ಕೇಂದ್ರದ ಮಾಜಿ ಸಚಿವರ ಪತ್ನಿ ಹತ್ಯೆ : ಚಿನ್ನಾಭರಣ ದೋಚಿ ಪರಾರಿ‌

Team Newsnap
1 Min Read

ಹಣ, ಚಿನ್ನಾಭರಣದ ಆಸೆಗಾಗಿ ಕೇಂದ್ರದ ಮಾಜಿ ಸಚಿವರೊಬ್ಬರ ಪತ್ನಿಯನ್ನು, ದೆಹಲಿಯ ನಿವಾಸದಲ್ಲೇ ಹತ್ಯೆ ಮಾಡಲಾಗಿದೆ.

ಕೇಂದ್ರ ಮಾಜಿ ಸಚಿವ ರಂಗರಾಜನ್​ ಕುಮಾರಮಂಗಲಂ ಪತ್ನಿ ಕಿಟ್ಟಿ ಕುಮಾರಮಂಗಲಂ (68) ಕೊಲೆಯಾದವರು. ದರೋಡೆಗಾಗಿ ಬಂದವರ ಪೈಕಿ ಈಗಾಗಲೇ ಒಬ್ಬನನ್ನು ಬಂಧಿಸಿದ್ದಾರೆ.

ನೈಋತ್ಯ ದೆಹಲಿಯ ವಸಂತನಗರದಲ್ಲಿ ಇರುವ ಅವರ ಮನೆಯಲ್ಲೇ ಮಂಗಳವಾರ ರಾತ್ರಿ ಕೊಲೆ ಮಾಡಲಾಗಿದೆ.

ಕಿಟ್ಟಿ ಕುಮಾರಮಂಗಲಂ ಮನೆಗೆ ಯಾವಾಗಲೂ ಬರುವ ಧೋಬಿ (ಬಟ್ಟೆ ಒಗೆಯುವವ)ಯೇ ಈ ದರೋಡೆ ಮತ್ತು ಹತ್ಯೆಯ ರೂವಾರಿಯಾಗಿದ್ದಾನೆ.

ಮಂಗಳವಾರ ರಾತ್ರಿ 9 ಗಂಟೆ ಹೊತ್ತಿಗೆ ಆತ ಇವರ ಮನೆಗೆ ಬಂದಿದ್ದ. ಈತ ಬಾಗಿಲು ತಟ್ಟಿದಾಗ ಕಿಟ್ಟಿ ಕುಮಾರಮಂಗಲಂ ಮನೆಯ ಕೆಲಸದವಳು ಬಾಗಿಲು ತೆಗೆದಿದ್ದಳು. ಆದರೆ ಆತ ಅವಳನ್ನು ತಳ್ಳಿ, ಕೋಣೆಯಲ್ಲಿ ಕೂಡಿಹಾಕಿ, ಅವಳನ್ನು ಕಟ್ಟಿಹಾಕಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಕೆಲಸದವಳನ್ನು ಈ ಧೋಬಿ ಒಂದು ಕೋಣೆಯಲ್ಲಿ ಕೂಡುತ್ತಿದ್ದಂತೆ ಇನ್ನಿಬ್ಬರು ಮನೆಗೆ ನುಗ್ಗಿದರು. ಎಲ್ಲ ಸೇರಿ ಕಿಟ್ಟಿ ಕುಮಾರಮಂಗಲಂರಿಗೆ ತಲೆದಿಂಬಿನಿಂದ ಉಸಿರುಕಟ್ಟಿಸಿ ಕೊಂದು ಹಾಕಿದರು. ಸಿಕ್ಕಿದ್ದೆಲ್ಲ ದೋಚಿ ಅಲ್ಲಿಂದ ಓಡಿಹೋಗಿದ್ದರು.

ನಂತರ ಏನೇನೋ ಪ್ರಯತ್ನ ಮಾಡಿ ಮನೆಕೆಲಸದಾಕೆ ತನ್ನನ್ನು ತಾನು ಬಿಡಿಸಿಕೊಂಡು ರಾತ್ರಿ ಸುಮಾರು 11ಗಂಟೆಗೆ ಪೋಲಿಸರಿಗೆ ಕರೆ ಮಾಡಿದ್ದಾಳೆ.‌

ಧೋಬಿ ರಾಜು (24)ನನ್ನು ಬಂಧಿಸಲಾಗಿದೆ. ಆತ ವಸಂತನಗರದ ಭನ್ವರ್​ ಸಿಂಗ್​ ಕ್ಯಾಂಪ್​​ ನಿವಾಸಿ. ಇನ್ನಿಬ್ಬರು ಆರೋಪಿಗಳ ಹೆಸರನ್ನು ಬಹಿರಂಗಪಡಿಸಿದ್ದಾನೆ. ಆರೋಪಿಗಳನ್ನು ಪತ್ತೆಹಚ್ಚಲು ತಂಡವೊಂದನ್ನು ರಚಿಸಲಾಗಿದೆ ಎಂದೂ ಹೇಳಿದ್ದಾರೆ.

ಕಿಟ್ಟಿ ಕುಮಾರಮಂಗಲಂ ಅವರ ಪತಿ ಪಿ.ರಂಗರಾಜನ್ ಅಟಲ್​ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದವರು. ಸೇಲಂ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಇವರು, ಪಿ.ವಿ.ನರಸಿಂಹ ರಾವ್​ ಪ್ರಧಾನಿಯಾಗಿದ್ದಾಗ ಜುಲೈ 1991ರಿಂದ 1993ರವರೆಗೆ ಕಾನೂನು, ನ್ಯಾಯ ಮತ್ತು ಕಂಪನಿ ವ್ಯವಹಾರಗಳ ಸಚಿವರೂ ಆಗಿದ್ದರು.

Share This Article
Leave a comment