January 12, 2025

Newsnap Kannada

The World at your finger tips!

rig

ಮೋದಿ ‘ಮೆಕ್ ಇನ್ ಇಂಡಿಯಾ’ಗೆ ಯಶಸ್ಸು: ಅತ್ಯಾಧುನಿಕ ತಂತ್ರಜ್ಞಾನದ ದೇಶೀಯ ರಿಗ್ ಗೆ ಚಾಲನೆ

Spread the love

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ‘ಮೇಕ್ ಇನ್ ಇಂಡಿಯಾ’ ದೇಶಿಯ ನಿರ್ಮಾಣಕ್ಕೆ ಬೆನ್ನುಲುಬಾಗಿ ನಿಂತಿದ್ದು, ಇದಕ್ಕೆ ಸಾಕ್ಷಿ ಎನ್ನುವಂತೆ ಬುಧವಾರದಂದು ದೇಶಿಯ ನಿರ್ಮಿತ ಇಂಧನ ನಿಕ್ಷೇಪ ಮೇಲೆತ್ತುವ ಅತ್ಯಾಧುನಿಕ ರಿಗ್ ಕಾರ‍್ಯಾರಂಭಿಸಿದೆ.

ಪ್ರಧಾನಿ ಮೋದಿ ತವರು ರಾಜ್ಯ ಗುಜರಾತ್‌ನ ಅಹ್ಮದಾಬಾದ್‌ನ ಕಲೂಲ್‌ನಲ್ಲಿ, 1500 ಹೆಚ್‌ಪಿ ಸಾಮರ್ಥ್ಯ ಮೂಲಕ ಭೂಗರ್ಭದಲ್ಲಿ 400 ಮೀಟರ್ ಅಂದರೆ 4 ಕಿ.ಮೀ.ಗಳಷ್ಟು ಆಳವನ್ನು ಹೊಕ್ಕು ಇಂಧನ ಬಾವಿಗಳನ್ನು ನಿರ್ಮಿಸಿ ಇಂಧನ ನಿಕ್ಷೇಪವನ್ನು ಹೊರತರುವ ಎಂಇಐಎಲ್‌ನ ಈ ದೇಶಿಯ ನಿರ್ಮಿತ ರಿಗ್‌ಗೆ ಚಾಲನೆ ನೀಡಲಾಗಿದೆ.

ಈ ವಿಷಯ ತಿಳಿಸಿರುವ ಮೆಘಾ ಇಂಜಿನಿಯರಿಂಗ್ ಅಂಡ್ ಇನ್ರ್ಫಾಸ್ಟ್ರಕ್ಚರ್ ಸಂಸ್ಥೆಯ ಉಪಾಧ್ಯಕ್ಷ ಪಿ. ರಾಜೇಶ್ ರೆಡ್ಡಿ, 40 ವರ್ಷಗಳ ಸುಧೀರ್ಘ ಬಾಳಿಕೆ ಖಾತ್ರಿ ಹೊಂದಿರುವ ಈ ರಿಗ್‌ಗಳನ್ನು ದೇಶಿಯ ತಂತ್ರಜ್ಞಾನದೊಂದಿಗೆ ಭಾರತದಲ್ಲಿಯೇ ಸಂಪೂರ್ಣವಾಗಿ ನಿರ್ಮಿಸಲಾಗಿದೆ ಎಂದರು.

2019ರಲ್ಲಿ ಇಂತಹ ಅತ್ಯಾಧುನಿಕ 47 ರಿಗ್‌ಗಳ ನಿರ್ಮಾಣಕ್ಕೆ ವಿವಿಧೆಡೆಗಳಿಂದ ಬೇಡಿಕೆ ಬಂದಿದ್ದು, ಈ ಸರಬರಾಜು ಆದೇಶಕ್ಕೆ ಪ್ರತಿಯಾಗಿ ಬುಧವಾರ ಸಂಸ್ಥೆಯ ಮೊದಲ ರಿಗ್ ಕಾರ್ಯಾನಿರ್ವಹಣೆ ಆರಂಭಗೊಂಡಿದೆ ಮತ್ತು ಇನ್ನುಳಿದಂತೆ 46 ರಿಗ್‌ಗಳು ವಿವಿಧ ನಿರ್ಮಾಣ ಹಂತಗಳಲ್ಲಿವೆ ಎಂದು ರೆಡ್ಡಿ ಹೇಳಿದರು.

ದೇಶಿಯ ಹೆಗ್ಗಳಿಕೆ:

ಈಗಾಗಲೇ ಬಳಕೆಯಲ್ಲಿರುವ ಇಂಧನ ಬಾವಿಗಳಿಂದ ಹೆಚ್ಚಿನ ಉತ್ಪಾದನೆಗೆ ಅನುವಾಗುವಂತೆ ಮತ್ತು ಇಂಧನ ಬಾವಿಗಳ ರಿಪೇರಿಗೆ ಎಂಇಐಎಲ್ ನಿರ್ಮಿತ ಈ ಅತ್ಯಾಧುನಿಕ ರಿಗ್‌ಗಳು ಸಹಕಾರಿಯಾಗಲಿವೆ. ಭೂತಳದಲ್ಲಿನ ಇಂಧನ ನಿಕ್ಷೇಪವನ್ನು ತಲುಪಿ ಅಲ್ಲಿಂದ ಮೇಲೆತ್ತಿ ತರಲು ಈ ಅತ್ಯಾಧುನಿಕ ರಿಗ್‌ಗಳ ಕಾರ್ಯಕ್ಷಮತೆ ಪ್ರಸ್ತುತವಾಗಲಿದ್ದು, 1500 ಮೀಟರ್‌ನಿಂದ ಆರಂಭಗೊಂಡು 6000 ಮೀಟರ್‌ವರೆಗೆ ಭೂಮಿ ಕೊರೆದು ಇಂಧನ ಎತ್ತುವಳಿ ಮಾಡಲಿದೆ. ಈ ಅತ್ಯಾಧುನಿಕ ರಿಗ್‌ಗಳಿಗೆ ಹೋಲಿಕೆ ಮಾಡಿದಲ್ಲಿ, ಪ್ರಸ್ತುತ ಬಳಸುತ್ತಿರುವ ರಿಗ್‌ಗಳು ಕೇವಲ 1000 ಮೀಟರ್ ಆಳದವರೆಗೆ ತಲುಪುವ ಸಾಮರ್ಥ್ಯ ಹೊಂದಿವೆ.

ದೇಶಿಯ ಇಂಧನ ಉತ್ಪಾದನೆಗೆ ಒತ್ತು:

ದೇಶದ ನವರತ್ನ ಸಂಸ್ಥೆಗಳಲ್ಲಿ ಒಂದಾಗಿರುವ ಓಎನ್‌ಜಿಸಿ ಈ ಅತ್ಯಾಧುನಿಕ ರಿಗ್‌ಗಳನ್ನು ಪಡೆದುಕೊಳ್ಳಲಿದ್ದು, ಇದರಿಂದ ದೇಶೀಯ ಇಂಧನ ಉತ್ಪಾದನೆ ಹೆಚ್ಚಲಿದೆ. ಈ ಬೆಳವಣಿಗೆಯಿಂದ ಇಂಧನ ಆಮದಿನಲ್ಲಿ ಕಡಿತವಾಗುವ ಮೂಲಕ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಸಹಕಾರಿಯಾಗುವ ಜತೆಗೆ ಓಎನ್‌ಜಿಸಿಗೆ ಅತ್ಯಾಧುನಿಕ ತಂತ್ರಜ್ಞಾನ ಸುಲಭದಲ್ಲಿ ಲಭ್ಯವಾಗಲಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ “ಮೆಕ್ ಇನ್ ಇಂಡಿಯಾ”ವನ್ನು ತನ್ನ ನೀತಿಯನ್ನಾಗಿ ಪರಿಗಣಿಸಿರುವ ಎಂ.ಇ.ಐ.ಎಲ್, ಮುಂದಿನ ದಿನಗಳಲ್ಲಿ ಈ ಅತ್ಯಾಧುನಿಕ ರಿಗ್‌ಗಳ ವಾಣಿಜ್ಯ ಮಾರಾಟಕ್ಕೂ ಮುಂದಡಿ ಇರಿಸಲಿದ್ದು, ಇತರೆ ವಿದೇಶಿ ಸಂಸ್ಥೆಗಳ ರಿಗ್‌ಗಳಿಗಿಂತ ಈ ದೇಶಿಯ ರಿಗ್ ಅತ್ಯುತ್ತಮ ಮತ್ತು ಅತ್ಯಾಧುನಿಕವಾಗಿದ್ದು, ದೇಶವೇ ಹೆಮ್ಮೆ ಪಡುವಂತ ಬೆಳವಣಿಗೆ ಇದಾಗಿದೆ.

ಪ್ರಸ್ತುತ ಗುಜರಾತ್‌ನಲ್ಲಿ ಒಂದು ರಿಗ್ ಯಶಸ್ವಿಯಾಗಿ ಕಾರ್ಯಾರಂಭಿಸಿದ್ದರೆ, ಎರಡನೇ ರಿಗ್ ಆರಂಭಕ್ಕೆ ಭರದ ಸಿದ್ಧತೆಗಳು ನಡೆದಿವೆ ಮತ್ತು ಇನ್ನುಳಿದ 46 ರಿಗ್‌ಗಳ ಪೈಕಿ ಆಂಧ್ರ ಪ್ರದೇಶದ ರಾಜಮಂಡ್ರಿ ಇಂಧನ ನಿಕ್ಷೇಪ ಪ್ರದೇಶಕ್ಕೆ ಸರಬರಾಜಾಗಿದ್ದರೆ, ಇನ್ನುಳಿದ ರಿಗ್‌ಗಳನ್ನು ಓಎನ್‌ಜಿಸಿಯ ಆಸ್ಸಾಂ, ತ್ರಿಪುರ ಮತ್ತು ತಮಿಳುನಾಡು ಇಂಧನ ನಿಕ್ಷೇಪ ಪ್ರದೇಶಗಳಿಗೆ ಸರಬರಾಜಾಗಲಿವೆ ಎಂದು ರಾಜೇಶ್ ರೆಡ್ಡಿ ತಿಳಿಸಿದ್ದಾರೆ.

ಸ್ಥಳೀಯ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿರುವ ಈ ರಿಗ್‌ಗಳು ಅತಿ ಕಡಿಮೆ ವಿದ್ಯುತ್ ಮಿತವ್ಯಯಿಯೂ ಹೌದು. ಅತ್ಯಾಧುನಿಕ ಹೈಡ್ರಾಲಿಕ್ ಮತ್ತು ಸ್ವಯಂಚಾಲಿತ ವ್ಯವಸ್ಥೆ ಹೊಂದಿರುವುದರಿಂದ 1500 ಹೆಚ್.ಪಿ ಸಾಮರ್ಥ್ಯದಿಂದ 400 ಮೀಟರ್ ಆಳವನ್ನು ಸುಲಭದಲ್ಲಿ ಕ್ರಮಿಸಲಿದ್ದು, ಸುರಕ್ಷತೆಗೂ ಆದ್ಯತೆ ನೀಡಲಾಗಿದೆ ಎಂದು ಅವರು ವಿವರಿಸಿದರು.

Copyright © All rights reserved Newsnap | Newsever by AF themes.
error: Content is protected !!