ತ್ರೀ ಭಾಷಾ ಸೂತ್ರದಂತೆ ಹಿಂದಿ ಹೇರಿಕೆ ಮಾಡುವ ಸಂಬಂಧ ಶನಿವಾರ ಸಂಸತ್ತಿನಲ್ಲಿ ಸಿಕ್ಕ ಶೂನ್ಯ ವೇಳೆಯ ಚರ್ಚೆಯ ಸಂದರ್ಭದಲ್ಲಿ ತಮಗೆ ದೊರಕಿದ ಕೇವಲ 3 ನಿಮಿಷದ ಅವಕಾಶವನ್ನು ಬಳಕೆ ಮಾಡಿಕೊಂಡು ಮಂಡ್ಯದ ಸಂಸದೆ ಸುಮಲತಾ ಕನ್ನಡತನವನ್ನು ಮೊಳಗಿಸಿದರು.
ದೇಶದ ಐಕ್ಯತೆ ಮತ್ತು ಭಾವೈಕ್ಯತೆಯನ್ನು ನಾವು ಗೌರವಿಸುತ್ತೇವೆ. ಅದೇ ರೀತಿಯಲ್ಲಿ ಪ್ರಾದೇಶಿಕತೆ ಪ್ರಾಂತೀಯ ಭಾಷೆಯೂ ಕೂಡ ಅಷ್ಟೇ ಮುಖ್ಯವಾಗಿದೆ. ಸಾವಿರಾರು ವರ್ಷಗಳ ಪುರಾತನ ಕನ್ನಡ ಭಾಷೆಗೆ ವಿಶಿಷ್ಠ ಸ್ಥಾನವೂ ಉಂಟು. ಕನ್ನಡ ಶಾಸ್ತ್ರೀಯ ಬಾಷೆ ಎಂದು ಕೇಂದ್ರ ಸರ್ಕಾರವೇ ಗುರುತಿಸಿದೆ. ಈಗ ಹಿಂದಿ ಭಾಷೆಯ ಮಾನ್ಯತೆ ಮತ್ತು ಮಹತ್ವ ಹೆಚ್ಚಿಸುವುದರ ಜೊತೆಗೆ ದಕ್ಷಿಣ ಭಾರತ ರಾಜ್ಯಗಳ ಭಾಷೆಗಳಿಗೂ ಅಷ್ಟೇ ಪ್ರಾಮುಖ್ಯತೆ ನೀಡಬೇಕಾದ ಅನಿವಾರ್ಯತೆ ಇದೆ. ಸಂಪರ್ಕ ಭಾಷೆಯಾಗಿ ಹಿಂದಿ ಹೇರಿಕೆಯನ್ನು ಅನಿವಾರ್ಯತೆಗೆ ತಂದೊಡ್ಡಿದರೆ ಲಕ್ಷ, ಲಕ್ಷ ಸಂಖ್ಯೆಯ ದಕ್ಷಿಣ ಭಾರತದ ನಿವಾಸಿಗಳಿಗೆ ಒಪ್ಪಿಗೆಯ ಸಂಗತಿಯಾಗುವುದಿಲ್ಲ ಎಂದು ಸುಮಾಲತಾ ಹೇಳಿದರು.
ಹಿಂದಿಯನ್ನೂ ನಾವು ಒಪ್ಪುತ್ತೇವೆ. ನಾವು ಕನ್ನಡಿಗರು ಹಾಗೂ ಭಾರತೀಯರೇ ಆಗಿದ್ದೇವೆ. ಮಾತೃಭಾಷೆಯನ್ನು ಮರೆಯಲು ಸಾಧ್ಯವಿಲ್ಲ. ದಕ್ಷಿಣ ಭಾರತ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳು ತಮ್ಮದೇ ಆದ ಸ್ಥಾನ ಮಾನ, ಭಾವನೆಗಳನ್ನು ಹೊಂದಿವೆ. ಅದರಲ್ಲೂ ಕನ್ನಡ ಅತ್ಯಂತ ಪುರಾತನ ಭಾಷೆ, ಹಿಂದಿಗೆ ಕೊಡುವ ಮಾನ್ಯತೆಯನ್ನು ನಮ್ಮ ಮಾತೃಭಾಷೆಗೂ ಕೊಡಲೇ ಬೇಕು. ಸಾರ್ವಜನಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಿಂದಿ ಭಾಷಿಗರನ್ನು ಕೆಲಸಕ್ಕೆ ತಂದು ಹಾಕಿದರೆ, ಈ ನೌಕರರು ಸ್ಥಳೀಯ ಜನರಿಗೆ ಸ್ಪಂದಿಸಲು ಸಾಧ್ಯವಿಲ್ಲ. ಇದರಿಂದ ಸಾಕಷ್ಟು ಧನಾತ್ಮಕ ಸಂದೇಶಗಳನ್ನು ಸಾರಿದಂತಾಗುತ್ತದೆ. ಈ ಕಾರಣಕ್ಕಾಗಿ ಪ್ರಾಂತೀಯ ಭಾಷೆ ಜನರ ಭಾವನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಭಾಷಾ ಸೂತ್ರ ಸಿದ್ದಪಡಿಸಬೇಕು. ಹಿಂದಿಗೆ ನೀಡುವ ಪ್ರಾಶಸ್ತ್ಯ ತೆಯನ್ನೇ ಆಯಾ ಪ್ರಾಂತೀಯ ಭಾಷೆಗಳಿಗೆ ನೀಡುವುದರ ಬಗ್ಗೆ ಕೇಂದ್ರ ಸರ್ಕಾರ ಆದ್ಯತೆ ನೀಡುವಂತೆ ಒತ್ತಾಯಿಸುವುದಾಗಿ ಸುಮಲತಾ ತಿಳಿಸಿದರು.
ತುಂಬಾ ಸೂಕ್ತವಾದ, ಸಮಯೋಚಿತವಾದ ಮಾತು.ಸಿಕ್ಕ ಸಮಯದಲ್ಲೇ ಅತ್ಯುತ್ತಮವಾದ ಮಾತಾಡಿದ್ದಾರೆ ನಮ್ಮ ಕ್ರಿಯಾಶೀಲ ಗೌರವಾನ್ವಿತ ಸಂಸದೆ ಸುಮಲತಾ ಮೇಡಂ.