‘ಮದುವೆ ಬಂಧನವೋ , ಅನುಬಂಧವೋ …….’

Team Newsnap
3 Min Read

ಏಳು ಹೆಜ್ಜೆಗಳ ಸಪ್ತಪದಿ ತುಳಿದು ಬೆಸೆದ ಬಂಧನದ ಮದುವೆ ಒಂದು ಹೆಣ್ಣು ಒಂದು ಗಂಡಿನ ಮಧ್ಯ ಮೂರು ಗಂಟಿನ ಮೂಲಕ ಬೆಸೆಯುವ ಒಂದು ಸುಮಧುರವಾದ ಬೆಸುಗೆ. ನಮ್ಮ ಹಿರಿಯರ ಪ್ರಕಾರ ಏಳು ಹೆಜ್ಜೆಗಳ ಏಳೇಳು ಜನ್ಮಗಳ ಮೈತ್ರಿ ಈ ವಿವಾಹ.

ಅಗ್ನಿಸಾಕ್ಷಿಯಾಗಿ ಎರಡು ಬೇರೆ ಬೇರೆ ಪರಿವಾರದ ಗಂಡು, ಹೆಣ್ಣು ಹಿರಿಯರ ಸಮ್ಮುಖದಲ್ಲಿ ವಿಭಿನ್ನ ಆಚಾರ, ವಿಚಾರ, ಸಂಸ್ಕಾರ, ಸಂಸ್ಕೃತಿ, ಪ್ರಾಮಾಣಿಕತೆ, ನಿಷ್ಠೆ ಎಲ್ಲವನ್ನೂ ಒಂದು ಮಿತಿಯಲ್ಲಿ ಹೊಂದಾಣಿಕೆಗೆ ಬದ್ಧರಾಗಿ, ನೋವು – ನಲಿವುಗಳ ಜೀವನದಲ್ಲಿ ಪರಸ್ಪರ ಅರಿತು ಜವಾಬ್ದಾರಿ ನಿಭಾಯಿಸಿಕೊಂಡು ಮುನ್ನಡೆಯಲು ಒಪ್ಪಿಕೊಳ್ಳುವ ಒಂದು ಶಪಥ.

ದಂಪತಿಗಳೆಂದರೆ ಇದು ಕೇವಲ ದೈಹಿಕ ಸಾಂಗತ್ಯ ಮಾತ್ರವಲ್ಲ. ಒಬ್ಬರಿಗೊಬ್ಬರು ಒಂದು ಶಕ್ತಿಯಾಗಿ ಒಂದು ಮಿತಿಯಲ್ಲಿ ಎಲ್ಲ ಪ್ರಾಮಾಣಿಕತೆ ಮತ್ತು ನ್ಯಾಯದಿಂದ ನಿಭಾಯಿಸಿಕೊಂಡು ನಡೆಯುವ ಸಭ್ಯ ಜೀವನ.

ಎಲ್ಲವೂ ಒಂದು ಸರಳ ಮಿತಿಯಲ್ಲಿದ್ದಾಗ ಎಲ್ಲವೂ ಸುಂದರ. ಇಲ್ಲವಾದರೆ ಅಪಘಾತ ಖಂಡಿತ,
ಇಲ್ಲಿ ಯಾವುದು ಅತಿಯಾಗಬಾರದು. ಅತಿಯಾದ್ರೆ ಮದುವೆ ಒಂದು ಬಂಧನವೇ ಆಗುವುದು. ಹಾಗೆ ಅತಿಯಾದ ನಿರೀಕ್ಷೆಗಳು, ಅತಿಯಾದ ಕಾಳಜಿ ಈ ಬಂಧನಕ್ಕೆ ಕಾರಣ. ಇನ್ನೂ ಮದುವೆ ಬಂಧನ ಅಥವಾ ಅನುಬಂಧ ಎನ್ನುವುದು ಅವರವರ ಮನಸ್ಥಿತಿ ಮೇಲೆ ಅವಲಂಬಿತವಾಗಿರುವುದು.

ಜೀವನ ಒಮ್ಮೊಮ್ಮೆ ಸಮಸ್ಯೆಗಳ ಸರಮಾಲೆಯಾಗಿಬಿಡುತ್ತದೆ. ಅಂಥ ಪರಿಸ್ಥಿತಿಯಲ್ಲಿ ಎಲ್ಲವನ್ನೂ ಹಗುರವಾಗಿ ತೆಗೆದುಕೊಂಡು ಸಂಬಂಧಪಟ್ಟವರು ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಯೋಚನೆ ಮಾಡಿದಾಗ ಖಂಡಿತಯಾಗಿಯೂ ಎಂಥ ಕಷ್ಟಕರ ಸಮಸ್ಯೆಗೂ ಸುಲಭ ಉಪಾಯ ಸಿಕ್ಕು ಅದು ಹಗುರವಾಗಿ ಬಗೆ ಹರಿಯುವುದು ಖಚಿತ. ಮದುವೆ ಅನುಬಂಧದ ಅನುಭವ ತಂದು ಕೊಡುವುದು ನಿಜ.

ಅದು ಬಿಟ್ಟು, ಕಷ್ಟ ಬಂತು ಅಂತ ಒಬ್ಬರ ಮೇಲೆ ಒಬ್ಬರು ದೊರುತ್ತಾ ನೀನೇ ಕಾರಣ ಅಂತ ಜಗಳಕ್ಕಿಳಿದು ಮೌನ ಸಂಗ್ರಾಮ ನಡೆಸುತ್ತ ಜೀವನ ನಡೆಸಿದರೆ, ಯಾವ ಹಂತವನ್ನು ತಲುಪದ ಬದುಕು ಅದಾಗುತ್ತದೆ.

ಮೌನ ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದ್ದು ಕೂಡ ಸಂಸಾರದಲ್ಲಿ ಅತಿಯಾದ ಮೌನ ಬಂಧನವಾಗುವುದೇ ಹೊರತು ಅನುಬಂಧ ಎಂದೂ ಆಗಲಾರದು.

ಬುದ್ಧಿವಂತರ ಕಾಲ ಇದು. ಎಲ್ಲರೂ ಅತಿಯಾದ ಬುದ್ಧಿ ವಂತರೆ ಅದಕ್ಕೆ ಇರಬೇಕು ವಿಚ್ಚೇದನೆಗಳು ಹೆಚ್ಚಾಗುತ್ತಿರುವವು. ಅತಿಯಾದ ಬುದ್ದಿ ಶಕ್ತಿಯಿಂದ ಉನ್ನತ ಪದವಿ ಪಡೆದುಕೊಂಡು ದೊಡ್ಡ ಮೊತ್ತದ ಸಂಬಳ ತರುವ ಇಂದಿನ ಯುವ ಜನಾಂಗ ನಾವು ಯಾರಿಗೇನು ಕಡಿಮೆ ಅಂತ ಬೀಗುವಾಗ. ಆ ಮಕ್ಕಳಿಗಿಂತ ಹೆತ್ತವರದು ಇನ್ನ್ನು ಎತ್ತರದ ನಿಲುವು.

ಮಕ್ಕಳಿಗೆ ತಕ್ಕನಾಗಿ ಉನ್ನತ ಪದವಿ ಪಡೆದ ಹುಡುಗಿ ಹುಡುಕಿ ಮದುವೆ ಮಾಡಿ. ಆಮೇಲೆ ಆ ಸೊಸೆಯನ್ನ ಅಚ್ಚುಕಟ್ಟಾಗಿ ಮೂರು ಹೊತ್ತು ಬಿಸಿ ಬಿಸಿ ಅಡುಗೆ ಮಾಡಿ ಮೈ ತುಂಬಾ ಸೀರೆ ಉಟ್ಟು, ಮಲ್ಲಿಗೆ ಹೂವು ಮುಡಿದು ತಾವು ಹೇಳಿದ ಹಾಗೆ ಕೇಳಿಕೊಂಡು ಜೀವನ ನಡೆಸಬೇಕು ಅಂತ ಹೇರಿಕೆ ಹೆರುವ ಬದುಕು ಖಂಡಿತ ಒಂದು ತರಹದ ಬಂಧನವೇ.
ಇಂಥ ನಿರೀಕ್ಷೆ ಇರುವವರು ಕಡಿಮೆ ಓದಿದ ಮನೆಗೆಲಸ ಅಚ್ಚುಕಟ್ಟಾಗಿ ಮಾಡುವ ಹುಡುಗಿಯನ್ನ ಸೊಸೆಯಾಗಿ ತರಲು ಕೂಡ ಒಪ್ಪದ ಜನರು ಇವರೆಲ್ಲ.

ಇಂಥ ಎಷ್ಟೋ ಉದಾಹರಣೆ ನಮ್ಮ ಸುತ್ತ ಮುತ್ತ ನಡೆದದ್ದು ನೋಡಿದ್ದೇವೆ.

ಇಂಥ ಪರಿಸ್ಥಿತಿಯಲ್ಲಿ ಕಾಲಾಯ ತಸ್ಮೈ ನಮಃ ಅಂತಾನೋ ಬದಲಾವಣೆ ಜಗದ ನಿಯಮ ಅಂತಾನೋ ಒಪ್ಪಿಕೊಂಡು ವಿದ್ಯಾವಂತಳನ್ನ ಕೆಲಸಕ್ಕೆ ಕಳುಹಿಸಿ ಅದಕ್ಕೆ ಪೂರಕ ವಾತಾವರಣದ ಅನುವು ಮಾಡಿಕೊಟ್ಟು, ಆ ಸೊಸೆ ಕೂಡ ಹಿರಿಯರಿಗೆ ಗೌರವ ಕೊಡುತ್ತ ತನ್ನ ಕೈಲಾದಷ್ಟು ಅವರ ಬೇಡಿಕೆ ಈಡೇರಿಸಿ ಅಕ್ಕರೆಯಿಂದ ನೋಡಿಕೊಳ್ಳುತ್ತಾ ತನ್ನ ಹೆತ್ತವರ ಸಮಾನ ಅಂತ ಅರಿತುಕೊಂಡು ಹೊಂದಾಣಿಕೆಯಲ್ಲಿ ಜೀವನ ನಡೆಸುತ್ತ ಹೋದರೆ, ಮದುವೆ ಎಂದೆಂದಿಗೂ ಅನುಬಂಧವೇ ಆಗಿರುವುದು.

ಇದು ಒಬ್ಬರಿಂದ ಆಗದ ಕೆಲಸ ಎರಡು ಕೈಗಳು ಸೇರಿದಾಗ ಮಾತ್ರ ಚಪ್ಪಾಳೆ.,ಅದಕ್ಕೆ ಮದುವೆ ಬಂಧನ ಅಥವಾ ಅನುಬಂಧ ಎನ್ನುವುದು ಹುಟ್ಟು ಹಾಕುವುದು ಆಯಾ ಮನೆಯವರ ಮನಸ್ಥಿತಿ ಮೇಲೆನೇ ಎನ್ನುವುದು ಸತ್ಯ ಸತ್ಯ.ಕತ್ತಲೆಯಿಂದ ಬೆಳಕಿಗೆ ದಾರಿ ತೋರುವಾತನೆ ಗುರು …….

ಅದಕ್ಕೆ ಅರಿತು ಎಲ್ಲವನ್ನೂ ಒಂದು ಮಿತಿಯಲ್ಲಿ ಇಟ್ಟುಕೊಂಡು ಸಂಸ್ಕಾರದಿಂದ ಅನುಬಂಧದ ಚಪ್ಪಾಳೆ ಹೊಡೆಯುತ್ತಾ ಸಾಗಿದರೆ ಮಾತ್ರ ಮದುವೆ ಸುಂದರ, ಸುಖಮಯ, ಸುಮಧುರ,ಎಂದಿಗೂ ಮದುವೆ ಬಂಧನ ಆಗಲಾರದು.

aarathi pradeep

✍️ ಆರತಿ ಪ್ರದೀಪ್

Share This Article
Leave a comment