ಭಾರತದ ಎಲ್ಲಾ ಪ್ರಾಂತಗಳಲ್ಲೂ ಭೇದ ಭಾವ ಇಲ್ಲದಂತೆ ಆಚರಿಸುವ ಪ್ರಮುಖವಾದ ಹಬ್ಬ ಎಂದರೆ ಅದು “ಮಹಾ ಶಿವರಾತ್ರಿ”. ಇಂದ್ರಿಯ ಖಂಡನೆ, ದೇಹದಂಡನೆಗೆ ಈ ಹಬ್ಬದಲ್ಲಿ ವಿಶೇಷ ಪ್ರಾಮುಖ್ಯತೆ. ಶಿವ, ಶಂಕರ, ಗಂಗಾಧರ, ಮಹಾದೇವ, ಈಶ್ವರ ಶಂಭೋ, ಅನೇಕ ಹೆಸರುಗಳಿಂದ ಜನರು ಕರೆಯುವ ಭಗವಂತನ ಆರಾಧನೆಗೆ ಪ್ರಶಸ್ತವಾದ ದಿನ ಎಂದರೆ “ಮಹಾಶಿವರಾತ್ರಿ”. ಶಿವನಿಗೆ ಅತ್ಯಂತ ಪ್ರಿಯವಾದ ಮಾಘ ಬಹುಳ ಚತುರ್ಥಶಿ ದಿನ ಶಿವರಾತ್ರಿಯಂದು ಜಗತ್ತಿನ ತಂದೆಯಾದ ಶಿವನ ಆರಾಧನೆಗೆ ಪ್ರಶಸ್ತ ಮುಹೂರ್ತ ವಾಗಿದೆ.
ಮಾಘ ಕೃಷ್ಣ ಚತುರ್ದಶ್ಯಾಂ ಆದಿದೇವೋ ಮಹಾನಿಶಿ !
ಶಿವಲಿಂಗತಯೋದ್ಭೂತ: ಕೋಟಿ ಸೂರ್ಯ ಸಮಪ್ರಭ: !!
ತತ್ಕಾಲವ್ಯಾಪಿನೀ ಗ್ರಾಹ್ಯಾ ಶಿವರಾತ್ರಿ ವ್ರತೇ ತಿಥಿ: !
ಈಶಾನ ಸಂಹಿತೆಯ ವಾಕ್ಯದಂತೆ “ಮಹಾಶಿವರಾತ್ರಿ”ಯಂದೇ ನಡುರಾತ್ರಿ ಕೋಟಿ ಸೂರ್ಯ ಪ್ರಕಾಶನಾದ ಪರಶಿವನು ಲಿಂಗದಿಂದ ಸ್ವಯಂಭೂ ವಾಗಿ ಉದ್ಭವಿಸಿದ ದಿನವೆಂದು, ಹಾಗೂ ಶಿವನು ಹಾಲಾಹಲ ವಿಷ ಕುಡಿದ ದಿನವೆಂದು ಮತ್ತು ‘ಶಿವ’ ತಾಂಡವ ನೃತ್ಯ ಮಾಡಿದ ದಿನ ವೆಂದು ಹೇಳುತ್ತಾರೆ. ಇಂದು ದೇಶದಾದ್ಯಂತ ಎಲ್ಲಾ ಶಿವಾಲಯಗಳು, ,ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳು, ಗೋಕರ್ಣ, ಯಾಣ, ಕಾಶಿ, ರಾಮೇಶ್ವರ, ಮುಂತಾದ ತೀರ್ಥ ಕ್ಷೇತ್ರಗಳಲ್ಲಿ, ಲಕ್ಷ ಲಕ್ಷ ಜನರು ಶಿವ ಪೂಜೆ ಹಾಗೂ ಶಿವ ನಾಮಸ್ಮರಣೆಯಲ್ಲಿ ಮಗ್ನರಾಗಿರುತ್ತಾರೆ. ಹಾಗೆ ಇದೇ ದಿನ ಪ್ರಸಿದ್ಧವಾದ ಹುಬ್ಬಳ್ಳಿಯ “ಸಿದ್ಧಾರೂಢ ಜಾತ್ರೆ”, ಗೋಕರ್ಣ “ಮಹಾಬಲೇಶ್ವರನ” ಜಾತ್ರೆ ನಡೆಯುತ್ತದೆ.
ಸಾಮಾನ್ಯವಾಗಿ ಎಲ್ಲಾ ಹಬ್ಬಗಳು ಹಗಲಿನಲ್ಲಿ ಬರುತ್ತದೆ. ಆದರೆ “ಶಿವರಾತ್ರಿ” ಹೆಸರೇ ಸೂಚಿಸುವಂತೆ ರಾತ್ರಿ ಪೂಜೆಗೆ ಬಹಳ ವಿಶೇಷ. ಶಿವನಿಗೆ ಪ್ರಿಯವಾದದ್ದು ಅಭಿಷೇಕ, ಈ ದಿನ ಶಿವನಿಗೆ ಜಲ, ಕಬ್ಬಿನ ಹಾಲು, ಹಸುವಿನ ಹಾಲು, ಎಳ ನೀರು, ಜೇನುತುಪ್ಪ, ಶ್ರೀ ಗಂಧ ಇವುಗಳಿಂದ ಅಭಿಷೇಕ ಮಾಡುತ್ತಾರೆ. ಹಾಗೆ ಶಿವ ಬಿಲ್ವಪತ್ರೆ ಪ್ರಿಯ
ಈ ಸುದಿನದಂದು “ಬಿಲ್ವಪತ್ರೆ” ಶಿವ ಪೂಜೆಗೆ ಅತ್ಯಗತ್ಯ. ಹಾಗೆ ತುಂಬೆ ಹೂವು, ಸುರಗಿ, ನಾಗಸಂಪಿಗೆ, ನಾಗಲಿಂಗ ಪುಷ್ಪ, ಬಕುಳ ಪುಷ್ಪ (ರಂಜದ ಹೂವು) ಸಂಪಿಗಿ, ಜಾಜಿ, ಮಲ್ಲಿಗೆ, ಮಲ್ಲೆ ಮೊಗ್ಗು, ಗೊರಟೆ ಇನ್ನೂ ಅನೇಕ ಪುಷ್ಪಗಳನ್ನು ಶಿವನಿಗೆ ಭಕ್ತಿಯಿಂದ ಅರ್ಪಿಸುತ್ತಾರೆ.
ಶಿವರಾತ್ರಿ ಆಚರಣೆ:- ಈ ದಿನ ಮುಂಜಾನೆ ಎದ್ದು ಸ್ನಾನ ಮಾಡಬೇಕು (ಪವಿತ್ರ ನದಿಗಳು, ತ್ರಿವೇಣಿ ಸಂಗಮ ಸಮುದ್ರ ಸ್ನಾನಗಳು ಅತ್ಯಂತ ಶ್ರೇಷ್ಠವಾದದ್ದು) ಮನೆಯಲ್ಲಿ ಮಾಡುವಾಗ “ಓಂ ನಮಃ ಶಿವಾಯ”
ಎಂದು ಶಿವನಾಮ ಸ್ಮರಣೆ ಮಾಡುತ್ತಾ ಸ್ನಾನ ಮಾಡಿ, ಸ್ನಾನದ ಕೊನೆಗೆ “ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ!
ನರ್ಮದೇ ಸಿಂಧು ಕಾವೇರಿ ಜಲೆಸ್ಮಿನ್ ಸನ್ನಿಧಿಂ ಕುರು !!
ಹೇಳಿ ಸ್ನಾನ ಮಾಡಿದರೆ ಪವಿತ್ರ ನದಿ ಸ್ನಾನದ ಪುಣ್ಯ ಲಭಿಸುತ್ತದೆ. ಮಡಿಯುಟ್ಟು ಶಿವನ ಮುಂದೆ ಪ್ರಾರ್ಥಿಸಿ, ಸಮಸ್ತ ಪಾಪ ನಿವಾರಣೆ ಗಾಗಿಯೂ, ಜ್ಞಾನ, ಮೋಕ್ಷ ಪ್ರಾಪ್ತಿಗಾಗಿಯೂ, ಶಿವರಾತ್ರಿ ವ್ರತವನ್ನು ಆಚರಿಸುತ್ತೇನೆ ಎಂದು ದೃಢ ಸಂಕಲ್ಪ ಮಾಡಬೇಕು. ‘ವ್ರತ’ ಎಂದರೆ “ಉಪವಾಸ”. ತ್ರಯೋದಶಿ ದಿನ ಒಪ್ಪತ್ತು ಊಟ, ಚತುರ್ಥಶಿ ಪೂರ್ತಿ ಉಪವಾಸ, ಅಮಾವಾಸ್ಯೆ ದಿನ ಪಾರಣೆ ಮಾಡಬೇಕು. ವೃದ್ಧರು, ಮಕ್ಕಳು, ಬಾಣಂತಿ, ಅಭ್ಯಾಸವಿಲ್ಲದವರು, ಇವರೆಲ್ಲ ಹಾಲು- ಹಣ್ಣು- ಫಲಹಾರ ಸ್ವೀಕರಿಸುತ್ತಾರೆ. ಮನೆಯಲ್ಲಿ ಎಲ್ಲರೂ“ಶಿವ ಪೂಜೆ” ಮಾಡಬೇಕು. ಪ್ರದೋಷ ಕಾಲಕ್ಕೆ ಎಲ್ಲಾ ಶಿವಾಲಯಗಳಲ್ಲಿ ರಾತ್ರಿ 4 ಯಾಮಗಳಲ್ಲೂ ರುದ್ರಾಭಿಷೇಕ, ಪೂಜೆ, ಹರಿಕಥೆ ಸತ್ಸಂಗಾದಿಗಳಲ್ಲಿ
ಇದ್ದು ಅದರಲ್ಲಿ ಪಾಲ್ಗೊಳ್ಳಬೇಕು.
ಬದ್ಧೋಹಂ ವಿವಿಧೈ: ಪಾಪೈ: ಸಂಸಾರ ಭವ ಬಂಧನೇ!
ಪತಿತಂ ಮೋಹಜಾಲೇ ಮಾಂ ತ್ವಂ ಸಮುದ್ಧರ ಶಂಕರ!!
ಅಂದರೆ “ನಾನಾ ವಿಧವಾದ ಪಾಪ ಕರ್ಮಗಳಿಂದ ಭವ ಬಂದನದಲ್ಲಿ ಸಿಲುಕಿದ ನನ್ನನ್ನು ಲೋಕಕ್ಕೆ ಸುಖವನ್ನು ಕೊಡುವ ಸ್ವಾಮಿಯಾದ ನೀನು ಉದ್ದರಿಸು” ಎಂದು ಶಿವನನ್ನು ಪ್ರಾರ್ಥಿಸಬೇಕು. ಶಿವ ಪೂಜೆ ಯನ್ನು ಎಲ್ಲಾ ಜಾತಿ, ವರ್ಣ, ವರ್ಗ, ಮತ, ಸೇರಿದಂತೆ ಸ್ತ್ರೀ ಪುರುಷ ರಾದಿಯಾಗಿ ಮಕ್ಕಳು ಪಾಲ್ಗೊಳ್ಳುತ್ತಾರೆ. “ಶಿವರಾತ್ರಿ” ಅಂದರೆ ಸರ್ವ ಪಾಪವನ್ನು ದೂರ ಮಾಡುವ ಈ ವ್ರತವನ್ನು ಚಾಂಡಾಲರಾದಿಯಾಗಿ ಯಾರೇ ಮಾಡಿದರು, ಇಹದಲ್ಲಿ ಸುಖ- ಪರದಲ್ಲಿ ಮೋಕ್ಷ ದೊರೆಯು ತ್ತದೆ. ಬೇಡರ ಕಣ್ಣಪ್ಪ ಭಕ್ತಿ ನಿಷ್ಠೆಯಿಂದ ಶಿವನನ್ನು ಪೂಜಿಸಿ ಸದ್ಗತಿ ಪಡೆದ ಕಥೆ ಎಲ್ಲರಿಗೂ ತಿಳಿದಿದೆ.
ವಿಷ್ಣು ಅಲಂಕಾರಪ್ರಿಯನಾದರೆ, ಶಿವ ಅಭಿಷೇಕ ಪ್ರಿಯ. ಅಭಿಷೇಕ ದಿಂದ ತೃಪ್ತಿಪಡಿಸಿದರೆ ‘ಪಶುಪತಿ’ ನಮ್ಮಲ್ಲಿರುವ ಪಶುತ್ವವನ್ನು ದೂರ ಮಾಡುತ್ತಾನೆ. ಭಕ್ತರು ಸಲ್ಲಿಸುವ ಅಲ್ಪ ಸೇವೆಯನ್ನೇ ಕಲ್ಪವೆಂದು ಭಾವಿಸಿ ಭಕ್ತರ ಬಳಿ ಓಡೋಡಿ ಬರುವ ದೇವರ ದೇವನೆಂದರೆ ಮಹಾದೇವ ಒಬ್ಬನೇ. ಶಿವನಿಗೆ ರುದ್ರಾಭಿಷೇಕ ಪ್ರಿಯವಾದದ್ದು.
ಮನುಷ್ಯ ಹುಟ್ಟುವಾಗ ಅಳುತ್ತಲೇ ಬರುತ್ತಾನೆ. ಈ ರೋದನವನ್ನು ದೂರ ಮಾಡುವವನೇ ಪರಮೇಶ್ವರ. ಜಗತ್ತಿನ ಎಲ್ಲಾ ವಸ್ತುಗಳಲ್ಲೂ ಶಿವನೇ ಇದ್ದಾನೆ. ರೋಗರುಜಿನಿಗಳಿಲ್ಲದೆ, ದ್ವೇಷ ಅಸೂಯೆ ಗಳು ಇಲ್ಲದಂತೆ ಸಿದ್ಧಿ -ಸಮೃದ್ಧಿಗಳಿಂದ, ತುಷ್ಟಿ- ಪುಷ್ಠಿಗಳಿಂದ ರಾರಾಜಿಸಲಿ ಎಂದು ಪ್ರಾರ್ಥಿಸಿ ರುದ್ರಾಭಿಷೇಕ ಮಾಡುತ್ತಾರೆ. ಅಂದರೆ ಅಸಾರವಾದ ಸಂಸಾರದಲ್ಲಿ ಜನಿಸಿದ ಮನುಷ್ಯನಿಗೆ ಸಾರ, ಆಯುರಾರೋಗ್ಯ ಐಶ್ವರ್ಯಕ್ಕೆ ಶಿವಾರಾಧನೆ ರಾಮಬಾಣ. ಶಿವನನ್ನು ಆರಾಧಿಸಿದರೆ ಎಲ್ಲಾ ದೇವತೆಗಳು ತುಷ್ಟರಾಗುತ್ತಾರೆ. ಹರಿವಂಶದಲ್ಲಿ ಶ್ರೀ ಕೃಷ್ಣನ ರುದ್ರ ಜಪ ಮಾಡಿದನೆಂದು ಉಲ್ಲೇಖವಿದೆ.
ಶಿವರಾತ್ರಿ ಹಲವು ಕಥೆಗಳಿವೆ ಇದು ಒಂದು.
ಪ್ರತ್ಯಂತವೆಂಬ ದೇಶದಲ್ಲಿ ಒಬ್ಬ ಬೇಡನಿದ್ದ. ಒಂದು ದಿನ ಅವನಿಗೆ ಬೇಟೆ ಸಿಗಲಿಲ್ಲ ಕತ್ತಲಾಯಿತು. ಪ್ರಾಣಿಗಳ ಭಯದಿಂದ ಸರೋವರದ ಬಳಿ ಇದ್ದ ಬಿಲ್ವ ವೃಕ್ಷ ಹತ್ತಿ ಕುಳಿತನು. ರಾತ್ರಿ ಸಮಯ ಪ್ರಾಣಿಗಳು ನೀರು ಕುಡಿಯಲು ಸರೋವರಕ್ಕೆ ಬಂದಾಗ ಅದನ್ನು ಕೊಲ್ಲುವ ಯೋಚನೆಯ ಲ್ಲಿದ್ದ. ಆ ದಿನ “ಶಿವರಾತ್ರಿ”. ಇದು ಬೇಡನಿಗೆ ಗೊತ್ತಿಲ್ಲ. ಆ ಬಿಲ್ವ ವೃಕ್ಷದ ಕೆಳಗೆ ಒಂದು ಶಿವಲಿಂಗ ಇರುವುದು ಅವನಿಗೆ ಗೊತ್ತಿಲ್ಲ. ಪ್ರಾಣಿ ಬಂದಿದೆಯೇ ಎಂದು ನೋಡಲು ಬಿಲ್ವಪತ್ರೆ ಎಲೆಗಳು ಅಡ್ಡವಾಯಿ ತೆಂದು ಮರೆಯಾದ ಎಲೆಗಳನ್ನೆಲ್ಲ ಕಿತ್ತು ಬಿಸಾಕಿದ. ಆ ಬಿಲ್ವಪತ್ರೆಗಳು ಶಿವಲಿಂಗವನ್ನು ಮುಚ್ಚಿದ್ದವು.
ಆ ಸಮಯದಲ್ಲಿ ನೀರಡಿಕೆಯಿಂದ ಒಂದು ಗರ್ಭಿಣಿ ಜಿಂಕೆ ಅಲ್ಲಿಗೆ ಬಂದಿತು. ಬೇಡ ಬಾಣ ಬಿಡಲು ಹೊರಟಾಗ, ಅದು ಹೇಳಿತು ಗರ್ಭಿಣಿಯಾದ ನನ್ನನ್ನು ಕೊಂದು ಭ್ರೂಣ ಹತ್ಯೆ ಪಾಪಕ್ಕೆ ಗುರಿಯಾ ಗಬೇಡ ನಾನು ಮರಿ ಹಾಕಿದ ಮೇಲೆ, ನನ್ನ ದೇಹವನ್ನು ನಿನಗೆ ಅರ್ಪಿಸುವೆ ‘ಶಿವನಾಣೆ’ ಎಂದಿತು. ಶಿವನ ಹೆಸರು ಕೇಳುತ್ತಲೇ ಬೇಡನಲ್ಲಿ ಕರುಣೆ ಹುಟ್ಟಿ ಬಾಣ ಬಿಡಲಿಲ್ಲ. ಎರಡನೆ ಯಾಮದಲ್ಲಿ ಇನ್ನೊಂದು ಜಿಂಕೆ ತನ್ನ ಪುಟ್ಟ ಪುಟ್ಟ ಮರಿಗಳೊಂದಿಗೆ ನೀರು ಕುಡಿ ಯಲು ಬಂದಿತು. ಆಗ ಬೇಡ ಹೊಡೆಯಲು ಬಾಣ ಕೂಡಿದ. ಆ ಜಿಂಕೆ ನುಡಿಯಿತು. ಬೇಡ ನನ್ನ ಮರಿಗಳಿಗೆ ನೀರು ಕುಡಿಸಿ ಅವುಗಳನ್ನು ನನ್ನ ಪತಿ ಇದ್ದಲ್ಲಿಗೆ ಬಿಟ್ಟು ಬರುತ್ತೇನೆ ಅಲ್ಲಿಯ ತನಕ ತಾಳ್ಮೆಯಿಂದ ಇರು ಇಲ್ಲದಿದ್ದರೆ ನನ್ನ ಮರಿಗಳು ಅನಾಥವಾಗುತ್ತವೆ ಎಂದಾಗ ಮತ್ತೆ ಬಾಣವನ್ನು ಹಿಂತೆಗೆದುಕೊಂಡ.
ಇದಾದ ಮೇಲೆ ಇನ್ನೊಂದು ಗಂಡು ಜಿಂಕೆ ಬಂದಿತು. ಅದಕ್ಕೆ ಬಾಣ ಹೊಡೆಯಲು ತಯಾರಾದ ಆಗ ಅದು ಹೇಳಿತು. “ಶಿವ ಶಿವಾ ನನ್ನನ್ನೇಕೆ ಕೊಲ್ಲುವೆ” ಮೊದಲು ನೀನು ಕರುಣೆಯಿಂದ ಬಿಟ್ಟ ಎರಡು ಜಿಂಕೆಗಳು ನನಗಾಗಿ ಕಾಯುತ್ತಿವೆ. ಅವುಗಳೊಂದಿಗೆ ಇಲ್ಲಿಗೆ ತಪ್ಪದೇ ಬರುವೆ “ಶಿವನಾಣೆ” ಎಂದಾಗ ಅದನ್ನೂ ಬಿಟ್ಟನು. ಕೊಟ್ಟ ಮಾತಿನಂತೆ ತಪ್ಪದೆ ಬೆಳಗಿನ ಜಾವಕ್ಕೆ ಎಲ್ಲಾ ಜಿಂಕೆಗಳು, ಮರಿಗಳು ಬಂದು ಬೇಡನನ್ನು ಕುರಿತು ನಮ್ಮನ್ನು ಈಗ ಕೊಲ್ಲು ಎಂದವು. ಅರುಣೋದಯವಾಗುವ ಸಮಯ ಅದಾಗಲೇ ಬೇಡನ ಮನಸ್ಸು ಪರಿವರ್ತನೆಯಾಗಿತ್ತು. ಅವನು ಜಿಂಕೆಗಳಿಗೆ ಹೇಳಿದ “ಶಿವ ಶಿವ” ನಿಮ್ಮನ್ನು ಕೊಂದು ನಾನು ಯಾವ ನರಕಕ್ಕೆ ಹೋಗಲಿ ಎಂದು ಸುಮ್ಮನಾದನು.
ಅಂದು ಶಿವರಾತ್ರಿಯಾಗಿತ್ತು. ಬೇಡ ತನಗೆ ಅರಿವಿಲ್ಲದಂತೆ ಉಪವಾಸ ಇರಬೇಕಾಯಿತು, ಬಿಲ್ವಪತ್ರೆಯಿಂದ ಶಿವಾರ್ಚನೆ ಮಾಡಿದ, ರಾತ್ರಿಯೆಲ್ಲ ಜಾಗರಣೆ ಮಾಡಿದ, ಶಿವ ಶಿವ ಎಂದು ಸ್ಮರಣೆ ಮಾಡಿದ ಅವನಿಗೆ ಗೊತ್ತಿಲ್ಲದಂತೆ ಶಿವರಾತ್ರಿ ಆಚರಣೆ ಮಾಡಿದ್ದ. ಬೇಡ ಗೊತ್ತಿಲ್ಲದೇ ಮಾಡಿದ ಭಕ್ತಿಗೆ ಶಿವನು ಪ್ರಸನ್ನನಾಗಿ ಶಿವಗಣಗಳ ಸಮೇತ ಪುಷ್ಪಕ ವಿಮಾನದಲ್ಲಿ ಬಂದನು. ಜಿಂಕೆಗಳು ಹಾಗೂ ಅವುಗಳ ಕುಟುಂಬವನ್ನು ಬೇಡನನ್ನು ಕೂರಿಸಿ ಕೈಲಾಸಕ್ಕೆ ಕರೆದುಕೊಂಡು ಹೋದನು. ಬೇಡ ಶಿವನನ್ನು ಕಂಡು ಮೈ ಮರೆತಿದ್ದ. ಶಿವ ಬೇಡನಿಗೆ ಹೇಳಿದ. ಈ ದಿನದ ಪುಣ್ಯ ನಿನಗಷ್ಟೇ ಅಲ್ಲದೆ, ನಿನ್ನ ಈ ಕಥೆ ಕೇಳಿದವರೆಗೂ “ಕೈಲಾಸ ಪದವಿ ಖಚಿತ” ಎಂದು ಜಗತ್ತಿಗೆ ಆಶ್ವಾಸನೆ ಕೊಟ್ಟನು.
ಶಿವ ಶಿವ ಎಂದರೆ ಭಯವಿಲ್ಲ ‘ಶಿವನಾಮಕೆ ಸಾಟಿ ಬೇರಿಲ್ಲ” ಎಂಬಂತೆ
ಶಿವನ ನಂಬಿದರೆ ವಿಪತ್ತೂ ಕಷ್ಟಗಳು ಹತ್ತಿರ ಸುಳಿಯುವುದಿಲ್ಲ
“ಕೈಲಾಸ ವಾಸ ಗೌರೀಶ ಈಶ,
ತೈಲ ಧಾರೆಯಂತೆ ಮನಸು ಕೊಡು
ಹರಿಯಲ್ಲಿ, ಶಂಭೋ”
ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು