ಡಿಸಿ ರೋಹಿಣಿಗೆ ಕೊಬ್ಬು ತಲೆಗೆ ಹತ್ತಿದೆ: ಶಾಸಕ ಮಂಜುನಾಥ್

Team Newsnap
3 Min Read

ಡಿಸಿ ರೋಹಿಣಿ ಸಿಂಧೂರಿಗೆ ಕೊಬ್ಬು ತಲೆಗೆ ಹತ್ತಿದೆ. ಅದರಿಂದಲೇ ಅವರು ಹೀಗೆ ನಡೆದುಕೊಳ್ಳುತ್ತಿದ್ದಾರೆ. ಅವರು ಮೊದಲು ಡಿಸಿಯಾಗಿ ನಡೆದುಕೊಳ್ಳಲಿ. ಈಗಾಗಲೇ ಈ ಹಿಂದಿನ ಡಿಸಿಯಿಂದ ಆ ಸ್ಥಾನಕ್ಕೆ ಒಳ್ಳೆಯ ಅಭಿಪ್ರಾಯ ಬಂದಿದೆ. ಸಾರ್ವಜನಿಕ ವಲಯದಲ್ಲಿ ಡಿಸಿ ಸ್ಥಾನದ ಬಗ್ಗೆ ಹೆಚ್ಚಿನ ಗೌರವ ಇದೆ. ಅದಕ್ಕೆ ಧಕ್ಕೆ ತರುವಂತೆ ಕೆಲಸ ಮಾಡಬೇಡಿ ಎಂದು ಮೈಸೂರಿನಲ್ಲಿ ಶಾಸಕ ಹೆಚ್.ಪಿ. ಮಂಜುನಾಥ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಕಾಂಗ್ರೆಸ್ ಶಾಸಕರು ಆಕ್ರೋಶ ಹೊರಹಾಕಿದ್ದು, ಇಂದು ಮೈಸೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ.

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರ ಹಿಟ್ಲರಿಸಂ ನೀತಿಯನ್ನು ನಾವು ಖಂಡಿಸುತ್ತೇವೆ. ಡಿಸಿಯೊಬ್ಬರು ಸರ್ವಾಧಿಕಾರಿಯಂತೆ ನಡೆದುಕೊಂಡಿದ್ದಾರೆ, ಕಾನೂನು ಮೀರಿ ವರ್ತಿಸಿದ್ದಾರೆ. ಸಿಎಂಗಳು ಬೆನ್ನಿಗಿದ್ದಾರೆ ಅಂತ ದುರಹಂಕಾರ ಬೇಡ. ಎರಡು ರಾಜ್ಯದ ಸಿಎಂಗಳು ನಿಮ್ಮ ಮೇಲಿದ್ದಾರಾ? ಅಥವಾ ನಿಮ್ಮ ಕಾಲಿನ ಕೆಳಗಿದ್ದಾರಾ ಗೊತ್ತಿಲ್ಲ ಎಂದು ಡಿಸಿ ರೋಹಿಣಿ ಸಿಂಧೂರಿ ವಿರುದ್ದ ಹುಣಸೂರು ಕಾಂಗ್ರೆಸ್ ಶಾಸಕ ಹೆಚ್.ಪಿ. ಮಂಜುನಾಥ್ ಕಿಡಿಕಾರಿದ್ದಾರೆ. ‌

rohini1 1

ಕೆಡಿಪಿಯಲ್ಲಿ ಸಭೆಯಲ್ಲಿ ಶಾಸಕರು ಜನಪ್ರತಿನಿಧಿಗಳು ಪ್ರಶ್ನೆ ಮಾಡೋದು ಸಹಜ. ಅದಕ್ಕೆ ಮುಂದಿನ ಸಭೆಯಲ್ಲಿ ಅದಕ್ಕೆ ಉತ್ತರಿಸೋದು ಸಹಜ. ನಾನು ಪ್ರಶ್ನೆ ಮಾಡಿದ್ದು ನಿಜ, ಆದರೆ, ಜಿಲ್ಲಾಧಿಕಾರಿ ಅದನ್ನ ಪರ್ಸನಲ್ ಆಗಿ ತಗೊಂಡಿದ್ದಾರೆ. ತೀರಾ ವೈಯಕ್ತಿಕವಾಗಿ ತೆಗೆದುಕೊಂಡು ಮರುದಿನವೇ ಪತ್ರ ಬರೆದಿದ್ದಾರೆ. ಆದರೆ, ಎರಡು ದಿನವಾದರೂ ನನಗೆ ಪತ್ರ ತಲುಪಿಲ್ಲ. ಅವರು ನನಗೆ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ನನ್ನ ಪಿಎಗಾಗಲಿ, ನನ್ನ ಕಚೇರಿಗಾಗಲಿ, ನನ್ನ ಮನೆಗಾಗಲಿ ಪತ್ರ ಬಂದಿಲ್ಲ. ತ್ರೈ ಮಾಸಿಕ ಸಭೆಯಲ್ಲಿ ಡಿಸಿ ಕಾರ್ಯವೈಖರಿ, ಜಿಲ್ಲಾಡಳಿತದ ನ್ಯೂನತೆಗಳ ಬಗ್ಗೆ ಚರ್ಚೆ ಮಾಡವುದು ಸಾಮಾನ್ಯ. ಡಿಸಿ ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ. ತ್ರೈ ಮಾಸಿಕ ಸಭೆಯ ಉತ್ತರ ಮುಂದಿನ ಸಭೆಯಲ್ಲಿ ಕೊಡಬೇಕು. ಆದರೆ ನೇರವಾಗಿ ನನಗೆ ಪತ್ರ ಬರೆದಿದ್ದಾರೆ. ಪತ್ರ ಬರೆಯಲು ಕಾನೂನಿನಲ್ಲಿ ಅವಕಾಶ ಇಲ್ಲ. ಪತ್ರ ಎಲ್ಲಿಗೆ ತಲುಪಿಸಿದ್ದಾರೋ ಗೊತ್ತಿಲ್ಲ. ನನಗೆ ಬರೆದ ಪತ್ರವನ್ನು ಮಾಧ್ಯಮ ಸಾರ್ವಜನಿಕರಿಗೆ ತಲುಪುವಂತೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ನನಗೆ ಪತ್ರ ಸಿಕ್ಕಿದೆ. ಜನಪ್ರತಿನಿಧಿಗೆ ನೋಟಿಸ್ ರೀತಿ ಕೊಟ್ಟಿದ್ದಾರೆ. ಅವರು ಸಾರ್ವಜನಿಕ ಅಧಿಕಾರಿಯೇ ಹೊರತು ಸರ್ವಾಧಿಕಾರಿ ಅಲ್ಲ ಎಂದು ಹುಣಸೂರು ಶಾಸಕ ಹೆಚ್ ಪಿ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೋಹಿಣಿ ಸಿಂಧೂರಿ ನನಗೆ ಬ್ಲಾಕ್​ಮೇಲ್ ಮಾಡುವ ರೀತಿಯಲ್ಲಿ ಪತ್ರ ಬರೆದಿದ್ದಾರೆ. ರೋಹಿಣಿ ಸಿಂಧೂರಿಯ ನನಗೆ ಪರೋಕ್ಷವಾಗಿ ಬೆದರಿಕೆ ಹಾಕುತ್ತಿದ್ದಾರೆ. ನಿಮ್ಮ ಫೈಲ್‌ಗಳು ನನ್ನ ಬಳಿ ಇದೆ ಅಂತ ಎಚ್ಚರಿಕೆ ನೀಡಿದ್ದಾರೆ. ಎರಡು ರಾಜ್ಯದ ಸಿಎಂಗಳು ನಿಮ್ಮ ಮೇಲಿದ್ದಾರಾ? ಅಥವಾ ನಿಮ್ಮ ಕಾಲಿನ ಕೆಳಗಿದ್ದಾರಾ ಗೊತ್ತಿಲ್ಲ. ಸಮಯ ಹೀಗೇ ಇರುವುದಿಲ್ಲ ರೋಹಿಣಿ ಸಿಂಧೂರಿಯವರೇ… ಕಾನೂನಿನ ಪ್ರಕ್ರಿಯೆಯಲ್ಲಿ ನೀವು ಒಂದು ದಿನ‌ ಅರಿವಾಗುತ್ತದೆ. ನೀವು ಕಾನೂನಿಗಿಂತ ದೊಡ್ಡವರಲ್ಲ. ನಿಮ್ಮನ್ನ ಪ್ರಶ್ನೆ ಮಾಡೋಕು ನಿಮ್ಮ ಮೇಲೆ ಅಧಿಕಾರಿಗಳಿದ್ದಾರೆ. ಅವರಿಗೂ ನೀವು ಉತ್ತರ‌ ಕೊಡಬೇಕು ಎಂದು ರೋಹಿಣಿ ಸಿಂಧೂರಿಗೆ ಶಾಸಕ ಹೆಚ್.ಪಿ. ಮಂಜುನಾಥ್ ತಿರುಗೇಟು ಕೊಟ್ಟಿದ್ದಾರೆ.

ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನಸ್ಪಂದನೆ ಹೆಸರಲ್ಲಿ ಡಿಸಿ ಮೆರವಣಿಗೆ ಮಾಡಬಹುದು. ಆದರೆ ಜನರ ಕೆಲಸ ಮಾಡುವುದು ಜನಪ್ರತಿನಿಧಿಗಳೇ. ಸಿಎಂಗಳು ಬೆನ್ನಿಗಿದ್ದಾರೆ ಅಂತ ದುರಂಹಕಾರ ಬೇಡ. ಕಾನೂನಿನ ಅಡಿಯಲ್ಲಿ ಕೆಲಸ ಮಾಡಿ ಎಂದು ಹೆಚ್​ಪಿ ಮಂಜುನಾಥ್​ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಸಲಹೆ ನೀಡಿದ್ದಾರೆ. ‌

ನಾನು ಕೂಡ ನಿಮ್ಮಂತೆ ನಿಮ್ಮ ಬಗ್ಗೆ ವೈಯಕ್ತಿಕವಾಗಿ ಮಾತನಾಡಬಹುದು. ನಿಮ್ಮ ವೈಯುಕ್ತಿಕ ವಿಚಾರ ಜಗಜ್ಜಾಹೀರಾಗಿದೆ. ಆ ಬಗ್ಗೆ ನಾನು ಮಾತನಾಡೋಲ್ಲ. ನನಗೂ ತಾಯಿ ಮಗಳು ಇದ್ದಾರೆ. ಹೀಗಾಗಿ ನಾನು ಆ ಮಟ್ಟಕ್ಕೆ ಹೋಗುವುದಿಲ್ಲ. ನನಗೆ ಸೇರಿ ಹಲವರು ಶಾಸಕರಿಗೆ ಕೊರೊ‌ನಾ ಪಾಸಿಟಿವ್ ಆಗಿತ್ತು. ಡಿಸಿಯಾಗಿ ನಮ್ಮ ಆರೋಗ್ಯ ವಿಚಾರಿಸುವ ಕನಿಷ್ಠ ಸೌಜನ್ಯ ಮಾಡಲಿಲ್ಲ. ಕಾನೂನಿನ‌ ಮುಂದೆ ಎಲ್ಲರೂ ಒಂದೇ. ನನಗೆ ವೈಯಕ್ತಿಕವಾಗಿ ಯಾವುದೇ ಸಹಾಯ ಮಾಡಬೇಡಿ. ಸಾರ್ವಜನಿಕರ ಕೆಲಸ ಮಾತ್ರ ಮಾಡಿಕೊಡಿ. ಶೇ. 75ರಷ್ಟು ಅಧಿಕಾರಿಗಳಿಗೆ ನಿಮ್ಮಿಂದ ಭ್ರಮನಿರಸನವಾಗಿದೆ. ನಿಮ್ಮನ್ನು ಕಂಡರೆ ಭಯ ಪಡುವ ವಾತಾವರಣ ಇದೆ. ಕಾನೂನುಬಾಹಿರವಾಹಿ ನನಗೆ ಪತ್ರ ಬರೆದಿರುವುದು ಅಕ್ಷಮ್ಯ ಅಪರಾಧ. ಕಾನೂನು ತಜ್ಞರ ಸಲಹೆ ಪಡೆದು ಡಿಸಿ ವಿರುದ್ದ ಕಾನೂನು ಹೋರಾಟ ಮಾಡುತ್ತೇನೆ ಎಂದು ಮೈಸೂರಿನಲ್ಲಿ ಶಾಸಕ‌ ಹೆಚ್.ಪಿ.ಮಂಜುನಾಥ್ ಹೇಳಿದ್ದಾರೆ.

Share This Article
Leave a comment