ಯುವತಿ ಹೆಸರಿನಲ್ಲಿ ‌ಗಂಡಸರ ಜೊತೆ ಪ್ರೀತಿಯ ನಾಟಕ : 15 ಲಕ್ಷ ರು ಕಿತ್ತ ಹಾಸನದ ಯವಕ ಅಂದರ್‌

Team Newsnap
2 Min Read

ಯುವತಿ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆ ತೆರೆದು, ಹುಬ್ಬಳ್ಳಿ ತಾಲೂಕಿನ ಗುತ್ತಿಗೆದಾರನಿಂದ ಸುಮಾರು 15 ಲಕ್ಷಕ್ಕೂ ಹೆಚ್ಚು ಹಣ ವಸೂಲಿ ಮಾಡಿದ್ದ ಹಾಸನ ಮೂಲದ ವ್ಯಕ್ತಿಯನ್ನು ಧಾರವಾಡ ಪೋಲಿಸರು ಬಂಧಿಸಿದ್ದಾರೆ.

ಪೊಲೀಸ್ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ಧಾರವಾಡ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯ ಸಿಬ್ಬಂದಿ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಹಾಸನ ತಾಲೂಕಿನ ದೊಡ್ಡಗಿಣಿಗೇರೆ ಗ್ರಾಮದ 29 ವರ್ಷದ ಆರೋಪಿ ಪ್ರತಾಪ್ ಡಿ.ಎಂ. ಎಂಬುವನು ಸುಷ್ಮಾ ಎಂಬ ಯವತಿ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆಯನ್ನು ತೆರೆದ್ದಾನೆ.

ಹುಬ್ಬಳ್ಳಿ ತಾಲೂಕಿನ ಗಂಗಿವಾಳ ಗ್ರಾಮದ ರುದ್ರಗೌಡ ಮಲ್ಲನಗೌಡ ಪಾಟೀಲ ಎಂಬ ಗುತ್ತಿಗೆದಾರನಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಫೇಸ್‍ಬುಕ್ ಮುಖಾಂತರ ಪರಿಚಯ ಮಾಡಿಕೊಂಡು 2017 ರಲ್ಲಿ ವಾಟ್ಸಾಪ್ ನಂಬರ್ ಪಡೆದು ಸುಮಾರು 3 ವರ್ಷಗಳಿಂದ ರುದ್ರಗೌಡ ಪಾಟೀಲ ಅವರಿಗೆ ಹುಡುಗಿಯ ಹೆಸರಿನಲ್ಲೇ ಚಾಟ್ ಮಾಡಿಕೊಂಡು ಪ್ರೀತಿಸುವ ನಾಟಕ ಆಡಿದ್ದಾನೆ.

3 ವರ್ಷಗಳ ಚಾಟಿಂಗ್ ಸಮಯದಲ್ಲಿ ಆರೋಪಿ ಪ್ರತಾಪನು ರುದ್ರಗೌಡನಿಗೆ ತಾನು ಮೂಕಿ, ಕಿವುಡಿ ಇರುತ್ತೇನೆ ಎಂದು ಮೇಸೆಜ್ ಮಾಡುತ್ತಾ ನಾನು ನಿಮ್ಮನ್ನು ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆ ಎಂದು ನಂಬಿಸಿದ್ದಾನೆ.

ರುದ್ರಗೌಡನು ಆರೋಪಿ ಪ್ರತಾಪ ತನಗೆ ಹಾಗೂ ತನ್ನ ಪರಿಚಯಸ್ಥ 8-10 ಜನರ ಬ್ಯಾಂಕ್ ಖಾತೆಗಳಿಗೆ ಸುಮಾರು 14 ರಿಂದ 15 ಲಕ್ಷ ರೂ.ಗಳನ್ನು ಹಾಕಿಸಿಕೊಂಡು ಮೋಸ ಮಾಡಿದ್ದಾನೆ ಎಂದು ಡಿಸೆಂಬರ್ 9, 2019 ರಂದು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.

ಧಾರವಾಡ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯ ಸಿಪಿಐ ವಿಜಯ ಬಿರಾದಾರ ನೇತೃತ್ವದಲ್ಲಿ ಸಿಬ್ಬಂದಿ ತನಿಖೆ ಕೈಗೊಂಡು ಜನವರಿ 31, 2021 ರ ಬೆಳಿಗ್ಗೆ 11 ಗಂಟೆಗೆ ಹಾಸನ ತಾಲೂಕಿನ ದೊಡ್ಡಗಿಣಿಗೇರೆ ಗ್ರಾಮದಲ್ಲಿ ಆರೋಪಿ ಪ್ರತಾಪ ಡಿ.ಎಂ. ನನ್ನು ಬಂಧಿಸಿ, ತನಿಖೆ ಕೈಗೊಂಡು ಮೋಸ ಮಾಡಿ ಪಡೆದ ಹಣದಲ್ಲಿನ 1,25,000 ರೂ. ವಶಪಡಿಸಿಕೊಂಡಿದ್ದಾರೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ 66 ಡಿ ಮತ್ತು ಐಪಿಸಿ 420 ರ ಕಲಂ ಅಡಿ ಆರೋಪಿ ಪ್ರತಾಪ ಡಿ.ಎಂ. ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮಾಡುತ್ತಿದ್ದಾರೆ.

saraswathi
Share This Article
Leave a comment