ಶಾಸಕ ಸಾ ರಾ ಮಹೇಶ್ – ಡಿಸಿ ರೋಹಿಣಿ ಸಿಂಧೂರಿ ನಡುವೆ ಜಾಟಾಪಟಿ

Team Newsnap
1 Min Read
  • ಮಾಸ್ಕ್ ತೆಗೆಯಲ್ಲ ಎಂದು ತಿರುಗೇಟು ನೀಡಿದ ಡಿಸಿ ಸಿಂಧೂರಿ
  • ಸಭೆಯಿಂದ ಹೊರ ನಡೆದ ಡಿಸಿ ರೋಹಿಣಿ

ಶಾಸಕ ಸಾ ರಾ ಮಹೇಶ್ ಹಾಗೂ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮುಖಾಮುಖಿಯಾದ ಮೊದಲ ಸಭೆಯಲ್ಲೇ ಇಬ್ಬರ ನಡುವೆ ಜಟಾಪಟಿ ಮಂಗಳವಾರ ನಡೆದಿದೆ.

ಮೈಸೂರಿನ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ವಿಧಾನ ಮಂಡಲ ಕಾಗದ ಪತ್ರಗಳ ಸಮಿತಿ ಸಭೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಸಾ.ರಾ ಮಹೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಭೆಗೆ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಕೂಡ ಆಗಮಿಸಿದ್ದರು.

ಮಾಸ್ಕ್ ತೆಗೆಯಲ್ಲ ಎಂದು ತಿರುಗೇಟು ನೀಡಿದ ಡಿಸಿ :

ಸಭೆಗೆ ಆಗಮಿಸಿದ ಡಿಸಿ ಸಿಂಧೂರಿ ಅವರಿಗೆ ವೇದಿಕೆಯಲ್ಲಿ ಆಸನದ ವ್ಯವಸ್ಥೆ ಇರಲಿಲ್ಲದ ಕಾರಣ ವೇದಿಕೆ ಮುಂಭಾಗದ ಆಸನದಲ್ಲಿ ಕುಳಿತರು. ಬಳಿಕ ಮಾತನಾಡಲು ಪ್ರಾರಂಭಿಸಿದ ಅವರು ಮಾಸ್ಕ್ ಹಾಕಿಕೊಂಡು ಮಾತನಾಡಿದರು.

ಮಾತಿನ ನಡುವೆ ಸಾ.ರಾ.ಮಹೇಶ್ ಅವರು, ನಿಮ್ಮ ಮಾತು ಸರಿಯಾಗಿ ಕೇಳುತ್ತಿಲ್ಲ. ಮಾಸ್ಕ್ ತೆಗೆದು ಮಾತನಾಡಿ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ ರೋಹಿಣಿ ಸಿಂಧೂರಿ, ನಾನು ಮಾಸ್ಕ್ ತೆಗೆಯವುದಿಲ್ಲ. ಮಾಸ್ಕ್ ತೆಗೆದು ಮಾತನಾಡಬಾರದು ಎಂದು ತಿರುಗೇಟು ನೀಡಿದರು.

sa ra mahesh
ಸಭೆಯಿಂದ ನೀವು ಹೊರಡಬಹುದು ಎಂದ ಶಾಸಕ ಮಹೇಶ್ :

ಈ ಸಭೆಯಲ್ಲಿ ನನಗೆ ಸಂಬಂಧಿಸಿದ ವಿಷಯಗಳ ಚರ್ಚೆ ಇಲ್ಲ. ಹಾಗಾಗಿ ನೀವು ಸಮ್ಮತಿಸಿದರೆ ನಾನು ಸಭೆಯಿಂದ ಹೋಗುತ್ತೇನೆ ಎಂದ ಡಿಸಿ ರೋಹಿಣಿ ಅವರ ಮಾತಿಗೆ ಪ್ರತಿಕ್ರಿಯಿಸಿದ ಸಾ.ರಾ.ಮಹೇಶ್ ಅವರು, ನಿಮ್ಮನ್ನು ನಾವು ಸಭೆಗೆ ಆಹ್ವಾನಿಸಿಲ್ಲ, ಆದರೂ ತಾವು ಸಭೆಗೆ ಬಂದಿರುವುದು ಸಂತೋಷ ಎಂದರು.

ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯ ಯಾವುದೇ ಸಭೆಯ ಮಾಹಿತಿ ಕೊಡುವುದು ಕರ್ತವ್ಯ. ಅದಕ್ಕೆ ಮಾಹಿತಿ ಕೊಟ್ಟಿದ್ದೇವೆ ಅಷ್ಟೆ. ಮೈಸೂರಿಗೆ ಬಂದ ಕಾಗದ ಪತ್ರಗಳ ಸಮಿತಿಯನ್ನು ನೀವು ಸ್ವಾಗತಿಸಿಲ್ಲ. ನಿಮಗೆ ಸಮಯ ಇದ್ದರೆ ಸಭೆಯಲ್ಲಿ ಇರಬಹುದು. ಕೆಲಸವಿದ್ದರೆ ಹೊರಡಬಹುದು ಎಂದು ಹೇಳಿದರು.

ಸಾ.ರಾ.ಮಹೇಶ್ ಹಾಗೆ ಹೇಳಿದ ಕೂಡಲೇ ಸಭೆಯಿಂದ ಹೊರನಡೆದ ಡಿಸಿ ರೋಹಿಣಿ ಸಿಂಧೂರಿ ಕಾರು ಹತ್ತಿ ಬೇಸರದಿಂದ ತೆರಳಿದರು.

Share This Article
Leave a comment