ಸಂಸದ ಪ್ರತಾಪ್‌ ಸಿಂಹ ಹಾಗೂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮೇಯರ್‌ ಆಕ್ರೋಶ..!

Team Newsnap
2 Min Read

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಸಂಸದ ಪ್ರತಾಪ್‌ ಸಿಂಹ ವಿರುದ್ಧ ಮೈಸೂರು ಮಹಾನಗರ ಪಾಲಿಕೆ ಮೇಯರ್‌ ತಸ್ನೀಂ ಗರಂ ಆಗಿದ್ದಾರೆ.

ಸುದ್ದಿಗೋಷ್ಠಿ ನಡೆಸಿದ ಮೇಯರ್ ಡಿಸಿಗೆ ಶಿಷ್ಟಾಚಾರದ ಪಾಠ ಮಾಡಿದ್ದಾರೆ..!

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಯವರು ಶಿಷ್ಟಾಚಾರ ಅನುಸರಿಸುತ್ತಿಲ್ಲ, ಅವರು ಪ್ರೊಟೋಕಾಲ್ ಉಲ್ಲಂಘನೆ ಮಾಡಿದ್ದಾರೆ ಎಂದು ಮೇಯರ್  ಹರಿಹಾಯ್ದಿದ್ದಾರೆ.

ದಸರಾ ಉದ್ಘಾಟನೆಗೆ ಸಿಎಂಗೆ ಸ್ವಾಗತ ನೀಡುವಾಗ ಮೈಸೂರಿನ ಪ್ರಥಮ ಪ್ರಜೆಗೆ ಅವಕಾಶ ನೀಡಬೇಕು. ಆದರೆ ಮೇಯರ್ ಅವರನ್ನು ಒಳಗೆ ಬಿಡದಂತೆ ಪೊಲೀಸರಿಗೆ ಹೇಳಿದ್ದಾರೆ ಎಂದು ಮೇಯರ್ ಆರೋಪಿಸಿದರು.

mysore mayor

ದಸರಾ ಉದ್ಘಾಟನೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಪಕ್ಕದಲ್ಲಿ ನಮ್ಮ ಆಸನ ಇಡಬೇಕು. ಆದರೆ ನಮಗೆ ಕೊನೆಯಲ್ಲಿ ಅವಕಾಶ ನೀಡುತ್ತಾರೆ. ಮೈಸೂರಿನ ಮೇಯರ್‌ಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕು. ಈ ವಿಚಾರ ಅವರಿಗೆ ತಿಳಿದಿಲ್ಲವೇ ಎಂದು ಕಿಡಿಕಾರಿದರು.

ಡಿಸಿ ರೋಹಿಣಿ ಸಿಂಧೂರಿಯವರು ಕಾರ್ಯಕ್ರಮದಲ್ಲಿ ಸ್ವಾಗತ ಮಾಡುವಾಗ ಉಪ ಮಹಾಪೌರರು ಹಾಗೂ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಿಗೆ ಸ್ವಾಗತ ಕೋರಲಿಲ್ಲ. ನೀವು ಯಾರ ಮನವೊಲಿಸಲು ಈ ಕೆಲಸ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ ಮೇಯರ್ ತಸ್ನೀಂ, ಸಂಸದ ಪ್ರತಾಪ್ ಸಿಂಹ ವಿರುದ್ಧವೂ ಹರಿಹಾಯ್ದರು.

ಲಲಿತ ಮಹಲ್ ಜಂಕ್ಷನ್‌ಗೆ ಪಾಲಿಕೆಯ ದಿವಂಗತ ಸದಸ್ಯರೊಬ್ಬರ ಹೆಸರಿಡುವ ವಿಚಾರಕ್ಕೆ ಸಂಸದ ಪ್ರತಾಪ್‌ ಸಿಂಹ ಆಕ್ಷೇಪ ಎತ್ತಿದ್ದಕ್ಕೆ ಮೇಯರ್‌ ತಸ್ನೀಂ ಕಿಡಿಕಾರಿದ್ದಾರೆ. ನಾವು ಸಂಸದರು ಸೂಚಿಸಿದ ಹೆಸರು ಪುರಸ್ಕರಿಸದ ಕಾರಣ, ಪಾಲಿಕೆ ವಿರುದ್ದ ದ್ವೇಷ ಸಾಧಿಸುತ್ತಿದ್ದಾರೆ. ರಾಷ್ಟೀಯ ಹೆದ್ದಾರಿ ವ್ಯಾಪ್ತಿಯ ವೃತ್ತ ಅಥವಾ ರಸ್ತೆಗಳಿಗೆ ಪಾಲಿಕೆ ನಾಮಕರಣ ಮಾಡುವ ಅಧಿಕಾರ ಹೊಂದಿಲ್ಲ ಎಂದಿದ್ದಾರೆ. ಈ ವಿಚಾರ ಸಂಸದರು ಹೆಸರು ಸೂಚಿಸುವಾಗ ನೆನಪಿರಲಿಲ್ಲವೇ ಎಂದು ಪ್ರಶ್ನಿಸಿದ ಮೇಯರ್ ತಸ್ನೀಂ, ಈ ಹಿಂದೆ ಎರಡು ಬಾರಿ ಕೌನ್ಸಿಲ್‌ ಸಭೆಗೆ ಬಂದು ವೈದ್ಯರೊಬ್ಬರ ಹೆಸರು ಇಡುವಂತೆ ಸಂಸದರೇ ಮನವಿ ಮಾಡಿದ್ದರು ಎಂದು ನೆನಪಿಸಿದರು. ಅಷ್ಟೇ ಅಲ್ಲ, ಇದು ಹೇಗೆ ಸಾಧ್ಯ ಎಂದೂ ಪ್ರಶ್ನಿಸಿದರು.

ನಾವು ಕಾನೂನಾತ್ಮಕವಾಗಿಯೇ ಕೌನ್ಸಿಲ್ ಸಭೆಯಲ್ಲಿ ಹೆಸರಿಡುವ ತೀರ್ಮಾನ ಕೈಗೊಂಡಿದ್ದೆವು. ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಿ ಸರ್ಕಾರದ ಅನುಮತಿ ಹಾಗೂ ಪತ್ರಿಕಾ ಪ್ರಕಟಣೆ ಹೊರಡಿಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮಾಡಿ ತೀರ್ಮಾನ ತೆಗೆದುಕೊಂಡಿದ್ದೆವು. ಏಕಾಏಕಿ ಪಾಲಿಕೆ ಈ ನಿರ್ಧಾರ ಕೈಗೊಂಡಿಲ್ಲ ಎಂದು ಮೇಯರ್ ತಸ್ನೀಂ ಸ್ಪಷ್ಟಪಡಿಸಿದರು.

Share This Article
Leave a comment