ಮೈಸೂರು ಡಿಸಿ ವರ್ಗಾವಣೆ: ಶರತ್‌ ವಿರುದ್ಧ ಸರ್ಕಾರವೇ ಸಲ್ಲಿಸಿದ ಅಫಿಡವಿಟ್‌ ಹೇಗಿದೆ ನೋಡಿ!

Team Newsnap
2 Min Read

ಮೈಸೂರು ಜಿಲ್ಲಾಧಿಕಾರಿಗಳ ವರ್ಗಾವಣೆ ಪ್ರಕರಣ ಸಿಎಟಿಯಲ್ಲಿ ಇನ್ನೂ ವಿಚಾರಣೆ ನಡೆಯುತ್ತಿದ್ದರೂ ಅದರ ಸುತ್ತ ನಡೆಯುತ್ತಿರುವ ಒಂದೊಂದು ಬೆಳವಣಿಗೆಗಳು ಚರ್ಚೆಗೆ ಗ್ರಾಸವಾಗಿವೆ.

ನಿರ್ಗಮಿತ ಡಿಸಿ ಬಿ.ಶರತ್ ವಿರುದ್ಧ ರಾಜ್ಯ ಸರ್ಕಾರವೇ ವಾರದ ಹಿಂದೆ 10 ಪುಟಗಳ ಅಫಿಡವಿಟ್ ಸಲ್ಲಿಸಿದೆ. ಆ ಪುಟಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದರೆ, ಸರ್ಕಾರ ಸಲ್ಲಿಸಿರುವ ಈ ಅಫಿಡವಿಟ್ ಅನ್ನು ಡಿ.14ರ ವಿಚಾರಣೆ ವೇಳೆ ಸಿಎಟಿ ಪರಿಗಣಿಸದ ಕಾರಣಕ್ಕೆ ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ ಎಂಬುದು ಈಗಿನ ಚರ್ಚೆಯ ವಸ್ತು ವಾಗಿದೆ.

ಸರ್ಕಾರದ ಇಷ್ಟೆಲ್ಲಾ ಕಸರತ್ತು ನಡೆಸಿ ಸಲ್ಲಿಸಿರುವ ಅಫಿಡವಿಟ್ ಅನ್ನು ಸಿಎಟಿ
ವಿಚಾರಣೆ ವೇಳೆ ಪರಿಗಣಿಸಲಿಲ್ಲ. ಬದಲಿಗೆ ಶರತ್ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ಮರುನೇಮಕ ಮಾಡಿ ಡಿ.22ರೊಳಗೆ ಆದೇಶ ಪ್ರಕಟಿಸುವಂತೆ ನಿರ್ದೇಶನ ನೀಡಿದೆ.

ರೋಹಿಣಿ ಸಿಂಧೂರಿ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಿಸಿದ ರಾಜ್ಯ ಸರ್ಕಾರ, ಆ ಜಾಗದಲ್ಲಿದ್ದ ಬಿ.ಶರತ್ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಿತ್ತು. ಈ ವಿಚಾರವಾಗಿ ಶರತ್ ಸಿಎಟಿ ಮೆಟ್ಟಿಲೇರಿದ್ದರು. ವಿಚಾರಣೆ ಕೂಡ 9 ಬಾರಿ ನಡೆದು ಡಿ.22ರಂದು ಅಂತಿಮ ನಿರ್ಧಾರ ಪ್ರಕಟವಾಗುತ್ತದೆ ಎಂಬ ಸುದ್ದಿಯೂ ಸದ್ದು ಮಾಡಿದೆ.

ಈ ನಡುವೆ ಕಳೆದ ನ.9ರಂದು ರಾಜ್ಯ ಸರ್ಕಾರದ ಪರವಾಗಿ ಅಡ್ವೋಕೇಟ್ ಜನರಲ್ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ.ಶರತ್ ವಿರುದ್ಧ ಅಫಿಡೇವಿಟ್ ಸಲ್ಲಿಸಿರುವ ಮಾಹಿತಿ ಬಹಿರಂಗವಾಗಿದೆ.

ಅಫಿಡವಿಟ್‌ನಲ್ಲಿ ಶರತ್ ವಿರುದ್ಧ ದೂರೇನು?

  • ಈ 10 ಪುಟಗಳ ಸರ್ಕಾರದ ಅಫಿಡೇವಿಟ್‌ನಲ್ಲಿ ಬಿ.ಶರತ್ ವರ್ಗಕ್ಕೆ ಕಾರಣವಾದ ಅಂಶಗಳನ್ನು ಪಟ್ಟಿ ಮಾಡಲಾಗಿದೆ. ಅನಾರೋಗ್ಯವೂ ಸೇರಿ ಗಂಭೀರ ಅಂಶಗಳನ್ನು ಉಲ್ಲೇಖಿಸಿದೆ.
  • ಬಿ.ಶರತ್ ಅವರನ್ನು ರೇಷ್ಮೆ ಮಾರುಕಟ್ಟೆ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾಗಿ ನಿಯೋಜಿಸಲಾಗಿತ್ತು. ಆದರೆ, 3 ತಿಂಗಳಿನಿಂದಲೂ ಅವರು ಅಧಿಕಾರ ಸ್ವೀಕರಿಸಿಲ್ಲ.
  • ಭಾರತೀಯ ಚುನಾವಣೆ ಆಯೋಗ ಅವರನ್ನ ಬಿಹಾರ ಚುನಾವಣೆ ವೀಕ್ಷಕರಾಗಿ ನಿಯೋಜಿಸಿತ್ತು. ಆ ಕರ್ತವ್ಯಕ್ಕೂ ಅವರು ಹಾಜರಾಗಿಲ್ಲ.
  • ಸಾರ್ವಜನಿಕ ಅಧಿಕಾರಿಯಾಗಿ ಈ ರೀತಿ ನಡೆದುಕೊಳ್ಳೋದು ಎಷ್ಟು ಸರಿ?
  • ಅನಾರೋಗ್ಯ ಎಂದು ಸರಿಯಾದ ದಾಖಲೆಗಳನ್ನು ಕೊಡದೆ ರಜೆ ಮೇಲೆ ಇರುತ್ತಾರೆ. ಇದು ಸರ್ಕಾರಿ ಅಧಿಕಾರಿಯೊಬ್ಬರ ಕಾನೂನಿಗೆ ವಿರುದ್ದವಾದ ನಡೆದುಕೊಳ್ಳುತ್ತಾರೆ.
  • ಎಲ್ಲವನ್ನೂ ಪ್ರಶ್ನೆ ಮಾಡಿ ರಾಜ್ಯ ಸರ್ಕಾರ ನ.25ರಂದು ಬಿ.ಶರತ್‌ಗೆ ಶೋಕಾಸ್ ನೋಟಿಸ್ ಸಹ ನೀಡಿದೆ.
  • 7 ದಿನದ ಒಳಗೆ ಉತ್ತರಿಸುವಂತೆ ಸೂಚನೆ ನೀಡಿತ್ತು. ಶೋಕಾಸ್ ನೋಟೀಸ್‌ಗು ಬಿ.ಶರತ್ ಈವರೆಗೂ ಉತ್ತರಿಸಿಲ್ಲ.
  • ನಿಯೋಜಿತ ಕರ್ತವ್ಯಕ್ಕೆ ಹಾಜರಾಗಲು ಅನಾರೋಗ್ಯದ ವಿವಿಧ ಕಾರಣ ಹೇಳುತ್ತಾರೆ. ಇಂತಹವರು ಮೈಸೂರಿನಂತಹ ಸೂಕ್ಷ್ಮ ಪ್ರದೇಶಕ್ಕೆ ಜಿಲ್ಲಾಧಿಕಾರಿಯಾಗಲು ಹೇಗೆ ಸಾಧ್ಯ?

ಈ ಅಂಶಗಳನ್ನು ಪರಿಗಣಿಸಿ ಬಿ.ಶರತ್ ಅವರು ಸಿಎಟಿ ಮುಂದೆ ಸಲ್ಲಿಸಿರುವ ಅರ್ಜಿ ವಜಾ ಮಾಡಬೇಕು ಎಂದು ರಾಜ್ಯ ಸರ್ಕಾರದಿಂದ ಸಿಎಟಿಗೆ ಮನವಿ ಮಾಡಿದೆ ಎನ್ನಲಾಗಿದೆ.

Share This Article
Leave a comment