December 25, 2024

Newsnap Kannada

The World at your finger tips!

world health

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ವಿಶ್ವದ 100 ಕೋಟಿಗೂ ಹೆಚ್ಚು ಜನ: ಡಬ್ಲುಎಚ್‌ಒ

Spread the love

ವಿಶ್ವದಲ್ಲಿ 100 ಕೋಟಿಗೂ ಹೆಚ್ಚು ಜನರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಖಿನ್ನತೆಯಿಂದಾಗಿ ಜನರ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.


ಪ್ರತಿ ವರ್ಷ ಅಕ್ಟೋಬರ್ 10 ಅನ್ನು “ವಿಶ್ವ ಮಾನಸಿಕ ಆರೋಗ್ಯ ದಿನ’ವಾಗಿ ಆಚರಿಸಲಾಗುತ್ತಿದೆ. ಕೋವಿಡ್ ಸಮಯದಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಇಂದಿನ ತುರ್ತು ಅಗತ್ಯ ಎಂದು ಡಬ್ಲುಎಚ್‌ಒ ತಿಳಿಸಿದೆ.


ಸರ್ಕಾರಗಳು ನಿತ್ಯದ ಪ್ರಾಥಮಿಕ ಆರೋಗ್ಯ ಸೇವೆಗಳ ಜತೆಗೆ ಮಾನಸಿಕ ಆರೋಗ್ಯ ಸೇವೆಗಳನ್ನು ನೀಡಬೇಕೆಂದು ಸಲಹೆ ನೀಡಿದೆ. ಮಾನಸಿಕ ಆರೋಗ್ಯ ಇಲ್ಲದಿದ್ದರೆ ಸಾಮಾನ್ಯ ಆರೋಗ್ಯವೂ ಇಲ್ಲ ಎಂಬುದು ಎಚ್ಚರಿಕೆ ಗಂಟೆಯಾಗಲಿ ಎಂದು ಅದು ಕಿವಿಮಾತು ಹೇಳಿದೆ.


ವ್ಯಾಕುಲತೆಯಿಂದ ಜನರನ್ನು ಹೊರತರುವುದು ಸರ್ಕಾರ, ಆರೋಗ್ಯ ಸಂಸ್ಥೆಗಳ ಕರ್ತವ್ಯವಾಗಿದೆ. ಮಾನಸಿಕ ಆರೋಗ್ಯ ಸೇವೆ, ಆಪ್ತಸಮಾಲೋಚನೆ ಮತ್ತು ಧೈರ್ಯ ತುಂಬುವ ಕೆಲಸಗಳು ಆಗಬೇಕು ಎಂದಿದೆ.


ಪರಿಸ್ಥಿತಿಯ ಒತ್ತಡ, ಕೆಲಸದ ಸ್ಧಳದಲ್ಲಿನ ಕಿರಿಕಿರಿ, ಅನುವಂಶೀಯತೆ, ಸುತ್ತಮುತ್ತಲ ವಾತಾವರಣ, ಕೌಟುಂಬಿಕ ಸಮಸ್ಯೆಗಳು ಮಾನಸಿಕ ಕಾಯಿಲೆಗೆ ಕಾರಣವಾಗುತ್ತಿವೆ. ಆಧುನಿಕ ಜೀವನ ಶೈಲಿಯಲ್ಲಿ ಜನರು ಶಾರೀರಿಕ ಮತ್ತು ಮಾನಸಿಕ ಆರೋಗ್ಯ ನಿರ್ಲಕ್ಷಿಸುತ್ತಿದ್ದಾರೆ.


1992 ರಲ್ಲಿ ಪ್ರಥಮವಾಗಿ ವಿಶ್ವ ಮಾನಸಿಕ ಆರೋಗ್ಯ ದಿನವಾಗಿ ಆಚರಿಸಲಾಯಿತು. ಇದು ಆರಂಭವಾಗಿ 29 ವರ್ಷಗಳೇ ಆದರೂ ಮಾನಸಿಕ ಆರೋಗ್ಯ ಕುರಿತು ಜನರಲ್ಲಿ ಜಾಗೃತಿ ಮೂಡಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ.

Copyright © All rights reserved Newsnap | Newsever by AF themes.
error: Content is protected !!