ಗಣಿ ಉದ್ಯಮದ ಬಗ್ಗೆ ಅಪಪ್ರಚಾರ ಸಲ್ಲದು – ಜಿಲ್ಲಾ ಕ್ರಷರ್ ಮಾಲೀಕರ ಸಂಘದ ಉಪಾಧ್ಯಕ್ಷ ನಟರಾಜು

Team Newsnap
2 Min Read

ತಮ್ಮ‌ ಗಣಿ ಉದ್ಯಮದ ವಿರುದ್ದ ಸಾರ್ವಜನಿಕ ವಲಯದಲ್ಲಿ ತಪ್ಪು ಭಾವನೆ ಬರುವ ಸನ್ನಿವೇಶ ಸೃಷ್ಟಿಸಲು ಮುಂದಾಗಿರುವವರ ವಿರುದ್ಧ ಗಣಿ ಮತ್ತು ಕ್ರಷರ್ ಮಾಲೀಕರು ಸಿಡಿದೆದ್ದಿದ್ದಾರೆ.

ನಾವೂ ಸಹ ಗಣಿ ಇಲಾಖೆ ಸೇರಿದಂತೆ 13 ಇಲಾಖೆಗಳ ಷರತ್ತಿನೊಂದಿಗೆ ಕ್ರಷರ್ ಹಾಗೂ ಗಣಿಗಾರಿಕೆ ನಡೆಸಲು ಅನುಮತಿ ಪಡೆದರೂ, ಉದ್ಯಮದ ಬಗ್ಗೆ ಅಪಪ್ರಚಾರ ನಡೆಸುವುದು ಸರಿಯಲ್ಲ ಎಂದು ಜಿಲ್ಲಾ ಕ್ರಷರ್ ಮಾಲೀಕರ ಸಂಘದ ಉಪಾಧ್ಯಕ್ಷ ನಟರಾಜು ತಿಳಿಸಿದರು.

ನಗರದ ಕಲ್ಲಹಳ್ಳಿಯಲ್ಲಿ ರುವ ಸುಮರವಿ ಕಲ್ಯಾಣ ಮಂಟಪದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಗಣಿ ಮಾಲೀಕರುಗಳು ಕೆಲವರ ತಪ್ಪು ಗ್ರಹಿಕೆಯಿಂದ ಮಾಧ್ಯಮಗಳಲ್ಲಿ ಭಿನ್ನ ಸುದ್ದಿಗಳು ಪ್ರಕಟವಾಗುತ್ತಿವೆ. ಬ್ಲಾಸ್ಟಿಂಗ್ ಹಾಗೂ ಕ್ರಷಿಂಗ್ ಬಗ್ಗೆ ಸಂಪೂರ್ಣ ವಾಗಿ ತಿಳಿಯದವರಿಂದ ನಮ್ಮನ್ನು ಭ್ರಷ್ಟರು ಅಥವಾ ಕಳ್ಳರೆಂಬ ಭಾವನೆಯಿಂದ ನೋಡುವಂತಾಗಿದೆ. ಇದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಒಂದು ಗಣಿಗಾರಿಕೆ ಉದ್ಯಮ ನಡೆಸಲು ನಾಲ್ಕೈದು ಕೋಟಿ ರು ಹಣವನ್ನು ನಮ್ಮ ಇತರೆ ಆಸ್ತಿಗಳನ್ನು ಅಡವಿಟ್ಟು ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುತ್ತೇವೆ. ಅಪಪ್ರಚಾರ ಗಳಿಂದ ಉದ್ಯಮ ಸ್ಥಗಿತವಾಗಿದೆ. ನಮ್ಮ ಜೀವನ ನಿರ್ವಹಣೆ ಹಾಗೂ ನಮ್ಮನ್ನು ನಂಬಿರುವ ಕಾರ್ಮಿಕರ ಸ್ಥಿತಿ ಏನೆಂಬುದನ್ನು ಸಮಾಜ ಅರಿಯಬೇಕೆಂದರು.

70 ವರ್ಷದಿಂದ ಗಣಿಗಾರಿಕೆ:

ಬೇಬಿ ಬೆಟ್ಟದಲ್ಲಿ ಕಳೆದ ೬೦-೭೦ ವರ್ಷಗಳಿಂದ ಗಣಿಗಾರಿಕೆ ನಡೆಯುತ್ತಿದೆ. ಕನ್ನಂಬಾಡಿ ಆಣೆಕಟ್ಟೆ ನಮ್ಮ ಜೀವನಾಡಿ, ನಾವು ರೈತರ ಮಕ್ಕಳು, ಕೆ.ಆರ್.ಎಸ್.ಗೆ ಹಾನಿಯಾಗುವುದಾದರೆ ನಮ್ಮ ಉದ್ಯಮಗಳನ್ನು ಇತರೆಡೆಗೆ ವರ್ಗಾಯಿಸಲು ನಮ್ಮದೇನು ಅಭ್ಯಂತರವಿಲ್ಲ ಎಂದರು.

ಗಣಿಗಾರಿಕೆ ಹಾಗೂ ಕ್ರಷಿಂಗ್‌ನಿಂದ ಉತ್ಪಾದನೆಯಾಗುವ ಶೇ.೯೦ ಕಚ್ಛಾ ವಸ್ತುಗಳನ್ನು ಸರ್ಕಾರಿ ಕಾಮ ಗಾರಿಗಳಿಗೆ ಬಳಸಲಾಗುತ್ತಿದೆ. ಶೇ.೧೦ ರಷ್ಟು ಖಾಸಗಿ ಕ್ಷೇತ್ರಕ್ಕೆ ಬಳಕೆಯಾಗುತ್ತಿದ್ದು, ಇದನ್ನು ನಂಬಿ ಸಾವಿರಾರು ಕುಟುಂಬ ಗಳು, ಲಕ್ಷಾಂತರ ಕಾರ್ಮಿಕರು ಜೀವನ ನಡೆಸುತ್ತಿದ್ದು, ಹತ್ತಾರು ಸಾವಿರ ಯಂತ್ರೋಪಕರ ಣಗಳು ತುಕ್ಕು ಹಿಡಿಯುತ್ತಿವೆ ಎಂದು ಪರಿಸ್ಥಿತಿಯನ್ನು ಅವಲೋಕಿಸಿದರು.

ಜಿಲ್ಲೆಯಲ್ಲಿ 54 ಗಣಿ ಉದ್ಯಮಕ್ಕೆ ಸಿ.ಫಾರಂ ಹಾಗೂ 64 ಉದ್ಯಮಗಳಿಗೆ ಬಿ-1, ಪರವಾನಗಿ ಇದ್ದು, ಜಿಲ್ಲಾ ಡಳಿತದ ವಿಳಂಬ ನೀತಿಯಿಂದ ಇ.ಸಿ. ವಿತರಣೆ ತಡವಾಗುತ್ತಿದೆ ಎಂದರು.

ದೇಶದಲ್ಲಿ ಗಣಿಗಾರಿಕೆ ಸಂಬಂಧ ಏಕ ನೀತಿಯ ಕಾನೂನುಗಳು ಜಾರಿಯಾಗಿದ್ದು, ಅದೇ ಕಾನೂನನ್ನೇ ಬೇಬಿ ಬೆಟ್ಟ ವ್ಯಾಪ್ತಿಯ ಗಣಿಗಾರಿಕೆಗೂ ಜಾರಿಗೊಳಿಸಬೇಕು. ಆಣೆಕಟ್ಟೆ, ರಾಷ್ಟ್ರೀಯ ಹೆದ್ದಾರಿ, ಶಾಲಾ-ಕಾಲೇಜು, ಜನವಸತಿ ಪ್ರದೇಶಗಳ ವ್ಯಾಪ್ತಿಯಲ್ಲಿ ನಿರ್ಧಿಷ್ಟ ಮಾನದಂಡದ ಪ್ರಕಾರ ಗಣಿಗಾರಿಕೆ ನಡೆಸಲು ಅವಕಾಶವಿದ್ದು, ಇದರ ಉಲ್ಲಂಘನೆಗೆ ನಾವು ಮುಂದಾಗುವುದಿಲ್ಲವೆಂದರು.

ಪತ್ರಿಕಾ ಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ರಾಮಕೃಷ್ಣಪ್ಪ, ಸುನಿಲ್, ಅಶ್ವಿನ್ ಗೌಡ, ರವೀಂದ್ರ, ಅಶ್ವಥ್‌ನಾರಾಯಣ ಇತರರು ಹಾಜರಿದ್ದರು.

Share This Article
Leave a comment