” ಜನವರಿಯಿಂದ ಜಿಲ್ಲಾಸ್ಪತ್ರೆಗಳಲ್ಲಿ ಎಲ್ಲ ಪರೀಕ್ಷೆ ಉಚಿತ “
ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ಗುಣಮಟ್ಟದ ಸೇವೆ ಸಿಗಬೇಕು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಎರಡನ್ನೂ ಒಂದೇ ಇಲಾಖೆಯಾಗಿ ಮಾಡುವ ಚಿಂತನೆ ಇದೆ. ಜೊತೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಜನವರಿಯಿಂದಲೇ ಎಲ್ಲ ಪರೀಕ್ಷೆಗಳನ್ನು ಉಚಿತ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಹೊಸ ಆಕ್ಸಿಜನ್ ಘಟಕ, 200 ಹಾಸಿಗೆಗಳ ನೇತ್ರ, ಇಎನ್ ಟಿ ವಾರ್ಡ್, 90 ಹಾಸಿಗೆಗಳ ಮಕ್ಕಳ ವಾರ್ಡ್ ಉದ್ಘಾಟಿಸಿದ ಬಳಿಕ ಮಾತನಾಡಿದ ಸಚಿವರು,
ಈ ಎರಡೂ ಇಲಾಖೆಗಳು ಒಂದೇ ನಿರ್ವಹಣೆಯಲ್ಲಿರಬೇಕು ಎಂಬ ಕಾರಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎರಡೂ ಇಲಾಖೆಗಳ ಹೊಣೆಯನ್ನು ನನಗೆ ನೀಡಿದ್ದಾರೆ. ಇದರಿಂದ ಆರೋಗ್ಯ ಕ್ಷೇತ್ರದ ನಿರ್ವಹಣೆ ಸುಲಭವಾಗಲಿದೆ. ಮುಂದಿನ ದಿನಗಳಲ್ಲಿ ಎರಡನ್ನೂ ಒಂದೇ ಇಲಾಖೆಯಾಗಿಸುವ ಚಿಂತನೆ ಇದೆ. ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಎಲ್ಲ ಬಗೆಯ ಪರೀಕ್ಷೆಗಳನ್ನು ಜನವರಿಯಿಂದಲೇ ಉಚಿತ ಮಾಡಲಾಗುವುದು ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಶೌಚಾಲಯ, ವಾರ್ಡ್ ಸ್ವಚ್ಛವಿಲ್ಲ ಎಂಬ ಆಪಾದನೆ ಇದೆ. ಬೆಳಗಾವಿ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ತಿಂಗಳಿಗೆ 36 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ. ಆದರೂ ಸ್ವಚ್ಛವಿಲ್ಲ ಎಂದರೆ ನೋವಾಗುತ್ತದೆ. ಖಾಸಗಿಗಿಂತ ಸರ್ಕಾರಿ ಆಸ್ಪತ್ರೆಗೆ ಹೆಚ್ಚು ಖರ್ಚು ಮಾಡಲಾಗುತ್ತದೆ. ಖಾಸಗಿ ಆಸ್ಪತ್ರೆಗೆ ಸಿಗುವ ಸೌಲಭ್ಯ ಹಾಗೂ ಅವರು ಮಾಡುವ ಸೇವೆ ಸರ್ಕಾರಿ ಆರೋಗ್ಯ ಕ್ಷೇತ್ರದಲ್ಲೂ ದೊರೆಯಬೇಕು. ಎಲ್ಲರೂ ಈ ಕುರಿತು ಆತ್ಮವಿಮರ್ಶೆ ಮಾಡಿ ಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕೋವಿಡ್ ಲಸಿಕೆ ಬಂದ ನಂತರ ವಿತರಣೆಯಲ್ಲಿ ತೊಂದರೆ ಆಗಬಾರದೆಂದು ಈಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಎಲ್ಲ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ವಿತರಿಸಲಾಗುವುದು. ಲಸಿಕೆ ಸಂಗ್ರಹಣೆಗೆ ಎಲ್ಲ ಜಿಲ್ಲೆಗಳಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು