ಆಗಾಗ ನಾನು ನನ್ನ ಮಗಳೊಂದಿಗೆ ನನ್ನ ಅಮ್ಮ ಯನ್ನು ನೋಡಲು ಹೋಗುತ್ತೇನೆ. ಹಾಗೆ ಆಕೆಯೊಂದಿಗೆ ಕುಳಿತಾಗ ಆಕೆ ನೋಡುತ್ತಿರುವ ಟಿವಿ ಸೀರಿಯಲ್ ಗಳು ಆಕೆಗೆ ಅರ್ಥವಾಗುತ್ತದೆಯೇ ಎಂದು ನನಗೆ ಆಶ್ಚರ್ಯವಾಗುತ್ತದೆ. ತದೇಕಚಿತ್ತವಾಗಿ ಆಕೆ ದೂರದರ್ಶನವನ್ನು ನೋಡುತ್ತಿರುತ್ತಾಳೆ.
ಇತ್ತೀಚೆಗೆ ನಾನು ಆಕೆಯನ್ನು ಭೇಟಿ ಮಾಡಿ ಕೆಲ ಹೊತ್ತು ಕುಳಿತು ಆಮೇಲೆ ಮರಳಿ ಮನೆಗೆ ಬರುವಾಗ
ಅದ್ಯಾಕೆ ಅಷ್ಟೊಂದು ಅವಸರ ಮಾಡುತ್ತೀಯ ಕುಳಿತುಕೊಳ್ಳಬಾರದೇ ಎಂದು ನನ್ನ ಕೈ ಹಿಡಿದ ಆಕೆ
ನನ್ನನ್ನು ಕೂಡಿಸಿಕೊಳ್ಳುತ್ತಾರೆ.
ಇಲ್ಲಮ್ಮ ತುಂಬಾ ಕೆಲಸ ಇದೆ… ಮತ್ತೆ ಬರ್ತೀನಿ ಎಂದು ನಾನು ಏನೆಲ್ಲಾ ನೆವಗಳನ್ನು ಹೇಳಿದರೂ ಕೇಳದೆ ನನ್ನ ಕೈ ಹಿಡಿದಾಗ ನಾನು ನಿಧಾನವಾಗಿ ಅವರ ಕೈಯಲ್ಲಿ ನನ್ನ ಕೈಯನ್ನು ಬೆಸೆದು ನಮ್ಮಿಬ್ಬರ ಕೈಗಳನ್ನು ಪರೀಕ್ಷಿಸಿದೆ. ಅತ್ಯಂತ ಕೃಶವಾದ ಆ ಕೈಗಳಲ್ಲಿ ಹಸಿರು ನರಗಳು ಉಬ್ಬಿದಂತಿದ್ದು ಮಣಿಗಂಟಿನ ಎಲುಬು ಎದ್ದು ಕಾಣುತ್ತಿತ್ತು. ಆಕೆಯ ಕೈಯ ಬಿಸುಪಿನಲ್ಲಿ ನನಗೆ ಆಕೆಯ ಇಡೀ ಬದುಕಿನ ಚಿತ್ರಣ ಕಾಣುತ್ತಿತ್ತು.
ಆಕೆಯ ತೆಳುವಾದ ಕೈಗಳಲ್ಲಿ ತನ್ನ ಕುಟುಂಬಕ್ಕೆ ಒಳ್ಳೆಯ ಸಂಸ್ಕಾರದ ಅಡಿಪಾಯವನ್ನು ಹಾಕಿದ ಶಕ್ತಿ ಮತ್ತು ಸಾಮರ್ಥ್ಯದ ಕಸುವನ್ನು ನಾನು ಕಂಡೆ.ಪ್ರೀತಿ ಮತ್ತು ಬೆಚ್ಚನೆಯ ಅನುಭವವನ್ನು ನೀಡುವ ಅಸಂಖ್ಯಾತ ಬಾರಿ ಅಡುಗೆಗಳನ್ನು ತಯಾರಿಸಿದ ಆ ಕೈಗಳ ಗೆರೆಗಳು ಮಾಸಿಹೋಗಿದ್ದರೂ ಅವುಗಳಲ್ಲಿ ಅಮೃತದ ಸವಿಯಿತ್ತು.
ಕಬ್ಬಿಣದ ಚುಚ್ಚುಗ ಮತ್ತು ಕಟ್ಟಿಗೆಯ ಸೌಟುಗಳನ್ನು ಕೈಯಲ್ಲಿ ಹಿಡಿದು ತನ್ನ ಮಕ್ಕಳನ್ನು ಶಿಕ್ಷಿಸಿದ್ದ ಆಕೆ ಅವರಲ್ಲಿ ಶಿಸ್ತನ್ನು ಮೂಡಿಸಿದ್ದಳು… ಜೊತೆಗೆ ತಾಳ್ಮೆ ಮತ್ತು ಗೌರವವನ್ನು ಕೂಡ.
ಚಿಕ್ಕವರಿದ್ದಾಗ ತನ್ನ ಮಕ್ಕಳ ಹಣೆಯನ್ನು ಮುಟ್ಟಿ ಅವರ ಜ್ವರವನ್ನು ಅಳೆಯಲು ಆಕೆ ಹಣೆಯ ಮೇಲೆ ಕೈ ಇಟ್ಟಾಗ ಸಮಾಧಾನ ಮತ್ತು ನೆಮ್ಮದಿಯ ಭಾವ ಮಕ್ಕಳಲ್ಲಿ ಮೂಡುತ್ತಿತ್ತು. ಅನಾರೋಗ್ಯ ಮತ್ತು ನಿದ್ರೆ ಇಲ್ಲದ ರಾತ್ರಿಗಳಲ್ಲಿ ಅಮ್ಮನ ಮಡಿಲಿನಲ್ಲಿ ಜೋಗುಳ ಕೇಳುತ್ತಾ ಮಲಗಿದರೆ ಯಾವಾಗ ನಿದ್ರೆ ಹತ್ತುತ್ತಿತ್ತು ಎಂದು ಗೊತ್ತೇ ಆಗದಷ್ಟು ಗಾಢವಾದ ನಿದ್ರೆ ನಮ್ಮನ್ನು ಆವರಿಸಿತ್ತು ಎಂದು ಆಕೆಯ ಮಕ್ಕಳು ಹೇಳುತ್ತಿದ್ದರು.
ಹಗಲಿರಳು ಮನೆಯ ಎಲ್ಲಾ ಸದಸ್ಯರ ಮತ್ತು ಮಕ್ಕಳ ಚಾಕರಿ, ಹೊತ್ತು ಹೊತ್ತಿಗೆ ಊಟ ಉಪಚಾರಗಳ ವ್ಯವಸ್ಥೆ, ಮನೆಗೆ ಬರುವವರ ಕಾಳಜಿ ಹೀಗೆ ಅಡಿಗೆ ಮನೆ ಮತ್ತು ಹಿತ್ತಲುಗಳನ್ನು ತಮ್ಮ ಪ್ರಪಂಚವನ್ನಾಗಿಸಿಕೊಂಡು ಕುಟ್ಟುವ, ಬೀಸುವ, ರುಬ್ಬುವ, ಕಸ ಗುಡಿಸುವ ನೆಲ ಒರೆಸುವ ಪಾತ್ರೆ ತೊಳೆಯುವ ಬಟ್ಟೆ ಒಗೆಯುವ ಹತ್ತು ಹಲವಾರು ಕೆಲಸಗಳಲ್ಲಿ ತಮ್ಮ ಬದುಕನ್ನು ಸವೆಸಿ ಬಿಡುವ ಅವರ ಅಂಗೈ ಗೆರೆಗಳು ಮಾಸಿ ಹೋಗುವುದು ಎಷ್ಟರ ಮಾತು?
ಇದ್ದುದರಲ್ಲಿಯೇ ತೃಪ್ತಿಪಡುವ, ಮದುವೆಯ ಸೀರೆಯನ್ನೇ ಮತ್ತೆ ಮತ್ತೆ ತೊಟ್ಟು ನೆಂಟರ ಮನೆಯ ಕಾರ್ಯಕ್ರಮಗಳಿಗೆ ಹಾಜರಾಗುವ ಅಮ್ಮ ಅತ್ಯಂತ ಅಲ್ಪತೃಪ್ತಳು. ಆದರೆ ಮನೆಗೆ ಬಂದ ಜನರಿಗೆ ಉಣಿಸಿ ಉಡಿಸಿ ತೊಡಿಸಿ ತೃಪ್ತಿಪಡುವ ಆಕೆಯ ಕೈಗಳ ಮೆದುವಿನಂತೆಯೇ ಆಕೆಯ ಮನಸ್ಸು ಕೂಡ.
ತನ್ನ ಮಕ್ಕಳ ಕಣ್ಣಲ್ಲಿ ಒಸರುವ ಕಣ್ಣೀರನ್ನು ಕೆನ್ನೆಗಿಳಿಯುವ ಮುನ್ನವೇ ವರೆಸುವ ಅವರ ಸಣ್ಣ ಪುಟ್ಟ ಸಾಧನೆಗಳನ್ನು ಸಂಭ್ರಮಿಸುವ ಅವರನ್ನು ವಿನಾಕಾರಣ ಪ್ರೀತಿಸುವ, ಆದರೆ ಅಷ್ಟೇ ಸಕಾರಣವಾಗಿ ದಂಡಿಸುವ ಆಕೆಯ ಕೈಗಳು ‘ವಜ್ರದಪಿ ಕಠೋರಾಣಿ ಮೃದೂನೀ ಕುಸುಮಾದಪಿ’ ಎಂಬ ಮಾತನ್ನು ಪದೇಪದೇ ನೆನಪಿಸುತ್ತವೆ.
ಚಿಕ್ಕವರಿದ್ದಾಗ ಮಕ್ಕಳು ಹೆದರಿ ಅಳುವಾಗ ಅವರನ್ನು ತಬ್ಬಿ ಮುದ್ದು ಮಾಡುತ್ತಿದ್ದ, ಸಾಂತ್ವನಿಸಿ ಧೈರ್ಯ ಹೇಳುತ್ತಿದ್ದ, ನಾ ಎಂದೆಂದಿಗೂ ನಿನ್ನೊಂದಿಗೆ ಇರುವೆ ಎಂಬ ಭದ್ರತಾ ಭಾವವನ್ನು ತುಂಬುತ್ತಿದ್ದ ಅಮ್ಮನ ಕೈಗಳಲ್ಲಿ ಇಂದಿಗೂ ಅದೇ ಬಿಸುಪಿದೆ…. ಮಡಿಲಿನಲ್ಲಿ ಅಪಾರ ಮಮತೆಯ, ನೆಮ್ಮದಿಯ ನಿಲುದಾಣವಿದೆ.
ಆಕೆಯ ಯಾವ ಋಣವನ್ನೂ ನಾವು ತೀರಿಸಲು ಸಾಧ್ಯವಿಲ್ಲ, ಆಕೆಯ ತ್ಯಾಗಕ್ಕೆ ಸರಿಸಾಟಿ ಇಲ್ಲ. ತನ್ನ
ಯೌವನದ ಕನಸು ಕಂಗಳ ಬದುಕಿನ ದಿನಗಳನ್ನು ನಮಗಾಗಿ ಮುಡಿಪಾಗಿಸಿದ, ಸಮಾಜದ ಕೆಂಗಣ್ಣಿನಿಂದ ನಮ್ಮನ್ನು ರಕ್ಷಿಸಿ ಬೆಳೆಸಿದ ಆಕೆಯ ಅಶಕ್ತ ಕೈಗಳನ್ನು ಗಟ್ಟಿಯಾಗಿ ಹಿಡಿದು ಆಕೆಯ ಎಲ್ಲ ಅವಶ್ಯಕತೆಗಳನ್ನು ಪೂರೈಸಿ ಕಳೆದ ದಿನಗಳ ಆಹ್ಲಾದಕರ ನೆನಪನ್ನು ಮರುಕಳಿಸುವಂತೆ ಮಾಡುವಲ್ಲಿ ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳಬೇಕಾಗಿದೆ. ಈ ಪ್ರೀತಿಯ ಭಾವ ಆಕೆಯ ಶಕ್ತಿ ಸಾಮರ್ಥ್ಯ ಪ್ರೀತಿ ಮಮತೆ ಮತ್ತು ಕೆಟ್ಟತನಕ್ಕೆ ಸಾಕ್ಷಿಯಾಗಿ ನನ್ನ ಬದುಕಿನಲ್ಲಿ ಹಾಕು ಹೊಕ್ಕಾಗಲಿ ಎಂಬ ಆಶಯ ನನ್ನದು.
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
More Stories
ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಜನರ ಮೃತದೇಹ ಪತ್ತೆ
ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ