December 22, 2024

Newsnap Kannada

The World at your finger tips!

dcc bank

ಇಂದು ಮಂಡ್ಯ ಡಿಸಿಸಿ ಬ್ಯಾಂಕ್‌ ಚುನಾವಣೆ ಕಣ : ಪ್ರತಿಷ್ಠೆಗೆ ಪಣ

Spread the love

ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ (ಎಂಡಿಸಿಸಿಬಿ) ಆಡಳಿತ ಮಂಡಳಿಗೆ ಇಂದು (ನ.5ರಂದು) ನಡೆಯಲಿರುವ ಚುನಾವಣೆಯು ಆಕಾಂಕ್ಷಿಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಇಂದು ಮತದಾರರ ಮನವೊಲಿಕೆಗಾಗಿ ಅಭ್ಯರ್ಥಿಗಳು ಮತ್ತವರ ಕಡೆಯವರು ಕಡೆಯ ಹಂತದ ಕಸರತ್ತು ನಡೆಸುತ್ತಿದ್ದಾರೆ.

ಮಾಜಿ ಶಾಸಕ ನರೇಂದ್ರ ಸ್ವಾಮಿ ಸಹಕಾರ ಕ್ಷೇತ್ರಕ್ಕೂ ತಮ್ಮ ಸೇವೆಯನ್ನು ವಿಸ್ತರಿಸುವ ಬಯಕೆಯಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ.

ಮತ ಬೇಟೆಗಾಗಿ ಏನೆಲ್ಲಾ ಕಸರತ್ತು

ಚುನಾವಣಾ ಕಣದಲ್ಲಿ ಹಣದ ಅಬ್ಬರ ಜೋರಾಗಿತ್ತು. ಜಿದ್ದಾಜಿದ್ದಿಗೆ ಬಿದ್ದಿರುವ ಅಭ್ಯರ್ಥಿಗಳು ಕೋವಿಡ್‌ ಸಂಕಷ್ಟದ ನಡುವೆಯೂ ಹಣ ಚೆಲ್ಲಿದ್ದಾರೆ. ಕೆಲವರು ಮುಂಗಡವಾಗಿ ಪ್ರತಿ ಮತದಾರನಿಗೆ ತಲಾ ₹1 ಲಕ್ಷ ವಿತರಣೆ ಮಾಡಿದ್ದಾರೆ ಎಂಬ ಸುದ್ದಿ ಕುತೂಹಲ ಮೂಡಿಸಿದೆ.

ಪ್ರಾಥಮಿಕ ಹಂತದಲ್ಲಿ ಮತದಾರರನ್ನು ಒಲಿಸಿಕೊಳ್ಳಲು ಮುಂಗಡವಾಗಿ ತಲಾ ₹ಒಂದು ಲಕ್ಷ ವಿತರಣೆ ಸೇರಿದಂತೆ ಚಿನ್ನದ ಉಂಗುರ, ಬೆಳ್ಳಿ ವಸ್ತುಗಳನ್ನು ಮತದಾರರ ಮನೆಮನೆಗೆ ತೆರಳಿ ವಿತರಣೆ ಮಾಡುತ್ತಿದ್ದಾರೆಂದು ಹೇಳಲಾಗಿದೆ. ಹಣ ಹಂಚಲು ಪೈಪೋಟಿ ನಡೆದಿದೆಯಂತೆ. ಪ್ರತಿ ಮತದಾರರಿಗೆ ತಲಾ ₹5 ಲಕ್ಷದವರೆಗೆ ಹಣವನ್ನು ಕೆಲವರು ಪಾವತಿ ಮಾಡಿದ್ದಾರೆಂದು ಹೇಳಲಾಗಿದೆ.

ಲಾಕ್‌ಡೌನ್‌ – ಅನ್‌ಲಾಕ್‌ ಆದನಂತರ ನಗರದ ಹೋಟೆಲ್‌ಗಳು, ಬಾರ್‌ಗಳು ತೆರೆದಿವೆ. ಅಭ್ಯರ್ಥಿಗಳು ಮತದಾರರಿಗೆ ಪ್ರತಿನಿತ್ಯ ಭರ್ಜರಿ ಬಾಡೂಟ ಆಯೋಜನೆ ಮಾಡಿದ್ದೂ ಒಂದು ದಾಖಲೆಯಾಗಿದೆ. ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕ್ಲಬ್‌, ತೋಟದ ಮನೆಗಳಲ್ಲೂ ಹಣ, ಬಾಡು, ಮದ್ಯದ ಪಾರ್ಟಿ ಮಾಡಿ , ಮತಗಳನ್ನು ಗಟ್ಟಿಮಾಡಿಕೊಳ್ಳುವಲ್ಲಿ ಅಭ್ಯರ್ಥಿಗಳು ಸಾಕಷ್ಟು ಪ್ರಯತ್ನ ಮಾಡಿದ್ದಾರೆ.

12 ಸ್ಥಾನಗಳಿಗೆ ಚುನಾವಣೆ:

ಒಟ್ಟು 12 ಕ್ಷೇತ್ರಗಳಿಂದ ತಲಾ ಒಬ್ಬರು ನಿರ್ದೇಶಕರು ಬ್ಯಾಂಕ್‌ನ್ನು ಪ್ರತಿನಿಧಿಸಲಿದ್ದಾರೆ. ಹೀಗಾಗಿ 12 ನಿರ್ದೇಶಕರ ಬಲದ ಎಂಡಿಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿಗೆ ಈಗಾಗಲೇ ಮೂವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ 9 ಕ್ಷೇತ್ರಗಳಿಗಷ್ಟೇ ಚುನಾವಣೆ ನಡೆಯುತ್ತಿದೆ. ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಸೇರಿದಂತೆ ರಾಜಕೀಯ ಪಕ್ಷಗಳ ಹಲವು ಮುಖಂಡರು ಸಹಕಾರ ಕ್ಷೇತ್ರದ ಚುನಾವಣೆಯಲ್ಲಿ ಹೊಸ ಮುಖಗಳಾಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಪಾಂಡವಪುರ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರ(8)ದಿಂದ ಗುರುಸ್ವಾಮಿ, ಮಂಡ್ಯ ಜಿಲ್ಲೆಯಲ್ಲಿನ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಷೇತ್ರ(8)ದಿಂದ ಕೆ.ವಿ.ದಿನೇಶ್ ಹಾಗೂ ಪಾಂಡವಪುರ ಉಪ ವಿಭಾಗದ ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರ(11)ದಿಂದ ಪಿ.ಚಲುವರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಪೈಕಿ ಗುರುಸ್ವಾಮಿ, ಚಲುವರಾಜು ಜೆಡಿಎಸ್ ಹಾಗೂ ದಿನೇಶ್ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ.

ಕಣದಲ್ಲಿ ಉಳಿದವರು:

ಮಂಡ್ಯ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ: ಸಿ.ಅಶ್ವಥ್, ಸತೀಶ್.
ಮದ್ದೂರು ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ: ಪಿ.ಸಂದರ್ಶ, ಎಂ.ಹೊನ್ನೇಗೌಡ.
ಮಳವಳ್ಳಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ: ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ವಿ.ಎಂ.ವಿಶ್ವನಾಥ್.
ಶ್ರೀರಂಗಪಟ್ಟಣ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ: ಪಿ.ಎಸ್.ಚಂದ್ರಶೇಖರ್, ಎಸ್.ಎಂ.ಮಲ್ಲೇಶ್.
ಕೆ.ಆರ್.ಪೇಟೆ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ: ಎಚ್.ಕೆ.ಅಶೋಕ, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿ.ಡಿ.ಹರೀಶ್.
ನಾಗಮಂಗಲ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ: ಎಚ್.ಎಸ್.ನರಸಿಂಹಯ್ಯ, ಎಚ್.ರಮೇಶ್.
ಮಂಡ್ಯ ಜಿಲ್ಲೆಯಲ್ಲಿನ ಬಳಕೆದಾರರ ಮತ್ತು ಸಂಸ್ಕರಣ ಸಹಕಾರ ಸಂಘಗಳು ಮತ್ತು ನಗರ ಸಹಕಾರಿ ಬ್ಯಾಂಕ್ ಹಾಗೂ ವ್ಯವಸಾಯೇತ್ತರ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ: ಎಚ್.ಅಶೋಕ್, ಕೆ.ಎಲ್.ದೊಡ್ಡಲಿಂಗೇಗೌಡ, ಸಿ.ಎಸ್.ಸೋಮೇಗೌಡ.
ಮಂಡ್ಯ ಉಪ ವಿಭಾಗದ ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರ: ಎಚ್.ಸಿ.ಕಾಳೇಗೌಡ, ರಾಮಕೃಷ್ಣ.
ಮಂಡ್ಯ ಜಿಲ್ಲೆಯಲ್ಲಿನ ಕೈಗಾರಿಕಾ ಸಹಕಾರ ಸಂಘಗಳು(ನೇಕಾರರ ಸಹಕಾರ ಸಂಘಗಳು ಸೇರಿದಂತೆ) ಕಾರ್ಮಿಕ ಸಹಕಾರ ಸಂಘಗಳು ಮತ್ತು ಇನ್ನಿತರೆ ಸಹಕಾರ ಸಂಘಗಳ ಕ್ಷೇತ್ರ: ಕೆ.ಸಿ.ಜೋಗೀಗೌಡ, ಎಂ.ಬಿ.ಬಸವರಾಜು, ಲಿಂಗರಾಜು.

Copyright © All rights reserved Newsnap | Newsever by AF themes.
error: Content is protected !!