April 10, 2025

Newsnap Kannada

The World at your finger tips!

DC Kumar

ಏ.7 ಕ್ಕೆ ಮೇಲುಕೋಟೆ ವೈರಮುಡಿ ಉತ್ಸವ

Spread the love
  • ಸಕಲ ಸಿದ್ಧತೆಗೆ ಡಿಸಿಡಾ: ಕುಮಾರ ಸೂಚನೆ

ಮಂಡ್ಯ : ಜಿಲ್ಲಾಡಳಿತದ ವತಿಯಿಂದ ಮೇಲುಕೋಟೆಯ ಚಲುವರಾಯಸ್ವಾಮಿಯ ವೈರಮುಡಿ ಬ್ರಹ್ಮೋತ್ಸವವು ಏಪ್ರಿಲ್ 7 ರಂದು ನಡೆಯಲಿದೆ.ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವೈರಮುಡಿ ಉತ್ಸವದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದರು.

ಏಪ್ರಿಲ್ 2 ರಿಂದ 14 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಉತ್ಸವಗಳು ನಡೆಯಲಿದೆ. ಯಾವುದೇ ಲೋಪವಿಲ್ಲದೇ ಕಾರ್ಯಕ್ರಮಗಳನ್ನು ನಡೆಸಲು ಸಮಿತಿ ರಚಿಸಿ ವಿವಿಧ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ವಹಿಸಿದರು.

ಲಕ್ಷಾಂತರ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿನ್ನಲೆಯಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು. ನೀರನ್ನು ಪರೀಕ್ಷೆಗೆ ಒಳಪಡಿಸಿ ಕುಡಿಯಲು ಯೋಗ್ಯವಾಗಿರುವ ಬಗ್ಗೆ ಖಾತ್ರಿ ಪಡಿಸಬೇಕು. ಹಾಲಿ ಇರುವ ನೆಲ್ಲಿಗಳು, ನೀರಿನ ಟ್ಯಾಂಕ್ ಹಾಗೂ ತೊಂಬೆಗಳನ್ನು ಸ್ವಚ್ಛಗೊಳಿಸಬೇಕು. ಅವಶ್ಯವಿರುವ ಕಡೆ ಹೆಚ್ಚುವರಿ ತಾತ್ಕಾಲಿಕ ನೆಲ್ಲಿಗಳನ್ನು ಅಳವಡಿಸಬೇಕು ಎಂದರು.

19 ಲಕ್ಷ ರೂ ವೆಚ್ಚದಲ್ಲಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಖಾಯಂ ಆಗಿ ಸಿ.ಸಿ ಕ್ಯಾಮರಾ ಅಳವಡಿಸಲು ಯೋಜನೆ ರೂಪಿಸಿದ್ದು, ಸಿ.ಸಿ. ಕ್ಯಾಮರಾದ ನಿರ್ವಹಣೆಯನ್ನು ಮುಂದಿನ ದಿನಗಳಲ್ಲಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಯಿಂದ ನಿರ್ವಹಿಸುವಂತೆ ತಿಳಿಸಿದರು.

ದೇವಾಲಯದ ಒಳ ಹಾಗೂ ಹೊರ ಆವರಣಗಳಲ್ಲಿ ಸ್ವಚ್ಛತೆಯನ್ನು ಕಪಾಡುವುದು. ದೂಳು ನಿಯಂತ್ರಿಸಲು ಟ್ಯಾಂಕರ್ ಮೂಲಕ ನೀರು ಚಿಮುಕಿಸುವುದು. ಸ್ವಚ್ಛತೆಗಾಗಿ ಹೆಚ್ಚು ಸಿಬ್ಬಂದಿಗಳನ್ನು ನಿಯೋಜಿಸುವುದು ಎಂದರು.

ಅಗತ್ಯವಿರುವ ಸ್ಥಳಗಳಲ್ಲಿ ಹಾಗೂ ಪಾರ್ಕಿಂಗ್ ಸ್ಥಳದಲ್ಲಿ ತಾತ್ಕಾಲಿಕ ಶೌಚಾಲಯಗಳನ್ನು ತೆರೆಯುವುದು. ಆರೋಗ್ಯ ಇಲಾಖೆಯಿಂದ ವೈರಮುಡಿ ಉತ್ಸವದ ದಿನದಂದು ದಿನದ 24 ಗಂಟೆಗಳ ಕಾಲ ವೈದ್ಯರ ಕೆಲಸ ನಿರ್ವಣೆಗಾಗಿ 3 ಪಾಳಿಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದರು.

ಮೇಲುಕೋಟೆಗೆ ವಿವಿಧ ಭಾಗಗಳಿಂದ ಸಂಪರ್ಕಿಸುವ ಮುಖ್ಯರಸ್ತೆಗಳು ಹಾಗೂ ಗ್ರಾಮ ವ್ಯಾಪ್ತಿಯ ರಸ್ತೆಗಳ ದುರಸ್ತಿಯಾಗಬೇಕು. ರಸ್ತೆ ತಿರುವುಗಳು, ಹಂಪ್ ಗಳು ಇರುವ ಕಡೆಗಳಲ್ಲಿ ವೇಗಮಿತಿ ಇರುವ ಕಡೆ ಸಾಕಷ್ಟು ಸಂಖ್ಯೆಗಳಲ್ಲಿ ಸೂಚನಾ ಪಲಕಗಳನ್ನು ಅಳವಡಿಸಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರು ಮಾತನಾಡಿ ವೈರಮುಡಿ ಉತ್ಸವದ ದಿನದ 24 ಗಂಟೆಗಳು ಪ್ರಸಾದ ವಿನಿಯೋಗದ ವ್ಯವಸ್ಥೆಯಾಗಬೇಕು. ತಯಾರಾಗುವ ಆಹಾರವನ್ನು ಆಹಾರ ಸುರಕ್ಷತಾ ಅಧಿಕಾರಿಗಳು/ ಸಿಬ್ಬಂದಿಗಳು ಪರೀಕ್ಷೆಗೆ ಒಳಪಡಿಸಬೇಕು ಎಂದರು.ಇದನ್ನು ಓದಿ –ಹೊಸ ಜಿಲ್ಲೆಗಳ ಘೋಷಣೆ ಬಗ್ಗೆ ಪ್ರಸ್ತಾವನೆ ಇಲ್ಲ: ಸಚಿವ ಕೃಷ್ಣ ಬೈರೇಗೌಡ

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕೆ.ಎಸ್.ಆರ್.ಟಿಸಿ ಜಿಲ್ಲಾ ನಿಯಂತ್ರಕ ನಾಗರಾಜು, ಮುಜರಾಯಿ ತಹಶೀಲ್ದಾರ್ ತಮ್ಮೇಗೌಡ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!