December 22, 2024

Newsnap Kannada

The World at your finger tips!

WhatsApp Image 2023 06 22 at 4.48.05 PM

ಮುನಿಯಪ್ಪ ವಿರುದ್ಧ ಮುನಿಸು : ಓರ್ವ ಸಚಿವರೂ ಸೇರಿದಂತೆ ಐವರು ಶಾಸಕರ ರಾಜೀನಾಮೆ ?

Spread the love

ಬೆಂಗಳೂರು :ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಟಿಕೇಟ್ ಹಂಚಿಕೆಯಲ್ಲಿ ಮತ್ತೆ ಕೆ ಹೆಚ್ ಮುನಿಯಪ್ಪ ಅವರ ಕುಟುಂಬದ ಸದಸ್ಯರಿಗೆ – ಅಳಿಯ ಚಿಕ್ಕ ಪೆದ್ದಯ್ಯ ಅವರಿಗೆ – ಟಿಕೇಟ್ ನೀಡುವುದು ಬಹುತೇಕ ಖಚಿತವಾಗಿದೆ ಎಂಬ ಸುದ್ದಿಯಿಂದ ಸ್ಥಳೀಯ ಕಾಂಗ್ರೆಸ್ ನಾಯಕರು ಕೆರಳಿ ಕೆಂಡವಾಗಿದ್ದಾರೆ.

ಕಳೆದ ಹತ್ತು ಚುನಾವಣೆಗಳಲ್ಲೂ ಪರಿಶಿಷ್ಟ ಜಾತಿಯ ಎಡಗೈ ಸಮುದಾಯದವರಿಗೇ ಪಕ್ಷವು ಕೋಲಾರ ಮೀಸಲು ಕ್ಷೇತ್ರದ ಟಿಕೇಟ್ ನೀಡಿದೆ. ಇದರಿಂದ ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ. ಆದ್ದರಿಂದ ಈ ಬಾರಿಯಾದರೂ ಬಲಗೈ ಸಮುದಾಯದವರಿಗೆ ಟಿಕೇಟ್ ನೀಡಬೇಕು. ಎಡಗೈ ಸಮುದಾಯದವರಿಗೇ ಟಿಕೇಟ್ ನೀಡುವುದಾದರೂ, ಕೆ ಹೆಚ್ ಮುನಿಯಪ್ಪ ಅವರ ಕುಟುಂಬದವರನ್ನು ಹೊರತುಪಡಿಸಿ ಬೇರೆಯವರಿಗೆ ಟಿಕೇಟ್ ನೀಡಬೇಕು ಎಂಬುದು ಈ ನಾಯಕರ ಒತ್ತಾಯವಾಗಿದೆ.

ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್, ರಾಜ್ಯ ವಿಧಾನಸಭಾ ಸದಸ್ಯರಾದ ಕೊತ್ತೂರು ಮಂಜುನಾಥ್ ಮತ್ತು ಕೆ ವೈ ನಂಜೇಗೌಡ ಹಾಗೂ ರಾಜ್ಯ ವಿಧಾನ ಪರಿಷತ್ ಸದಸ್ಯರಾದ ಅನಿಲ್ ಕುಮಾರ್ ಮತ್ತು ನಸೀರ್ ಅಹಮದ್ ಅವರು ರಾಜೀನಾಮೆ ನೀಡಲು ಮುಂದಾಗಿರುವ ನಾಯಕರಾಗಿದ್ದಾರೆ.

ರಾಜ್ಯ ವಿಧಾನಸಭಾ ಸಭಾಧ್ಯಕ್ಷ ಯು ಟಿ ಖಾದರ್ ಅವರು ಈ ದಿನ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿದ್ದಾರೆ. ಆದಕಾರಣ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್ ಸೇರಿದಂತೆ ಮೂವರು ಶಾಸಕರು ಮಂಗಳೂರಿಗೆ ತೆರಳಲು ವಿಮಾನ ಟಿಕೇಟ್ ಕಾಯ್ದಿರಿಸಿದ್ದಾರೆ.

ಉಳಿದ ಇಬ್ಬರು ವಿಧಾನ ಪರಿಷತ್ ಸದಸ್ಯರು ರಾಜ್ಯ ವಿಧಾನ ಪರಿಷತ್ ಸಭಾಪತಿಗೆ ರಾಜೀನಾಮೆ ಸಲ್ಲಿಸಲು ವಿಧಾನ ಸೌಧಕ್ಕೆ ತೆರಳಿದ್ದಾರೆ.

ಈ ಮಧ್ಯೆ ಮೈಸೂರು ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ದೂರವಾಣಿ ಕರೆ ಮಾಡಿ ಪರಿಷತ್ ಸದಸ್ಯರ ರಾಜೀನಾಮೆ ಸ್ವೀಕರಿಸದಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಮೈಸೂರು ಜಿಲ್ಲಾ ಪ್ರವಾಸದಿಂದ ಇಂದು ಸಂಜೆ ವಾಪಸ್ಸಾದ ನಂತರ ಅಸಮಾಧಾನಿತರ ಜೊತೆಗೆ ಮಾತನಾಡಿ ಸಮಸ್ಯೆ ಬಗೆಹರಿಸುವ ವಿಶ್ವಾಸ ಹೊಂದಿದ್ದಾರೆ.

ಇದೇ ವೇಳೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎಂ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರೆ ಮುಖಂಡರ ಜೊತೆಗೆ ಸಂಪರ್ಕ ಸಾಧಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಘೋಷಣೆಯನ್ನು ಮುಂದೂಡುವಂತೆ ಮನವಿ ಮಾಡಿದ್ದಾರೆ.ಏಪ್ರಿಲ್‌ 4 ರಂದು HDK ನಾಮಪತ್ರ ಸಲ್ಲಿಕೆ

ಮುನಿಯಪ್ಪ ಕುಟುಂಬಸ್ಥರಿಗೆ ಟಿಕೇಟ್ ಬೇಡ. ಬಲಗೈ ಸಮುದಾಯದವರಿಗೆ ಟಿಕೇಟ್ ನೀಡಿ ಎಂದು ಪಕ್ಷದ ಮುಖಂಡ ಹಾಗೂ ರಾಜ್ಯ ವಿಧಾನ ಸಭೆಯ ಮಾಜಿ ಸಭಾಧ್ಯಕ್ಷ ಕೆ ಆರ್ ರಮೇಶ್ ಕುಮಾರ್ ಅವರು ಪಕ್ಷದ ಮುಖಂಡರಿಗೆ ಸಲಹೆ ಮಾಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

Copyright © All rights reserved Newsnap | Newsever by AF themes.
error: Content is protected !!