March 10, 2025

Newsnap Kannada

The World at your finger tips!

saraswathi god

ತಾಯಿ ಸರಸ್ವತಿ ಆವಿರ್ಭವಿಸಿದ ದಿನ : ವಸಂತ ಪಂಚಮಿ

Spread the love

ಮಾಘ ಮಾಸದ, ಶುಕ್ಲ ಪಕ್ಷದ ಐದನೇ ದಿನವೇ ವಸಂತ ಪಂಚಮಿ. ವಿದ್ಯೆಯ ಅಧಿದೇವತೆ ತಾಯಿ ಸರಸ್ವತಿ ಆವಿರ್ಭವಿಸಿದ ದಿನ, ಸರಸ್ವತಿಯ ಅವತಾರ.ಈ ದಿನ ಸಕಲ ಶುಭ ಕಾರ್ಯಗಳಿಗೂ ಶುಭ ಗಳಿಗೆ ಇರಲಿದ್ದು, ಅವು ಹೆಚ್ಚಿನ ಫಲ ನೀಡಲಿವೆ.


ಈ ದಿನ ಎಲ್ಲೆಡೆ ಸರಸ್ವತಿ ಆರಾಧನೆ ನಡೆಸಲಾಗುತ್ತದೆ. ಭಕ್ತರು ಸರಸ್ವತಿಯನ್ನು ಆರಾಧಿಸಿ ತಮ್ಮನ್ನು ಅಂಧಕಾರದಿಂದ ಹೊರ ತರುವಂತೆ ಬೇಡಿಕೊಳ್ಳುತ್ತಾರೆ. ಇದೇ ದಿನ ತಾಯಿ ಸರಸ್ವತಿಯು 4 ಅಥವಾ 5ನೇ ಶತಮಾನದಲ್ಲಿ ಸಂಸ್ಕೃತ ಕವಿ ಕಾಳಿದಾಸನಿಗೆ ಒಲಿದಿದ್ದು, ಕಾಳಿದಾಸನನ್ನು ಆಶೀರ್ವದಿಸಿ ಆತ ಪಂಡಿತೋತ್ತಮನಾಗುವಂತೆ ಮಾಡಿದ್ದು ಎಂದು ನಂಬಲಾಗಿದೆ. ಈ ದಿನ ಚಿಕ್ಕ ಮಕ್ಕಳಿಗೆ ಅಕ್ಷರಾಭ್ಯಾಸಕ್ಕೆ ಹೇಳಿ ಮಾಡಿಸಿದ ದಿನ. ವಿದ್ಯಾರ್ಥಿಗಳು ಕೂಡಾ ಸರಸ್ವತಿ ಪೂಜೆ ನಡೆಸಬೇಕು.

ವಸಂತ ಪಂಚಮಿಯಂದು ವಸಂತ ಆಗಮನ

ವಸಂತ ಪಂಚಮಿಯು ಚಳಿಗಾಲ ಕೊನೆಯಾಗುತ್ತಿರುವುದನ್ನೂ, ವಸಂತ ಕಾಲ ಆಗಮನವಾಗುತ್ತಿರುವುದನ್ನೂ ಸೂಚಿಸುತ್ತದೆ. ವಸಂತ ಕಾಲವು ಎಲ್ಲ ಕಾಲಗಳ ರಾಜನಾಗಿದ್ದು, ಮರಗಿಡಗಳು ಚಿಗುರೊಡೆಯುವ ಕಾಲ. ಚಳಿಗಾಲದ ಒಣಹವೆಯು ಕೊನೆಯಾಗುವ ಕಾಲ. ಎಲ್ಲೆಡೆ ಹಳದಿ ಹೂಗಳು ಚಿಗುರಲಾರಂಭಿಸುತ್ತವೆ. ಹಳದಿ ಬಣ್ಣವು ಬೆಳಕು, ಶಕ್ತಿ, ಸಮೃದ್ಧಿ, ಶಾಂತಿ ಹಾಗೂ ಜ್ಞಾನದ ಸಂಕೇತವಾಗಿದೆ. ಹಾಗಾಗಿ, ಈ ಸಮಯ ಹೊಸ ಸಾಹಸಗಳಿಗೆ ಕೈ ಹಾಕಲು, ಹೊಸ ಉದ್ಯಮ ಆರಂಭಕ್ಕೆ, ವಿವಾಹಕ್ಕೆ, ಮನೆ ಕೊಳ್ಳಲು, ಕೆಲಸ ಆರಂಭಿಸಲು ಅತ್ಯುತ್ತಮ ಕಾಲವಾಗಿದೆ. ಈ ದಿನ ಮಾಡುವ ಯಾವುದೇ ಶುಭ ಕಾರ್ಯಗಳಿಗೆ ಮುಹೂರ್ತ ನೋಡಬೇಕಿಲ್ಲ.

ಪ್ರೀತಿಯ ದೇವತೆ

ಪ್ರೀತಿಯ ಅಧಿದೇವತೆಯಾದ ಕಾಮದೇವನು ಶಿವನನ್ನು ತಪಸ್ಸಿನಿಂದ ಎಚ್ಚರಿಸಲು ಪ್ರಯತ್ನಿಸಿದ ಸಮಯವಾಗಿ ವಸಂತ ಪಂಚಮಿ ಗುರುತಿಸಿಕೊಂಡಿದೆ.

ಮತ್ಸ್ಯ ಪುರಾಣ, ಶಿವಪುರಾಣ ಸೇರಿದಂತೆ ಹಲವು ಕಡೆ ಈ ಕತೆಯನ್ನು ಕಾಣಬಹುದು. ಶಿವನು ತನ್ನ ಮೊದಲ ಪತ್ನಿ ಸತಿಯ ಸಾವಿನ ಬಳಿಕ ಘೋರ ತಪಸ್ಸಿನಲ್ಲಿರುತ್ತಾನೆ. ಈ ಸಂದರ್ಭದಲ್ಲಿ ಸತಿಯ ಪುನರ್ಜನ್ಮವಾಗಿ ಹುಟ್ಟಿ ಬೆಳೆದ ಪಾರ್ವತಿ ಶಿವನಲ್ಲಿ ಅನುರಕ್ತಳಾಗಿ ಆತನನ್ನು ಸೆಳೆಯಲು ಸಾಕಷ್ಟು ಸಾಹಸ ಮಾಡುತ್ತಾಳೆ. ಆದರೆ, ಶಿವ ಭಂಗಗೊಳ್ಳುವುದಿಲ್ಲ. ಆಗ ಪಾರ್ವತಿಯ ನೆರವಿಗೆ ಬಂದ ಕಾಮದೇವ ಶಿವನ ಮನಸ್ಸು ಚಂಚಲವಾಗುವಂತೆ ವಸಂತ ಕಾಲವನ್ನು ಸೃಷ್ಟಿಸಿ, ಸುತ್ತಣ ವಾತಾವರಣವನ್ನು ವರ್ಣಮಯಗೊಳಿಸುತ್ತಾನೆ. ಜೊತೆಗೆ, ಶಿವನಲ್ಲಿ 5 ಆಸೆಗಳ ಬಾಣ ಬಿಡುತ್ತಾನೆ. ಹೀಗೆ ಶಿವ ಪಾರ್ವತಿಯನ್ನು ವಿವಾಹವಾಗಲು ಕಾರಣನಾಗುತ್ತಾನೆ. ಪಂಚಮಿಯ ಸಂದರ್ಭ ವಿವಾಹ ಕಾರ್ಯಗಳಿಗೆ ಅತ್ಯುತ್ತಮವೆಂದು ಪರಿಗಣಿತವಾಗಿದೆ.

ವಸಂತ ಪಂಚಮಿಯಂದೇ ಬಿಹಾರದಲ್ಲಿ ಸೂರ್ಯ ದೇವಾಲಯ ಕಟ್ಟಿದ್ದು. ಸೂರ್ಯನು ಜ್ಞಾನ ಹಾಗೂ ಆಧ್ಯಾತ್ಮದ ಸೂಚಕವಾಗಿದ್ದು, ಆತ ಚಳಿಗಾಲಕ್ಕೆ ಕೊನೆ ಹಾಡುತ್ತಾನೆ. ಗಿಡಮರಗಳಿಗೆ ಹೊಸ ಚಿಗುರಿಗೆ ಆಶೀರ್ವದಿಸುತ್ತಾನೆ. ಸೂರ್ಯನ ಈ ನಡೆ ಜನರಲ್ಲಿ ಆಶಾಭಾವ ಹುಟ್ಟಿಸುವ ಜೊತೆಗೆ, ಹೊಸ ಹೊಸ ಕಾರ್ಯಗಳನ್ನು ಕೈಗೊಳ್ಳಲು ಪ್ರೇರೇಪಿಸುತ್ತದೆ. ಹಾಗಾಗಿ,

ವಸಂತ ಪಂಚಮಿಯ ದಿನ ಜನ ಹೊಸ ಉದ್ಯಮ ಆರಂಭಿಸುವುದು, ಉದ್ಯೋಗ ಆರಂಭಿಸುವುದು ಸೇರಿದಂತೆ ಪ್ರಮುಖ ಕೆಲಸಗಳನ್ನು ಶುರು ಮಾಡುತ್ತಾರೆ.

ವಸಂತ ಪಂಚಮಿ ಆಚರಣೆ

ಈ ದಿನ ಜನ ಬ್ರಹ್ಮ ಮುಹೂರ್ತದಲ್ಲಿ ಎದ್ದು, ಸ್ನಾನ ಮಾಡಿ ಹೊಸತಾದ ಸ್ವಚ್ಛ ಬಟ್ಟೆ ಧರಿಸುತ್ತಾರೆ. ಸರಸ್ವತಿ ಪೂಜೆ, ಸೂರ್ಯ ನಮಸ್ಕಾರ, ಶಿವ- ಪಾರ್ವತಿಯ ಆರಾಧನೆಯಲ್ಲಿ ತೊಡಗುತ್ತಾರೆ. ಹಳದಿ ಬಣ್ಣದ ವಸ್ತ್ರ ಧರಿಸಿ, ಪೂಜೆ ಕೈಂಕರ್ಯಗಳನ್ನು ನಡೆಸಿ, ಮನೆಯಲ್ಲಿ ಸಿಹಿ ತಯಾರಿಸಿ ತಿನ್ನುತ್ತಾರೆ. ಸಾಮಾನ್ಯವಾಗಿ ಹಳದಿ ಬಣ್ಣದ ಆಹಾರಗಳನ್ನೇ ತಯಾರಿಸುತ್ತಾರೆ. ಪೂಜೆಗೆ ಪುಸ್ತಕಗಳನ್ನೂ ಇಡಬಹುದು. ಈ ದಿನ ಬಡ ಮಕ್ಕಳಿಗೆ ಪುಸ್ತರ ಹಂಚುವುದು ಕೂಡಾ ಉತ್ತಮ ಕಾರ್ಯವಾಗಿದೆ.

image 8

ಪ್ರಶಾಂತ್ ಭಟ್
ಕೋಟೇಶ್ವರ.

Copyright © All rights reserved Newsnap | Newsever by AF themes.
error: Content is protected !!