March 14, 2025

Newsnap Kannada

The World at your finger tips!

kolar, lokayukta , SDA

ಲೋಕಾಯುಕ್ತ ದಾಳಿ: ನಕಲಿ ದಾಖಲೆಗಳೊಂದಿಗೆ ₹7.50 ಲಕ್ಷ ನಗದು ವಶ

Spread the love

ಕೋಲಾರ: ಭೂಮಾಪನ ಇಲಾಖೆಯ ಸರ್ವೆ ಸೂಪರ್‌ವೈಸರ್ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಜಿ. ಸುರೇಶ್ ಬಾಬು ಅವರ ಮನೆ, ಹೊಸಕೋಟೆ ಸಮೀಪದ ಫ್ಯಾಕ್ಟರಿಯ ಅತಿಥಿ ಗೃಹ ಸೇರಿದಂತೆ ಐದು ಕಡೆ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿ, ₹7.50 ಲಕ್ಷ ನಗದು ಹಾಗೂ ನಕಲಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಮತ್ತು ನಕಲಿ ದಾಖಲೆ ಪ್ರಕರಣ

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವುದರ ಆರೋಪ ಹಾಗೂ ಜಮೀನಿನ ಪೋಡಿ ಸಂಬಂಧ ನಕಲಿ ದಾಖಲೆ ಸೃಷ್ಟಿಸಿದ ಆರೋಪ ಹಿನ್ನೆಲೆಯಲ್ಲಿ ಲೋಕಾಯುಕ್ತ ಜಿಲ್ಲಾ ಪೊಲೀಸ್ ಅಧೀಕ್ಷಕ ವಿ. ಧನಂಜಯ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

ನಗರದ ಹಾರೋಹಳ್ಳಿ ರಸ್ತೆಯ ಜಯನಗರದ 9ನೇ ಕ್ರಾಸ್ ಬಳಿಯ ಸುರೇಶ್ ಬಾಬು ಅವರ ನಿವಾಸದಲ್ಲಿ ಶೋಧ ನಡೆಸಿ, ₹7.5 ಲಕ್ಷ ನಗದು ಹಾಗೂ ಹಲವು ಪ್ರಮುಖ ದಾಖಲೆಗಳನ್ನು ಪತ್ತೆಹಚ್ಚಲಾಗಿದೆ.

ಹೊಸಕೋಟೆಯ ರಿಂಗ್ ರಸ್ತೆಯ ಫ್ಯಾಕ್ಟರಿಯ ಅತಿಥಿ ಗೃಹದಲ್ಲಿ ಕೂಡ ಶೋಧ ನಡೆಸಿದಾಗ, ಜಮೀನಿನ ಪೋಡಿಗೆ ಸಂಬಂಧಿಸಿದ ನಕಲಿ ದಾಖಲೆಗಳು ಲಭಿಸಿವೆ.

ಇಲ್ಲದೇ, ಭೂಮಾಪನ ಇಲಾಖೆಯ ಕಚೇರಿಯಲ್ಲಿಯೂ ಶೋಧ ಕಾರ್ಯ ನಡೆಯಿದ್ದು, ಕೆಲವು ಪ್ರಮುಖ ದಾಖಲೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಸಂಬಂಧಿತ ಸರ್ವೇಯರ್‌ಗಳ ಮನೆಗಳಲ್ಲೂ ಶೋಧ

ಪರವಾನಗಿ ಸರ್ವೇಯರ್‌ಗಳಾದ ಸಂದೀಪ್ ಅವರ ಕೋಟೆ ಬಡಾವಣೆಯ ಮನೆ, ಸುನಿಲ್ ಅವರ ಧರ್ಮರಾಯನಗರ ಬಡಾವಣೆಯ ಮನೆಗಳಲ್ಲಿ ಶೋಧ ನಡೆಸಿದ್ದು, ಅಲ್ಲಿಯೂ ಕೆಲ ದಾಖಲೆಗಳು ಪತ್ತೆಯಾಗಿವೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋತಿದ್ದ ಸುರೇಶ್ ಬಾಬು

ಡಿಸೆಂಬರ್‌ನಲ್ಲಿ ನಡೆದ ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸುರೇಶ್ ಬಾಬು ಸ್ಪರ್ಧಿಸಿದ್ದರೂ ಪರಾಭವಗೊಂಡಿದ್ದರು. ಈ ಹಿಂದೆ ಅವರು ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಈ ಬಾರಿ, ಶಾಸಕ ಕೊತ್ತೂರು ಮಂಜುನಾಥ್ ಮತ್ತು ವಿಧಾನ ಪರಿಷತ್ ಸದಸ್ಯ ಎಂ.ಎಲ್.ಸಿ. ಅನಿಲ್ ಕುಮಾರ್ ಅವರ ಬೆಂಬಲದ ಹೊಸ ತಂಡದ ವಿರುದ್ಧ ಸ್ಪರ್ಧೆ ನಡೆಸಿದ್ದರು. ಈ ಚುನಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಾಗಿದ್ದ ಕಾರಣ, ಸುರೇಶ್ ಬಾಬು ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.

ಸದನದಲ್ಲಿ ಪ್ರಸ್ತಾಪಿಸಿದ್ದ ಎಂ.ಎಲ್.ಸಿ. ಅನಿಲ್ ಕುಮಾರ್

ಇತ್ತೀಚೆಗೆ ವಿಧಾನ ಪರಿಷತ್‌ನಲ್ಲಿ ಎಂ.ಎಲ್.ಸಿ. ಅನಿಲ್ ಕುಮಾರ್, “ಕೋಲಾರ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಸರ್ವೇ ಮತ್ತು ಕಂದಾಯ ಇಲಾಖೆಯಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡಲಾಗುತ್ತಿದೆ. ಸುರೇಶ್ ಬಾಬು ಅವರು ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ” ಎಂದು ಪ್ರಸ್ತಾಪಿಸಿದ್ದರು. ಗೋಮಾಳ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಖಾತೆ ತೆರೆಯಲಾಗಿದೆ ಎಂದು ಆರೋಪಿಸಿ, ತನಿಖೆಗೆ ಒತ್ತಾಯಿಸಿದ್ದರು.ಇದನ್ನು ಓದಿ –ಕಾನ್‌ಸ್ಟೆಬಲ್ ಕೆಲಸ ಕೊಡಿಸುವ ಆಮಿಷ: ₹31 ಲಕ್ಷ ವಂಚನೆ ಪ್ರಕರಣ ದಾಖಲು

ಐದು ತಂಡಗಳಿಂದ ಶೋಧ ಕಾರ್ಯ

ಗುರುವಾರ ಮಧ್ಯಾಹ್ನ 2 ಗಂಟೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ತಡರಾತ್ರಿ ತನಕ ಶೋಧ ಕಾರ್ಯ ಮುಂದುವರಿಸಿದರು. ಬೆಂಗಳೂರಿನಿಂದ ಎರಡು ಲೋಕಾಯುಕ್ತ ತಂಡಗಳು ಆಗಮಿಸಿದ್ದರೆ, ಜಿಲ್ಲಾ ಮಟ್ಟದಲ್ಲಿ ಮೂದು ತಂಡಗಳು ಶೋಧದಲ್ಲಿ ತೊಡಗಿದ್ದವು. ಎಸ್.ಪಿ. ಧನಂಜಯ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಹಲವು ಮಹತ್ವದ ದಾಖಲೆಗಳು ವಶಕ್ಕೆ ತೆಗೆದುಕೊಳ್ಳಲಾಗಿದೆ.

Copyright © All rights reserved Newsnap | Newsever by AF themes.
error: Content is protected !!