November 24, 2024

Newsnap Kannada

The World at your finger tips!

3 dictic

ಮೂರು ಜಿಲ್ಲೆಗಳಲ್ಲಿ ಮಾಧ್ಯಮ ಬಳಕೆ ಪ್ರಮಾಣ ಉತ್ತಮ

Spread the love

ರಾಜ್ಯದ ಆಯ್ದ15 ಜಿಲ್ಲೆಗಳಲ್ಲಿ ಯುಜಿಸಿ-ಯುಪಿಇ ಯೋಜನೆಯಡಿ ಮೈಸೂರು ವಿಶ್ವವಿದ್ಯಾಲಯವು ನಡೆಸಿದ “ಮಾಧ್ಯಮ ಮತ್ತು ಸಾಮಾಜಿಕ ಅಭಿವೃದ್ಧಿ-ಕರ್ನಾಟಕ ರಾಜ್ಯದಲ್ಲಿ ಒಂದು ಅಧ್ಯಯನ’ ವರದಿಯನ್ನು ಮೈಸೂರು ವಿವಿ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ಮೈಸೂರಿನಲ್ಲಿ ಬಿಡುಗಡೆ ಮಾಡಿದರು.


ಬೆಂಗಳೂರು ದಕ್ಷಿಣ, ದಾವಣಗೆರೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಾಧ್ಯಮ ಬಳಕೆ ಪ್ರಮಾಣ ಇತರೆ ಜಿಲ್ಲೆಗಳಿಗಿಂತ ಉತ್ತಮವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಧ್ಯಯನ ನಡೆಸಿದ ಎಲ್ಲ ಜಿಲ್ಲೆಗಳಲ್ಲಿ ಟಿವಿ ಬಳಕೆ ಅತಿ ಹೆಚ್ಚಿದೆ. ಪತ್ರಿಕೆಗಳ ಬಳಕೆ ಸಾಧಾರಣ ಮಟ್ಟದಲ್ಲಿರುವುದು ತಿಳಿದುಬಂದಿದೆ. ಶಿಕ್ಷಣ ಮತ್ತು ಸಾಕ್ಷರತೆಯ ಸುಧಾರಿತ ಕ್ರಮದಿಂದಾಗಿ ಪತ್ರಿಕೆಗಳ ಓದುಗರ ಸಂಖ್ಯೆ ಏರಿಕೆಯಾಗಿದೆ.


10 ವರ್ಷಗಳ ಅವಧಿಯಲ್ಲಿ ಕನ್ನಡ ದಿನ ಪತ್ರಿಕೆಗಳ ಓದುಗರ ಸಂಖ್ಯೆ ಶೇ. 7.29 ರಷ್ಟು ಹೆಚ್ಚಳವಾಗಿದ್ದು, ದಿನಪತ್ರಿಕೆಗಳ ಒಟ್ಟಾರೆ ಪ್ರಸರಣದ ಪ್ರಮಾಣದಲ್ಲೂ ಏರಿಕೆಯಾಗಿರುವ ವಿಷಯ ವರದಿಯಲ್ಲಿದೆ.
ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ದಾವಣಗೆರೆ, ಬೆಂಗಳೂರು ನಗರ, ಬಳ್ಳಾರಿ, ಬೀದರ್, ಯಾದಗಿರಿ, ಉತ್ತರ ಕನ್ನಡ, ಕೊಪ್ಪಳ, ಗದಗ, ರಾಯಚೂರು ಜಿಲ್ಲೆಗಳನ್ನು ಅಧ್ಯಯನಕ್ಕೆ ಆರಿಸಿಕೊಳ್ಳಲಾಗಿತ್ತು.

2010 ರಿಂದ 2020 ರ ತನಕ ಈ 15 ಜಿಲ್ಲೆಗಳಲ್ಲಿ ನಡಸಿದ ಸಾಮಾಜಿಕ ಅಭಿವೃದ್ಧಿಯ ಸ್ಥಿತಿಗತಿ ಕುರಿತು ದೊರೆತ ಸಂಶೋಧನೆಗಳನ್ನು 15 ಸಂಪುಟಗಳಲ್ಲಿ ಪ್ರಕಟಪಡಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಮಕ್ಕಳ ಶಾಲಾ ದಾಖಲಾತಿಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ ಮುಸ್ಲಿಂ ಸಮುದಾಯದ ಮೂರನೇ ಒಂದು ಭಾಗವು ಈಗಲೂ ಅನಕ್ಷರಸ್ಥರಾಗಿಯೇ ಇದೆ ಎಂದು ವರದಿ ಹೇಳಿದೆ.


ತುಮಕೂರು ವಿವಿ ಕುಲಪತಿ ಪ್ರೊ. ವೈ.ಎಸ್. ಸಿದ್ದೇಗೌಡ, ಪ್ರೊ.ಮುಜಾಫರ್ ಅಸಾದಿ, ಪ್ರೊ. ಎನ್. ಉಷಾರಾಣಿ ಅವರನ್ನೊಳಗೊಂಡ ತಂಡ ಈ ವರದಿ ಸಿದ್ಧಪಡಿಸಿದೆ.

Copyright © All rights reserved Newsnap | Newsever by AF themes.
error: Content is protected !!