Karnataka

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ

ಮಂಜುನಾಥ್ ಎಸ್ ಕೆ

ನವೆಂಬರ್ ಒಂದರಂದು ಕರ್ನಾಟಕದ, ಕನ್ನಡ ಜನರ ಪಾಲಿಗೆ ಒಂದು ವಿಶೇಷವಾದ ದಿನ. ರಾಜ್ಯದ ಎಲ್ಲೆಡೆ ತುಂಬಾ ವಿಜೃಂಭಣೆಯಿಂದ , ಸಡಗರದಿಂದ ನಾಡ ಹಬ್ಬವನ್ನು ಆಚರಿಸಲಾಗುತ್ತದೆ. ಕನ್ನಡ ನಾಡಹಬ್ಬ , ಕನ್ನಡಮ್ಮನ ಆಚರಣೆ ಎಂಬುದಾಗಿ ಸಹಾ ಆಚರಿಸುತ್ತೇವೆ. ಇತ್ತೀಚಿನ ದಿನಗಳಲ್ಲಿ ಈ ಹಬ್ಬವನ್ನು ನವಂಬರ್ ಮಾಸ ಪೂರ್ತಿ ಆಚರಣೆ ಮಾಡುವ ಸಂಪ್ರದಾಯ ಬೆಳೆದು ಬಂದಿದೆ. ಕವಿ ನಿಸ್ಸಾರ್ ಅಹಮದ್ ರವರು ಹೇಳಿರುವ ಹಾಗೆ, ಕನ್ನಡ ತಾಯಿಯ ಉತ್ಸವ ನಿತ್ಯವೂ ನಡೆಯಬೇಕು.” ನಿತ್ಯೋತ್ಸವ ತಾಯಿ ನಿತ್ಯೋತ್ಸವ” ಎಂಬ ಪ್ರತಿಧ್ವನಿ ಎಲ್ಲಾ ಕಡೆ ಮೊಳಗ ಬೇಕು.
ನಮ್ಮ ನೆಚ್ಚಿನ ವಿಶ್ವಕವಿ ಕುವೆಂಪುರವರು ಹೇಳಿರುವ ಹಾಗೆ “ಕನ್ನಡವೆ ಸತ್ಯ ಕನ್ನಡವೇ ನಿತ್ಯ”. ನಿತ್ಯವೂ ಆಕೆಯ ಉಪಾಸನೆ, ಅರ್ಚನೆ ನಡೆಯಲೇ ಬೇಕು. ಆಕೆ ನಿತ್ಯ ಸುಮಂಗಲಿ. ಅದಕ್ಕಾಗಿಯೇ ಎಂಬಂತೆ ನಮ್ಮ ಕನ್ನಡ ಧ್ವಜವನ್ನು ಕೆಂಪು ಹಳದಿ ಬಣ್ಣದಿಂದ ಮಾಡಲಾಗಿದೆ. ಅದು ಅರಿಶಿನ ಕುಂಕುಮದ ಸಂಕೇತವಾಗಿದೆ. ಅಷ್ಟೆ ಅಲ್ಲ ಕೆಂಪು ನಮ್ಮ ಪರಾಕ್ರಮವನ್ನು ಮತ್ತು ಹಳದಿ ನಮ್ಮ ಶಾಂತಿ ಮತ್ತು ಸ್ನೇಹ ಸಂಕೇತವನ್ನು ತಿಳಿಸುತ್ತೆ. ಇಂತಹ ಅರ್ಥಗರ್ಭಿತ ಭಾವುಟವನ್ನು ನಮಗೆ ಕೊಟ್ಟ ಮ.ರಾಮಮೂರ್ತಿಯವರನ್ನು ನಾವು ಸದಾ ನೆನೆಯ ಬೇಕು.

” ಕರ್ನಾಟಕ” ಎಂಬ ಹೆಸರೆ ಒಂದು ಧೀಮಂತ ಶಕ್ತಿ.
ಪ್ರಪ್ರಥಮವಾಗಿ 1956 ರ ನವೆಂಬರ್ ಒಂದರಂದು ಈ ರಾಜ್ಯ ರಚನೆಯಾಯಿತು. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಮೈಸೂರು ರಾಜ್ಯವನ್ನು ಸ್ಥಾಪನೆ ಮಾಡಿದ್ದು ಈಗ ಇತಿಹಾಸ. ಇದರಲ್ಲಿ ರಾಜ್ಯದ ಮೂರು ಮುಖ್ಯ ಪ್ರದೇಶಗಳಾದ ಮೈಸೂರು ಪ್ರದೇಶ, ಉತ್ತರ ಕರ್ನಾಟಕ ಹಾಗು ಮಲೆನಾಡಿನ ಪ್ರದೇಶಗಳು ಒಳಗೊಂಡಿದ್ದವು. ಈ ಕಾರ್ಯವನ್ನು ಸಾಕಾರಗೊಳಿಸಲು ಕರ್ನಾಟಕ ಏಕೀಕರಣ ಚಳುವಳಿ ಮಾಡಲು 1905 ರಲ್ಲೇ ಪ್ರಾರಂಭ ಮಾಡಿದವರು ಆಲೂರು ವೆಂಕಟರಾಯರು. ರಾಜ್ಯವನ್ನು ಏಕೀಕರಿಸುವ ಕನಸ್ಸನ್ನು ಪ್ರಥಮವಾಗಿ ಕಂಡ ಮಹಾನ್ ವ್ಯಕ್ತಿ ಅವರು.
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ಕಹಳೆಯನ್ನು ಹುಯಿಲ್ಗೋಳ್ ನಾರಾಯಣ ರಾವ್ ಕನ್ನಡದ ಕಿಚ್ಚನ್ನು ಹಚ್ಚಿದ ಮತ್ತೊಬ್ಬ ಮಹಾನ್ ವ್ಯಕ್ತಿ. ಇವರಿಬ್ಬರೂ ಪ್ರಾತಃಸ್ಮರಣೀಯರು. .
ಕನ್ನಡ ಭಾಷೆ ಮಾಡನಾಡುವ ಪ್ರದೇಶಗಳನ್ನು ಒಂದು ಮಾಡಿ 1956 ನವಂಬರ್ ನಲ್ಲಿ ಮೈಸೂರು ರಾಜ್ಯ ಸ್ಥಾಪನೆ ಆದಾಗ ಅದು ಕರ್ನಾಟಕದ ಸಮಗ್ರ ಚಿತ್ರಣವನ್ನು ಒಳಗೊಂಡಿಲ್ಲವಾದ್ದರಿಂದ ಮಲೆನಾಡು ಮತ್ತು ಉತ್ತರ ಕರ್ನಾಟಕ ಭಾಗದವರು ಮೈಸೂರು ಎಂಬ ಹೆಸರಿಗೆ ಒಲವು ತೋರಲ್ಲಿಲ್ಲ. ಅವರ ತರ್ಕ್ಕಕ್ಕೆ ಅನುಗುಣವಾಗಿ ಕನ್ನಡ ಭಾಷೆ ಮಾತನಾಡುವ ಪ್ರದೇಶಕ್ಕೆ ” ಕರ್ನಾಟಕ” ಎಂಬ ಮರು ನಾಮಕರಣವನ್ನು ನವಂಬರ್ ೧, 1973 ರಲ್ಲಿ ಅಂದಿನ ಧೀಮಂತ ನಾಯಕ ಹಾಗೂ ರಾಜ್ಯದ ಜನಪ್ರಿಯ ಮುಖ್ಯ ಮಂತ್ರಿಗಳಾಗಿದ್ದ ದಿವಂಗತ ದೇವರಾಜ ಅರಸು ಅವರು ಮಹತ್ವದ ನಿರ್ಧಾರ ಪ್ರಕಟಿಸಿ ಈ ರಾಜ್ಯದ ಹೆಸರನ್ನು ” ಕರ್ನಾಟಕ ” ಎಂದು ಬದಲಾಯಿಸಿದರು. ಅಂದಿನಿಂದ ಈ ರಾಜ್ಯ ಸಮಗ್ರ ಕರ್ನಾಟಕವಾಗಿ ಎಲ್ಲಾ ರೀತಿಯಲ್ಲೂ ಸಂಪತ್ ಭರಿತವಾಗಿ ಕಂಗೊಳಿಸುತ್ತಾ ಇದೆ. ಹಾಗಾಗಿಯೇ ಕುವೆಂಪು ಅವರು ಹೇಳಿರುವ ರೀತಿ
ಭಾರತ ಜನನಿಯ ತನುಜಾತೆ
ಜಯಹೇ ಕರ್ನಾಟಕ ಮಾತೆ
ಎನ್ನುವುದು ನಿಜಕ್ಕೂ ಅನ್ವರ್ಥ ಆಗಿದೆ.

ಇಂದಿಗೆ ನಮ್ಮ ರಾಜ್ಯದ ಹೆಸರು “ಕರ್ನಾಟಕ ” ಎಂದು ಮರುನಾಮಕರಣ ಆಗಿ ಐವತ್ತು ವರ್ಷಗಳು ತುಂಬಿ ಸ್ವರ್ಣ ಮಹೋತ್ಸವದ ಸಂಬ್ರಮದಲ್ಲಿ ಇದ್ದೇವೆ. ನವೆಂಬರ್ ಒಂದರಿಂದ ಹತ್ತು ದಿನಗಳ ಕಾಲ ರಾಜ್ಯದಲ್ಲಿ ಈ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಕರ್ನಾಟಕ ಸರಕಾರ , ಅನೇಕ ಸಂಘ ಸಂಸ್ಥೆಗಳು, ಕಚೇರಿಗಳಲ್ಲಿ ಅಷ್ಟೇ ಏಕೆ ನಮ್ಮ ಕಥಾ ಅರಮನೆಯಲ್ಲಿ ಸಹಾ ಹಮ್ಮಿಕೊಳ್ಳಲಾಗಿದೆ.

ನಮ್ಮ ಕನ್ನಡನಾಡು ಶ್ರೀ ಗಂಧದ ಬೀಡು. ಕರುನಾಡು.ಕನ್ನಡಾಂಬೆಯ ನಾಡು. ಹಚ್ಚ ಹಸಿರಿನ , ಸುಂದರ ಬೆಟ್ಟ ಗುಡ್ಡಗಳ, ನದಿಗಳು ಹರಿಯುವ, ಕಲೆ ಸಾಹಿತ್ಯ ಸಂಸ್ಕೃತಿ ಸಂಗೀತದ ತವರು ಮನೆ.
ಈ ನಾಡು ಅನೇಕ ಸಾಧು ಸಂತರು, ದಾಸ ವರೇಣ್ಯರು ,
ಶಿವಶರಣರು, ಕವಿಗಳು, ರಾಜಾಧಿ ರಾಜರಗಳು, ರಾಜಕೀಯ ಮುಸ್ತದ್ಧಿಗಳು, ಹೆಸರಾಂತ ಕಲಾವಿದರು, ಕ್ರೀಡಾಪಟುಗಳು, ಕೈಗಾರಿಕಾ ಉದ್ಯಮಿಗಳು, ಸಮಾಜ ಸೇವಾ ಧುರೀಣರು, ಮಠಾಧಿಪತಿಗಳು , ಸುಪ್ರಸಿದ್ಧ ವಿಶ್ವ ವಿದ್ಯಾನಿಲಯಗಳು, ಶಿಕ್ಷಣ ತಜ್ಞರು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದವರು , ಹೆಸರಾಂತ ವೈದ್ಯಾಧಿಕಾರಿಗಳು ವಿಶ್ವ ಕಂಡ ಶ್ರೇಷ್ಠ ಇಂಜಿನಿಯರ್ ಗಳು ಎಲ್ಲಕ್ಕಿಂತ ಮಿಗಿಲಾಗಿ ” ಸಹೃದಯ ಕನ್ನಡಿಗರನ್ನು” ಕಂಡ ನಾಡು. ಕನ್ನಡಿಗರು ಸ್ನೇಹಪರರು , ಪ್ರೀತಿಯ ಜೀವಿಗಳು,ಉದಾರವಂತರು , ಎಲ್ಲಾ ಜನ ಸಾಮಾನ್ಯರ ಜೊತೆ ಜೊತೆಗೆ ಬೆರೆತು ಸುಖ ಸಂತೋಷದ ಬಾಳು ನಡೆಸುವವರು . ಹಾಗಾಗಿ ಕನ್ನಡ ನಾಡು ಶಾಂತಿಯ ತೋಟ ; ಹೃದಯ ರಸಿಕರ ಕಂಗಳ ಸೆಳೆಯುವ ನೋಟ ಇಲ್ಲಿದೆ ಎಂದರೆ ತಪ್ಪಾಗಲಾರದು.
ನಮ್ಮ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ. ಸಾವಿರಾರು ವರ್ಷಗಳ ಸಾಹಿತ್ಯ ಪರಂಪರೆ ಕನ್ನಡಕ್ಕಿದೆ. ಕನ್ನಡ ಭಾಷೆಯ ಸೌಂದರ್ಯಕ್ಕೆ ಮತ್ತು ಹಿರಿಮೆಗೆ ಹೆಗ್ಗಳಿಕೆ ಎಂದರೆ ಅತಿ ಹೆಚ್ಚು ಬಳಸುವ ಭಾಷೆ ಹಿಂದಿಯ ನಂತರ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ತನ್ನ ಮಡಿಲಿಗೆ ಹಾಕಿ ಕೊಂಡಿರುವುದು. ಇದುವರೆಗೆ 8 ಕನ್ನಡ ಸಾಹಿತಿಗಳು ಈ ಪ್ರಶಸ್ತಿಯನ್ನು ಪಡೆದು ಕನ್ನಡ ಭಾಷೆಯನ್ನು ಶ್ರೀಮಂತ ಗೊಳಿಸಿದ್ದಾರೆ.
ಎರಡನೆ ಅತ್ಯಂತ ಶ್ರೇಷ್ಠ ಭಾಷಾ ಸನ್ಮಾನವಾದ ಕೇಂದ್ರ ಸಾಹಿತ್ಯಅಕಾಡೆಮಿಯ ಪ್ರಶಸ್ತಿ ಕೂಡಾ ಸುಮಾರು 64 ಕನ್ನಡ ಸಾಹಿತಿಗಳಿಗೆ ಲಭಿಸಿದೆ. ಇದು ನಿಜಕ್ಕೂ ಗೌರವದ ಮತ್ತು ಕನ್ನಡಿಗರಿಗೆ ಗರ್ವದ ವಿಷಯ ಸಹಾ.

ಆದರೆ ಇಂದು ನಮ್ಮನ್ನೆಲ್ಲಾ ಕಾಡುತ್ತಿರುವ ಪ್ರಶ್ನೆ ಇಷ್ಟೆಲ್ಲಾ ಶ್ರೀಮಂತ ಭಾಷೆ , ನಾಡು ನುಡಿ ಕಲೆ ಸಾಹಿತ್ಯ ಸಂಸ್ಕೃತಿ ಪ್ರಸಿದ್ದವಾಗಿದ್ದರೂ ನಮ್ಮ ಭಾಷೆ ಯಾಕೆ “ನಲುಗಿದೆ” ಅಥವಾ ಬಸವಳಿಯುತ್ತಾ ಇದೆ. ಯಾಕೆ ಅಗ್ಗಾಗ ಕನ್ನ
” ಉಳಿಸಿ ಬೆಳಸಿ ” ಅನ್ನುವ ಕೂಗು ಕೇಳುತ್ತಾ ಇರುತ್ತೆ.
ವಿಚಾರ ಮಾಡುತ್ತ ನೋಡಿದರೆ ಅನಿಸುವುದು ಭಾಷೆ ಬಡವಾಗಿಲ್ಲ; ಆದರೆ ಅದನ್ನು ಬಳಸುವ ಜನರ ಇಚ್ಛಾಶಕ್ತಿ ಕಡಿಮೆ ಆಗುತ್ತಿದಿಯಾ??? ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಇಂದಿನ ಯುವ ಪೀಳಿಗೆ ಭಾಷೆಯ ಬಗ್ಗೆ ಸಂಕೀರ್ಣತಗೆ ಒಳಗಾಗಿದ್ದಾರ ಎಂದು?? ನಾವು ಇಂಗ್ಲೀಷ್ ಕಲಿಯದಿದ್ದರೆ ನಮ್ಮ ಭವಿಷ್ಯ ಹೇಗೆ ಎಂಬ ಜಿಜ್ಞಾಸೆ ಇದೆಯಾ???
ಇಂದಿನ ಸ್ಪರ್ಧಾತ್ಮಕ ಕಾಲದಲ್ಲಿ , ದೇಶವು ಕಂಡಿರುವ ಮತ್ತು ಕಾಣುತ್ತಿರುವ ಆಧುನೀಕರಣ, ಜಾಗತೀಕರಣ ಗಣಕೀಕರಣ, ಧ್ರುವೀಕರಣ ಮುಂತಾದ ಮಾನದಂಡಗಳಲ್ಲಿ ಅನ್ಯ ಭಾಷೆಗಳ ಕಲಿಕೆ, ಪಾಂಡಿತ್ಯ ಜ್ಞಾನ ಖಂಡಿತಾ ಬೇಕು. ಅದು ನಮ್ಮ ಓದುವಿಕೆ, ಕಲಿಯುವಿಕೆಗೆ ಮತ್ತು
ಗಳಿಕೆಯ ಮಾರ್ಗಕ್ಕೆ ಉಪಯೋಗ ಮಾಡಿಕೊಳ್ಳೋಣ.
ಆದರೆ ನಮ್ಮ ಮನೆಯಲ್ಲಿ ನಮ್ಮ ಜನರ ಮಧ್ಯೆ ನಮ್ಮ ಮನದ ಮಾತು ಕನ್ನಡ ಆಗಿರಲಿ ಎನ್ನುವುದು ನನ್ನ ಮನದಾಳದ ಮಾತು.
ನಾವು ಯಾವುದೆ ಭಾಷೆಯ ದ್ವೇಷಿಗಳು ಆಗುವುದು ಬೇಡ. ಆದರೆ ಕನ್ನಡ ಭಾಷೆಯ ಪ್ರೇಮಿಗಳು ಆಗೋಣ. ಅನ್ಯ ಭಾಷೆಗಳು, ನಮ್ಮ ಮನೆಗೆ ಗಾಳಿ ಬೆಳಕು ಬರಲು ಇಟ್ಟಿರುವ ಕಿಟಕಿ ಬಾಗಿಲುಗಳು ಆಗಿರ ಬೇಕೆ ವಿನಃ ಮನೆಯ ಮುಖ್ಯದ್ವಾರ ಆಗಿರಬಾರದು. ನಮ್ಮ ಕುಟುಂಬದ ಸದಸ್ಯರ ಮಧ್ಯೆ, ಸ್ನೇಹಿತರ ಮಧ್ಯೆ ಕನ್ನಡ ಭಾಷೆಯ ಸಂಪರ್ಕ ಸೇತುವೆ ಇರಬೇಕು. ಕನ್ನಡಕ್ಕೆ ಹೋರಾಡು ಕನ್ನಡದ ಕಂದ, ಕನ್ನಡವ ಕಾಪಾಡು ನನ್ನ ಆನಂದ ಸ್ಥಿತಿ ಬರಬಾರದು.
ನಾವು ಕೇವಲ ನವೆಂಬರ್ ತಿಂಗಳ ಕನ್ನಡಿಗರು ಆಗದೆ, ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲೇ ಆದಷ್ಟೂ ಮಾತನಾಡುತ್ತಾ, ಕನ್ನಡ ಪತ್ರಿಕೆ, ಪುಸ್ತಕ ಓದುತ್ತಾ ಕನ್ನಡದ ಭಾಷಾ ಪ್ರಯೋಗವನ್ನು ಮಾಡಬೇಕು. ಕನ್ನಡವನ್ನು ಬಳಸುತ್ತಾ ಕಲಿಸುತ್ತಾ ಕನ್ನಡ ನಾಡು ನುಡಿ ಸಂಸ್ಕೃತಿ ಪರಂಪರೆ ಉಳಿಸಲು ಪ್ರಾಮಾಣಿಕ ಪ್ರಯತ್ನ ಪ್ರತೀ ಕನ್ನಡಿಗರು ಮಾಡಬೇಕು.

ಎಲ್ಲಾದರೂ ಇರೋಣ ಎಂತಾದರೂ ಇರೋಣ
ಎಂದೆಂದಿಗೂ ನಾವು ಕನ್ನಡದವರಾಗಿ ಇರೋಣ .
ಕನ್ನಡವೇ ಸತ್ಯ ಕನ್ನಡವೇ ನಿತ್ಯ.

Team Newsnap
Leave a Comment
Share
Published by
Team Newsnap

Recent Posts

ಅಕ್ಟೋಬರ್ 4 ರಿಂದ 7 ವರೆಗೆ ಶ್ರೀರಂಗಪಟ್ಟಣ ದಸರ

ಶ್ರೀರಂಗಪಟ್ಟಣ : ಅಕ್ಟೋಬರ್ 4 ರಿಂದ 7 ವರೆಗೆ ವಿಜೃಂಭಣೆಯಿಂದ ಶ್ರೀರಂಗಪಟ್ಟಣ ಆಚರಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ… Read More

September 19, 2024

ತುಪ್ಪದ ಬದಲು ಪ್ರಾಣಿಗಳ ಕೊಬ್ಬಿನಿಂದ ತಿರುಪತಿ ಲಡ್ಡನ್ನು ತಯಾರಿಸಲಾಗುತ್ತಿತ್ತು: ಚಂದ್ರಬಾಬು ನಾಯ್ಡು

ಆಂಧ್ರಪ್ರದೇಶ: ಹಿಂದಿನ ಸರ್ಕಾರ ತಿರುಪತಿ ಲಡ್ಡುವನ್ನು ತುಪ್ಪದ ಬದಲು ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾಗಿದೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು… Read More

September 19, 2024

ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಕೇಸ್‌ ದಾಖಲು

ಬೆಂಗಳೂರು: ಜೆಪಿ ಶಾಸಕ ಮುನಿರತ್ನವಿರುದ್ಧ ಮತ್ತೊಂದು ಕೇಸ್‌ ದಾಖಲಾಗಿದ್ದು , ಇದೀಗ ಶಾಸಕನ ವಿರುದ್ಧ ಅತ್ಯಾಚಾರ ಕೇಸ್‌ ದಾಖಲಾಗಿದೆ. ಶಾಸಕ… Read More

September 19, 2024

ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ಗೆ ವಿಶೇಷ ಚೇತನ ಬಲಿ

ಬೆಂಗಳೂರು: ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ ಅಪಘಾತಕ್ಕೆ ವಿಶೇಷ ಚೇತನ ಬಲಿಯಾಗಿರುವ ಘಟನೆ ನಡೆದಿದೆ. ಬಿಎಂಟಿಸಿ ಬಸ್ ಯಶವಂತಪುರದಿಂದ… Read More

September 18, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,640 ರೂಪಾಯಿ ದಾಖಲಾಗಿದೆ. 24… Read More

September 18, 2024

ಸೆ.19ರಿಂದ ವಿಎಓ/ಜಿಟಿಟಿಸಿ ಪರೀಕ್ಷೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ

ಬೆಂಗಳೂರು: ಸೆ.19ರಿಂದ ಮ ಆಡಳಿತಾಧಿಕಾರಿ ಮತ್ತು ಜಿಟಿಟಿಸಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ… Read More

September 17, 2024