ನಗರಸಭೆ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆಗೆ ಮತ್ತೆ ತಡೆಯಾಜ್ಞೆ

Team Newsnap
1 Min Read

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕಾಗಿ ಆಸೆಗಣ್ಣಿನಿಂದ ನೋಡುತ್ತಿದ್ದ ಜನಪ್ರತಿನಿಧಿಗಳಿಗೆ ಮತ್ತೊಂದು ಬಾರಿ ನಿರಾಸೆ ಉಂಟಾಗಿದೆ. ರಾಜ್ಯ ಸರಕಾರ ಹೊರಡಿಸಿದ್ದ ಮೀಸಲಾತಿಗೆ ಹೈಕೋರ್ಟ್‌ ಏಕಸದಸ್ಯ ಪೀಠ ಮತ್ತೆ ತಡೆಯಾಜ್ಞೆ ನೀಡಿದೆ. 

ಹಾಸನ, ಅರಸೀಕೆರೆ ನಗರಸಭೆಗೆ ಪ್ರಕಟಿಸಿದ್ದ ಮೀಸಲಾತಿಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಸರಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಜೊತೆಗೆ ಸರಕಾರ ಪ್ರಕಟಿಸಿದ ಮೀಸಲು ಪರಿಶೀಲನೆಗೆ 3 ಸದಸ್ಯರ ಸಮಿತಿ ರಚಿಸಲಾಗಿದೆ.

ಎಎಜಿ ಧ್ಯಾನ್ ಚಿನ್ನಪ್ಪ, ಹಿರಿಯ ನ್ಯಾಯವಾದಿ ಎ.ಎಸ್.ಪೊನ್ನಣ್ಣ ಹಾಗೂ ರಾಜ್ಯ ಚುನಾವಣಾ ಆಯೋಗದ ಹಿರಿಯ ವಕೀಲ ಕೆ.ಎನ್.ಫಣೀಂದ್ರ ಅವರು ಹೈಕೋರ್ಟ್‌ ನೇಮಿಸಿರುವ ಸಮಿತಿಯಲ್ಲಿದ್ದಾರೆ. ಅಕ್ಟೋಬರ್‌ 22ರಂದು ವರದಿ ನೀಡಲು ಸಮಿತಿಗೆ ಹೈಕೋರ್ಟ್‌ ಸೂಚಿಸಿದೆ.

ಹಾಸನ, ಅರಸೀಕೆರೆ ನಗರಸಭೆಗಳಲ್ಲಿ ಬಹುಮತವಿದ್ದರೂ ಜೆಡಿಎಸ್‌ಗೆ ಸರಕಾರ ಪ್ರಕಟಿಸಿದ್ದ ಮೀಸಲಾತಿಯಿಂದ ಅಧ್ಯಕ್ಷ ಸ್ಥಾನ ಕೈತಪ್ಪಿತ್ತು. ಈ ಕಾರಣದಿಂದ ಸರಕಾರದ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಕಳೆದ ಗುರುವಾರವಷ್ಟೇ ಸರಕಾರ ಮೀಸಲಾತಿ ಪ್ರಕಟಿಸಿ ಆದೇಶ ಹೊರಡಿಸಿತ್ತು.

ರಾಜ್ಯದ 276 ಪೌರಾಡಳಿತ ಸಂಸ್ಥೆಗಳಲ್ಲಿ ಕಳೆದ ಎರಡುವರೆ ವರ್ಷಗಳಿಂದ ಚುನಾಯಿತ ಅಧ್ಯಕ್ಷ-ಉಪಾಧ್ಯಕ್ಷರಿಲ್ಲದೆ ಜನರಿಗೆ ಭಾರಿ ತೊಂದರೆಯಾಗಿತ್ತು. ಜನಪ್ರತಿನಿಧಿಗಳು ಅಧಿಕಾರವೇ ಇಲ್ಲದೆ ಎರಡು ವರ್ಷ ಕಳೆದಿದ್ದರು. ಅಕ್ಟೋಬರ್‌ 8ರಂದು ರಾಜ್ಯದ 59 ನಗರಸಭೆ, 117 ಪುರಸಭೆ ಹಾಗೂ 100 ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಮೀಸಲು ಪಟ್ಟಿಯನ್ನು ಸರಕಾರ ಪ್ರಕಟಿಸಿತ್ತು.

Share This Article
Leave a comment