November 28, 2024

Newsnap Kannada

The World at your finger tips!

yediyurappa

ಪರಸ್ಪರ ಜಲಾಶಯಗಳ ಮಾಹಿತಿ ಹಂಚಿಕೆಗೆ ಮಹಾರಾಷ್ಟ್ರ- ಕರ್ನಾಟಕ ಒಪ್ಪಂದ – ಸಿಎಂ ಯಡಿಯೂರಪ್ಪ

Spread the love

ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಮಳೆ ಪ್ರಮಾಣ, ಜಲಾಶಯಗಳಿಂದ ನೀರು ಬಿಡುಗಡೆ ಕುರಿತಂತೆ ಕ್ಷಣ ಕ್ಷಣದ ಮಾಹಿತಿ ಹಂಚಿಕೊಳ್ಳಲು ತೀರ್ಮಾನಿಸಲಾಗಿದೆ.

ಮುಖ್ಯಮಂತ್ರಿ ನೇತೃತ್ವದಲ್ಲಿ ಕರ್ನಾಟಕ – ಮಹಾರಾಷ್ಟ್ರ ರಾಜ್ಯದ ಪ್ರವಾಹ ನಿಯಂತ್ರಣ ಮತ್ತು ನಿರ್ವಹಣಾ ಸಮಿತಿಯ ಸಭೆ ಶನಿವಾರ ನಡೆಯಿತು.

ಮಹಾರಾಷ್ಟ್ರದ ಜಲ ಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ಮತ್ತು ಹಿರಿಯ ಅಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.

yedi

ಕೃಷ್ಣಾ ಮತ್ತು ಭೀಮಾ ನದಿಯ ಜಲಾನಯನ ಪ್ರದೇಶದಲ್ಲಿ ಪ್ರವಾಹವನ್ನು ಪರಿಣಾಮಕಾರಿ ಯಾಗಿ ನಿರ್ವಹಿಸುವುದೂ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.

ದೂಧ್ ಗಂಗಾ ಯೋಜನೆ ಉಭಯ ರಾಜ್ಯಗಳ ಜಂಟಿ ಯೋಜನೆ ಆಗಿದೆ. ಅನೇಕ ವರ್ಷಗಳಿಂದ ನೆನೆಗುದಿಯಲ್ಲಿರುವ ಈ ಯೋಜನೆಯನ್ನು ಎರಡು ವರ್ಷದೊಳಗೆ ಪೂರ್ಣಗೊಳಿಸಲು ಮಹಾರಾಷ್ಟ್ರ ಸರ್ಕಾರ ಒಪ್ಪಿಕೊಂಡಿದೆ. ಇದರಿಂದ ಈ ಭಾಗದ ಜನರ ನೀರಾವರಿ ಸೌಲಭ್ಯ ಹೊಂದುವ ಆಕಾಂಕ್ಷೆ ಈಡೇರಲಿದೆ’ ಎಂದರು.

‘ಬೇಸಿಗೆಯಲ್ಲಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ 4 ಟಿಎಂಸಿ ಅಡಿ ನೀರು ಹಾಗೂ ಮಳೆಗಾಲದಲ್ಲಿ ಮಹಾರಾಷ್ಟ್ರಕ್ಕೆ ರಾಜ್ಯದಿಂದ ಅಷ್ಟೇ ಪ್ರಮಾಣದ ನೀರು ಒದಗಿಸುವ ಬಗ್ಗೆ ತಾಂತ್ರಿಕ ಸಮಿತಿ ರಚಿಸಲು ಕೂಡಾ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು.

20 ವರ್ಷಗಲಿಂದ ದೂಧ್‌ ಗಂಗಾ ಯೋಜನೆ ಪೂರ್ಣ ಆಗಿಲ್ಲ. ನಮ್ಮ ಭಾಗದಲ್ಲಿ ಯೋಜನೆಯ ಕೆಲಸ ಆಗಿದೆ. ಮಹಾರಾಷ್ಟ್ರ ಭಾಗದಲ್ಲಿ ವಿಳಂಬವಾಗಿದೆ. ಅದನ್ನು ಎರಡು ವರ್ಷದಲ್ಲಿ ಪೂರ್ಣಗೊಳಿಸಿ, ರಾಜ್ಯದ ಪಾಲಿನ ನೀರು ಹೊಂದಿಸಿಕೊಡಲು ಒಪ್ಪಿದ್ದಾರೆ ಎಂದೂ ತಿಳಿಸಿದರು.

ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಏಪ್ರಿಲ್‌, ಮೇ ತಿಂಗಳಲ್ಲಿ ನೀರಿನ ಕೊರತೆ ಉಂಟಾಗುತ್ತಿದೆ. ಪ್ರತಿ ಬಾರಿ 4 ಟಿಎಂಸಿ ಅಡಿ ನೀರು ಬಿಡುವಂತೆ ನಾವು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಈ ನೀರಿಗೆ 2013ರಿಂದ ಹಣ ಕೊಡುತ್ತಿದ್ದೆವು. ಅದರ ಬದಲು ಸೊಲ್ಲಾಪುರ ತಾಲ್ಲೂಕಿನ ಜತ್ತದಲ್ಲಿ ಮಳೆಗಾಲದಲ್ಲಿ ನೀರು ಕೊಡುವಂತೆ ಮಹಾರಾಷ್ಟ್ರದವರು ಕೇಳಿದ್ದಾರೆ. ಬೇಸಿಗೆ ಸಮಯದಲ್ಲಿ ಅವರು ನಮಗೆ 4 ಟಿಎಂಸಿ ನೀರು ಕೊಡಲು ಒಪ್ಪಿದ್ದು, ಮಳೆಗಾಲದಲ್ಲಿ ನಾವು ಅವರಿಗೆ ಕೊಡಲು ಒಪ್ಪಿಕೊಂಡಿದ್ದೇವೆ. ಈ ಬಗ್ಗೆ ಎರಡೂ ರಾಜ್ಯಗಳ ತಾಂತ್ರಿಕ ಸಮಿತಿ ಕ್ರಮ ತೆಗೆದುಕೊಳ್ಳಲಿದೆ’ ಎಂದರು.

ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಮುಖ್ಯಮಂತ್ರಿಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ, ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕರ್ನಾಟಕ ಮತ್ತು ಮಹಾರಾಷ್ಟ್ರದ ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.

Copyright © All rights reserved Newsnap | Newsever by AF themes.
error: Content is protected !!