November 16, 2024

Newsnap Kannada

The World at your finger tips!

navarathri , goddess , festival

ನವರಾತ್ರಿ ( Navaratri )

Spread the love

“ನವರಾತ್ರಿ” ಎಂದರೆ ಒಂಬತ್ತು ರಾತ್ರಿಗಳು ಎಂದರ್ಥ. ಜಗನ್ಮಾತೆಯಾದ ದುರ್ಗಾದೇವಿಯು ಆಶ್ವಯಜ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ನವಮಿಯವರೆಗೆ ಒಟ್ಟು ಒಂಬತ್ತು ದಿನಗಳ ಕಾಲ “ಮಹಿಷಾಸುರ” ಎಂಬ ಅಸುರನೊಡನೆ ಹೋರಾಡಿ ಕೊನೆಗೆ ನವಮಿಯ ರಾತ್ರಿಯಲ್ಲಿ ಮಹಿಷನನ್ನು ಕೊಲ್ಲುತ್ತಾಳೆ. ಹೀಗಾಗಿ ಅವಳನ್ನು “ಮಹಿಷಮರ್ದಿನಿ” ಎನ್ನುತ್ತಾರೆ.

ಒಂಬತ್ತು ದಿನಗಳ ಕಾಲ ಹೋರಾಡಿ ಒಂಬತ್ತನೇ ದಿನದ ರಾತ್ರಿಯಲ್ಲಿ ಮಹಿಷಾಸುರನನ್ನು ಮರ್ದನ ಮಾಡಿದ ಪ್ರತೀಕವಾಗಿ ಒಂಬತ್ತು ದಿನಗಳ ಪರ್ಯಂತ ರಾತ್ರಿ ಕಾಲದಲ್ಲಿ ದುರ್ಗಾಮಾತೆಯ ಒಂಬತ್ತು ಅವತಾರ ರೂಪಗಳನ್ನು ಪೂಜಿಸುತ್ತಾರೆ. ಇದಕ್ಕೆ ‘ನವರಾತ್ರಿಪೂಜೆ’ ಎನ್ನುತ್ತಾರೆ.

ದುರ್ಗಾಮಾತೆಯು ರಾಕ್ಷಸರನ್ನು ಕೊಂದು ವಿಜಯವನ್ನು ಸಾಧಿಸಿದುದರ ಪ್ರತೀಕವಾಗಿ ಹತ್ತನೇ ದಿನವಾದ ದಶಮಿಯನ್ನು “ವಿಜಯದಶಮಿ” ಎಂಬುದಾಗಿ ಆಚರಿಸುತ್ತಾರೆ. ಹೀಗಾಗಿ ಒಟ್ಟು ಹತ್ತು ದಿನಗಳ ಆಚರಣೆಯಾಗುತ್ತದೆ. ಆದ್ದರಿಂದ ಅದನ್ನು “ದಸರಾ” ಎಂದು ಕೂಡಾ ಕರೆಯುತ್ತಾರೆ. “ದಸರಾ” ಎಂಬುದು “ದಶಹರಾ” ದ ಹೃಸ್ವರೂಪವಾಗಿದೆ.

“ನವರಾತ್ರಿ” ಎಂಬುದು ಒಂದು ಉಪವಾಸ ವ್ರತವಾಗಿದೆ. ಈ ವ್ರತ ಆಚರಿಸುವವರು ಹಗಲು ಹೊತ್ತಿನಲ್ಲಿ ಉಪವಾಸ ಇದ್ದು ರಾತ್ರಿ ಪೂಜೆಯಾದ ಬಳಿಕವೇ ಊಟ ಮಾಡುತ್ತಾರೆ. ಶರದೃತುವಿನ ಆಶ್ವಯುಜ ಮಾಸದಲ್ಲಿ ಆಚರಿಸುವ ನವರಾತ್ರಿಯನ್ನು ‘ಶರನ್ನವರಾತ್ರಿ’ ಎನ್ನುತ್ತಾರೆ. ಅನಿವಾರ್ಯ ಕಾರಣಗಳಿಂದಾಗಿ ಈ ಶರತ್ ಋತುವಿನಲ್ಲಿ ಆಚರಿಸಲಾಗದೇ ಇದ್ದವರು 6 ತಿಂಗಳ ನಂತರ ಬರುವ ವಸಂತ ಋತುವಿನ ಚೈತ್ರಮಾಸದಲ್ಲಿ ನವರಾತ್ರಿ ಆಚರಿಸುತ್ತಾರೆ. ಅದನ್ನು ‘ವಾಸಂತಿಕನವರಾತ್ರಿ’ ಅಥವಾ ‘ಚೈತ್ರನವರಾತ್ರಿ’ ಎನ್ನುತ್ತಾರೆ.

ದುರ್ಗಾ ಮಾತೆಯು ಕೇವಲ ಮಹಿಷಾಸುರ ಒಬ್ಬನನ್ನೇ ಕೊಂದುದಲ್ಲ. ಮಹಿಷಾಸುರನ ಜೊತೆಯಲ್ಲಿದ್ದ ಶಂಖ , ದುರ್ಗ , ಚಿಕ್ಷುರ , ಬಿಡಲ ಮೊದಲಾದ ಅನೇಕ ರಕ್ಕಸರನ್ನು ಮತ್ತು ಆ ಬಳಿಕ ಜನ್ಮ ತಾಳಿ ಬಂದಿದ್ದ ಧೂಮ್ರಾಕ್ಷ , ಚಂಡ , ಮುಂಡ , ರಕ್ತಬೀಜ , ಶುಂಭ , ನಿಶುಂಭ ಮೊದಲಾದ ಅಸಂಖ್ಯಾತ ರಕ್ಕಸರನ್ನು ಕೂಡಾ ಆಕೆಯು ಕೊಂದಿದ್ದಳು. ಚಂಡ-ಮುಂಡರನ್ನು ಕೊಂದು “ಚಾಮುಂಡಿ” ಅಥವಾ “ಚಾಮುಂಡೇಶ್ವರಿ” ಎನ್ನಿಸಿಕೊಂಡರೆ , ಶುಂಭಾಸುರನನ್ನು ಕೊಂದು “ಶುಂಭಾಂತಕಿ” ಎನ್ನಿಸಿಕೊಂಡಿದ್ದಳು ಮತ್ತು ನಿಶುಂಭನನ್ನು ಕೊಂದು “ನಿಶುಂಭಾಂತಕಿ” ಎಂತಲೂ ಕರೆಸಿಕೊಂಡಿದ್ದಳು. ಹೀಗಾಗಿ ದುರ್ಗಾಮಾತೆಯನ್ನು ಅರ್ಚಿಸುವಾಗ ಅವಳ ಈ ಎಲ್ಲಾ ಲೀಲಾ ವಿನೋದಗಳನ್ನು ಕೊಂಡಾಡುವ ಮಂತ್ರಗಳನ್ನು ಪಠಿಸುತ್ತಾರೆ.

ರಕ್ಕಸರನ್ನು ಕೊಲ್ಲಲು ದೇವಿಯು ತಾಳಿದ ಅನೇಕ ರೂಪಗಳಲ್ಲಿ ಒಂಬತ್ತು ರೂಪಗಳನ್ನು ನವರಾತ್ರಿಯ ಸಂದರ್ಭದಲ್ಲಿ ಪೂಜಿಸುತ್ತಾರೆ. ದುರ್ಗೆಯ ಆ ಒಂಬತ್ತು ರೂಪಗಳಿಗೆ ನವದುರ್ಗೆಯರು ಎನ್ನುತ್ತಾರೆ. ಶೈಲಪುತ್ರೀ , ಬ್ರಹ್ಮಚಾರಿಣೀ , ಚಂದ್ರಘಂಟಾ , ಕೂಷ್ಮಾಂಡೀ , ಸ್ಕಂದಮಾತಾ , ಕಾತ್ಯಾಯಿನೀ , ಕಾಲರಾತ್ರೀ , ಮಹಾಗೌರೀ ಮತ್ತು ಸಿದ್ಧಿಧಾತ್ರಿಯರೇ ಆ ನವದುರ್ಗೆಯರು.

ಪಾಡ್ಯದ ದಿನ ಯೋಗನಿದ್ರಾ ದುರ್ಗಾ ಪೂಜೆ , ಬಿದಿಗೆಯ ದಿನ ದೇವಜಾತ ದುರ್ಗಾಪೂಜೆ , ತದಿಗೆಯ ದಿನ ಮಹಿಷಾಸುರ ಮರ್ದಿನಿ ದುರ್ಗಾಪೂಜೆ , ಚೌತಿಯಂದು ಶೈಲಜಾತಾ ದುರ್ಗಾಪೂಜೆ , ಪಂಚಮಿಯ ದಿನ ದೂಮ್ರಹಾ ದುರ್ಗಾಪೂಜೆ , ಷಷ್ಠಿಯ ದಿನ ಚಂಡ-ಮುಂಡ ಹಾ ದುರ್ಗಾಪೂಜೆ , ಸಪ್ತಮಿಯ ದಿನ ರಕ್ತ ಬೀಜ ಹಾ ದುರ್ಗಾಪೂಜೆ , ದುರ್ಗಾಷ್ಠಮಿಯ ದಿನ ನಿಶುಂಭ ಹಾ ದುರ್ಗಾಪೂಜೆ ಮತ್ತು ಮಹಾನವಮಿಯ ದಿನ ಶುಂಭ ಹಾ ದುರ್ಗಾಪೂಜೆ ನೆರವೇರಿಸುತ್ತಾರೆ. ಅಷ್ಟೇ ಅಲ್ಲದೇ ಸಪ್ತಮಿಯ ಮೂಲಾನಕ್ಷತ್ರದಂದು ಶಾರದೆಯ ವಿಗ್ರಹ ಇಟ್ಟು ಪೂಜಿಸುತ್ತಾರೆ. ಶಾರದೆಯ ವಿಗ್ರಹ ಲಭ್ಯವಿಲ್ಲದಿದ್ದಲ್ಲಿ ವೇದ ಪುರಾಣಗಳೇ ಮೊದಲಾದ ಪವಿತ್ರ ಗ್ರಂಥಗಳ ಪುಸ್ತಕಗಳನ್ನು ಇಟ್ಟು “ಶಾರದಾಪೂಜೆ”ಯನ್ನು ನೆರವೇರಿಸುತ್ತಾರೆ. ಹಾಗೂ ನವಮಿಯಂದು ಆಯುಧಗಳನ್ನು ಇಟ್ಟು “ಆಯುಧಪೂಜೆ” ಪೂಜೆ ಮಾಡುತ್ತಾರೆ. ವಿಜಯ ದಶಮಿಯಂದು ಪೂಜೆಯ ನಂತರ ಎಲ್ಲಾ ವಿಗ್ರಹಗಳನ್ನು ವಿಸರ್ಜಿಸುತ್ತಾರೆ.

Copyright © All rights reserved Newsnap | Newsever by AF themes.
error: Content is protected !!