ್ನು ದೇವಿಯು ತೆಗೆದುಕೊಂಡಿರುತ್ತಾಳೆ. ಅಮಾವಾಸ್ಯೆಯಂತಹ ಕಪ್ಪಾದ ಬಣ್ಣದಿಂದಲೇ ಅವಳಿಗೆ ಕಾಳಿ ಎಂಬ ಹೆಸರು ಬಂದಿರುತ್ತದೆ. ಅವಳು ತನ್ನ ಕೂದಲನ್ನು ಹರಡಿಕೊಂಡಿರುತ್ತಾಳೆ. ಕೊರಳಲ್ಲಿ ಮಿಂಚಿನಂತಿರುವ ಮಾಲೆ ಇರುತ್ತದೆ. ಇವಳಿಗೆ ಮೂರು ಕಣ್ಣುಗಳಿದ್ದು ಮೂರು ಕಣ್ಣುಗಳೂ ಬ್ರಹ್ಮಾಂಡದಂತೆ ಗೋಲಾಕಾರವಾಗಿದೆ. ಕಣ್ಣುಗಳಲ್ಲಿ ವಿದ್ಯತ್ತಿನಂತಹ ಹೊಳಪಿದೆ. ಯಾವಾಗಲೂ ಶುಭ ಫಲವನ್ನು ಕೊಡುವವಳಾದ್ದರಿಂದ ಇವಳನ್ನು ಶುಭಂಕರೀ ಎನ್ನುತ್ತಾರೆ. ಇವಳು ಕೂಡ ಚತುರ್ಭುಜೆ ಯಾಗಿದ್ದು, ಒಂದು ಕೈ ಲಿ ಖಡ್ಗ, ಮತ್ತೊಂದರಲ್ಲಿ ತಿಶೂಲ, ಮೂಗು ಮತ್ತು ಇನ್ನೊಂದರಲ್ಲಿ ಅಭಯ ಹಸ್ತ ಹಿಂದಿರುವ ಇವಳ ವಾಹನ ಕತ್ತೆಯಾಗಿದೆ. ಕೇಸರಿ ಬಣ್ಣವು ಇವಳ ಪ್ರೀತಿಯ ಬಣ್ಣವಾದರೂ ಕೆಂಪು ವಸ್ತ್ರ ಧರಿಸಿರುತ್ತಾಳೆ. ಬೆಲ್ಲ ಅವಳ ಪ್ರೀತಿಯ ಪದಾರ್ಥವಾಗಿದ್ದು ಬೆಲ್ಲ ಹಾಗೂ ಬೆಲ್ಲದಿಂದ ತಯಾರಿಸಿದ ಪದಾರ್ಥಗಳನ್ನು ಭಕ್ತರು ನೈವೇದ್ಯ ಮಾಡಿ ಪ್ರಸಾದ ಸೇವಿಸುತ್ತಾರೆ. ಜಾಜಿ ಮಲ್ಲಿಗೆ ಅಥವಾ ರಾತ್ರಿ ಮಲ್ಲಿಗೆ ದೇವಿಯ ಇಷ್ಟದ ಹೂವು.

ಕಾಲರಾತ್ರಿ ದೇವಿ ಪೂಜೆಯ ದಿನದಂದು ಭಕ್ತನು “ಸಹಸ್ರಾರ” ಚಕ್ರದಲ್ಲಿರುತ್ತಾನೆ. ಅವನಿಗಾಗಿ ಬ್ರಹ್ಮಾಂಡದ ಎಲ್ಲ ಸಿದ್ಧಿಯ ಬಾಗಿಲುಗಳು ತೆರೆದುಕೊಂಡಿರುತ್ತವೆ ಅವನ ಸಾಧನೆಯಿಂದ ಎಲ್ಲ ಪಾಪ ವಿಘ್ನಗಳೂ ಪರಿಹಾರವಾಗಿ ಅಕ್ಷಯ ಲೋಕದ ಪುಣ್ಯ ಪ್ರಾಪ್ತಿಯಾಗುತ್ತದೆ. ದೇಔಇಯ ಸ್ಮರಣೆ ಮಾತ್ದಿಂದಲೇ ಭೂತ ಪ್ರೇತ ಪಿಶಾಚಗಳಷ್ಟೇ ಅಲ್ಲದೇ ದೈನ್ಯ ದಾನವರೂ ಓಡಿ ಹೋಗುತ್ತಾರೆ. ಅಗ್ನಿಭಯ, ಜಲಭಯ, ಶತ್ರುಭಯ, ರಾತ್ರಿಭಯ ಮುಂತಾದ ಭಯಗಳನ್ನು ಪರಿಹರಿಸುತ್ತಾಳೆ.

ಮಹಾಗೌರೀ

ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರ ಧರಾ ಶುಚಿಃ|
ಮಹಾಗೌರೀ ಶುಭಂ ದದ್ಯಾನ್ಮಹಾದೇವಪ್ರಮೋದದಾ||

ದುರ್ಗಾದೇವಿಯ ಇನ್ನೊಂದು ಹೆಸರು ಮಹಾಗೌರಿ ಎಂದಾಗಿದೆ. ಎಂಟನೇ ದಿನವಾದ ಅಷ್ಟಮಿಯಂದು ಪೂಜೆ ಗೊಳ್ಳುವ ದೇವಿ ಮಹಾಗೌರಿಯಾಗಿರುತ್ತಾಳೆ.ಇವಳು ಸಂಪೂರ್ಣ ಗೌರ ವರ್ಣವದವಳಾಗಿರುವುದರಿಂದ ಮಹಾಗೌರಿ. ಇವಳ ವಾಹನ ಬಿಳಿ ಆನೆ ಅಥವಾ ನಂದಿಯಾಗಿರುತ್ತದೆ. ನಂದಿ ಅಥವಾ ಆನೆ ಎರಡೂ ಬಿಳಿಯದ್ದೇ ಆಗಿರುತ್ತದೆ. ಚತುರ್ಭುಜೆ ಯಾಗಿದ್ದು ತ್ರಿಶೂಲ ಮತ್ತು ಡಮರು ಹಿಡಿದಿರುವ ಇವಳಿಗೆ ನವಿಲು ಗರಿಯ ಹಸಿರು ಬಣ್ಣ ಪ್ರಿಯವಾದ ಬಣ್ಣ ವಾಗಿರುತ್ತದೆ. ಭಕ್ತರು ದೇವಿಗೆ ತೆಂಗಿನಕಾಯಿ ನಿವೇದಿಸುತ್ತಾರೆ. ದೇವಿಗೆ ಜಾಜಿ ಅಥವಾ ರಾತ್ರಿಯಲ್ಲಿ ಅರಳುವ ಮಲ್ಲಿಗೆ ಬಹಳ ಪ್ರಿಯವಾದ ಹೂವಾಗಿದೆ.

ಇನ್ನೊಂದು ಕತೆಯ ಪ್ರಕಾರ ಮಹಾಗೌರಿಯು ಶಿವನನ್ನು ವರಿಸುವ ಸಲುವಾಗಿ ಕಠೋರ ತಪಸ್ಸು ಆಚರಿಸಿ ಅವಳ ಕಾಠಿಣ್ಯದ ವ್ರತದಿಂದ ಕಪ್ಪಾಗಿದ್ದಳು ಅವಳನ್ನು ಗಂಗೆಯಿಂದ ತೊಳೆದನಂತರ ಬೆಳ್ಳಗೆ ಆದಳು ಎಂದು ಹೇಳುತ್ತಾರೆ. ಮಹಾಗೌರಿಯ ಉಪಾಸನೆ ಬಹಳ ಶ್ರೇಷ್ಠ ಹಾಗೂ ಶೀಘ್ರ ಫಲದಾಯಕವಾಗಿದೆ. ದುಷ್ಟರ ಸಂಹಾರ ಮತ್ತು ಭಕ್ತರ ಉದ್ಧಾರಕ್ಕೇಂದೆ ಅವತಾರ ಮಡಿದ ದೇವಿಯು ಮುಂಬರುವ ಆಪತ್ತುಗಳನ್ನೂ ಪರಿಹರಿಸುವವಳಾಗಿದ್ದಾಳೆ.

ದುರ್ಗಾ ಪೂಜೆ

ಆಶ್ವಯುಜ ಅಷ್ಟಮಿಯಂದು ಮಾಡುವ ದುರ್ಗಾ ಪೂಜೆ ಬಹಳ ಶ್ರೇಷ್ಠವಾಗಿದೆ. ಮುಂಜಾನೆಯಿಂದ ಸಂಜೆಯವರೆಗೆ ಉಪವಾಸವಿದ್ದು ದೀಪಸ್ಥಂಬದಲ್ಲಿ ದೇವಿಯನ್ನು ಅವಾಹನೆ ಮಡಿ ದುರ್ಗಾ ದೀಪ ನಮಸ್ಕಾರ ಮತ್ತು ದುರ್ಗಾ ಸಪ್ತಶತಿ ಪಾರಾಯಣವನ್ನು ಮಾಡುವುದು ಬಹಳ ಶ್ರೇಷ್ಠವಾಗಿರುತ್ತದೆ. ವಿವಾಹವಾಗದ ಸ್ತೀ ಪುರುಷರು ವಿಶೇಷವಾಗಿ ಮಾಡುತ್ತಾರೆ. ಯಾವುದೇ ದಿನದಂದು ಬೇಕಾದರೂ ಮಾಡಬಹುದು ಆದರೆ ಅಷ್ಟಮಿ ದಿನ ಮಾಡುವುದು ಶ್ರೇಷ್ಠ. ಈ ದಿನ ಚಂಡಿಕಾ ಹೋಮವನ್ನು ಕೂಡ ವಿಶೇಷವಾಗಿ ಮಾಡುತ್ತಾರೆ.

ಸಿದ್ಧಿದಾತ್ರಿ

ಸಿದ್ಧ ಗಂಧರ್ವಯಕ್ಷಾದ್ವೈರಸುರೈಮರೈರಪಿ|
ಸೇವ್ಯಮಾನಾ ಸದಾ ಭೂಯಾತ್‌ ಸಿದ್ಧಿದಾ ಸಿದ್ಧಿದಾಯಿನಿ||

ಒಂಬತ್ತನೇ ದಿನ ನವಮಿಯಂದು ಸಿದ್ಧಿದಾತ್ರಿಯನ್ನು ಪೂಜಿಸುತ್ತೇವೆ. ಶಿವ ಪುರಾಣದ ಪ್ರಕಾರ ಶಿವನೂ ಕೂಡ ಇವಳಿಂದಲೇ ಸರ್ವಸಿದ್ಧಿಗಳನ್ನು ಪಡೆದಿದ್ದನು. ನವ ದುರ್ಗೆಯರಲ್ಲಿ ಕೊನೆಯ ರೂಪವಾದ್ದರಿಂದ ದೇವಿಯ ಪೂಜೆಯಿಂದ ಸರ್ವ ಸಿದ್ಧಿಗಳೂ ದೊರಕಿ ಭಕ್ತನು ಇಹ-ಪರ ಎರಡೂ ಲೋಕದ ಸುಖ ಅನುಭವಿಸುತ್ತಾನೆ ಎಂದು ಹೇಳುತ್ತಾರೆ. ಚತುರ್ಭುಜೆಯಾಗಿರುವ ದೇವಿಯು ಒಂದು ಕೈಲಿ ಪುಸ್ತಕ , ಒಂದರಲ್ಲಿ ಗದೆ ಮತ್ತೊಂದರಲ್ಲಿ ಬಿಲ್ಲೆ ಮತ್ತು ಕಮಲವನ್ನು ಹಿಡಿದಿರುವ ದೇವಿ ನಮ್ಮ ಸುರಕ್ಷತೆಯನ್ನು ಕಾಪಾಡುವವಳಾಗಿದ್ದಾಳೆ, ಅಸಹಜ ಘಟನೆಗಳು ತೊಂದರೆಗಳನ್ನು ನಿವಾರಿಸುವ ದೇವಿಗೆ ಗುಲಾಬಿ ಬಣ್ಣ ಪ್ರಿಯವಾಗಿದ್ದು ಎಳ್ಳು ಮತ್ತು ಎಳ್ಳಿನ ಪದಾರ್ಥಗಳಿಂದ ಪ್ರೀತಳಾಗುತ್ತಾಳೆ. ಜಾಜಿ ಹೂವು ಅಥವಾ ರಾತ್ರಿ ಮಲ್ಲಿಗೆ ದೇವಿಗೆ ಅತ್ಯಂತ ಪ್ರಿಯವಾದ ಪುಷ್ಟವಾಗಿದೆ.

ಶಿವನ ಬೇಡಿಕೆಯಂತೆ ದೇವಿಯು ಶಿವನ ಶರೀರದ ಅರ್ಧ ಭಾಗದಲ್ಲಿ ತಾನು ನೆಲೆಸಿ ಶಿವನನ್ನು ಅರ್ಧನಾರೀಶ್ವರನ್ನಾಗಿ ಮಾಡಿರುತ್ತಾಳೆ. ಸಿದ್ಧಿದಾತ್ರಿಯು ನಮ್ಮಲ್ಲಿ ಸಹಸ್ರಾರ ಚಕ್ರವನ್ನು ಪ್ರಚುರಗಳಿಸಿ ಮುಕ್ತಿಯನ್ನು ಪಡೆಯುವ ಮಾರ್ಗವನ್ನು ಸರಳ ಮಾಡಿ ಸಿದ್ಧಿಗಳನ್ನುಕೊಡುವುದರಿಂದ ಅವಳನ್ನು ಉಪಾಸನೆ ಮಾಡುವುದರ ಮಹತ್ವವು ಹೆಚ್ಚಿನದ್ದಾಗಿದೆ.

ಹೀಗೆ ಒಂಭತ್ತು ದಿನ ಒಂಭತ್ತು ರೂಪದಲ್ಲಿರುವ ದೇವಿಯನ್ನು ಪೂಜಿಸಿ ಆದಿನದ ವಿಶೇಷ ಭಕ್ಷ್ಯ ನೈವೇದ್ಯ ಮಾಡಿ ಮುತ್ತೈದೆಯರು ಕುಮಾರಿಯರಿಗೆ ಪೂಜಿಸಿ ದಾನ ದಕ್ಷಿಣೆಗಳನ್ನು ನೀಡಿ ಆಶೀರ್ವಾದ ಪಡೆಯುತ್ತೇವೆ. ಪ್ರತಿಯೊಂದು ರೂಪದಲ್ಲಿ ಕೂಡ ದೇವಿ ತನ್ನ ಮಹಿಮೆಗಳನ್ನು ತೋರಿಸಿ ಮಮತೆಯ ಮಾತೆಯಾಗಿ, ಶಕ್ತಿಯ ದೇವತೆಯಾಗಿ ಎಲ್ಲರನ್ನು ಆಶೀರ್ವಾದ ಮಾಡುತ್ತಾಳೆ.ಜರ್ಮನ್ ಏಕತಾ ದಿನ | German Unity Day in kannada

ಈ ಎಲ್ಲ ಪೂಜೆಯ ಹಿಂದಿನ ಉದ್ದೇಶ ನಮ್ಮಲ್ಲಿ ಸಾತ್ವಿಕ, ದೈವಿಕ ಅಂತಹಃ ಶಕ್ತಿ ವೃದ್ಧಿಸಿಕೊಂಡು ದೇವಿಯ ಆಶೀರ್ವಾದ ಪಡೆಯುವುದಾಗಿರುತ್ತದೆ. ನಮ್ಮ ಮನೆಯ ಹೆಣ್ಣು ಮಕ್ಕಳು ಬಾಲಕಿ, ಕುಮಾರಿ ಅಥವಾ ವಿವಾಹಿತಳಾಗಿದ್ದರೂ ಕೂಡ ಅವಳಲ್ಲಿ ದೈವಿ ಶಕ್ತಿ ಗುರುತಿಸಿ ಗೌರವ ಕೊಡಬೇಕು ಎಂಬ ಪಾಠ ನವರಾತ್ರಿ ಹಬ್ಬವು ಸಾರುತ್ತದೆ.

image 8

ಮಾಧುರಿ ದೇಶಪಾಂಡೆ, ಬೆಂಗಳೂರು

Copyright © All rights reserved Newsnap | Newsever by AF themes.
error: Content is protected !!