ಕನ್ನಡ ಭಾಷೆ, ಕನ್ನಡ ನೆಲ, ಕನ್ನಡ ಜಲ ಎಲ್ಲವೂ ಒಂದು ರೀತಿಯಲ್ಲಿ ಮನಸ್ಸಿಗೆ ಹತ್ತಿರವಾದದ್ದು ಎನ್ನುವುದು ಹಲವರ ಅಭಿಪ್ರಾಯ.
ಕನ್ನಡ ನಾಡಿನಲ್ಲೇ ಹುಟ್ಟಿ ಬೆಳೆದವರಂತೂ ಮುಂದಿನ ಏಳೇಳು ಜನ್ಮಕ್ಕೂ ಕನ್ನಡ ಅಥವಾ ಕರ್ನಾಟಕದ ನೆಲವೇ ನಮ್ಮ ನೆಲೆಯಾಗಲಿ ಎಂದು ಬೇಡಿಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ಕನ್ನಡ ಎಂಬ ಪದ, ಕನ್ನಡದ ಸಂಸ್ಕೃತಿ ಮನ ಮೆಚ್ಚುವಷ್ಟು ಹೆಸರುವಾಸಿ.
ಒಂದೇ ತಾಯಿಗೆ ನಾಲ್ಕು ಜನ ಮಕ್ಕಳಿದ್ದರೆ ಎಲ್ಲರ ಗುಣ ಸ್ವಭಾವ, ಲಕ್ಷಣಗಳು ಬೇರೆಯಾಗಿರುತ್ತದೆ. ಆದರೆ ತಾಯಿ ಮಾತ್ರ ಒಬ್ಬಳೇ ಆಗಿರುತ್ತಾಳೆ. ಹಾಗೆಯೇ ಕನ್ನಡ ನಾಡು ನುಡಿ ವಿವಿಧತೆಯಲ್ಲಿ ಏಕತೆ ಮೈಗೂಡಿಸಿಕೊಂಡಿರುವ ಸಂಸ್ಕೃತಿ ಈ ನಾಡಿನದ್ದು.
ಕನ್ನಡದ ಪದ ಬಳಕೆಯಲ್ಲಿ ನಿಮ್ಮ ಉತ್ಸಾಹ ಎಂತದ್ದು ಎಂದು ಒಮ್ಮೆ ಪ್ರಶ್ನೆ ಮಾಡಿಕೊಂಡರೆ, ಹಲವರ ಉತ್ತರ ಬೇರೆ ಬೇರೆಯಾಗಿರುತ್ತದೆ. ಕಾರಣ ಕನ್ನಡಕ್ಕೆ ಹೀಗೆ ಇರಬೇಕು ಎಂಬ ಹಮ್ಮು ಬಿಮ್ಮು ಇಲ್ಲ.
ಪ್ರತ್ಯಕ್ಷ ಉದಾಹರಣೆ ನಾವು ಮಾತನಾಡುವ ಕನ್ನಡದಲ್ಲಿನ ತರಹೇವಾರಿ ಪದಗಳು. ಕನ್ನಡ ಮಾತನಾಡುವ ಕನ್ನಡಿಗರಲ್ಲೂ ಭಿನ್ನತೆ ಇದೆ. ಅದರಲ್ಲೂ ಭಾಷಾ ಭಿನ್ನತೆ ಇದೆ. ಅಂದರೆ ಒಂದೊಂದು ಮನೆಯ ಹೊಸ್ತಿಲ ಒಳಗೂ ಕನ್ನಡದ ಕಂಪು ಬೇರೆ.
ಉತ್ತರ ಕರ್ನಾಟಕ, ಕುಂದಾಪುರ, ಮಂಗಳೂರು, ಉತ್ತರ ಕನ್ನಡ, ಮಲೆನಾಡು ಭಾಗಕ್ಕೆ ಹೋದಾಗ ಕನ್ನಡ ಮಾತನಾಡಿದರು ಅವರು ನಮಗಿಂತ ಭಿನ್ನ ಎನಿಸುತ್ತಾರೆ.
ಹಾಗಿದ್ದರೆ ಆಯಾ ಸ್ಥಳಕ್ಕೆ ಅಥವಾ ಜಾಗಕ್ಕೆ ಕನ್ನಡ ಹೇಗೆ ಭಿನ್ನ? ಎಂಬ ಒಂದೆರಡು ಉದಾಹರಣೆಗಳು ಇಲ್ಲಿವೆ.
ಕುಂದಾಪುರ ಕನ್ನಡ :
ಕುಂದಾಪುರ ಎನ್ನುವ ಬದಲಾಗಿ ಇಲ್ಲಿ ಕುಂದಾಪ್ರ ಎನ್ನುವುದೇ ಇಲ್ಲಿನ ಕನ್ನಡ ಭಾಷಾ ಬಳಕೆಗೆ ಒಂದು ಸಾಕ್ಷಿ. ಪ್ರಾದೇಶಿಕ ಭಾಷಾ ಕನ್ನಡಿಗೆ ಇಲ್ಲಿ ಅನೇಕ ಪದಗಳು ಹೊಸತು ಎನಿಸುತ್ತದೆ. ಉಡುಪಿ ಜಿಲ್ಲೆಯ ಕುಂದಾಪುರದ ಸುತ್ತಮುತ್ತಲ ಅನೇಕ ಊರುಗಳಲ್ಲಿ ಕುಂದಾಪುರ ಕನ್ನಡ ಮಾತನಾಡುವುದು ರೂಡಿ. ಭಾಷಿ ಅಂದ್ರ್ ಬದ್ಕ್ ಎನ್ನುವ ಮಾತು ಇಲ್ಲಿಯವರದ್ದು.
ಊಟ ಆಯಿತಾ ಎಂದು ಕೇಳುವ ಬದಲಾಗಿ ಉಂಡ್ರಿಯಾ ಎಂದು ಬಳಸುವಂತೆ ಇಲ್ಲಿ ಅನೇಕ ಪದಗಳು ಕನ್ನಡದೊಂದಿಗೆ ಹೊಂದಿಕೊಂಡಿದೆ.
ಜೋರಾಗಿ ಮಳೆ ಎನ್ನುವ ಬದಲಿಗೆ ಜಿರಾಪತಿ ಮಳೆ, ಹರ್ಮೈಕಾ (ವಿಷ್ಣು ಚಮತ್ಕಾರ), ಜ್ವಾಗಳಾ (ಮಗು ಸತ್ತಿದೆ), ಹಜಾನ್ ಹರಿದ್ (ಬೈಗುಳದ ಪದ), ಹೊತ್ರಿಯಾ (ಹೋಗುತ್ತೀರಾ), ಅಬಾ (ಅಮ್ಮ) ಇತ್ಯಾದಿ ಪದಗಳಿವೆ. ಹೋಯ್ಕ್ ಬರ್ಕ್ ಮಾತಾಡುವುದು ಕುಂದಾಪುರ ಕನ್ನಡ ಎಂದು ಕೂಡ ಹೇಳಲಾಗುತ್ತದೆ.
ಉತ್ತರ ಕರ್ನಾಟಕ ಭಾಷೆ :
ಉತ್ತರ ಕರ್ನಾಟಕದ ಭಾಷೆ ಖಾರ ಎನ್ನುವ ಒಂದು ಮಾತಿದೆ. ಆದರೆ ಭಾಷೆ ಒರಟು ಅನಿಸಿದರೂ ಇಲ್ಲಿನ ಜನರ ಮನಸ್ಸು ಮೃದು ಎನ್ನುವುದು ವಿಶೇಷ. ಏಕೆಂದರೆ ಇಲ್ಲಿ ಮಾತನಾಡುವ ಕನ್ನಡ ಭಾಷೆಯು ಸದಾ ಏರು ಧ್ವನಿಯಲ್ಲಿರುತ್ತದೆ.
ಉತ್ತರ ಕರ್ನಾಟಕದಲ್ಲಿ 12 ರಿಂದ 14 ಜಿಲ್ಲೆಗಳಿವೆ. ಇಲ್ಲಿನ ಭಾಷೆಯ ಮೂಲ ಕನ್ನಡವೇ ಆದರೂ ಕೆಲವು ಶಬ್ಧಗಳು ಭಿನ್ನವಾಗಿದೆ.
ಬೆಂಗಳೂರಿನಿಂದ ಬಂದ ಕನ್ನಡಿಗರಿಗೆ ಉತ್ತರ ಕರ್ನಾಟಕದ ಕನ್ನಡ ಶಬ್ಧ ಅರ್ಥವಾಗದೆ ಹೋಗಬಹುದು. ಉದಾಹರಣೆಗೆ ಸೂಟಿ ಕೊಟ್ಟಿಲ್ಲ ಎಂದರೆ ಮುಖ ಮುಖ ನೋಡಿಕೊಳ್ಳುವ ಪರಿಸ್ಥಿತಿ ಇದೆ. ಆದರೆ ಸೂಟಿ ಎಂದರೆ ರಜೆ ಎಂದು ಅರ್ಥವಾದ ಮೇಲೆ ಸುಮ್ಮನಾಗಬೇಕಾಗುತ್ತದೆ.
ಬೈಗುಳವನ್ನು ಅಷ್ಟೇ ನಯವಾಗಿ ಮಾತನಾಡುವ ಇಲ್ಲಿನ ಜನರ ಕನ್ನಡ ಕುತೂಹಲಕಾರಿಯಾದದ್ದು ಎಂದರೆ ತಪ್ಪಾಗಲಾರದು.
ಉತ್ತರ ಕರ್ನಾಟಕದ ಭಾಷೆಯಲ್ಲಿ
ಇ ಕಾರ ಹೆಚ್ಚು. ಉದಾಹಣೆಗೆ ಮಳೆ- ಮಳಿ, ಮನೆ- ಮನಿ, ಆನೆ- ಆನಿ, ಕಾಗೆ- ಕಾಗಿ.
ಮಂಗಳೂರು ಕನ್ನಡ :
ಸಾಮಾನ್ಯವಾಗಿ ದಕ್ಷಿಣ ಕನ್ನಡ ಭಾಗದಲ್ಲಿ ಮಾತನಾಡುವ ಕನ್ನಡಕ್ಕೆ ಮಂಗಳೂರು ಕನ್ನಡ ಎಂದು ಕರೆಯಲಾಗುತ್ತದೆ.
ಇಲ್ಲಿ ಮಾತನಾಡುವ ಪ್ರಾದೇಶಿಕ ಕನ್ನಡಕ್ಕೆ ಶುದ್ಧ ಕನ್ನಡ ಎಂದು ಕೂಡ ಕರೆಯುತ್ತಾರೆ. ಪ್ರಾದೇಶಿಕ ಪ್ರಭೇದಗಳಲ್ಲಿ ಈ ಕನ್ನಡವು ಒಂದು. ಇಲ್ಲಿ ಪೌರಾಣಿಕ ಮತ್ತು ನಾಟಕಗಳಲ್ಲಿ ಮಾತನಾಡುವ ಕನ್ನಡದಂತೆ ಶಬ್ಧಗಳನ್ನು ಬಳಸಲಾಗುತ್ತದೆ.
ಕೇಳುಗರಿಗೆ ಹೆಚ್ಚು ಗೌರವಯುತವಾಗಿ ಭಾಸವಾಗುತ್ತದೆ. ಕರಾವಳಿ ಭಾಗದಲ್ಲಿ ತುಳು ಹೆಚ್ಚಾಗಿ ಮಾತನಾಡುವುದು ಕೂಡ ಇದಕ್ಕೆ ಒಂದು ಕಾರಣ. ನಾವು ಸಾಮಾನ್ಯವಾಗಿ ಮಗು ಅಳುತ್ತಿದೆ ಎನ್ನುತ್ತೇವೆ ಆದರೆ ಮಂಗಳೂರಿನಲ್ಲಿ ಮಗು ಕೂಗುತ್ತಿದೆ ಎಂದು ಬಳಸುತ್ತಾರೆ. ಕೂಗುವುದು ಎಂದರೆ ಕಿರುಚಿ ಮಾತನಾಡುವುದು ಅಥವಾ ಜೋರಾಗಿ ಮಾತನಾಡುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳುವ ಸಾಧ್ಯತೆ ಇನ್ನಿತರ ನಗರದವರಿಗೆ ಎದುರಾಗಬಹುದು.
ನಿಲ್ಲುತ್ತಾನೆ- ಇರುತ್ತಾನೆ, ಎತ್ತಬೇಕು- ತಲುಪಬೇಕು, ಇತ್ತಾ- ಇದೆಯಾ ಇತ್ಯಾದಿ ಶಬ್ಧಗಳ ಬಳಕೆ ಇದೆ.
ಹವ್ಯಕ ಕನ್ನಡ :
ಉತ್ತರ ಕನ್ನಡದಲ್ಲಿ ಹೆಚ್ಚಿನವರು ಹವ್ಯಕ ಕನ್ನಡವನ್ನು ಮಾತನಾಡುತ್ತಾರೆ. ವಿಶೇಷ ಎಂದರೆ ಕನ್ನಡವೇ ಆದರು ಅದನ್ನು ಬಳಸುವ ಅಥವಾ ಉಚ್ಚರಿಸುವ ರೀತಿ ಬೇರೆಯೇ ಎನಿಸುತ್ತದೆ. ಉದಾಹರಣೆಗೆ ಬರುತ್ತೇನೆ- ಬತ್ತಿ, ಹೋಗುತ್ತೇನೆ- ಹೋಗ್ತಿ, ಬರುತ್ತಿದ್ದಾನೆ- ಬತ್ತಾ ಇದ್ದ, ಬರಬೇಡ- ಬರಡ, ಬರಬಹುದು- ಬರ್ಗು. ಇಲ್ಲಿ ಸ್ವಲ್ಪ ಗಮನಕೊಟ್ಟು ನೋಡಿದಾಗ ಕೆಲ ಪದಗಳು ಕುಂದಾಪುರ ಕನ್ನಡ ಮತ್ತು ಇನ್ನೂ ಕೆಲವು ಪದಗಳು ಮಂಡ್ಯ ಕಡೆಯ ಕನ್ನಡಕ್ಕೆ ಜೋತು ಬಿದ್ದಿವೆ ಎನಿಸುತ್ತದೆ.
ಆದರೆ ಇಲ್ಲಿನ ಕನ್ನಡ ರೂಢಿಯಿಂದ ತಿಳಿದುಕೊಳ್ಳಲು ಸಾಧ್ಯ ಎನ್ನುವುದು ಮಾತ್ರ ನಿಜ.
ಮಲೆನಾಡು ಕನ್ನಡ :
ಘಟ್ಟ ಹತ್ತಿ ಬಂದರೆ ಅಲ್ಲಿಯ ಜನರ ಭಾಷಾ ಪರಿಯೇ ಬೇರೆ ಎಂಬುವುದು ಹಲವರ ಮಾತು. ಅದಕ್ಕೆ ಪುಷ್ಟಿ ಎನ್ನುವಂತೆ ಇಲ್ಲಿನ ಕನ್ನಡವೂ ಕೂಡ ಮಲೆನಾಡಿನ ಜನರ ಜೀವನಶೈಲಿಗೆ ತಕ್ಕಂತೆ ಬದಲಾವಣೆಯಾಗಿದೆ ಅಥವಾ ತನ್ನದೇ ರೂಪ ಹೊತ್ತುಕೊಂಡಿದೆ. ಚಿಕ್ಕಮಗಳೂರು, ತೀರ್ಥಹಳ್ಳಿ, ಮೂಡಿಗೆರೆ, ಸಾಗರ, ಶೃಂಗೇರಿ, ಕೊಪ್ಪ, ಕಳಸದಲ್ಲಿ ಮಲ್ನಾಡ್ ಕನ್ನಡ ಮಾತನಾಡುತ್ತಾರೆ.
ಕಡ್ಬು- ಕಡುಬು, ತ್ವಾಟ- ತೋಟು, ತಗ್ದ್ ಹಣಿ-ತೆಗೆದು ಬಿಸಾಕು, ಅಲೇಸು- ಕೇಳಿಸಿಕೊ ಈ ಪದಗಳೇ ಇದಕ್ಕೆ ಉದಾಹರಣೆ.
ಚಾಮರಾಜನಗರ, ನಂಜಗೂಡು , ಕೆಆರ್ ಪೇಟೆ , ನಾಗಮಂಗಲ, ಹೆಗ್ಗಡದೇವನಕೋಟೆ ಸೇರಿದಂತೆ ಅನೇಕ ತಾಲೂಕುಗಳ ಕನ್ನಡ ಭಾಷೆ, ಪದ ಬಳಕೆ ಮತ್ತು ಮಾತನಾಡುವ ರೀತಿಯೂ ಕೂಡ ತಾಲೂಕಿನಿಂದ ತಾಲೂಕಿಗೆ ವ್ಯತ್ಯಾಸ ಆಗುವುದನ್ನು ಗಮನಿಸಬಹುದು.
ಕನ್ನಡದಲ್ಲೂ ಎಷ್ಟೊಂದು ಭಿನ್ನತೆ, ವೈವಿಧ್ಯತೆ ಇದೆ ಎಂದು ಒಂದೊಮ್ಮೆ ಅನಿಸುವುದು ನಿಜ. ಆದರೆ ಪ್ರಾದೇಶಿಕವಾಗಿ ಬಳಕೆಯಾದರೂ ನಾವು ಒಂದೊಮ್ಮೆ ಬೆಂಗಳೂರು ಸೇರಿಕೊಂಡರೆ ಅಲ್ಲಿ ಎಲ್ಲಾ ಕನ್ನಡಿಗರು ಒಂದೆ. ಕನ್ನಡ ಎಂದರೆ ಹಾಗೆಯೇ. ನಮ್ಮ ನಮ್ಮ ಮನೆಯಲ್ಲಿನ ಅಮ್ಮನ ಹೆಸರು ಬೇರೆ ಬೇರೆ ಇರಬಹುದು ಆದರೆ ತಾಯಿ ಮಕ್ಕಳಿಗೆ ತೋರಿಸುವ ಪ್ರೀತಿ ಎಲ್ಲರಲ್ಲೂ ಒಂದೆ. ಅಂತೆಯೇ ಭಾಷೆ ಕೂಡ. ಕನ್ನಡ ರಾಜ್ಯೋತ್ಸವಕ್ಕೆ ಮಾತ್ರ ಕನ್ನಡ ನೆನೆಯದೇ ಸದಾ ಕನ್ನಡಲ್ಲೇ ಮಾತನಾಡುವ ಎಲ್ಲರಿಗೂ ಕನ್ನಡದ ಕಂಪು ಎಂದು ಮುದುಡದ ಹೂವಾಗಲಿ.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
More Stories
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!
ಹೆಂಗರುಳೇ ಕಲ್ಲಾದರೆ ನುಡಿವುದೇನು(ಬ್ಯಾಂಕರ್ಸ್ ಡೈರಿ)