ಅಖಂಡ ಭಾರತ ನಿರ್ಮಾಣದಲ್ಲಿ ಭಾರತದ ವೀರಪುರುಷ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ನಿಸ್ವಾರ್ಥ ಸೇವೆ ಚಿರಸ್ಮರಣೀಯವಾದುದು. ‘ಉಕ್ಕಿನ ಮನುಷ್ಯ’ ಎಂದೇ ಖ್ಯಾತಿ ಪಡೆದಿದ್ದ ಭಾರತದ ಮೊದಲ ಉಪ ಪ್ರಧಾನಿ ಹಾಗೂ ಗೃಹಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ದೂರದೃಷ್ಟಿ ಹಾಗೂ ಕಾರ್ಯಕ್ಷಮತೆ ಭವ್ಯ ಭಾರತದ ಏಕತೆಗೆ ಮೂಲಕಾರಣವಾಗಿದೆ. ಭಾರತವಿಂದು ವಿಶ್ವಮಟ್ಟದಲ್ಲಿ ಪ್ರಜ್ವಲಿಸಲು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರೇ ಮುಖ್ಯ ಕಾರಣರು. ದೇಶಪ್ರೇಮಿ ಭಾರತೀಯರ ಕಣ್ಮಣಿಯಿವರು.
ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಭಾರತ ದೇಶ ಐನೂರಕ್ಕೂ ಹೆಚ್ಚು ಸಂಸ್ಥಾನಗಳಲ್ಲಿ ಹರಿದು ಹಂಚಿಹೋಗಿತ್ತು. ಅವೆಲ್ಲವನ್ನೂ ಒಗ್ಗೂಡಿಸಿ ಗಣರಾಜ್ಯ ಸ್ಥಾಪಿಸುವಲ್ಲಿ ಶ್ರಮಿಸಿದವರಿವರು. ಹಾಗಾಗಿ ಪಟೇಲರನ್ನು ಸ್ಮರಿಸುವುದೆಂದರೆ ಅವರ ಜನ್ಮ ದಿನಾಚರಣೆಯ ಈ ದಿನದಂದು ನಮ್ಮ ರಾಷ್ಟ್ರದ ಭದ್ರತೆ, ಘನತೆ, ಏಕತೆ ಕಾಪಾಡುವಲ್ಲಿ ನಾವೆಲ್ಲರೂ ಸದಾ ಸಿದ್ಧರಾಗಿರುತ್ತೇವೆನ್ನುವ ಪ್ರತಿಜ್ಞೆ ಮಾಡುವುದೇ ಆಗಿದೆ. ದೇಶದ ಅಭಿವೃದ್ಧಿಗೆ ನಮ್ಮಿಂದಾಗುವ ಕೆಲಸಗಳನ್ನು ಪ್ರಾಮಾಣಿಕ ಬದ್ಧತೆಯಿಂದ ಮಾಡುವಲ್ಲಿ ಇಚ್ಛಾಶಕ್ತಿ ತೋರಿದರೆ ಅದೇ ದೇಶ ಸೇವೆ. ಆಗ ಮಾತ್ರ ಪಟೇಲರ ಕನಸಿನ ಭಾರತ ನಮ್ಮ ಮುಂದೆ ಸಾಕಾರ.
ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಗುಜರಾತ್ ನ ನಾಡಿಯಾಡ್ ನಲ್ಲಿ ಜನಿಸಿದ್ದು 1875 ರ ಅಕ್ಟೋಬರ್ 31 ರಂದು. ನಿಧನರಾದದ್ದು 1950 ರ ಡಿಸೆಂಬರ್ 15 ರಂದು.
ವೃತ್ತಿಯಲ್ಲಿ ಅಹಮದಾಬಾದ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಕಾನೂನಿನ ಬ್ಯಾರಿಸ್ಟರ್ ಆಗಿದ್ದ ಸರ್ದಾರ್ ಪಟೇಲರು 1917 ರಿಂದ 1924 ರ ತನಕ ಅಹಮದಾಬಾದ್ ನಲ್ಲಿ ಭಾರತದ ಮೊದಲ ಪಾಲಿಕೆ ಕಮಿಷನರ್ ಆಗಿ ಕಾರ್ಯನಿರ್ವಹಿಸಿದವರು. 1924 ರಿಂದ 1928 ರ ತನಕ ಅಧ್ಯಕ್ಷರಾಗಿದ್ದರು.
1928 ರಲ್ಲಿ ಬರ್ಡೊಲಿ ಚಳುವಳಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದರಿಂದ ಜನತೆ ಸರ್ದಾರ್ ಎಂದು ಬಿರುದು ನೀಡಿತು. ಸರ್ದಾರ್ ಎಂದರೆ ‘ನಾಯಕ’ ಎಂದರ್ಥ. 1931 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧಿವೇಶನದಲ್ಲಿ ಅಧ್ಯಕ್ಷರಾಗಿದ್ದರು. ಸ್ವಾತಂತ್ರ್ಯ ಆಂದೋಲನದಲ್ಲಿ ಅನೇಕ ಬಾರಿ ಸೆರೆಮನೆ ವಾಸವನ್ನು ಮಾಡಿದ್ದರು. ಮಹಾತ್ಮ ಗಾಂಧಿಯವರ ಅಪಾರ ಅಭಿಮಾನಕ್ಕೂ ಪಾತ್ರರಾಗಿದ್ದರು. ಆದರೆ ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗುವ ಅವಕಾಶವನ್ನು ಮಹಾತ್ಮ ಗಾಂಧಿಯವರ ಕಾರಣದಿಂದಲೇ ವಂಚಿತರಾದುದು ಮಾತ್ರ ವಿಪರ್ಯಾಸ.
ಸರ್ದಾರ್ ಪಟೇಲರು ಭಾರತದ ವಿಭಜನೆಯ ಕಾರಣದಿಂದಾಗಿ ಹಿಂಸಾಚಾರದ ಸಮಯದಲ್ಲಿ ಆ ಭಾಗಗಳಲ್ಲಿ ಶಾಂತಿಯನ್ನು ಮತ್ತೆ ಸ್ಥಾಪಿಸಲು ದುಡಿದಿದ್ದರು. ಭಾರತಕ್ಕೆ ನೀಡಲ್ಪಟ್ಟ ಬ್ರಿಟಿಷ್ ವಸಾಹತುಶಾಹಿ ಪ್ರಾಂತ್ಯಗಳನ್ನು ಹೊಸದಾಗಿ ಸ್ವಾತಂತ್ರ್ಯ ಹೊಂದಿದ ರಾಷ್ಟ್ರವಾಗಿ ಯಶಸ್ವಿಯಾಗಿ ಏಕೀಕರಿಸಿದರು. ಸಂಯುಕ್ತ ಭಾರತವನ್ನು ರೂಪಿಸಿದರು. ಸುಮಾರು 565 ಸ್ವಯಂ ಆಡಳಿತದ ಸಂಸ್ಥಾನಗಳನ್ನು ಭಾರತಕ್ಕೆ ಸೇರಿಸಿದರು.
ಆಧುನಿಕ ಅಖಿಲ ಭಾರತ ಸೇವೆಗಳ ವ್ಯವಸ್ಥೆಯನ್ನು ಸ್ಥಾಪಿಸಿದ್ದಕ್ಕಾಗಿ ಅವರು “ಭಾರತದ ನಾಗರಿಕ ಸೇವಕರ ಪೋಷಕ ಸಂತ” ಎಂದು ನೆನಪಿಸಿಕೊಳ್ಳುತ್ತಾರೆ. ಅವರನ್ನು “ಭಾರತದ ಏಕೀಕರಣ ನೇತಾರ” ಎಂದೂ ಕರೆಯಲಾಗುತ್ತದೆ. ಪ್ರಪಂಚದ ಅತಿ ಎತ್ತರದ ಪ್ರತಿಮೆಯಾದ ಏಕತಾ ಪ್ರತಿಮೆಯನ್ನು 31 ಅಕ್ಟೋಬರ್ 2018 ರಂದು ದೇಶಕ್ಕೆ ಸಮರ್ಪಿಸಲಾಯಿತು, ಅದು ಸುಮಾರು 182 ಮೀಟರ್ ಎತ್ತರದ್ದಾಗಿದೆ.
More Stories
ನಿಮ್ಮ ಮನದ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೇ ಇಲ್ಲದಾಗ …?
ಎಳ್ಳು ಬೆಲ್ಲ ತಿಂದು ಅರೋಗ್ಯ ಹೆಚ್ಚಿಸಿಕೊಳ್ಳಿ
ಏಕಾದಶಿ ಉಪವಾಸದ ಬಗ್ಗೆ ವೈಜ್ಞಾನಿಕ ಚಿಂತನೆ ಏನು ಹೇಳುತ್ತದೆ?