January 16, 2025

Newsnap Kannada

The World at your finger tips!

rohini and sharat

ಮೈಸೂರು ಡಿಸಿ ಬಿ ಶರತ್ ವರ್ಗಾವಣೆ ಪ್ರಕರಣ: 2 ವಾರದಲ್ಲಿ ಇತ್ಯರ್ಥ ಮಾಡಿ – ಸಿಎಟಿಗೆ ಹೈಕೋರ್ಟ್ ಆದೇಶ

Spread the love

ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ಅವಧಿಪೂರ್ವ ವರ್ಗಾವಣೆ ಮಾಡಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಅಧಿಕಾರಿ ಬಿ.ಶರತ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಶನಿವಾರ ಅರ್ಜಿಯ ವಿಚಾರಣೆ ನಡೆಸಿದ ಪೀಠ, ಅರ್ಜಿಯನ್ನು ಮುಂದಿನ 2 ವಾರಗಳಲ್ಲಿ ಇತ್ಯರ್ಥಗೊಳಿಸುವಂತೆ ಹೈಕೋರ್ಟ್ ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣಕ್ಕೆ(ಸಿಎಟಿ) ನಿರ್ದೇಶಿಸಿದೆ.

ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಸಿಎಟಿಗೆ ನಿರ್ದೇಶಿಸಬೇಕು ಎಂದು ಕೋರಿ ಅಧಿಕಾರಿ ಬಿ. ಶರತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸತೀಶ್ ಚಂದ್ರ ಶರ್ಮಾ ಹಾಗೂ ನ್ಯಾ. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ಈ ನಿರ್ದೇಶನ ನೀಡಿದೆ.

ಪೀಠ ತನ್ನ ತೀರ್ಪಿನಲ್ಲಿ ಸಿಎಟಿ ರೂಲ್ಸ್-1993 ರ ನಿಯಮ 105ರ ಪ್ರಕಾರ ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ ದಿನದಿಂದ 3 ವಾರಗಳ ಒಳಗೆ ಪ್ರಕಟಿಸಬೇಕು. ಪಕ್ಷಗಾರರಿಗೆ ಸೂಚನೆ ಮೂಲಕ ತಿಳಿಸಿದೆ.

ಈ ಅವಧಿಯನ್ನು ಬದಲಿಸಲು ಬರುವುದಿಲ್ಲ. ಅದರಂತೆ ಈ ಪ್ರಕರಣದಲ್ಲಿ ಸಿಎಟಿ ಆದೇಶ ಕಾಯ್ದಿರಿಸಿದ ಡಿ.22ರ ನಂತರದ ಮೂರು ವಾರಗಳಲ್ಲಿ ತೀರ್ಪು ಪ್ರಕಟಿಸಬೇಕಿತ್ತು. ಆದರೆ ವಿಳಂಬ ಮಾಡಲಾಗಿದೆ. ಹೀಗಾಗಿ ಮುಂದಿನ 2 ವಾರಗಳಲ್ಲಿ ತೀರ್ಪು ಪ್ರಕಟಿಸಬೇಕು ಎಂದು ನಿರ್ದೇಶಿಸಿದೆ.

ಮರೆಯಾದ ಪ್ರಕರಣ :

ಜಿಲ್ಲಾಧಿಕಾರಿ ಹುದ್ದೆಗೆ ರೋಹಿಣಿ ಸಿಂಧೂರಿ ನೇಮಕ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಬಿ. ಶರತ್ ಅವರನ್ನು ಅವಧಿಪೂರ್ವ ವರ್ಗಾವಣೆ ಮಾಡಿತ್ತು. 2020ರ ಆ.29ರಂದು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಬಿ. ಶರತ್ ಅವರನ್ನು ಸೆ.27ರಂದು ತಿಂಗಳು ತುಂಬುವ ಮುನ್ನವೆ ಹುದ್ದೆಯಿಂದ ತೆರವು ಮಾಡಿತ್ತು.

ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಸ್ಥಳೀಯ ಸಂಘಟನೆಗಳು ಕೂಡ ಪ್ರತಿಭಟಿಸಿದ್ದವು. ಅಕ್ಟೋಬರ್ ಮೊದಲ ವಾರದಲ್ಲಿ ಸರ್ಕಾರದ ವರ್ಗಾವಣೆ ಕ್ರಮ ಪ್ರಶ್ನಿಸಿ ಬಿ. ಶರತ್ ಸಿಎಟಿ ಮೆಟ್ಟಿಲೇರಿದ್ದರು.

ಸೇವಾ ನಿಯಮಗಳನ್ನು ಉಲ್ಲಂಘಿಸಿ 2 ವರ್ಷ ತುಂಬುವ ಮೊದಲೆ ತನ್ನನ್ನು ವರ್ಗಾವಣೆ ಮಾಡಿರುವ ಸರ್ಕಾರದ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು.

ಅರ್ಜಿಗೆ ಆಕ್ಷೇಪಣೆ ಸಲ್ಲಿಸುವ ದಿನದಿಂದ ಹಿಡಿದು ವಾದ ಮಂಡನೆವರೆಗೂ ಸರ್ಕಾರ ವಿಳಂಬ ಧೋರಣೆ ಅನುಸರಿಸಿತು. ಅಂತಿಮವಾಗಿ ಬಿ. ಶರತ್ ಅವರನ್ನು ರೇಷ್ಮೆ ಮಾರುಕಟ್ಟೆ ಮಂಡಳಿ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಿತ್ತು. ಆದರೆ ಶರತ್ ಅನಾರೋಗ್ಯ ಕಾರಣ ನೀಡಿ ಅಧಿಕಾರ ಸ್ವೀಕರಿಸದೆ ಉಳಿದಿದ್ದಾರೆ.

ಇಂತಹ ಅನಾರೋಗ್ಯ ಪೀಡಿತ ಅಧಿಕಾರಿಯನ್ನು ಮೈಸೂರು ಡಿಸಿ ಹುದ್ದೆಗೆ ನಿಯೋಜಿಸಲು ಸಾಧ್ಯವಿಲ್ಲ ಎಂದು ಸರ್ಕಾರ ತನ್ನ ನಿಲುವನ್ನು ಸಿಎಟಿಗೆ ತಿಳಿಸಿತ್ತು.

ಡಿ.22ರಂದು ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ್ದ ಸಿಎಟಿ ತೀರ್ಪನ್ನು ಕಾಯ್ದಿರಿಸಿರುವುದಾಗಿ ತಿಳಿಸಿತ್ತು. ಆದರೆ ತೀರ್ಪು ಪ್ರಕಟಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೈಕೋರ್ಟ್​​ಗೆ ರಿಟ್ ಸಲ್ಲಿಸಿದ್ದ ಅಧಿಕಾರಿ ಶರತ್, ಸಿಎಟಿ ರೂಲ್ಸ್ 105ರ ಪ್ರಕಾರ ಕಾಯ್ದಿರಿಸಿದ ತೀರ್ಪನ್ನು ಮೂರು ವಾರಗಳಲ್ಲಿ ಪ್ರಕಟಿಸಬೇಕಿತ್ತು. ಹೀಗಾಗಿ ತೀರ್ಪು ಪ್ರಕಟಿಸಲು ಸಿಎಟಿಗೆ ನಿರ್ದೇಶಿಸಬೇಕು ಎಂದು ಕೋರಿದ್ದರು.

Copyright © All rights reserved Newsnap | Newsever by AF themes.
error: Content is protected !!