January 9, 2025

Newsnap Kannada

The World at your finger tips!

chikkamangalore

ಚಿಕ್ಕಮಗಳೂರಿನಲ್ಲಿ 30 ತಿಂಗಳಲ್ಲಿ ಮೆಡಿಕಲ್ ಕಾಲೇಜು – ಆಸ್ಪತ್ರೆ: ಸಚಿವ ಡಾ.ಕೆ.ಸುಧಾಕರ್ ಪ್ರಕಟ

Spread the love

ಕಾಫಿನಾಡು ಚಿಕ್ಕಮಗಳೂರಿನಲ್ಲಿ 24 ರಿಂದ 30 ತಿಂಗಳಲ್ಲಿ ಸುಸಜ್ಜಿತ ಸರ್ಕಾರಿ ವೈದ್ಯಕೀಯ ಕಾಲೇಜು, ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಚಿಕ್ಕಮಗಳೂರಿನಲ್ಲಿ ಕಾಲೇಜಿನ ಕಟ್ಟಡ ನಿರ್ಮಾಣ ಯೋಜನೆ ಹಾಗೂ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

“ಕಟ್ಟಡದ ನಿರ್ಮಾಣದ ಭೂಮಿಪೂಜೆಗೆ ಡಿಸೆಂಬರ್ ನಲ್ಲಿ ದಿನ ಗೊತ್ತುಪಡಿಸಲಾಗುವುದು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಕಾರ್ಯಕ್ರಮಕ್ಕೆ ಬರಲಿದ್ದಾರೆ. ಕಟ್ಟಡ ವಿನ್ಯಾಸ ಉತ್ತಮವಾಗಿದೆ. ಕೆಲ ಬದಲಾವಣೆ ಸೂಚಿಸಲಾಗಿದೆ. 400 ಕ್ಕೂ ಹೆಚ್ಚು ಹಾಸಿಗೆ ಇರುವ ಈ ವೈದ್ಯಕೀಯ ಕಾಲೇಜಿನ ಜೊತೆಗೆ 200 ಹಾಸಿಗೆಯ ತಾಯಿ-ಶಿಶುವಿನ ಆಸ್ಪತ್ರೆ ನಿರ್ಮಾಣವಾಗಲಿದೆ” ಎಂದು ತಿಳಿಸಿದರು.

“ಮುಂದಿನ ಜೂನ್ ವೇಳೆಗೆ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ವ್ಯಾಸಂಗ ಮಾಡಬಹುದು. ಅದಕ್ಕಾಗಿ ತಾತ್ಕಾಲಿಕ ಕಟ್ಟಡ ಗುರುತಿಸಲಾಗಿದೆ. ಹೊಸ ಕಟ್ಟಡ ನಿರ್ಮಾಣ ಬಳಿಕ ಸ್ಥಳಾಂತರಿಸಲಾಗುತ್ತದೆ. ಜೊತೆಗೆ ಎನ್ಎಂಸಿ ನಿಯಮದಂತೆ, 3 ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಒಂದು ನಗರ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲಾಗುವುದು. 69 ಬೋಧಕ ಸಿಬ್ಬಂದಿ ನೇಮಕಕ್ಕೆ ಈಗಾಗಲೇ ಪರವಾನಗಿ ನೀಡಿದ್ದು, 91 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ನಾಲ್ಕರಲ್ಲಿ ವೈದ್ಯ ಹುದ್ದೆ ಭರ್ತಿ ಮಾಡಲಾಗುವುದು” ಎಂದು ವಿವರಿಸಿದರು.

2,500 ವೈದ್ಯರ ನೇಮಕ

ರಾಜ್ಯದಲ್ಲಿ 2,500 ವೈದ್ಯರ ನೇರ ನೇಮಕ ಪ್ರಕ್ರಿಯೆ ಆರಂಭವಾಗಿದೆ. ನವೆಂಬರ್ ಅಂತ್ಯದ ವೇಳೆಗೆ ಪ್ರಕ್ರಿಯೆ ಮುಗಿಯಲಿದೆ. ವೈದ್ಯರ ಕೊರತೆ ಆಗಬಾರದು ಎಂಬ ದೃಢ ಸಂಕಲ್ಪ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.

ಇತರೆ ಪ್ರಮುಖ ಅಂಶಗಳು

  • ನವೆಂಬರ್ ಅಂತ್ಯದೊಳಗೆ ಹೋಮ್ ಸ್ಟೇಗಳ ಮಾಹಿತಿ ಪಡೆದು ಅಲ್ಲಿ ಇರುವವರ ಮೇಲೆ ನಿಗಾ ಇರಿಸಲಾಗುತ್ತದೆ. ಅವರಿಗೆ ಕೋವಿಡ್ ಪರೀಕ್ಷೆ ಮಾಡಲಾಗುವುದು.
  • ಚಿಕ್ಕಮಗಳೂರು ತಾಲೂಕು ಆಸ್ಪತ್ರೆಗಳಲ್ಲಿ 50 ಹಾಸಿಗೆಗಳಿಗೆ ಆಕ್ಸಿಜನ್ ಅಳವಡಿಸಲಾಗಿದೆ.
  • ಖಾಸಗಿ ಆಸ್ಪತ್ರೆಗಳು ಹೆಚ್ಚು ಶುಲ್ಕ ವಸೂಲಿ ಮಾಡಿದರೆ, ಪರವಾನಗಿ ರದ್ದು ಮಾಡುವ ಕಠಿಣ ಕ್ರಮ ಕೈಗೊಳ್ಳಲಾಗುವುದು.
  • ಸರ್ಕಾರಕ್ಕೆ ಕಠಿಣ ಸವಾಲುಗಳಿವೆ. ಕೋವಿಡ್ ನಿಂದಾದ ಆರ್ಥಿಕ ಸಂಕಷ್ಟ, ಅತಿವೃಷ್ಟಿ ಮೊದಲಾದ ಸವಾಲುಗಳು ಬಂದಿವೆ. ಸರ್ಕಾರ ಎಂದರೆ ಅಕ್ಷಯಪಾತ್ರೆ ಅಲ್ಲ. ಇಂತಹ ಸಂದರ್ಭದಲ್ಲಿ ಅನಿವಾರ್ಯವಾಗಿ ವಿದ್ಯುತ್ ದರ ಏರಿಕೆ ಮಾಡಲಾಗಿದೆ.
  • ಪರಿಸರ ಸ್ನೇಹಿ ಪಟಾಕಿ ಸಿಡಿಸಲು ಅವಕಾಶವಿದೆ. ಸರ್ಕಾರಕ್ಕೆ ಜನರ ಆರೋಗ್ಯ ಮುಖ್ಯವೇ ಹೊರತು ಯಾರದ್ದೇ ಲಾಭವಲ್ಲ.
  • ಕೆಲ ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆಯನ್ನು ಪಿಪಿಪಿ ಮಾದರಿಯಲ್ಲಿ ಮಾಡಲಾಗಿದೆ. ಆದರೆ ನಿರ್ವಹಣೆ ಮಾಡುತ್ತಿದ್ದ ಕಂಪನಿ ಆರ್ಥಿಕ ಸಂಕಷ್ಟಕ್ಕೊಳಗಾಗಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು.
Copyright © All rights reserved Newsnap | Newsever by AF themes.
error: Content is protected !!