February 6, 2025

Newsnap Kannada

The World at your finger tips!

Parents Are god ganesha newsnap kannada english

ಮಾಘ ಮಾಸ

Spread the love

ಹಿಂದು ವರ್ಷದ 11ನೇ ತಿಂಗಳು ಮಾಘಮಾಸವಾಗಿದೆ. ವಾತಾವರಣದಲ್ಲಿ ಚಳಿಯನ್ನು ಮುಗಿಸಿ ಬೇಸಿಗೆ ಕಾಲವನ್ನು ಅಂದರೆ ವಸಂತಮಾಸದ ಸ್ವಾಗತಕ್ಕೆ ಸಿದ್ಧವಾಗುವ ಕಾಲವೇ ಮಾಘ ಮಾಸವಾಗಿದೆ.

ಮಾಘ ಮಾಸವು ರಥಸಪ್ತಮಿ, ಶಿವರಾತ್ರಿ ಮತ್ತು ಕುಂಭಮೇಳಗಳಿಗೆ ಪ್ರಸಿದ್ಧವಾಗಿದೆ. ಹಿಂದುಗಳಲ್ಲಿ ವೈಶಾಖ ಮಾಸದ ಸ್ನಾನ, ಕಾರ್ತೀಕ ಮಾಸದ ಸ್ನಾನ ಪವಿತ್ರವೆಂದು ಭಾವಿಸುವಂತೆ ಮಾಘ ಮಾಸದ ಸ್ನಾನ ಇನ್ನೂ ಶ್ರೇಷ್ಠ, ಮಾಘ ಹುಣ್ಣಿಮೆಯಂದು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು ಇನ್ನೂ ಪವಿತ್ರ ಗಂಗಾ, ಯಮುನಾ ನದಿಗಳಲ್ಲಿ ಕುಂಭಮೇಳವು ಇದೇ ಸಮಯದಲ್ಲಿ ನಡೆಯುತ್ತದೆ. ಮಹಾದೇವನಾದ ಶಿವ ರಾತ್ರಿಯು ಕೂಡ ಮಾಘ ಮಾಸದಲ್ಲಿ ಬರುವುದರಿಂದ ಹೆಚ್ಚು ಪವಿತ್ರವಾದ ಮಾಸವಾಗಿದೆ.

ಸಂಕ್ರಮಣದ ಒಂದು ತಿಂಗಳಿನಲ್ಲೇ ಬರುವ ಕಾರಣ ಮಾಘ ಮಾಸದಲ್ಲಿಯೂ ಕೂಡ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಎಳ್ಳಿನ ಸೇವನೆ, ದಾನವು ವೈಜ್ಞಾನಿಕ ಹಾಗೂ ಧಾರ್ಮಿಕ ಮಹತ್ವವನ್ನು ಪಡೆಯುತ್ತದೆ. ಮಾಘಮಾಸದಲ್ಲಿ ಸೂರ್ಯೋದಯಕ್ಕೆ ಮೊದಲು ಎದ್ದು ಸ್ನಾನ ಮಾಡಿ ನಿತ್ಯ ನೈಮಿತ್ಯಿಕ ಕರ್ಮಗಳೋಡನೆ ಸೂರ್ಯನ ವಿಶೇಷ ಆರಾಧನೆಯನ್ನು ಮಾಡುತ್ತಾರೆ. ಮಾಘ ಮಾಸದ ಪಂಚಮಿಯನ್ನು ವಸಂತ ಪಂಚಮಿಯೆಂದು ಆಚರಿಸಲಾಗುತ್ತದೆ. ವಿದ್ಯೆಗೆ ಅಧಿದೇವತೆಯಾದ ಸರಸ್ವತಿಯನ್ನು ಪೂಜಿಸಿ ಅವಳ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.

ರಥಸಪ್ತಮಿಯ ಆರೋಗ್ಯದಾಯಕ ಸೂರ್ಯದೇವನ ಆರಾಧನೆ ವಿಜ್ಞಾನದಲ್ಲಿಯೂ ಕೂಡ ಸೂರ್ಯಕಿರಣ ಮನುಷ್ಯನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯವಂತನನ್ನಾಗಿ ಮಾಡುವುದು ವಿಟಮಿನ್‌ ಡಿ ಮನುಷ್ಯನಿಗೆ ನೀಡುವುದಲ್ಲದೇ ಸೂರ್ಯನ ಕಿರಣಗಳಿಂದ ಉತ್ತಮ ಬೆಳೆಗಳು ದೊರೆತು ಎಲ್ಲ ಜೀವ ರಾಶಿಗಳು ಚೈತನ್ಯವನ್ನು ಸಮೃದ್ಧಿಯನ್ನು ಹೊಂದುತ್ತವೆ. ಎಕ್ಕದ ಎಲೆಯನ್ನು ಮೈಮೇಲೆ ಇಟ್ಟುಕೊಂಡು ಸ್ನಾನ ಮಾಡುವುದರಿಂದ ಆರೋಗ್ಯವಂತರಾಗುತ್ತೇವೆ. ಸೂರ್ಯನ ಆರಾಧನೆಯಿಂದ ನೇತ್ರರೋಗಗಳ ಪರಿಹಾರವಾಗುತ್ತದೆ. ಮಕ್ಕಳು ಇಲ್ಲದವರು ಸತ್‌ ಸಂತಾನಕ್ಕಾಗಿ ಕುಂಬಳಕಾಯಿಯನ್ನು ದಾನ ಮಾಡುತ್ತಾರೆ.

ಅಷ್ಟಮಿ ಕೂಡ ಬಹಳ ಮಹತ್ವವನ್ನು ಪಡೆದಿದೆ. ಭೀಷ್ಮಾಷ್ಟಮಿ ಎಂದು ಕರೆಯುತ್ತಾರೆ. ಭೀಷ್ಮಾಚಾರ್ಯರು ಆ ಜೀವ ಬ್ರಹ್ಮಚಾರಿಗಳು ಉತ್ತಮ ಗತಿಗಾಗಿ ಉತ್ತರಾಯಣ ಪರ್ವಕಾಲವನ್ನು ಕಾಯ್ದು ಅಷ್ಟಮಿಯಂದು ಪ್ರಾಣವನ್ನು ತ್ಯಾಗ ಮಾಡಿದ್ದ ಇಚ್ಛಾಮರಣಿಗಳು ಹಿಂದು ಸಂಸ್ಕೃತಿಯಲ್ಲಿ ತಂದೆಗಾಗಿ ಆಜೀವ ಬ್ರಹ್ಮಚರ್ಯವನ್ನು ಪಾಲಿಸಿದ ಅವರಿಗೆ ಎಲ್ಲರೂ ತರ್ಪಣವನ್ನು ನೀಡುತ್ತಾರೆ.

ನವಮಿಯು ಮಧ್ವನವಮಿಯಾಗಿದೆ, ದ್ವೈತ ಸಿದ್ಧಾಂತವನ್ನು ಪ್ರಪಂಚಕ್ಕೆ ಸಾರಿದ ಶ್ರೀ ಮನ್‌ ಮಧ್ವಾಚಾರ್ಯರು ಬದರಿಕಾಶ್ರಮಕ್ಕೆ ಪಯಣಿಸಿದ ದಿನವಾಗಿದ್ದು ವೈಷ್ಣವರಿಗೆ ಪರಮ ಪವಿತ್ರದಿನವಾಗಿದೆ.

ಮಾಘ ಶುದ್ಧ ಹುಣ್ಣಿಮೆಯನ್ನು ಭಾರತ ಹುಣ್ಣಿಮೆ ಅಥವಾ ಮಾಘಿ ಎಂದು ಕರೆಯಲಾಗುತ್ತದೆ. ಮಾಘ ಮಾಸದ ಈ ಹುಣ್ಣಿಮೆಯು ಬಹಳ ವಿಶೇಷವಾಗಿದ್ದು ಉತ್ತರ ಭಾರತದಲ್ಲಿ ಕುಂಭಮೇಳಗಳು, ದಕ್ಷಿಣದಲ್ಲಿ ದೇವಿ-ದೇವತೆಗಳ ಜಾತ್ರೆಗಳು ನಡೆಯುತ್ತವೆ. ಭಾರತ ಹುಣ್ಣಿಮೆಯ ವಿಶೇಷ ಇಂದಿನ ದಿನವೇ ಮಹಾಭಾರತ ಕರ್ತೃವಾದ ಶ್ರೀ ವೇದವ್ಯಾಸರ ಜನನವಾದ ದಿನ ಇಂದು ಗುರುಗಳ ಪೂಜೆಯನ್ನು ಮಾಡುತ್ತಾರೆ.

ಉತ್ತರ ಭಾರತದಲ್ಲಿ ನದೀ ಸ್ನಾನಕ್ಕೆ ವಿಶೇಷ ಮಹತ್ವವಿದೆ. ಅದರಲ್ಲೂ ಮಾಘ ಮಾಸದ ಹುಣ್ಣಿಮೆಯ ದಿನದಂದು ಕುಂಭವೆಂದೇ ಭಾವಿಸುತ್ತಾರೆ. ಮಾಘ ಸ್ನಾನವನ್ನು ಗಂಗಾ ಯಮುನಾ ಮೊದಲಾದ ಸ್ಥಳಗಳಲ್ಲಿ ಇಂದಿಗೂ ಸಾವಿರಾರು ಜನ ಹುಣ್ಣಿಮೆಯಂದೇ ಸ್ನಾನಕ್ಕೆ ಹೋಗುತ್ತಾರೆ.

ಕರ್ನಾಟಕದಲ್ಲೂ ನದೀ ಸ್ನಾನಕ್ಕೆ ಮಹತ್ವವನ್ನು ನೀಡಲಾಗಿದ್ದು ಕಾವೇರಿ, ತುಂಗಭದ್ರಾ, ಕೃಷ್ಣ ನದಿಗಳಲ್ಲಿ ಮಾಘ ಹುಣ್ಣಿಮೆಯ ದಿನದ ಸ್ನಾವನ್ನು ವಿಶೇಷವೆಂದು ಭಾವಿಸಲಾಗಿದ. ನದೀ ತೀರಕ್ಕೆ ಹೋಗಿ ಸ್ನಾವನ್ನು ಮಾಡಲಾಗದವರು ಮಾಘ ಶುದ್ಧ ಪಾಢ್ಯದಿಂದ ಮಾಘ ಸ್ನಾನವನ್ನು ಮಾಡುತ್ತಾರೆ. ಸೂರ್ಯೋದಯಕ್ಕೆ ಮೊದಲು ಎದ್ದು ಶುದ್ಧರಾಗಿ ಸ್ನಾನ ಮಾಡಿ ಎಳ್ಳಿನಿಂದ ಹೋಮವನ್ನು ಮಾಡಿ ಸೂರ್ಯನಾರಾಯಣನ ಪೂಜೆಯನ್ನು ಮಾಡಿ ಅವನ ವಿಶೇಷ ಅನುಗ್ರಹವನ್ನು ಪಡೆಯುತ್ತಾರೆ.


ಎಲ್ಲಮ್ಮ, ರೇಣುಕಾದೇವಿ, ಭವಾನಿ ಒಕ್ಕಲಿನವರು ಆಯಾ ಊರುಗಳ ಸ್ಥಳೀಯ ದೇವಿಯ ಪ್ರೀತಿಗಾಗಿ ವಿಶೇಷ ಪೂಜೆಯನ್ನು ಮಾಡುತ್ತಾರೆ. ಉತ್ತರ ಕರ್ನಾಟಕದ ಕಡೆಗೆ ಸವದತ್ತಿಯ ಎಲ್ಲಮ್ಮನ ಪೂಜೆ ವಿಶೇಷವಾದರೆ. ತುಳಜಾಪುರ ಭಾವಾನಿ, ಮಾಹುರಗಡ ರೇಣುಕಾ ಮೊದಲಾದ ಶಕ್ತಿ ದೇವತೆಗಳನ್ನು ತಮ್ಮ ಮನೆಯ ಕುಲದೇವಿಯನ್ನಾಗಿ ಪೂಜಿಸುವ ಜನರು ಕುಲಧರ್ಮವನೆನು ಮಾಡುತ್ತಾರೆ. ಮೊದಲಿಗೆ ಮಾಘಮಾಸ ಎರಡು ಅಥವಾ ಮೂರು ಮಂಗಳವಾರ ಮತ್ತು ಶುಕ್ರವಾರಗಳಂದು ದೇವಿಯ ಆರಾಧನೆಗೆಂದು ಉಪವಾಸವನ್ನು ಮಾಡಿರುತ್ತಾರೆ ಹುಣ್ಣಿಮೆಯ ದಿನ ದೇವಿಯ ಆರಾಧಕರಾದವರನ್ನು ಕರೆದು (ಮಾತಂಗಿಯರು) ಪಡಲಿಗೆ ತುಂಬಿ ಅವರಿಗೆ ಧವಸ ಧಾನ್ಯಗಳನ್ನು ನೀಡಿ ವಿಶೇಷ ಭಂಡಾರವನ್ನು ಪಡೆದು ಅವರಿಗೆ ಬೇವು ಮೊದಲಾದ ಎಲೆ ಹೂವುಗಳಿಂದ ದೇವಿಯ ಪ್ರೀತಿಗಾಗಿ ಪೂಜಿಸಿ ಮಾತಂಗಿಯ ಕೈಯಿಂದ ಭಂಡಾರ (ಅರಿಶಿನ ಕುಂಕುಮ)ವನ್ನು ಪಡೆದು ಅವರಿಗೂ ಊಟವನ್ನು ಮಾಡಿಸಿ ಮನೆ ಮಂದಿ ಎಲ್ಲ ಪ್ರಸಾದವನ್ನು ಸ್ವೀಕರಿಸುತ್ತಾರೆ. ಉತ್ತರ ಕರ್ನಾಟಕದ ಕಡೆಗೆ ಈ ಆಚರಣೆ ಬಹಳ ಪ್ರಸಿದ್ಧವಾಗಿದ್ದು ಬೆಳೆದ ಧಾನ್ಯಗಳನ್ನು ದೇವಿಗೆ ಅರ್ಪಿಸಿ ಮಕ್ಕಳಿಗೆ ಅನಾರೋಗ್ಯ ಬರದಂತೆ ಮನೆಯಲ್ಲಿ ಸಂಪತ್ತು ಸ್ಥಿರವಾಗಿ ಇರುವಂತೆ ಸಮೃದ್ಧಿಯ ಆಶೀರ್ವಾದವನ್ನು ಬೇಡುತ್ತಾರೆ. ಸವದತ್ತಿಯ ಎಲ್ಲಮ್ಮನ ಜಾತ್ರೆ ಭಾರತ ಹುಣ್ಣಿಮೆಯಂದೇ ನಡೆಯುತ್ತದೆ.

ಮಾಘ ಮಾಸದ ಮತ್ತೊಂದು ಪ್ರಮುಖ ಪೂಜಾ ಕೈಂಕರ್ಯ ಮಹಾಶಿವ ರಾತ್ರಿ ವರ್ಷದ 12 ತಿಂಗಳುಗಳೂ ಶಿವರಾತ್ರಿ ಇರುತ್ತದೆ ಆದರೆ ಮಾಘ ಮಾಸದ ಶಿವರಾತ್ರಿ ಬಹಳ ವಿಶೇಷವಾದುದು ಪರ್ವತ ರಾಜನ ಮಗಳಾದ ಪಾರ್ವತಿಯು ಶಿವನೇ ಪತಿಯಾಗ ಬೇಕೆಂದು ತಪಸ್ಸು ಮಾಡಿ ಅವನನ್ನು ಒಲಿಸಿಕೊಂಡು ಮದುವೆಯಾಗಿ ಮಗನಾದ ಸುಬ್ರಹ್ಮಣ್ಯನನ್ನು ಪಡೆದು ದೇವತೆಗಳ ಉದ್ದಾರಕ್ಕಾಗಿ ಲೋಕ ಕಲ್ಯಾಣಕ್ಕಾಗಿ ಶಿವ ಪಾರ್ವತಿಯರ ವಿವಾಹ ದಿನವಾಗಿದೆ. ಶಿವರಾತ್ರಿ ಉತ್ಸವವು ಭಾರತದಾದ್ಯಂತ ಜಾವ ಜಾವದ ಪೂಜೆ ಅಭಿಷೇಕ ಜಾಗರಣೆಗಲೊಂದಿಗೆ ಭಕ್ತಿಮಯವಾದ ವಾತಾವರಣವನ್ನು ಸೃಷ್ಟಿಸುತ್ತದೆ.

ಮಾಘಮಾಸವು ಮುಗಿದು ಫಾಲ್ಗುಣ ಮಾಸದಿಂದ ಎಲೆಗಳೆಲ್ಲ ಉದುರಿ ಚೈತ್ರದ ತಯಾರಿಗೆ ಮುನ್ನುಡಿ ಬರೆಯುತ್ತದೆ.

madhuri deshpande

ಮಾಧುರಿ ದೇಶಪಾಂಡೆ, ಬೆಂಗಳೂರು

Copyright © All rights reserved Newsnap | Newsever by AF themes.
error: Content is protected !!