(ಬ್ಯಾಂಕರ್ಸ್ ಡೈರಿ)
ಅಂದೂ ಎಂದಿನಂತೆಯೇ ಬ್ಯಾಂಕಿನಲ್ಲಿ ವಿಪರೀತ ರಶ್ಶು. ಆ ಹುಡುಗಿ ಹೊಸ ಖಾತೆ ತೆರೆಯಲು ಬೆಳಿಗ್ಗೆ ಬಂದವಳು ಸರತಿ ಸಾಲನ್ನು ನೋಡಿ ಹೊರಟು ಹೋಗಿ ಮತ್ತೆ ಮಧ್ಯಾಹ್ನ ಊಟ ಮುಗಿಸಿ ಬಂದಳು. ಅಷ್ಟು ಹೊತ್ತಿಗೆ ನನ್ನ ಮುಂದೆ ಕುಳಿತಿದ್ದ ಜನರು ಕಡಿಮೆಯಾಗಿದ್ದರು. ಹತ್ತು ನಿಮಿಷದ ನಂತರ ಆಕೆಯ ಸರತಿ ಬಂದಿತು. ಆಧಾರ್ ಮೂಲ ಮತ್ತು ಪ್ರತಿ, ಪ್ಯಾನ್ ಮೂಲ ಮತ್ತು ಪ್ರತಿಗಳನ್ನು ಕೇಳಿದೆ. ಆಕೆಯೊಟ್ಟಿಗೆ ಬಂದಿದ್ದ ಅನ್ಯಧರ್ಮೀಯ ಮಹಿಳೆಯೊಬ್ಬಳನ್ನು ಕೇಳಿ ಆಕೆಯ ಬ್ಯಾಗಿನಲ್ಲಿದ್ದ ಆಧಾರ್ ಮತ್ತು ಪ್ಯಾನ್ ಗಳನ್ನು ಕೊಟ್ಟಳು. ಈ ಹುಡುಗಿಯ ಹೆಸರು ರಮಾ, ಆಕೆಯ ಪತಿಯ ಹೆಸರು ರಮಾಕಾಂತ್ (ಹೆಸರುಗಳನ್ನು ಬದಲಿಸಲಾಗಿದೆ) ಎಂದಿತ್ತು. ಒಮ್ಮೆಗೇ ನನಗೆ ಅಚ್ಚರಿಯಾಯಿತು. ಏಕೆಂದರೆ ಆಕೆಯ ಮುಖ ಚಹರೆ ಆಕೆಯೊಟ್ಟಿಗೆ ಬಂದಿದ್ದ ಹೆಂಗಸಿನ ಹಾಗೆಯೇ ಇತ್ತು. ಆದರೆ ಹೆಸರು ಮಾತ್ರ ನಮ್ಮಂತೆಯೇ ಇತ್ತು. ಕೇಳಬಾರದಿತ್ತೇನೋ ಗೊತ್ತಿಲ್ಲ. ಆ ಕ್ಷಣ ಬಾಯಿತಪ್ಪಿ ಕುತೂಹಲದಿಂದ ‘ನಿಮ್ಮ ಹೆಸರು ಸುಮಾನಾ? ಮತ್ತೇಏಏಏ…. ’ ಎಂದು ರಾಗ ಎಳೆದೆ. ಆಕೆ ಬಹಳ ಸಹಜವಾಗಿ ‘ನಮ್ಮದು ಲವ್ ಮ್ಯಾರೇಜ್. ಇಬ್ಬರೂ ಬೇರೆ ಧರ್ಮದವರು’ ಎಂದಳು. ಸರಿ ನಾನು ಮಾತು ಮುಂದುವರೆಸದೆ ಆಕೆಯ ಖಾತೆಯನ್ನು ತೆಗೆಯುವ ಕೆಲಸ ಮಾಡಿದೆ.
ಆಕೆಯ ಹಣೆಯಲ್ಲಿ ಕುಂಕುಮ ಇರಲಿಲ್ಲ ಆದರೆ ಕಣ್ಣಂಚು ಆಗಾಗ ತೇವವಾಗುತ್ತಿತ್ತು.. ಆಕೆಯ ಎಲ್ಲ ಕೆಲಸಗಳೂ ಪೂರ್ಣವಾದ ನಂತರ ಪೂರಾ ಮುಖ ಮುಖ ಮುಚ್ಚಿಕೊಂಡಿದ್ದ ಆಕೆಯ ತಾಯಿ ಹೊರಗೆ ಕುಳಿತಾಗ ಕೇಳಿದೆ ‘ಯಾಕೆ ಈ ದುಃಖ? ಏನಾಯಿತು?’ ಎಂದು ಕೇಳಿದೆ. ‘ಮೇಡಂ ನಮ್ಮದು ಲವ್ ಮ್ಯಾರೇಜ್. ನಾನು ಬೆಂಗಳೂರಿನಲ್ಲಿ ಡಾಟಾ ಆಪರೇಟರ್ ಆಗಿದ್ದೆ. ಆಗ ಇವರ ಪರಿಚಯ ಆಯಿತು. ನಮ್ಮ ತಾಯಿ ಮನೆಯವರಿಗೆ ಈ ಮದುವೆಗೆ ಅಷ್ಟಾಗಿ ಒಪ್ಪಿಗೆ ಇರಲಿಲ್ಲ. ಹಾಗಂತ ತುಂಬಾ ವಿರೋಧವೂ ಇರಲಿಲ್ಲ. ಆದರೆ ನಮ್ಮ ಅತ್ತೆ ಮನೆಯವರು ಒಂದೂ ವಿರೋಧದ ಮಾತನಾಡದೆ ತಾವೇ ಮದುವೆ ಮಾಡಿಕೊಂಡರು. ನನ್ನ ಹೆಸರನ್ನೂ ಬದಲಿಸಿಕೊಂಡೆ. ನನಗೆ ನನ್ನ ಅಮ್ಮನ ಮನೆಯವರ ಸಂಪ್ರದಾಯಕ್ಕಿಂತ ನನ್ನ ಗಂಡನ ಮನೆಯವರ ಸಂಪ್ರದಾಯವೇ ತುಂಬಾ ಇಷ್ಟ. ನಮ್ಮತ್ತೆ ಮಾವ ನಾದಿನಿ ಎಲ್ಲರೂ ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಈಚೆಗೆ ಎರಡು ವರ್ಷಗಳ ಹಿಂದೆ ಮಾವ ತೀರಿಕೊಂಡರು. ಅತ್ತೆ ನನ್ನನ್ನು ಹೆತ್ತ ಮಗಳಿನ ಹಾಗೆ ನೋಡಿಕೊಳ್ಳುತ್ತಾರೆ’ ಎಂದಳು. ಸುಮಾರು ಒಂದು ಗಂಟೆಗಳ ಕಾಲದ ಮಾತು ಕತೆಯಲ್ಲಿ ಒಂದು ಸಣ್ಣ ಸಲುಗೆ ಮೂಡಿತ್ತು. ಆ ಸಲುಗೆಯಲ್ಲೇ ‘ಮತ್ತೆ ಹಣೆಗೇಕೆ ಇಟ್ಟಿಲ್ಲ?’ ಎಂದು ಮೆಲ್ಲಗೆ ಕೇಳಿದೆ. ‘ಅಯ್ಯೋ ದಾರಿಯಲ್ಲಿ ಎಲ್ಲೋ ಬಿದ್ದುಹೋಗಿದೆ ಅಷ್ಟೇ. ನೋಡಿ ನಾನು ಎಷ್ಟು ಚಂದ ರೆಡಿ ಆಗ್ತೇನೆ ಗೊತ್ತಾ?’ ಎಂದು ಅಚ್ಚ ಹಿಂದೂಗಳ ಹಾಗೆ ರೆಡಿ ಆಗಿರುವ ತನ್ನ ಚಿತ್ರಪಟವನ್ನು ತೋರಿದಳು. ಅಷ್ಟರಲ್ಲೇ ಆಕೆಗೆ ಏನು ಭಾವ ಕಾಡಿತೋ ಕಣ್ಣೀರು ಹರಿದು ಕೆನ್ನೆಯನ್ನು ತೋಯಿಸಿತು. ‘ಹೇಳಿ ಸುಮಾ ಏನಾಯ್ತು ಯಾಕೆ ಅಳ್ತಿದೀರ?’ ಎಂದು ಕೇಳಿದೆ. ‘ಈಚೆಗೆ ಗಂಡ ಹೆಂಡತಿಯರ ನಡುವೆ ಬರೇ ಮನಸ್ತಾಪ. ಅವನು ಕುಡಿಯುತ್ತಾನೆ ಎಂದು ಮದುವೆಗೆ ಮುಂಚೆ ಗೊತ್ತಿರಲಿಲ್ಲ. ತುಂಬಾ ಕುಡಿಯುತ್ತಾನೆ. ಮದುವೆಯಾಗಿ ಮೂರು ವರ್ಷಗಳಾದರೂ ಮಕ್ಕಳಾಗಿಲ್ಲ ಎಂದು ಅವನ ಸಿಟ್ಟು. ಐ ವಿ ಎಫ್ ಟ್ರೀಟ್‍ಮೆಂಟ್ ತೆಗೆದುಕೊಳ್ಳೋಣ ಎಂದರೆ ಆ ವಿಷಯಕ್ಕೆ ನನ್ನ ಗಂಡ ತುಂಬಾ ಅಸಹ್ಯದ ಮಾತನಾಡಿದರು. ನಾನು ಬೇರೆ ಮದುವೆ ಆಗುತ್ತೇನೆ ಎನ್ನುತ್ತಿದ್ದಾರೆ ಈಚೆಗೆ. ನನ್ನ ನಾದಿನಿ ಅಂದರೆ ಇವರ ತಂಗಿಯ ಮಗುವನ್ನಾದರೂ ದತ್ತು ತೆಗೆದುಕೊಳ್ಳೋಣ ಎಂದರೂ ಕೇಳುತ್ತಿಲ್ಲ. ಕೆ
ಳ ಮಟ್ಟದ ಗೆಳೆಯರ ಮಾತು ಕೇಳಿ ನನಗೆ ಹಿಂಸೆ ಕೊಡುತ್ತಾನೆ. ನಮ್ ಕಡೆ ಹುಡ್ಗೀನೇ ಮದ್ವೆ ಆಗೋ ಅನ್ನುತ್ತಾರಂತೆ ಅವರ ಗೆಳೆಯರು. ನನ್ನ ತವರಿನ ನೆಂಟರು ನನ್ನ ಬಾಳನ್ನು ನೋಡಿ ನಗುವುದಿಲ್ಲವೇ? ಎಲ್ಲರ ಎದುರು ಚೆನ್ನಾಗಿ ಬಾಳಿ ತೋರಿಸಿದರೆ ಇಂಥಾ ಮದುವೆ ಆಗಿದ್ದಕ್ಕೆ ಸಾರ್ಥಕ. ಇಲ್ಲದಿದ್ದರೆ ನಗೆಪಾಟಲಾಗಿಬಿಡುತ್ತೆ. ಇತ್ತೀಚೆಗೆ ಅವನಿಗೆ ನನ್ನ ಮೇಲೆ ಅನುಮಾನ ಕೂಡ ಶುರುವಾಗಿದೆ. ಯಾರ ಫೋನ್ ಬಂದರೂ ನಿಗಾ ಇಡುತ್ತಾನೆ. ಫೋನ್ ಇಟ್ಟ ಮೇಲೆ ಕೂಗಾಡುತ್ತಾನೆ. ಕೊಲೀಗ್ಸ್ ಅಂದ ಮೇಲೆ ಕೆಲಸದ ವಿಷಯ ಮಾತಾಡೋಕೆ ಇರೋಲ್ವಾ? ಅದು ಹುಡುಗಿ ಆಗಿರಲಿ ಹುಡುಗ ಆಗಿರಲಿ ಎಲ್ಲಾ ಒಂದೇ ತಾನೇ? ನೋಡಿ ಮೇಡಂ ಎಂದು ಮೊಣಕೈ ತೋರಿದಳು. ಅಂಗೈ ಅಗಲ ಕಪ್ಪು ಕಲೆಯಿತ್ತು. ‘ಐರನ್ ಬಾಕ್ಸ್ ಇಂದ ಸುಟ್ಟಿದ್ದು ಮೇಡಂ’ ಎಂದಳು. ನನಗೆ ಶಾಕ್. ದೇವರೇ ಹೀಗೂ ಹಿಂಸೆ ಕೊಡುತ್ತಾರಾ ಎಂದುಕೊಳ್ಳುವ ವೇಳೆಗೆ ‘ಮೇಡಂ ಒಂದು ಸಲ ಕತ್ತಿಗೆ ಬ್ಲೇಡ್ ಕೂಡ ಹಾಕಿದ್ದ. ಆದರೆ ಅತ್ತೆ ಬಂದು ಬಿಡಿಸಿದರು’ ಎಂದು ತಲೆ ಕೆಳಗೆ ಹಾಕಿದಳು. ‘ಮತ್ತೆ?’ ಎನ್ನುವುದನ್ನು ಬಿಟ್ಟು ಮತ್ತೇನನ್ನು ಕೇಳಲಿ?
ನನ್ನ ಅತ್ತೆಯೇ ‘ನೀನು ಒಂದು ನಾಲ್ಕು ತಿಂಗಳು ಅಮ್ಮನ ಮನೆಯಲ್ಲಿ ಇರು. ನೀ ಇಲ್ಲದಿದ್ದರೆ ನಿನ್ನ ಬೆಲೆ ಅವನಿಗೆ ಗೊತ್ತಾಗುತ್ತೆ. ಕೂತ ಜಾಗಕ್ಕೇ ಹೋಗಿ ಅವನ ಸೇವೆ ಮಾಡುತ್ತೀಯಲ್ಲಾ ಅದಕ್ಕೆ ನಿನ್ನನ್ನು ನಿಕೃಷ್ಟವಾಗಿ ಕಾಣುತ್ತಾನೆ. ನಿನ್ನ ಬೆಲೆ ಗೊತ್ತಾಗುವ ಹಾಗೆ ನಾನು ಮಾಡುತ್ತೇನೆ. ನಾಲು ದಿನ ಆರಾಮವಾಗಿರು’ ಎಂದು ಹೇಳಿ ಕಳುಹಿಸಿದ್ದಾರೆ. ನನ್ನ ಅತ್ತೆ ದೇವರಂಥವರು ಮೇಡಂ. ನಾದಿನಿ ಕೂಡ ನನ್ನನ್ನು ಅವರಲ್ಲಿ ಒಬ್ಬರು ಅಂತ ತಿಳಿಯುತ್ತಾಳೆ. ಅವರ ಕುಟುಂಬಕ್ಕಾಗಿ ನಾನು ಇನ್ನೂ ಅಲ್ಲೇ ಇದ್ದೇನೆ. ಇವನ ಹಾಗೆಯೇ ಅವರೂ ಇದ್ದಿದ್ದರೆ ಯಾವಾಗಲೋ ಬಿಟ್ಟು ಬರುತ್ತಿದ್ದೆ. ಆದರೂ ಪ್ರೀತಿಸಿದವರು ಹೀಗೆ ಹಿಂಸೆ ಕೊಡುತ್ತಾರಲ್ಲ ಪ್ರೀತಿ ಎಂದರೇನು ಎಂದು ಅನುಮಾನ ಬರುತ್ತಿದೆ ನನಗೆ’ ಎಂದಳು. ನನಗೆ ಮಾತನಾಡಲು ಏನೂ ತೋಚಲಿಲ್ಲ. ‘ಎಲ್ಲಾ ಒಳ್ಳೆಯದಾಗುತ್ತೆ. ಮಗು ಆಗುತ್ತೆ. ದುಃಖಿಸಬೇಡಿ’ ಎಂದಷ್ಟೇ ಹೇಳಿದೆ. ‘ಮಗು ಆಗುತ್ತೆ ಅಂತ ಗೊತ್ತದರೆ ನಿಮಗೇ ಮೊದಲು ಸ್ವೀಟ್ಸ್ ಕೊಡೋದು ನಾನು’ ಎಂದು ಏನೋ ಸಮಾಧಾನಗೊಂಡಂತೆ ಹೋದಳು.
ಅದಾಗಿ ಒಂದು ವಾರಕ್ಕೇ ಇಂಟರ್ ನೆಟ್ ಬ್ಯಾಂಕಿಂಗ್ ಗಾಗಿ ಮತ್ತೆ ಬಂದಳು. ಈ ಸಲ ಒಂದೆರಡು ನಿಮಿಷ ಅಷ್ಟೇ ನನಗೆ ಸಿಕ್ಕಿದ್ದು. ಅವಳ ಕೆಲಸ ಮುಗಿಸಿ ಬಂದು ‘ಮೇಡಂ ನನ್ ಹಸ್ಬೆಂಡ್ ಕೂಡ ಬಂದಿದ್ದಾರೆ’ ಎಂದಳು. ಕರ್ಕೊಂಡು ಬನ್ನಿ ನೋಡೋಣ.’ ಎಂದೆ. ಈಗ ಅರ್ಜೆಂಟಿನಲ್ಲಿ ಇದ್ದೇವೆ. ಮತ್ತೆ ಬರ್ತೇವೆ.’ ಎಂದು ಹೇಳಿ ನನ್ನಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿ ಹೋದಳು.
ಈ ಪ್ರೀತಿ ಎನ್ನುವುದು ಕೇವಲ ಆಕರ್ಷಣೆಯಾಗಿದ್ದರೆ ಹೀಗೆಲ್ಲಾ ಸಂದರ್ಭಕ್ಕೆ ತಕ್ಕಂತೆ ಮನಸ್ಸು ಡೋಲಾಯಮಾನವಾಗುತ್ತಾ? ದೈಹಿಕ ಆಕರ್ಷಣೆ ಮೀರಿದ ಪ್ರೀತಿಯಾದರೆ ಹೀಗೆಲ್ಲಾ ಹಿಂಸೆ ಕೊಡಲು ಸಾಧ್ಯವಿತ್ತೇ? ಅನನ್ಯತೆಯಾದರೆ ಹಾಗೆ ತಾವು ಪ್ರೀತಿಸಿದ ಜೀವ ನೊಂದರೆ ಅವರಿಗೂ ನೋವಾಗುವುದಿಲ್ಲವೇ? ಹಾಗೆ ನೋವಾಗದಿದ್ದರೆ ಇಬ್ಬರೂ ಬೇರೆ ಬೇರೆ ಎಂದಾಯಿತು. ಹಾಗೆ ಅವರ ನೋವನ್ನು ನೋಡಿ ಸಮಾಧಾನ ಪಟ್ಟುಕೊಳ್ಳುವುದೇ ಆದರೆ ಅದು ಪ್ರೀತಿ ಹೇಗೆ ಆದೀತು? ಸಣ್ಣ ಪುಟ್ಟದ್ದಕ್ಕೂ ಮುನಿಸಿಕೊಂಡರೆ, ಎಲ್ಲಕ್ಕೂ ಅನುಮಾನಿಸುತ್ತಿದ್ದರೆ ಪ್ರೀತಿಯೆನುವುದು ಶಕ್ತಿಯೆನುವುದು ಸುಳ್ಳೇ ಆದ್ದೀತು.
ಪ್ರೀತಿ ಗಟ್ಟಿ ಬೇರಿನ ಹಾಗೆ. ನೀರೆರೆದು ಪೋಷಿಸಬೇಕೇ ವಿನಃ ಆಗಾಗ ಕೆಂಡ ಸುರಿದು ಕುಗ್ಗಿಸಬಾರದು.ಹಾಸನ ಅಶ್ಲೀಲ ವಿಡಿಯೋಗಳನ್ನು ಹಂಚುವುದು ಶಿಕ್ಷಾರ್ಹ ಅಪರಾಧ: ಎಸ್‌ಐಟಿ
ಏಕೋ ಆ ನಿಮಿಷದಲ್ಲಿ ಒಂದು quote ನೆನಪಾಯಿತು. “If you like a flower you will just pluck it. But when you love a flower, you will water it daily”
More Stories
ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – ಯುವತಿ ಸಜೀವ ದಹನ
100 ಕೋಟಿ ವಂಚನೆ ಪ್ರಕರಣ: ದೆಹಲಿಯಲ್ಲಿ ಚೀನಾ ಪ್ರಜೆ ಬಂಧನ
ರೈತರ ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ : ಸಚಿವ ಜಾರ್ಜ್ ಪ್ರಕಟ