December 23, 2024

Newsnap Kannada

The World at your finger tips!

puttannaiah

ಗೆದ್ದ ಆರು ತಿಂಗಳಲ್ಲಿ ಮೂರು ಬಾರಿ ಅಮೇರಿಕಾಗೆ ಹಾರಿ ಹೋದ ಶಾಸಕ

Spread the love

ಪಾಂಡವಪುರ :

ಚುನಾವಣೆಯಲ್ಲಿ ಗೆದ್ದು ಆರು ತಿಂಗಳಲ್ಲಿ ಮೂರು ಬಾರಿ ಅಮೇರಿಕಾಗೆ ಹಾರಿ ಹೋದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಜನರ ಕೈಗೆ ಸಿಗದೇ ಬಾಯಿಗೆ, ಆಹಾರವಾಗಿದ್ದಾರೆ.

ಮಾಜಿ ಶಾಸಕ ದಿ ಕೆ ಎಸ್ ಪುಟ್ಟಣ್ಣಯ್ಯ ಸಾಮಾಜಿಕ ಕಳಕಳಿಯ ವ್ಯಕ್ತಿಯಾಗಿ, ಶಕ್ತಿಯಾಗಿ ಹೋರಾಟ ಬದುಕಿಗೆ ಅರ್ಥ ತುಂಬಿದ ಅಪರೂಪದ ನಾಯಕ. ಬದುಕಿನಲ್ಲಿ ಸರಳತೆ, ಮುಂದಿನ ತಲೆಮಾರಿನ ಭವಿಷ್ಯ ರೂಪಿಸಲು ಸದಾ ಚಿಂತನೆ ನಡೆಸಿದ್ದ ಪುಟ್ಟಣ್ಣಯ್ಯ ನಿಧನದ ನಂತರ ಮೇಲುಕೋಟೆ ಜನರು ಪುಟ್ಟಣ್ಣಯ್ಯ ಪುತ್ರ ದರ್ಶನ್ ನನ್ನೇ ತಮ್ಮ ಜನಪ್ರತಿನಿಧಿಯಾಗಿ ಆಯ್ಕೆ ಮಾಡಿಕೊಂಡು ಈಗ ಪಶ್ಚಾತಾಪ ಪಡುವಂತಾಗಿದೆ.

ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಮನೆಯ ಮಗನಾಗಿ ಇರುತ್ತೇನೆ.ಅಮೇರಿಕದ ಕಂಪನಿಗಳನ್ನು ಮಾರಿ ವಾಪಸ್ಸು ಮರಳಿಗೂಡು ಸೇರುತ್ತೇನೆ ಎಂದು ವಾಗ್ದಾನ ಮಾಡಿ ಗೆದ್ದವರು ಈಗ ಅಮೇರಿಕಾಗೆ ಹಾರಿ ಹೋಗಿದ್ದು ರೈತ ಸಂಘದ ನಾಯಕರಿಗೆ , ಕಾರ್ಯಕರ್ತರಿಗೆ ಬಿಸಿ ತುಪ್ಪವಾಗಿದೆ.

ಕಳೆದ ವಿಧಾನ ಸಭೆಯ ಅಧಿವೇಶನದ ವೇಳೆ ಕಡ್ಲೆಕಾಯಿ ತಿನ್ನುತ್ತಾ ವಿಧಾನ ಸೌದ ಮುಂದೆ ಕಾರಿಲ್ಲದೇ ಕಾಲು ನಡೆಗೆಯಲ್ಲೇ ಓಡಾಡಿದ್ದ ದರ್ಶನ್ ಸರಳತೆ ರೂಪವನ್ನು ವಿಶ್ವ ದರ್ಶನ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು.

ಮೇಲುಕೋಟೆ ವಿಧಾನ ಸಭಾ ಕ್ಷೇತ್ರ ಮತದಾರರು ಶಾಸಕರಿಲ್ಲದೇ ಒಂದು ರೀತಿಯಲ್ಲಿ ಅನಾಥರಾಗಿದ್ದಾರೆ. ಚುನಾವಣೆಯ ಸಮಯದಲ್ಲಿ ಆರ್ಥಿಕ ಬೆನ್ನೆಲುಬಾಗಿದ್ದವರ ಎಲ್ 4, ಎಲ್ 5 ಡಿಸ್ಕ್ ಗಳೇ ಮುರಿದು ಹೋಗಿವೆ. ಶಾಸಕರ ಮಾತುಗಳನ್ನು ನಂಬಿ ಮೋಸ ಹೋದೆವೋ ಎಂದು ಕೊರಗುವ ಸ್ಥಿತಿ ಸಣ್ಣ ಪುಟ್ಟ ಗುತ್ತಿಗೆದಾರರದ್ದಾಗಿದೆ ಅಂತೆ. ಇದೆಲ್ಲವೂ ಕ್ಷೇತ್ರದ ಜನರಲ್ಲಿ ಬರುವ ಮಾತು.

ಕಳೆದ ಆಗಸ್ಟ್ 15 ಮತ್ತು ನವೆಂಬರ್ 1 ರಂದು ಶಾಸಕರು ಕ್ಷೇತ್ರದಲ್ಲಿ ಇರಲಿಲ್ಲ. ಹೀಗಾಗಿ ಅಧಿಕಾರಿಗಳೇ ಧ್ವಜಾರೋಹಣ ಮಾಡಿ ರಾಷ್ಟ್ರೀಯ ಆಚರಣೆಗಳನ್ನು ಮಾಡಿ ಮುಗಿಸಿದ್ದರು. ಈಗ ಶಾಸಕರ ಪಟ್ಟ ಹೊತ್ತಕೊಂಡು ಅಮೇರಿಕಾಗೆ ಹಾರಿರುವ ದರ್ಶನ್ ದರ್ಶನಕ್ಕಾಗಿ ಮೇಲುಕೋಟೆಯ ಮತದಾರರು ಕಾದುಕುಳಿತರೆ, ಕ್ಷೇತ್ರ ಅಭಿವೃದ್ದಿ ಜನರ ಪಾಲಿಗೆ ಮರಿಚಿಕೆಯಾಗಿದೆ .

Copyright © All rights reserved Newsnap | Newsever by AF themes.
error: Content is protected !!